Saturday, July 27, 2024

ಕಿತ್ತೂರು ಕಥನ | ಭಾಗ 2

Most read

ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಹೊತ್ತಿನಲ್ಲಿ, ನಾವು, ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ. ಚೆನ್ನಮ್ಮನ ನೆಲದ ನಾವು ಅವಳ ಹೆಸರು, ಕ್ರಿಯೆಗಳಿಂದ ಸ್ಫೂರ್ತಿ ಪಡೆದು ಕಾರ್ಯೋನುಖರಾಗುತ್ತೇವೆ ಎಂದು ಸಾರುವ ವೇದಿಕೆಯಾಗಿ  ʼನಾನೂ ರಾಣಿ ಚೆನ್ನಮ್ಮʼ ರಾಷ್ಟ್ರೀಯ ಆಂದೋಲನವು ಇದೇ ಫೆಬ್ರವರಿ 21 ರಂದು ಕಿತ್ತೂರಿನಲ್ಲಿ  ಚಾಲನೆಗೊಳ್ಳಲಿದೆ. ಹಿನ್ನೆಲೆಯಲ್ಲಿ ಡಾ. ಎಚ್ಎಸ್ಅನುಪಮಾ ಲೇಖನವನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ನಾಲ್ಕು  ಭಾಗಗಳಲ್ಲಿ ಲೇಖನವು ಪ್ರಕಟವಾಗಲಿದ್ದು ಎರಡನೆಯ ಭಾಗ ಇಲ್ಲಿದೆ.

ಕಿತ್ತೂರಿನಲ್ಲಿ ಸ್ಮಶಾನ ಮೌನ ಬೀಡುಬಿಟ್ಟಿತು.  ಸುದ್ದಿಗಳು ಚೆನ್ನಮ್ಮನ ಕಿವಿ ಮೇಲೆ ಬೀಳುತ್ತಿದ್ದವು. ಏನು ಮಾಡುವಂತಿತ್ತು? ಸ್ವಾತಂತ್ರ್ಯದ ಅಪೇಕ್ಷೆ, ಪ್ರಯತ್ನವನ್ನು ಜೀವಂತವಾಗಿಟ್ಟುಕೊಂಡು ಒಳಗೊಳಗೇ ಸುಟ್ಟುಕೊಳ್ಳುತ್ತ ನಾಲ್ಕು ವರ್ಷಗಳ ಸೆರೆವಾಸದ ಬಳಿಕ 1829, ಫೆಬ್ರುವರಿ 2 ರಂದು ಚೆನ್ನಮ್ಮ ಕೊನೆಯುಸಿರೆಳೆದಳು. ಮೇ 20 ರಂದು ಜಾನಕಿಬಾಯಿ ತೀರಿಹೋದಳು. ಆ ವೇಳೆಗೆ ರುದ್ರಸರ್ಜನ ಮಡದಿ ವೀರಮ್ಮನು ಚೆನ್ನಮ್ಮನ ಸ್ಫೂರ್ತಿಯನ್ನು ತುಂಬಿಕೊಂಡ ದಿಟ್ಟ ತರುಣಿಯಾಗಿದ್ದಳು. ಗುಟ್ಟಾಗಿ ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಸಂಘಟಿಸುವವರಿಗೆ ಹಣ ಸಹಾಯ ಮಾಡುತ್ತಿದ್ದಳು. ಇದನ್ನರಿತು ಅವಳನ್ನು ಕುಸುಗಲ್ಲಿನ ಜೈಲಿಗೆ ಕಳಿಸಿದರು. ತೀರ ಅನಾರೋಗ್ಯಕ್ಕೊಳಗಾದಾಗ ಧಾರವಾಡದ ಬಂಧುಗಳ ಮನೆಗೆ ಕಳಿಸಿದರು. ಎಳೆಯಳಾಗಿದ್ದ ಅವಳು ಕೆಲವೇ ದಿನಗಳಲ್ಲಿ ತೀರಿಕೊಂಡಳು. ಧಾರವಾಡದ ಕಲೆಕ್ಟರ್ ಬೇಬರ್ ಅವಳಿಗೆ ವಿಷಪ್ರಾಷನ ಮಾಡಿದನೆಂಬ ಮಾತು ಅಂದೂ, ಇಂದೂ ಜನರ ಬಾಯಲ್ಲಿದೆ.

ದೀಪದ ಗೋಡೆ

ಸರದಾರ ಗುರುಸಿದ್ದಪ್ಪನವರನ್ನು ಮೊದಲೇ ಗಲ್ಲಿಗೇರಿಸಿದ್ದರು. ಸೆರೆಯಿಂದ ತಪ್ಪಿಸಿಕೊಂಡು ಜನಸಂಘಟನೆ ಮಾಡಿ ಆಕ್ರಮಣ ನಡೆಸುತ್ತ ಬ್ರಿಟಿಷರಿಗೆ ತಲೆನೋವಾಗಿದ್ದ ಸಂಗೊಳ್ಳಿ ರಾಯಣ್ಣನನ್ನು ಅವನ ಆಪ್ತರಿಗೆ ಆಮಿಷವೊಡ್ಡಿ ಬಂಧಿಸಿದರು. 1831ರ ಜನವರಿ 26 ರಂದು ಅವನ ನೆಚ್ಚಿನ ಸ್ಥಳ ನಂದಗಾಂವದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದರು. `ಈ ಪವಿತ್ರ ಭೂಮಿಯಿಂದ ಬ್ರಿಟಿಷರನ್ನು ಒದ್ದೋಡಿಸಲು ಮತ್ತೆ ಹುಟ್ಟಿ ಬರಬೇಕು. ಇದೇ ನನ್ನ ಕೊನೆಯ ಬಯಕೆ’ ಎಂದು ಸಂಗೊಳ್ಳಿಯ ರಾಯಣ್ಣ ತನ್ನ ಕೊರಳಿಗೆ ತಾನೇ ನೇಣು ಹಾಕಿಕೊಂಡ. ನಂತರ 1833, 1836, 1837 ರಲ್ಲಿ ಬ್ರಿಟಿಷರ ವಿರುದ್ಧ ಬಂಡಾಯಕ್ಕೆ ಕಿತ್ತೂರಿನ ಸರದಾರರು, ದತ್ತಕ ಪುತ್ರ ಸವಾಯಿ ಮಲ್ಲಸರ್ಜ ಯತ್ನಿಸಿದರು. ಅವೆಲ್ಲ ವಿಫಲವಾದವು. 1845 ಮತ್ತು 1857 ರಲ್ಲಿಯೂ ಸವಾಯಿ ಮಲ್ಲಸರ್ಜ ಮತ್ತೆರೆಡು ಬಂಡಾಯದ ಪ್ರಯತ್ನ ಮಾಡಿ ಬಂಧನಕ್ಕೊಳಗಾದ.

ಮತ್ತೆಂದೂ ಕಿತ್ತೂರು ಒಂದು ರಾಜ್ಯವಾಗಿ, ಸಂಸ್ಥಾನವಾಗಿ ಬೆಳೆಯಲು ಸಾಧ್ಯವಾಗಲಿಲ್ಲ.

ಕಿತ್ತೂರು ಕಥನ | ಭಾಗ 1 ಓದಿದ್ದೀರಾ? ಕಿತ್ತೂರು ಕಥನ | ಭಾಗ 1

ಚೆನ್ನಮ್ಮನ ಕಿತ್ತೂರು – ಇಂದು

ಕಿತ್ತೂರು ತನ್ನ ಹೆಸರನ್ನೇ ಚೆನ್ನಮ್ಮನ ಕಿತ್ತೂರು ಎಂಬುದಾಗಿ ಬದಲಿಸಿಕೊಂಡಿದೆ. ರಾಣಿಯ ಹೆಸರಿನ ಶಾಲೆ, ಕಾಲೇಜು, ರಸ್ತೆ, ಮೂರ್ತಿ, ಇತ್ಯಾದಿ ಇತ್ಯಾದಿ ಕಾಣಸಿಗುತ್ತವೆ. ಕಿತ್ತೂರಿನ ಅಣುಕಣದಲ್ಲೂ, ಅಲ್ಲಿನವರ ನಾಲಿಗೆಗಳ ಮೇಲೂ, ಎದೆಯೊಳಗೂ ಚೆನ್ನಮ್ಮ ಗುರುತಿಸಲಾಗದಂತೆ ಮಿಳಿತ  ಗೊಂಡಿದ್ದಾಳೆ. ಹಾಡು, ನಾಟಕ, ಲಾವಣಿ, ತತ್ವಪದ, ಪ್ರವಚನ, ಜನಪದ ಗೀತೆಗಳಲ್ಲಿ ಕಿತ್ತೂರಿನ ಕತೆ, ಚೆನ್ನಮ್ಮನ ಕತೆ ಹಾಸುಹೊಕ್ಕಾಗಿವೆ. ಕಿತ್ತೂರಷ್ಟೇ ಅಲ್ಲ, ಕರ್ನಾಟಕದ ಎಲ್ಲೆಡೆ ಕಿತ್ತೂರು ಚೆನ್ನಮ್ಮ ದಿಟ್ಟ ನಾಯಕಿಯೆಂದು ಜನಪ್ರಿಯ ಸಂಕೇತವಾಗಿದ್ದಾಳೆ. ಕಿತ್ತೂರು ಚೆನ್ನಮ್ಮನ ಮೂರ್ತಿಗಳು ಹಲವಾರು ಕಡೆಗಳಲ್ಲಿವೆ.

ಅವಳು ಹುಟ್ಟಿ ಬೆಳೆದ, ಬಾಳಿ ಬದುಕಿದ ತಾಣಗಳು ಶಿಥಿಲಾವಸ್ಥೆಯಲ್ಲಿವೆ.

1660 ರಿಂದ 1691 ರವರೆಗೆ ಕಿತ್ತೂರಿನ ಅಧಿಪತಿಯಾಗಿದ್ದ ಅಲ್ಲಪ್ಪಗೌಡ ಸರದೇಸಾಯಿ ಕಾಲದಲ್ಲಿ ಕಿತ್ತೂರಿನ ಕೋಟೆ ಹಾಗೂ ಮೂರಂತಸ್ತಿನ ಅರಮನೆ ನಿರ್ಮಾಣಗೊಂಡವು. ಕೋಟೆಯ ಹೊರಾವರಣದ ಗೋಡೆ ಈಗಲೂ ಗಟ್ಟಿಮುಟ್ಟಾಗಿ, ಕಾಲಸಾಕ್ಷಿಯಾಗಿ ನಿಂತುಕೊಂಡಿದೆ. ಆದರೆ ಉಪೇಕ್ಷೆ, ವಿನಾಶ, ಲೂಟಿಯ ಕಾರಣದಿಂದ ಅರಮನೆಯೆಂಬುದು ಈಗ ನೆಲಗಟ್ಟೆ ಮತ್ತು ಮೊಂಡು ಗೋಡೆಗಳ ಅವಶೇಷವಾಗಿ ಮಾತ್ರ ಉಳಿದಿದೆ. ಮೇಲಿನ ಮಹಡಿಗಳು, ಗೋಡೆ, ಸೂರು, ಆವರಣಗಳೆಲ್ಲ ಬಿದ್ದು ಹೋಗಿರುವುದರಿಂದ ಮೂರು ಮಹಡಿಯ ಅರಮನೆಯನ್ನು ಕಲ್ಪಿಸಿಕೊಳ್ಳಬೇಕು. ಈಗಲ್ಲಿರುವುದನ್ನೇ ಸೂಕ್ಷ್ಮವಾಗಿ ಗಮನಿಸಿದರೂ ಅದೊಂದು ಸುಸಜ್ಜಿತ, ಯೋಜಿತ, ಉತ್ತಮ ವಿನ್ಯಾಸದ ವಾಸಸ್ಥಳವಾಗಿತ್ತು ಎಂದು ತಿಳಿಯಬಹುದು. ಕಿತ್ತೂರು ಅರಸೊತ್ತಿಗೆಗಿದ್ದ ಸೌಂದರ್ಯಪ್ರಜ್ಞೆ, ಪರಿಸರ ಪ್ರಜ್ಞೆ, ಮುನ್ನೋಟ, ಸ್ವಚ್ಛತೆಯ ಬಗೆಗಿನ ಕಾಳಜಿ ಅನನ್ಯವಾಗಿದೆ.

ಕಾಲನ ಹೊಡೆತಕ್ಕೆ ಬಣ್ಣ ಮಸುಕು

ನಾವೀಗ ಹೆದ್ದಾರಿ ಕಡೆಯಿಂದ ಪ್ರವೇಶಿಸಿದರೆ ಅರಮನೆಯ ಹಿಂಭಾಗ ತಲುಪುತ್ತೇವೆ. ಅದರ ಮುಖ್ಯ ಪ್ರವೇಶ ಇದ್ದದ್ದು ಇನ್ನೊಂದು ದಿಕ್ಕಿನಲ್ಲಿ. ಅಲ್ಲಿಂದ ನೋಡಿದರೆ ಎರಡು ಬುರುಜುಗಳ ನಡುವೆ ದಿಡ್ಡಿಬಾಗಿಲಿನ ಪ್ರವೇಶ ದ್ವಾರವಿದೆ. ದಾಟಿ ಒಳಬಂದರೆ ಅರಮನೆಯ ಕಾವಲು ಗೋಡೆ, ಮುಖ್ಯ ಬಾಗಿಲು ಇವೆ. ಅರಮನೆಯ ಆವರಣ ಪ್ರವೇಶಿಸಿದ್ದೇ 100 ಅಡಿ ಅಗಲ, 300 ಅಡಿ ಉದ್ದದ ಬೃಹತ್ ಸಭಾಗೃಹ ಕಾಣುತ್ತದೆ. ಅದು ಆಸ್ಥಾನ ನಡೆಸುವ ಸ್ಥಳ. ಆಕರ್ಷಕ ಕೆತ್ತನೆ, ವಿನ್ಯಾಸದ ಭಾರೀ ಮರದ ಕಂಬಗಳ ಮೇಲೆ ಅಲಂಕೃತ ಮೇಲ್ಛಾವಣಿಯಿದ್ದಿರಬಹುದು. ಈಗಿರುವ ಕಂಬಗಳ ಕೆಳಭಾಗದ ಪಟ್ಟಿಕೆಯ ಗಾತ್ರ ನೋಡಿಯೇ ಸಭಾಂಗಣದ ವಿಸ್ತಾರವನ್ನು ಊಹಿಸಬಹುದು. ಸಭಾಗೃಹದ ಒಂದು ಪಕ್ಕದಲ್ಲಿ ಭಾರೀ ಕೊಳವಿದೆ. ಅದರಾಚೆಗೆ ನೀರಿನ ತೊಟ್ಟಿ, ಸ್ನಾನದ ಮನೆ, ಅಲಂಕಾರದ ಮನೆ, ಅತಿಥಿಗಳ ಮನೆ, ಅಧಿಕಾರಿಗಳ ಕೋಣೆಗಳಿವೆ. ಮೇಲಿನ ಮಹಡಿಗೆ ಹೋಗಲು ಉಪ್ಪರಿಗೆ ಮೆಟ್ಟಿಲುಗಳು ಉಳಿದುಕೊಂಡಿವೆ. ಸಭಾಗೃಹದ ಎಡಬದಿಗೆ ಸಾವಿರ ಜನ ಕುಳಿತು ಊಟ ಮಾಡಬಹುದಾದ ದೊಡ್ಡ ಭೋಜನಾಲಯವಿದೆ.

`ಬಿತ್ತರದ ಕೋಟೆಯಿಂ, ಕೊತ್ತಳದ ಸೊಬಗಿನಿಂ ಸುತ್ತಲೂ ಹಬ್ಬಿರುವ ಹೆಸರಾಂತ ಅಗಳದಿಂ ಭಿತ್ತಿಭಿತ್ತಿಯೊಳತ್ತಲುಂ ಹಸ್ತ ಕೌಶಲ್ಯದಿಂ ಮೆರೆದ ಚಿತ್ರದಿಂದ ಉತ್ತರದೊಳ್ ಧ್ರುವದೊಳ್ ಗಚ್ಛನಾ ಕೊಳವಿಯಿಂ ಮುತ್ತು ಮಾಣಿಕ ಪಚ್ಚೆರತ್ನಗಳ ಕೋಣೆಯಿಂ ಕಿತ್ತೂರಿನ ಮನೆಯು ಕರ್ಣಾಟ ದೇಶದೊಳ್ ಕೀರ್ತಿಯಂ ಹೊಂದಿರುವುದು’ ಎಂದು ಬಣ್ಣಿಸಲ್ಪಟ್ಟ ರಾಜ ಮನೆತನದವರಿಗೆ ವಿಶೇಷ ಸಂದರ್ಭಗಳಲ್ಲಿ ಧ್ರುವ ನಕ್ಷತ್ರ ನೋಡುವ ಪರಿಪಾಠವಿತ್ತು. ಬಯಲಿಗೆ ಹೋಗದೇ ಅರಮನೆಯೊಳಗಿದ್ದೇ ಉತ್ತರ ದಿಕ್ಕಿನ ಗೋಡೆಯಲ್ಲಿ ಆಕಾಶ ನೋಡುವ ವ್ಯವಸ್ಥೆ ಮಾಡಿದ್ದಾರೆ. ನೆಲದಿಂದ ಐದಡಿ ಎತ್ತರದಲ್ಲಿ ಶಂಕುವಿನಾಕಾರದ ಒಂದೂವರೆ ಅಡಿ ವ್ಯಾಸದ ಕಬ್ಬಿಣದ ಕೊಳವೆಯ ಬಾಯಿ ಕಾಣಿಸುತ್ತದೆ. ಇದು ಕಿತ್ತೂರು ಅರಮನೆಯ ವಿಶಿಷ್ಟ ರಚನೆಯಾಗಿದೆ.

ಸುತ್ತ 4 ಗಡಿಗೆ, ನಡುವೆ ಕಡೆಗೋಲ ಹೊಂಡ

ಕೋಟೆಯೊಳಗಣ ಕೋಟೆ ಆ ಅರಮನೆ. ಹಲವಾರು ಕೋಣೆಗಳಿವೆ, ಉಗ್ರಾಣವಿದೆ. ಪ್ರತಿ ಕೋಣೆಗೂ ಎರಡು ಬಾಗಿಲುಗಳಿವೆ. ರಹಸ್ಯ ಸಭೆಗಾಗಿ ಒಳಕೋಣೆಗಳಿವೆ. ಒಳಬಂದವರಿಗೆ ತಾವೆಲ್ಲಿ ಬಂದು ಎಲ್ಲಿಂದ ಹೊರಬಿದ್ದೆವು ಎಂದು ತಿಳಿಯದ ಹಾಗೆ ವ್ಯೂಹಾಕಾರದ ರಚನೆಯಿದೆ. ಕೋಣೆಗಳಲ್ಲಿ ಅಲಂಕೃತ ಕಮಾನಿರುವ ಗೂಡುಗಳಿವೆ. ಅಡುಗೆ ಮನೆ, ಹಾಲಿನ ಮನೆ ಬೇರೆಬೇರೆ ಇವೆ. ಒಮ್ಮೆಲೇ ನಾಲ್ಕು ಮೊಸರು ಗಡಿಗೆಗಳ ನಡುಮಧ್ಯ ಕಡೆಗೋಲನ್ನಿಟ್ಟು ಕಡೆಯುತ್ತಿದ್ದ ಜಾಗವಿದೆ. ಗಣ್ಯ ಅತಿಥಿಗಳಿಗಾಗಿ ವಿಶೇಷ ಭೋಜನಾಲಯ ಇದೆ. ಅದಕ್ಕೆ ವಾತಾನುಕೂಲ ಕಲ್ಪಿಸುವ ಸಲುವಾಗಿ ಮಾಡಿದ ವ್ಯವಸ್ಥೆ ವಿಶಿಷ್ಟವಾಗಿದೆ. ಅರಮನೆಯ ಹಿಂದೆ ಕೈತೋಟ ಮತ್ತು ಉದ್ಯಾನವನವಿದೆ.

ಅರಮನೆಯೊಳಗಣ ಗುಪ್ತ ಬಾವಿ

ಅರಮನೆಯ ಮತ್ತೊಂದು ವಿಶೇಷ ಸುಸಜ್ಜಿತ ನೀರಿನ ವ್ಯವಸ್ಥೆ. ಅರಮನೆಯ ಹಿಂಬದಿಯಲ್ಲಿ, ಒಳಗೆ ದೊಡ್ಡ ಬಾವಿಗಳಿವೆ. ನೀರನ್ನು ಸೇದಿ ಚಪ್ಪಡಿಕಲ್ಲಿನಿಂದ ಮಾಡಿದ ಕೈ ತೊಟ್ಟಿಗೆ ಸುರಿದರೆ ಗೋಡೆಯೊಳಗೆ ಅಳವಡಿಸಿದ ತಾಮ್ರದ ಕೊಳವೆಗಳ ಮೂಲಕ ಕೋಣೆಯೊಳಗೂ ನೀರು ಸರಬರಾಜಾಗುತ್ತದೆ. ಅಡುಗೆಮನೆ, ಊಟದ ಮನೆ, ಸ್ನಾನದ ಮನೆಗಳಲ್ಲಿ ಆರು, ಎಂಟು ಕೋನಗಳ ಆಕೃತಿಯ ಬಾಯಿಯಿರುವ ತೊಟ್ಟಿಗಳು ಆಕರ್ಷಕವಾಗಿವೆ. ಹಾಲಿನಮನೆಗೆ ನೀರಿನ ವಿಶೇಷ ವ್ಯವಸ್ಥೆಯಿದೆ. ನೀರು ತುಂಬಿಡುವ ಕಲ್ಲಿನ ಮರಿಗೆ, ಬಾನಿಗಳಿನ್ನೂ ಇವೆ. ತನ್ನ ಅಧಿಕಾರಕ್ಕೆ ಎದುರಾಡುವವರನ್ನು ನಿಧಾನವಾಗಿ ಕೊಲ್ಲಲು ವಿಷಪ್ರಾಶನ ಮಾಡುವುದು ಇವತ್ತಿಗೂ ಸರ್ವೇಸಾಮಾನ್ಯವಾಗಿರುವಾಗ ಅಂದು ನೀರು, ಆಹಾರದ ಸುರಕ್ಷತೆ ಕಾಪಾಡಿಕೊಳ್ಳುವುದು ಸವಾಲೇ ಆಗಿದ್ದಿರಬೇಕು. ಹಾಗಾಗಿ ಅರಮನೆಯ ಒಳಗೆ ರಾಜರ ಉಪಯೋಗಕ್ಕೆಂದೇ ಪ್ರತ್ಯೇಕ ಬಾವಿಯಿದೆ. ಅರಮನೆಯ ತೀರಾ ಒಳಾವರಣದ ನೆಲಮಾಳಿಗೆಯಲ್ಲೊಂದು ಗುಪ್ತ ಬಾವಿಯಿದೆ.

ಮುರಿದ ಗೋಡೆಗಳ ಮೇಲೆ ನುಣುಪಾದ ಗಾರೆ ಅಲ್ಲಿಲ್ಲಿ ಕಂಡುಬರುತ್ತದೆ. ಕಾವಲುಗಾರರ ಪ್ರಕಾರ ಕೆರೆಯಲು ಸಾಧ್ಯವೇ ಇಲ್ಲದ, ಕಲ್ಲಿನಷ್ಟೇ ಗಟ್ಟಿಯಾದ ಗಾರೆ ಅದು. ಹುಲ್ಲು, ಅರಳೆ, ಬಿಲ್ವದ ಕಾಯಿ, ಅಂಟು, ಸುಣ್ಣ, ಮರಳು, ಮಣ್ಣು ಮುಂತಾದ ವಸ್ತುಗಳನ್ನು ಮಿಶ್ರ ಮಾಡಿ ಕಾಂಕ್ರೀಟ್ ಹೋಲುವ ವಸ್ತುವನ್ನು ತಯಾರಿಸಿ ಗೋಡೆ ಕಟ್ಟಿ ಗಿಲಾಯಿ ಮಾಡಿದ್ದಾರೆ. ಗಾರೆಗೆ ಹಚ್ಚಿದ ಹಸಿರು, ನೀಲಿ, ಕೆಂಬಣ್ಣಗಳು ಅಲ್ಲಿಲ್ಲಿ ಇನ್ನೂ ಉಳಿದುಕೊಂಡಿವೆ. ಮನೆಯ ಹಿಂಭಾಗದ ಗೋಡೆಯಲ್ಲಿ ಕಾರ್ತೀಕ ಮಾಸದ ದೀಪೋತ್ಸವಕ್ಕೆಂದು ಮಾಡಿದ ಸಣ್ಣಸಣ್ಣ ಆಕರ್ಷಕ ಗೂಡುಗಳಿವೆ. ಅದರಲ್ಲೆಲ್ಲ ದೀಪ ಹಚ್ಚಿಟ್ಟರೆ ಅರಮನೆ ಹೇಗೆ ಕಾಣುತ್ತಿದ್ದಿರಬಹುದೆಂದು ಊಹಿಸಿಕೊಂಡರೆ ಮೈನವಿರೇಳುತ್ತದೆ.

ಕೋಟೆಯೊಳಗೊಂದು ವಸ್ತುಸಂಗ್ರಹಾಲಯವಿದ್ದು ಗಮನ ಸೆಳೆಯುವಷ್ಟು ವೈವಿಧ್ಯಮಯ ವಸ್ತುಗಳನ್ನಿಟ್ಟುಕೊಂಡಿದೆ. ಅಂದಿನ ಪ್ರಧಾನಿ ಇಂದಿರಾಗಾಂಧಿ ಉದ್ಘಾಟಿಸಿದ ವಸ್ತುಸಂಗ್ರಹಾಲಯವು ಕಿತ್ತೂರಿನ ಕೋಟೆಯ, ಅರಮನೆಯ ಕೆಲವು ವಿಶಿಷ್ಟ ವಸ್ತುಗಳಲ್ಲದೇ ಭಾರತದ ಬೇರೆಬೇರೆ ಕಡೆಯ ಉತ್ಖನನದ ವಸ್ತುಗಳನ್ನೂ ಹೊಂದಿದೆ.

ಲೇಖಕಿ

ಈಗ ಕಟ್ಟಡದ ಯಾವ ಭಾಗದಲ್ಲೂ ಮುಚ್ಚಿಗೆ, ಸೂರು ಉಳಿದಿಲ್ಲ. ಮರದ ಒಂದೇಒಂದು ಕಂಬ, ಕಿಟಕಿ, ಬಾಗಿಲೂ ಇರದ ಹಾಗೆ ಎಲ್ಲವನ್ನು ಕಿತ್ತೊಯ್ಯಲಾಗಿದೆ. ನೆಲಹಾಸು, ಗೋಡೆಯ ಕಲ್ಲುಗಳನ್ನೂ ಎಬ್ಬಿಸಿ ಒಯ್ದಿದ್ದಾರೆ. ಗೋಡೆಯೊಳಗಿನ ತಾಮ್ರದ ಕೊಳವೆಗಳನ್ನು ಕಿತ್ತೊಯ್ದಿದ್ದಾರೆ. ಇಡಿಯ ಆವರಣ ಮುಚ್ಚಿಗೆಯಿಲ್ಲದೆ ಪಂಚಭೂತಕ್ಕೆ ತೆರೆದುಕೊಂಡು ನಿಂತಿರುವುದರಿಂದ ಪಾಚಿ, ಹಾವಸೆ, ಕಳೆಗಿಡಗಳು ಅರಮನೆಯ ಕಟ್ಟಡದ ಸಂದಿಮೂಲೆಗಳಿಗೆ ಸವಾಲೊಡ್ಡುವಂತೆ ಆವರಿಸಿಕೊಳ್ಳುತ್ತಿವೆ. ಬಳಸಿದ ಮರಮುಟ್ಟು ಎಲ್ಲೆಲ್ಲಿ ಹೋಗಿ ಗೆದ್ದಲು ಹಿಡಿದವೋ, ಬೆಂಕಿಗೆ ಉರುವಲಾದವೋ, ಮತ್ಯಾರ ಮನೆಯ ಕಂಬ ತೊಲೆ ಬೋದಿಗೆಗಳಾದವೋ, ಎಷ್ಟನ್ನು ಬ್ರಿಟಿಷರೊಯ್ದರೋ, ಮತ್ತೆಷ್ಟನ್ನು ನಮ್ಮವರೇ ಕಿತ್ತೊಯ್ದರೋ?! ಕಾಲದ ಹೊರತು ಬೇರೆ ಸಾಕ್ಷಿ ಯಾರಿದ್ದಾರೆ?

[ಮುಂದಿನ ಭಾಗ ನಾಳೆ (10-02-2024) ಪ್ರಕಟವಾಗಲಿದೆ]

ಡಾ.ಎಚ್‌ ಎಸ್‌ ಅನುಪಮಾ

ವೈದ್ಯರು, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಲ್ಲಿ ಸಕ್ರಿಯರು.

`

More articles

Latest article