ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಘೋಷಿಸುವ ಗೊತ್ತುವಳಿ ಅಂಗೀಕರಿಸುವ ವಿಚಾರವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಭಾರಿ ಗದ್ದಲ ಉಂಟಾಯಿತು. ಗೊತ್ತುವಳಿ ಅಂಗೀಕರಿಸುವಂತೆ ಪಕ್ಷೇತರ ಸದಸ್ಯರು ಪಟ್ಟು ಹಿಡಿದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಪರಸ್ಪರ ವಾಕ್ಸಮರ ತೀವ್ರಗೊಂಡ ಹಿನ್ನೆಲೆಯಲ್ಲಿ ಮೇಯರ್ ಸಭೆಯನ್ನು ಮುಂದೂಡಿದರು.
ಸಭೆಯಲ್ಲಿ ಪಕ್ಷೇತರ ಸದಸ್ಯರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ನಿರ್ಣಯವನ್ನು ಮಹಾನಗರ ಪಾಲಿಕೆಯಿಂದ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಎಂಇಎಸ್ ಸದಸ್ಯರು ಗೊತ್ತುವಳಿ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು.
ಗೊತ್ತುವಳಿ ಅಂಗೀಕರಿಸುವ ವಿಚಾರದಲ್ಲಿ ಮೇಯರ್ ಕೂಡ ತಕ್ಷಣ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕಿದರು. ಈ ಕುರಿತು ಉಪಮೇಯರ್ ಸ್ಪಷ್ಟನೆ ನೀಡಿ, ಗೊತ್ತುವಳಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಈಗಾಗಲೇ ಠರಾವು ಕಳುಹಿಸಲಾಗಿದೆ. ಸರ್ಕಾರದಿಂದ ನಿರ್ದೇಶನ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಸರ್ಕಾರದ ನಿರ್ದೇಶನಕ್ಕಾಗಿ ಕಾಯುವಂತೆ ಉಪಮೇಯರ್ ಮನವಿ ಮಾಡಿದರೂ, ಇದಕ್ಕೆ ಪಕ್ಷೇತರ ಸದಸ್ಯರು ಹಾಗೂ ಕನ್ನಡಪರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬೆಳಗಾವಿ ಕರ್ನಾಟಕದ ಭಾಗ ಎಂಬುದನ್ನು ಘೋಷಿಸಲು ಸರ್ಕಾರದ ನಿರ್ದೇಶನದ ಅಗತ್ಯವೇನು ಎಂದು ಪ್ರಶ್ನಿಸಿ, ಪಾಲಿಕೆಯೇ ನಿರ್ಣಯ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಸಭೆಯಲ್ಲಿ ‘ಜೈ ಕರ್ನಾಟಕ’ ಘೋಷಣೆಗಳು ಮೊಳಗಿದವು. ಸದಸ್ಯರ ನಡುವೆ ಗದ್ದಲ ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಮೇಯರ್ ಸಭೆಯನ್ನು ಮುಂದೂಡಿದರು.
ಇತ್ತ ಮಹಾನಗರ ಪಾಲಿಕೆಯ ಸಭೆಯಲ್ಲಿ ಕನ್ನಡ ಪರವಾಗಿ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟವಾಗಿ ಘೋಷಿಸುವ ನಿರ್ಣಯವನ್ನು ಪಾಲಿಕೆ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಪರವಾಗಿ ನಿರ್ಣಯ ಕೈಗೊಳ್ಳುವ ವಿಚಾರದಲ್ಲಿಯೂ ಮಹಾನಗರ ಪಾಲಿಕೆ ಮೀನಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆಯ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ ಕರವೇ ಕಾರ್ಯಕರ್ತರು, ಬೆಳಗಾವಿಯ ಕುರಿತು ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

