ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದ್ದು, ಮನೆ ಮನೆಗೆ ತೆರಳಿ ನಡೆಸಿದ ಪರಿಶೀಲನೆ ವೇಳೆ ಬರೋಬ್ಬರಿ 1,08,31,945 ಎಎಸ್‌ಡಿಒ (ASDDO) ಮತದಾರರು ಪತ್ತೆಯಾಗಿದ್ದಾರೆ. ಈ ಮತದಾರರು ಗೈರು, ಸ್ಥಳಾಂತರಗೊಂಡವರು, ನಕಲಿ ಮತದಾರರು ಅಥವಾ ಮೃತಪಟ್ಟವರಾಗಿರುವ ಸಾಧ್ಯತೆಯಿದೆ ಎಂದು ಚುನಾವಣಾ ಅಧಿಕಾರಿಗಳು ಗುರುತಿಸಿದ್ದಾರೆ.
ಮನೆ ಮನೆ ಭೇಟಿ ಹಾಗೂ ಮತದಾರರ ವಿವರಗಳ ಪರಿಶೀಲನೆ ಪ್ರಕ್ರಿಯೆ ನಿನ್ನೆ ಮುಕ್ತಾಯಗೊಂಡಿದ್ದು, ಇದೀಗ ಪರಿಶೀಲನೆಯ ವೇಳೆ ಗುರುತಿಸಲಾದ ಮತದಾರರ ಪಟ್ಟಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುತ್ತಿದೆ. 1.08 ಕೋಟಿಗೂ ಅಧಿಕ ಮತದಾರರ ಹೆಸರುಗಳು ಯಾವ ಕಾರಣಕ್ಕೆ ASDDO ಪಟ್ಟಿಗೆ ಸೇರಿವೆ ಎಂಬುದನ್ನು ಮುಂದಿನ ಹಂತದಲ್ಲಿ ಪರಿಶೀಲಿಸಲಾಗುತ್ತದೆ.
ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಆಗಸ್ಟ್ 24ರಂದು ಮತದಾರರ ಪಟ್ಟಿಯ ಮೊದಲ ಕರಡು ಪ್ರಕಟವಾಗಲಿದೆ. ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಅಥವಾ ತಮ್ಮ ಹೆಸರಿನ ಕುರಿತು ಯಾವುದೇ ಆಕ್ಷೇಪಣೆ, ತಕರಾರು ಇದ್ದರೆ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಹಾಗೂ ಹಕ್ಕುಗಳನ್ನು ಸಲ್ಲಿಸಬಹುದು. ಈ ಅವಧಿಯಲ್ಲಿ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸುವುದು ಹಾಗೂ ಹೆಸರು ಕೈಬಿಟ್ಟಿದ್ದರೆ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸುವುದು ಪ್ರಮುಖವಾಗಲಿದೆ.
ಆಕ್ಷೇಪಣೆಗಳು ಹಾಗೂ ಹಕ್ಕುಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಒಟ್ಟಾರೆ 1.08 ಕೋಟಿಗೂ ಅಧಿಕ ಮತದಾರರು ASDDO ವರ್ಗದಲ್ಲಿ ಪತ್ತೆಯಾಗಿರುವುದು ರಾಜ್ಯದ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಆದರೆ ಈ ಪೈಕಿ ಎಷ್ಟು ಮಂದಿ ನಿಜವಾಗಿಯೂ ಮೃತಪಟ್ಟವರು, ಎಷ್ಟು ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, ಎಷ್ಟು ಮಂದಿ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವವರು ಹಾಗೂ ಎಷ್ಟು ಮಂದಿ ಕೇವಲ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಭ್ಯವಾಗದವರು ಎಂಬುದು ಮುಂದಿನ ಪರಿಶೀಲನೆಯಲ್ಲಿ ಸ್ಪಷ್ಟವಾಗಲಿದೆ.
ಸದ್ಯದ ಮಟ್ಟಿಗೆ 1,08,31,945 ಮತದಾರರ ಹೆಸರನ್ನೂ ಅಂತಿಮವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಗಿಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಪರಿಶೀಲನೆಯ ನಂತರ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಉಳಿಸುವ ಸಾಧ್ಯತೆಯೂ ಇದೆ.
ಆದರೂ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವೆ ಈಗಾಗಲೇ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆಗಸ್ಟ್ 24ರಂದು ಪ್ರಕಟವಾಗಲಿರುವ ಕರಡು ಪಟ್ಟಿ ಕುತೂಹಲ ಮೂಡಿಸಿದೆ.

