Friday, December 6, 2024

ಪ್ರಯಾಣಿಕರ ನಡುವೆ ವಾಗ್ವಾದ; ಅಯೋಧ್ಯೆ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದ ವ್ಯಕ್ತಿಯ ಬಂಧನ

Most read

ಅಯೋಧ್ಯೆಯಿಂದ ಹೊಸಪೇಟೆ ರೈಲು ನಿಲ್ದಾಣಕ್ಕೆ ಹಿಂತಿರುಗುತ್ತಿದ್ದ ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಶುಕ್ರವಾರ ಬಂಧಿಸಲಾಗಿದೆ. ಗುರುವಾರ ರಾತ್ರಿ ಭಕ್ತರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಹೊಸಪೇಟೆ ರೈಲು ನಿಲ್ದಾಣದ ಬಳಿ ರೈಲು ನಿಂತಾಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಾಲ್ವರು ಯುವಕರ ಗುಂಪು ಅಯೋಧ್ಯೆಯಿಂದ ಬರುವ ಪ್ರಯಾಣಿಕರಿಗೆ ಮೀಸಲಿಟ್ಟಿದ್ದ ಬೋಗಿ ಸಂಖ್ಯೆ 2ಕ್ಕೆ ಹತ್ತಲು ಯತ್ನಿಸಿದ್ದಾರೆ. ಯುವಕರನ್ನು ಬೋಗಿಗೆ ಹತ್ತದಂತೆ ಪ್ರಯಾಣಿಕರು ತಡೆದಾಗ ಅವರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ ಯುವಕರು ರೈಲು ನಿಮ್ಮಪ್ಪನ ಆಸ್ತಿಯಲ್ಲ ಅದನ್ನು ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನು ವಿರೋಧಿಸಿದ ಪ್ರಯಾಣಿಕರು ಯುವಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಮತ್ತೊಂದು ಬೋಗಿಯಲ್ಲಿ ಯುವಕರಿಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ ಪ್ರಯಾಣಿಕರು ರೈಲಿನಿಂದ ಇಳಿದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಚಾರ ತಿಳಿದ ಹಿಂದೂ ಕಾರ್ಯಕರ್ತರು ಹಾಗೂ ಭಜರಂಗದಳದ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿ.ಎಲ್ ಸ್ಥಳಕ್ಕೆ ಧಾವಿಸಿ ಎಫ್ಐಆರ್ ದಾಖಲಿಸಿ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ಪ್ರಯಾಣಿಕರಿಗೆ ಹಾಗೂ ಹಿಂದೂ ಕಾರ್ಯಕರ್ತರಿಗೆ ಭರವಸೆ ನೀಡಿದರು. ನಂತರ, ಪ್ರಯಾಣಿಕರು ರೈಲು ಹತ್ತಿ ಪ್ರಯಾಣ ಮುಂದುವರಿಸಲು ಒಪ್ಪಿದರು.

ಅಷ್ಟರಲ್ಲಿ ಆರೋಪಿ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಇತರ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಜಗಳದಲ್ಲಿ ಆದ ವಾಗ್ವಾದವನ್ನು ರೈಲ್ವೇ ಪೊಲೀಸರು ಇತ್ಯರ್ಥ ಮಾಡಿದ್ದಾದರೂ, ಪ್ರಯಾಣಿಕರು ಹಾಗೂ ಭಜರಂಗದಳದವರು ಅದಕ್ಕೆ ಬೇರೆ ಬಣ್ಣ ಬಳಿದಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತಿದೆ. ಈ ಪ್ರಕರಣ ಎಲ್ಲಿಗೆ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More articles

Latest article