ಬೆಂಗಳೂರು: ಡಿಸೆಂಬರ್ ಬಂತೆಂದರೆ ಚಳಿ ಸಹಜವಾಗಿಯೇ ಹೆಚ್ಚು. ಆದರೆ ಈ ವರ್ಷ ವಾಡಿಕೆಗಿಂತ ಚಳಿ ಹೆಚ್ಚಾಗಿದ್ದು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಕಳೆದ ಎರಡು ದಿನದಿಂದ ಅತೀ ಹೆಚ್ಚು ಚಳಿ ಕಾಡುತ್ತಿದೆ. ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಧ್ಯೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಈ ವಾರದಲ್ಲಿ ಮತ್ತೆ ಮಳೆ ಬೀಳುವ ಸಾಧ್ಯತೆಯೂ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಉದ್ಯಾನ ನಗರಿ ಬೆಂಗಳೂರಲ್ಲಿ 14 ವರ್ಷದ ಬಳಿಕ ಅತ್ಯಧಿಕ ಚಳಿ ಇರಲಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಅತೀ ಹೆಚ್ಚು ಚಳಿ ವಾತಾವರಣ ಇರಲಿದೆ ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ಇರುವಂತೆ ಸೂಚನೆ ಕೊಟ್ಟಿದೆ. ಇಂದು ರಾತ್ರಿ 12 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಹಿನ್ನೆಲೆಯಲ್ಲಿ ಚಳಿಯ ತೀವ್ರತೆ ಜಾಸ್ತಿ ಇರಲಿದೆ. 2011ರ ಡಿ.24ರ ರಾತ್ರಿ 12.8 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. 14 ವರ್ಷಗಳ ಬಳಿಕ ತೀವ್ರ ಚಳಿ ಕಾಣಿಸಿಕೊಳ್ಳಲಿದೆ.
ವಾಡಿಕೆಗಿಂತ ಅಧಿಕ ಮಳೆ ಬಿದ್ದಿರುವುದು, ಭೂಮಿಯಲ್ಲಿ ತೇವಾಂಶ ಇರುವುದು, ಸೈಕ್ಲೋನ್ ಉಂಟಾಗಿರುವುದು, ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದು ಮತ್ತು ಸದಾ ಮೋಡ ಕವಿದ ವಾತಾವರಣ ಇರುತ್ತಿರುವುದರಿಂದ ವಾಡಿಕೆಗಿಂತ 2-3 ಡಿ.ಸೆ. ಉಷ್ಣಾಂಶ ಕುಸಿದಿದೆ. ಮೋಡ ಕವಿದ ವಾತಾವರಣ ಜತೆಗೆ ತಣ್ಣನೆ ಗಾಳಿ ಬೀಸುತ್ತಿದೆ. ಸಂಜೆ ಮತ್ತು ಮುಂಜಾನೆ ಇಬ್ಬನಿ ಬೀಳುತ್ತಿದೆ. ಹಾಗಾಗಿ, ರಾತ್ರಿ ಆರಂಭವಾಗುತ್ತಿದ್ದಂತೆ ಚಳಿ ಕಾಣಿಸಿಕೊಳ್ಳುತ್ತಿದೆ. ಮುಂಜಾನೆ ಇದರ ತೀವ್ರತೆ ಹೆಚ್ಚುತ್ತಿದೆ. ಈ ತಿಂಗಳು ಪೂರ್ತಿ ಪ್ರತಿ ರಾತ್ರಿಯೂ ಚಳಿಯಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಜೊತೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ನಗರದಲ್ಲಿ 21ರಿಂದ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ತೀವ್ರ ಶೀತ ಗಾಳಿಯ ಸಾಧ್ಯತೆ ಹಿನ್ನೆಲೆ ಇಂದಿನಿಂದ ಮೂರು ದಿನ ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ 6 ರಿಂದ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಇದು ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಇನ್ನು ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಹ ಶೀತ ವಾತಾವರಣ ಇರಲಿದ್ದು, ಅಲ್ಲಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕಂಡುಬರಲಿದೆ. ಇನ್ನು ಈ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಡೆ ಮೂರು ದಿನಗಳ ಕಾಲ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಳಿ ಹಿನ್ನೆಲೆಯಲ್ಲಿ ವಾಯುವಿಹಾರಕ್ಕೆ ಹೋಗುವವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಮೂಳೆ ನೋವಿನಿಂದ ಬಳಲುತ್ತಿರುವವರು ಹೊರಹೋಗದಿರುವುದೇ ಉತ್ತಮ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಗಮನಹರಿಸಬೇಕು. ಹೊರ ಹೋದಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಸೇರಿ ಇತರೆ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.