ಬೆಂಗಳೂರು: ಎಚ್ಚರಿಕೆ ನೀಡಿದ ನಂತರವೂ ಅನಗತ್ಯ ಗೊಂದಲ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿರುವ ಸಚಿವರ ಬಗ್ಗೆ ಹೈಕಮಾಂಡ್ ವರದಿ ಕೇಳಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಒಂದೂವರೆ ವರ್ಷದಿಂದ ಸಚಿವರು ತಮ್ಮ ಇಲಾಖೆಯಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ಮಾಡಿದ್ದಾರೆ, ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾರೆಯೇ, ಪಕ್ಷದ ಸಂಘಟನೆಗೆ ಒತ್ತು ಕೊಡಲಾಗುತ್ತದೆಯೇ, ಪ್ರಣಾಳಿಕೆಯಲ್ಲಿ ಕೊಟ್ಟಿರುವ ಯೋಜನೆಗಳನ್ನು ಜಾರಿ ಮಾಡಲು ಪಕ್ಷ ಮತ್ತು ಸರ್ಕಾರಕ್ಕೆ ಸಹಕಾರ ಕೊಡುತ್ತಿದ್ದಾರೆಯೇ, ತಮ್ಮ ಇಲಾಖೆಯಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದಾರೆಯೇ ಮುಂತಾದ ಮಾಹಿತಿಯನ್ನು ಹೈಕಮಾಂಡ್ ಕೇಳಿದೆ ಎಂದು ಅವರು ತಿಳಿಸಿದ್ದಾರೆ.
ಪಕ್ಷದ ಶಿಸ್ತು ಉಲ್ಲಂಘಿಸಿ ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಚಿವರ ಸಂಪೂರ್ಣ ವಿವರಗಳನ್ನು ಕೊಡುವಂತೆಯೂ ಹೈ ಕಮಾಂಡ್ ಸೂಚಿಸಿದೆ. ಯಾವುದೇ ವಿಷಯದಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರೂ ಅನೇಕ ಸಚಿವರು ಅನಗತ್ಯ ಗೊಂದಲ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಹೈಕಮಾಂಡ್ ಆದೇಶ ಉಲ್ಲಂಘಿಸುವವರು ಕಾಂಗ್ರೆಸ್ನ ಶಿಸ್ತಿನ ಸಿಪಾಯಿಗಳಲ್ಲ ಎನ್ನುವುದು ವರಿಷ್ಠರ ಅಭಿಪ್ರಾಯ ಎಂದೂ ಅವರು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ, ಮುಖ್ಯಮಂತ್ರಿ ಸ್ಥಾನ, ಸಂಪುಟ ಪುನಾರಚನೆ ಎಂಬಿತ್ಯಾದಿ ಎಲ್ಲ ವಿಷಯಗಳನ್ನು ಹೈಕಮಾಂಡ್ ನಾಯಕರು ನಿರ್ಧರಿಸಲಿದ್ದಾರೆ. ನಾಯಕತ್ವ ಬದಲಾವಣೆಯ ತೀರ್ಮಾನವನ್ನು ತೆಗೆದುಕೊಳ್ಳುವುದು ಮಾಧ್ಯಮಗಳಲ್ಲ. ಪಕ್ಷದ ಹೈಕಮಾಂಡ್ . ಹೀಗಾಗಿ ಪಕ್ಷದ ನಾಯಕರು ಯಾವುದೇ ವಿಷಯಗಳಿದ್ದರೂ ಹೈಕಮಾಂಡ್ ನಾಯಕರ ಗಮನಕ್ಕೆ ತರಬೇಕೇ ವಿನಾ ಮಾಧ್ಯಮಗಳಿಗೆ ಅಲ್ಲ. ಇಂಥ ಹೇಳಿಕೆ ನೀಡಿರುವವರ ವರದಿಯನ್ನು ಹೈಕಮಾಂಡ್ ನಾಯಕರು ಕೇಳಿದ್ದಾರೆ ಎಂದೂ ಭಂಡಾರಿ ತಿಳಿಸಿದ್ದಾರೆ.
ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಪಕ್ಷದ ತಾಯಿ ಇದ್ದಂತೆ, ಸರ್ಕಾರ ಮಗು ಇದ್ದಂತೆ. ಯಾರೂ ಪಕ್ಷದ ಘನತೆಗೆ ಚ್ಯುತಿ ತರಬಾರದು ಎಂಬ ಸಂದೇಶವನ್ನು ನೀಡಿದ್ದಾರೆ. ಆದರೂ ಕೆಲವು ನಾಯಕರು, ಕೆಲವು ಸಚಿವರು ಪದೇ ಪದೆ ಮಾತನಾಡುತ್ತಿದ್ದಾರೆ. ಸಚಿವರಾದ ತಿಮ್ಮಾಪುರ, ಸತೀಶ ಜಾರಕಿಹೊಳಿ ಹಾಗೂ ಎಚ್.ಸಿ. ಮಹದೇವಪ್ಪ ಅವರು ಪದೇ ಪದೇ ಮಾತನಾಡುತ್ತಿದ್ದು, ಹೈಕಮಾಂಡ್ ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದೆ. ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡುವವರು ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾದೀತು ಎಂದು ಪಕ್ಷದ ವರಿಷ್ಠರು ತಾಕೀತು ಮಾಡಿದ್ದಾರೆ ಎಂದೂ ಹೇಳಿದ್ದಾರೆ.