Saturday, July 27, 2024

ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ನಾನು ಭಾಗವಹಿಸುತ್ತೇನೆ : ಸಿದ್ದರಾಮಯ್ಯ

Most read

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಎಸಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನನ್ನೂ ನೀಡದೇ ರಾಜ್ಯಕ್ಕೆ ಅನ್ಯಾಯವನ್ನು ಎಸಗಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಹಂಪಿ ಉತ್ಸವಕ್ಕೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರಗಾಲದ ಪರಿಹಾರವಾಗಿ ಎನ್‌ಡಿಆರ್‌ಎಫ್ ನಿಂದ 4,663 ಕೋಟಿ ರೂ. ಮೊತ್ತವನ್ನು ನೀಡಲು ಮನವಿ ಸಲ್ಲಿಸಿ ನಾಲ್ಕು ತಿಂಗಳೂ ಕಳೆದಿದ್ದರೂ, ಕೇಂದ್ರದಿಂದ ಯಾವ ಸ್ಪಂದನೆಯೂ ದೊರೆತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ನಾನೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಕರೆಕೊಟ್ಟಿದ್ದಾರೆ.

ಈ ಕುರಿತು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಹಂಚಿಕೊಂಡ ಅವರು ʼದೇಶವನ್ನು ಇಬ್ಭಾಗವಾಗಿಸುವ ಉದ್ದೇಶದಿಂದ ಸಂಸದ ಡಿ.ಕೆ.ಸುರೇಶ್ ಅವರು ಆ ಹೇಳಿಕೆಯನ್ನು ನೀಡಿರುವುದಿಲ್ಲ. ದೇಶ ಅಖಂಡವಾಗಿರಬೇಕೆಂಬುದು ನಾವು ಬಯಸುತ್ತೇವೆ. ಬಿಜೆಪಿಯವರು ಕೇಂದ್ರ ಬಜೆಟ್ ನಲ್ಲಿ ಬಡವರು, ರೈತರು, ನಿರುದ್ಯೋಗ ವಿಷಯಗಳ ಬಗ್ಗೆ ಚರ್ಚೆ ಮಾಡಿ, ಪರಿಹಾರ ನೀಡುವ ಬದಲು ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರೂ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆʼ ಎಂದರು.

ʼ15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಹಾಗೂ ಇಲ್ಲಿನ ಫೆರಿಫೆರಲ್ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಪ್ರಮುಖ ಯೋಜನೆಗಳಿಗೆ 6,000 ಕೋಟಿ ರೂ. ಒದಗಿಸುವ ಸಾಧ್ಯತೆ ಇತ್ತು. ಆದರೆ ಯಾವುದೇ ಅನುದಾನವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಇಂದಿನಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ಜನರಿಗಾಗಿ ಹಾಗೂ ಕಲಾವಿದರಿಗಾಗಿ ಉತ್ಸವಗಳನ್ನು ಆಚರಿಸಲಾಗುತ್ತದೆ. ಬರಗಾಲವಿದ್ದರೂ ಉತ್ಸವಗಳನ್ನು ಮಾಡದೇ ಇರಲು ಸಾಧ್ಯವಿಲ್ಲ. ಇದೊಂದು ರಾಜ್ಯದ ಸಾಂಸ್ಕೃತಿಕ ಉತ್ಸವ ಎಂದು ಹರ್ಷವ್ಯಕ್ತಪಡಿಸಿದರು.

More articles

Latest article