ಮಂಡ್ಯದಲ್ಲಿ ಬಿಜೆಪಿಗೆ ಗಟ್ಟಿ ನೆಲೆಯಿಲ್ಲ. ಜೆಡಿಎಸ್ ಜೊತೆ ಕೈಜೋಡಿಸಿ ಇಡೀ ಮಂಡ್ಯವನ್ನು ಕೇಸರೀಕರಣ ಮಾಡಲು ಅವರಿಗೆ ಇದೇ ಸದಾವಕಾಶ. ಅದಕ್ಕಾಗಿ ಜೆಡಿಎಸ್ ನ ಅವಕಾಶವಾದಿ ನಾಯಕ ಕುಮಾರಸ್ವಾಮಿಯವರಿಗೂ ಕೇಸರಿ ಶಾಲು ಹಾಕಿಸಿ, ಹನುಮ ಜಪ ಮಾಡಲು ಹಚ್ಚಿ ಮಂಡ್ಯದ ಒಕ್ಕಲಿಗರ ಮತವನ್ನು ಕ್ರೋಢೀಕರಿಸಲು ಈ ಹನುಮಧ್ಜಜ ಪ್ರಸಂಗವನ್ನು ಸೃಷ್ಟಿಸಲಾಗಿದೆ. ಕೇಸರಿಗರ ಬೃಹನ್ನಾಟಕದಲ್ಲಿ ಕುಮಾರಸ್ವಾಮಿ ಕೂಡಾ ಪಾತ್ರಧಾರಿಗಳಾಗಿದ್ದಾರೆ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು
ಕೇಸರಿ ಪಡೆಗಳ ಪೂರ್ವ ತಯಾರಿ ಯೋಜನೆ ಅಂದ್ರೆ ಹೀಗಿರುತ್ತದೆ. ಜನರಲ್ಲಿರುವ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ, ಶಾಂತಿ ಸೌಹಾರ್ದತೆಗೆ ಭಂಗ ತಂದು, ಅಸಹನೆ ಸೃಷ್ಟಿಸುವುದು ಈ ಮತಾಂಧ ಸಂಘ ಪರಿವಾರಿಗರಿಗೆ ಸುಲಭದ ಸಂಗತಿಯಾಗಿದೆ. ಅದಕ್ಕೆ ಉದಾಹರಣೆಯಾಗಿ ಮಂಡ್ಯದ ಕೆರಗೋಡು ಪ್ರಕರಣವನ್ನು ನೋಡಬಹುದಾಗಿದೆ. ಫ್ಯಾಸಿಸ್ಟ್ ಶಕ್ತಿಗಳ ಪರ್ಫೆಕ್ಟ್ ಪ್ಲಾನಿಂಗ್ ಹೇಗಿರುತ್ತದೆ ಎಂದು ತಿಳಿಯಬಹುದಾಗಿದೆ.
ಎಲ್ಲಿ ಬಿಜೆಪಿ ಶಕ್ತಿ ಕಡಿಮೆ ಇದೆಯೋ ಅದನ್ನು ವಿಸ್ತರಿಸಲು ಅಲ್ಲಿಯ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಕೆರಗೋಡನ್ನು ಆಯ್ಕೆ ಮಾಡಿಕೊಳ್ಳಲಾಯ್ತು.
ಅಲ್ಲಿರುವ ಬಿಜೆಪಿ ಬೆಂಬಲದ ಧಾರ್ಮಿಕ ಮತಾಂಧ ಸಂಘಟನೆಯನ್ನು ಗುರುತಿಸುವುದು. ಗೌರಿಶಂಕರ ಸೇವಾ ಟ್ರಸ್ಟ್ ನ್ನು ಗುರುತಿಸಿ ಧ್ವಜಸ್ತಂಭ ಸ್ಥಾಪನೆಗೆ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಲಾಯ್ತು.
ಗ್ರಾಮ ಪಂಚಾಯತಿಯ ಸರಕಾರಿ ಜಾಗದಲ್ಲಿ ಧಾರ್ಮಿಕ ಧ್ವಜಸ್ತಂಭ ಸ್ಥಾಪಿಸಲು ಕಾನೂನಲ್ಲಿ ಅವಕಾಶ ಇಲ್ಲವಾದ್ದರಿಂದ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸಲೆಂದು ಧ್ವಜಸ್ತಂಭ ನಿರ್ಮಿಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟು ಪಂಚಾಯತಿಯಿಂದ ಅನುಮತಿ ಪಡೆದು ನಿರ್ಮಾಣ ಕಾರ್ಯ ಶುರುಮಾಡುವುದು. ಹೇಳಿದ್ದು 60 ‘ ಎತ್ತರದ ಕಂಬ, ನಿರ್ಮಿಸಿದ್ದು 108 ಅಡಿ ಎತ್ತರದ ಸ್ತಂಭ. ಎತ್ತರದ ಬಗ್ಗೆ ಯಾರೂ ಕೇಳಲಿಲ್ಲ ಕೇಳಿದ್ದರೂ ರಾಷ್ಟ್ರಧ್ವಜ ಎನ್ನುವ ನೆಪ. ಪ್ರಶ್ನಿಸಿದ್ದರೆ ರಾಷ್ಟ್ರದ್ರೋಹಿ ಎನ್ನುವ ಆರೋಪ.
ಮುಚ್ಚಳಿಕೆ ಪ್ರಕಾರ ಆ ಸ್ತಂಭದಲ್ಲಿ ಹಾರಿಸ ಬೇಕಾದದ್ದು ರಾಷ್ಟ್ರಧ್ವಜ, ಆದರೆ ಧರ್ಮಾಂಧರ ಯೋಜನೆಯ ಪ್ರಕಾರ ಅಲ್ಲಿ ಹಾರಿಸಿದ್ದು ಹನುಮಧ್ವಜ. ಯಾಕೆಂದು ಕೇಳಿದಾಗ ಮೂರು ದಿನ ಹಾರಿಸಿ ಇಳಿಸುತ್ತೇವೆಂದು ಪಂಚಾಯತಿಯವರಿಗೆ ಸಮಜಾಯಿಸಿ ಕೊಡಲಾಯಿತಾದರೂ ಅದನ್ನೂ ಉಲ್ಲಂಘಿಸಿ ಹನುಮಧ್ವಜ ಇಳಿಸಲು ನಿರಾಕರಣೆ.
ಜನವರಿ 26, ಭಾರತದ ಗಣರಾಜ್ಯೋತ್ಸವದ ದಿನ ರಾಷ್ಟ್ರಧ್ವಜ ಹಾರಬೇಕಿತ್ತು ಆದರೆ ಹನುಮಧ್ವಜ ತೆರವಾಗಲೇ ಇಲ್ಲ. ವಿಷಯ ಜಿಲ್ಲಾಡಳಿತಕ್ಕೆ ತಲುಪಿತೊ ಅಥವಾ ಇವರೇ ತಲುಪಿಸಿದರೋ ಗೊತ್ತಿಲ್ಲ. ಪೊಲೀಸರ ರಕ್ಷಣೆಯಲ್ಲಿ ಬಂದ ಅಧಿಕಾರಿಗಳು ಹನುಮಧ್ವಜ ಇಳಿಸಿ ರಾಷ್ಟ್ರಧ್ವಜ ಹಾರಿಸಿ ತಮ್ಮ ಕರ್ತವ್ಯ ನಿಭಾಯಿಸಿದರು.
ಇಲ್ಲಿಗೆ ಕೇಸರಿಪಡೆಯವರು ಅಂದುಕೊಂಡಂತೆ ಮೊದಲನೇ ಹಂತದ ಕಾರ್ಯಾಚರಣೆ ಮುಗಿದು ಎರಡನೇ ಹಂತಕ್ಕೆ ವಿಸ್ತರಿಸಲು ವೇದಿಕೆ ಸಜ್ಜುಗೊಳಿಸಲಾಯ್ತು. ಹನುಮಧ್ವಜಕ್ಕೆ ಅಪಮಾನ ಮಾಡಲಾಗಿದೆಯೆಂದು ಊರವರನ್ನೆಲ್ಲಾ ಸೇರಿಸಲಾಯ್ತು. ಹಿಂದೂ ಧರ್ಮಕ್ಕೆ ಅಪಚಾರವೆಂದು ಸುದ್ದಿ ಹಬ್ಬಿಸಿ ಸುತ್ತಲಿನ ಹನ್ನೆರಡು ಹಳ್ಳಿಯ ಜನರನ್ನು ಕೆರಗೋಡಿಗೆ ಬರುವಂತೆ ಮಾಡಲಾಯಿತು. ಮಂಡ್ಯ ಜಿಲ್ಲೆಯ ಸಂಘ ಪರಿವಾರದ ಅಂಗಗಳಾದ ಬಿಜೆಪಿ, ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳದ ಕಾರ್ಯಕರ್ತರನ್ನು ಕರೆಸಿಕೊಳ್ಳಲಾಯಿತು. ಗಲಾಟೆ ವಾಗ್ವಾದ ಆರಂಭಿಸಿ ಪೊಲೀಸರ ಜೊತೆ ಸಂಘರ್ಷ ಶುರುವಾಯಿತು.
ಇಂತಹ ಸುವರ್ಣ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಕೇಸರಿ ಪಕ್ಷದ ರಾಜ್ಯ ನಾಯಕರ ಪಡೆ ಕೈಯಲ್ಲಿ ಕೇಸರಿ ಧ್ವಜ ಹಿಡಿದು ಹಿಂಡು ಹಿಂಡಾಗಿ ಕೆರಗೋಡು ಗ್ರಾಮಕ್ಕೆ ಲಗ್ಗೆ ಇಟ್ಟಿತು. ಪೊಲೀಸರು ಹಾಕಿದ ಬ್ಯಾರಿಕೇಡ್ ಗಳನ್ನು ತಳ್ಳಿ ನುಗ್ಗಿ ಕಾನೂನನ್ನು ಉಲ್ಲಂಘಿಸಲಾಯ್ತು. ಭಾವಪ್ರಚೋದನಾತ್ಮಕ ಭಾಷಣ ಮಾಡಲಾಯ್ತು. ಹಿಂದೂ ವಿರೋಧಿ ಸರಕಾರ ಎಂದು ಕೂಗಾಡಿದ್ದಾಯ್ತು. ಈ ನಾಯಕರನ್ನು ಪೊಲೀಸರು ಬಂಧಿಸಬೇಕು. ಅದು ರಾಜ್ಯಾದ್ಯಂತ ಪ್ರಚೋದನೆಗೆ ಪ್ರೇರಕವಾಗಬೇಕು ಎನ್ನುವುದು ಹಾಗೂ ಒಂದು ಗ್ರಾಮದ ಸಮಸ್ಯೆಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬುದು ಬಿಜೆಪಿಗರ ಮೆಗಾ ಪ್ಲಾನಿಂಗ್ ಆಗಿತ್ತು.
ಬಿಜೆಪಿಗರು ಹಚ್ಚಿದ ಕೋಮುಕಿಡಿಗೆ ತುಪ್ಪ ಸುರಿದು ಬೆಂಕಿಯಾಗಿಸುವ ಕೆಲಸವನ್ನು ಸಂಘ ಪರಿವಾರದ ಅಂಗಗಳೇ ಆಗಿರುವ ಮಾರಿಕೊಂಡ ಮಾಧ್ಯಮಗಳು ಅವ್ಯಾಹತವಾಗಿ ಮಾಡಿದವು. ಧ್ವಜಸ್ತಂಭದ ನಿರ್ಮಾಣಕ್ಕೂ ಮುಂಚೆ ಬರೆದುಕೊಟ್ಟ ಮುಚ್ಚಳಿಕೆ ಹಾಗೂ ಶರತ್ತುಗಳಿರುವ ಅನುಮತಿ ಪತ್ರಗಳ ವಿಷಯ ಮರೆಮಾಚಿ ‘ಹನುಮಧ್ವಜವನ್ನು ಬಲವಂತವಾಗಿ ಇಳಿಸಿ ಅಪಮಾನ ಮಾಡಿದರು’ ಎನ್ನುವ ಹುಸಿ ಸಂಗತಿಯನ್ನು ಮೀಡಿಯಾಂಗಗಳು ಪ್ರಚೋದನಾತ್ಮಕವಾಗಿ ಪ್ರಚಾರ ಮಾಡಿದವು.
ಕಮಲಪಡೆ ಅಂದುಕೊಂಡಂತೆ ಆಯಿತು. ಕಾನೂನು ಸುವ್ಯವಸ್ಥೆಯ ಭಾಗವಾಗಿ ಪೊಲೀಸರು ಮಾಮೂಲಿಯಂತೆ ಪ್ರಚೋದನೆ ಮಾಡುತ್ತಿದ್ದ ಕೇಸರಿ ನಾಯಕರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ಈ ಎಲ್ಲಾ ಪೂರ್ವಯೋಜಿತ ಹೈಡ್ರಾಮಾವನ್ನು ಮಾಧ್ಯಮಗಳು ಇನ್ನಷ್ಟು ಮಸಾಲೆ ಬೆರೆಸಿ ‘ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಯ್ತು’ ಎನ್ನುವಂತೆ ಬಿಂಬಿಸಿ ರಾಜ್ಯ ಸರಕಾರದ ವಿರುದ್ಧ ರಾಜ್ಯದ ಜನರು ಆಕ್ರೋಶಗೊಳ್ಳುವಂತೆ ಮಾಡಲು ಪ್ರಯತ್ನಿಸಿದರು.
ಮತ್ತೆ ಸಂಘ ಪರಿವಾರಿಗರಿಂದ ಅಲ್ಲಲ್ಲಿ ಪ್ರತಿಭಟನೆ, ಬಜರಂಗದಳದವರಿಂದ ಉಗ್ರ ಹೇಳಿಕೆ, ಮಂಡ್ಯ ಬಂದ್ ಗೆ ಕರೆ, ರಾಜ್ಯಾದ್ಯಂತ ಪ್ರತಿಭಟನೆ ವಿಸ್ತರಿಸುವ ಘೋಷಣೆ ಇವೆಲ್ಲವೂ ಮಾಮೂಲು.
ಅಂತೂ ಇಂತೂ ಒಂದು ಹಂತದಲ್ಲಿ ಸಂಘಿಗಳ ಯೋಜನೆ ಯಶಸ್ವಿಯಾಯಿತು. ಕೋಮು ಸೌಹಾರ್ದಕ್ಕೆ ಹೆಸರಾದ ಮಂಡ್ಯದ ನೆಲದಲ್ಲಿ ಕೋಮು ದ್ವೇಷದ ಬೀಜ ಬಿತ್ತಲಾಯಿತು. ಹನುಮನ ಹೆಸರಲ್ಲಿ ಹಿಂದೂ ಭಾವನೆ ಕೆರಳಿಸಿ, ಅದನ್ನು ಆಳುವ ಸರಕಾರದ ವಿರುದ್ಧ ತಿರುಗಿಸಿದರೆ ಕೇಸರಿಗರ ಉದ್ದೇಶ ಈಡೇರಿದಂತಾಯ್ತು.
ಯಾಕೆಂದರೆ ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸೋತು ಸುಣ್ಣವಾಗಿದೆ. ಆ ಪಕ್ಷಕ್ಕೆ ಸಮರ್ಥ ನಾಯಕತ್ವವೇ ಇಲ್ಲವಾಗಿದೆ. ಮತ್ತೆ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆಲ್ಲಲು ಈಗ ಬಿಜೆಪಿಗೆ ಉಳಿದದ್ದು ಮೋದಿ ಎನ್ನುವ ಬ್ರ್ಯಾಂಡ್ ನೇಮ್. ಕಳೆದ ಸಲ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆ ಬ್ರ್ಯಾಂಡ್ ಕೂಡಾ ವರ್ಕೌಟ್ ಆಗಲಿಲ್ಲ. ಹೀಗಾಗಿ ಈಗ ಬಿಜೆಪಿಗರಿಗೆ ಉಳಿದಿರುವುದು ರಾಮ ನಾಮ ಹಾಗೂ ಹನುಮಧ್ವಜಗಳಂತಹ ಭಾವನಾತ್ಮಕ ವಿಷಯಗಳು ಮಾತ್ರ.
ಮಂಡ್ಯದಲ್ಲಿ ಬಿಜೆಪಿಗೆ ಗಟ್ಟಿ ನೆಲೆಯಿಲ್ಲ. ಜೆಡಿಎಸ್ ಜೊತೆ ಕೈಜೋಡಿಸಿ ಇಡೀ ಮಂಡ್ಯವನ್ನು ಕೇಸರೀಕರಣ ಮಾಡಲು ಅವರಿಗೆ ಇದೇ ಸದಾವಕಾಶ. ಅದಕ್ಕಾಗಿ ಜೆಡಿಎಸ್ ನ ಅವಕಾಶವಾದಿ ನಾಯಕ ಕುಮಾರಸ್ವಾಮಿಯವರಿಗೂ ಕೇಸರಿ ಶಾಲು ಹಾಕಿಸಿ, ಹನುಮ ಜಪ ಮಾಡಲು ಹಚ್ಚಿ ಮಂಡ್ಯದ ಒಕ್ಕಲಿಗರ ಮತವನ್ನು ಕ್ರೋಢೀಕರಿಸಲು ಈ ಹನುಮಧ್ಜಜ ಪ್ರಸಂಗವನ್ನು ಸೃಷ್ಟಿಸಲಾಗಿದೆ. ಕೇಸರಿಗರ ಬೃಹನ್ನಾಟಕದಲ್ಲಿ ಕುಮಾರಸ್ವಾಮಿ ಕೂಡಾ ಪಾತ್ರಧಾರಿಗಳಾಗಿದ್ದಾರೆ.
ಈ ಸಂಘ ಪರಿವಾರಕ್ಕೆ ರಾಷ್ಟ್ರಧ್ವಜಕ್ಕಿಂತಲೂ ಹನುಮಧ್ವಜಕ್ಕೆ ಅತೀ ಮಹತ್ವ. ದೇಶದ ಕಾನೂನಿಗಿಂತಲೂ ಧಾರ್ಮಿಕ ಭಾವನೆಗಳೇ ಅವರಿಗೆ ಮುಖ್ಯ. ಸಂವಿಧಾನಕ್ಕಿಂತಲೂ ಧರ್ಮವೇ ದೊಡ್ಡದು. ಹಿಂದೂರಾಷ್ಟ್ರ ಮಾಡುತ್ತೇನೆ ಎನ್ನುವವರಿಗೆ, ಸಂವಿಧಾನ ಬದಲಾಯಿಸಲೆಂದೇ ಬಂದಿರುವವರಿಗೆ ದೇಶದ ಕಾನೂನು ಸಂವಿಧಾನ ಪ್ರಜಾಪ್ರಭುತ್ವ ಅದ್ಯಾವ ಲೆಕ್ಕ.
ಸಾರ್ವಜನಿಕ ಸರಕಾರಿ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾನೂನು ಉಲ್ಲಂಘಿಸಿ ಸಂಘಿಗಳು ಏನು ಮಾಡಿದರೂ ಸುಮ್ಮನಿರಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಹನುಮಧ್ವಜ ಹಾರಿಸಿದರೂ ಮೌನ ವಹಿಸಬೇಕು. ಯಾವುದಕ್ಕೋ ಅನುಮತಿ ಪಡೆದು ಇನ್ಯಾವುದನ್ನೋ ಮಾಡಿದರೆ ಯಾರೂ ಪ್ರಶ್ನಿಸದಂತಿರಬೇಕು. ಇದೆಲ್ಲಾ ಗೊತ್ತಿದ್ದೂ ಪಂಚಾಯತಿ, ಪೊಲೀಸ್, ಜಿಲ್ಲಾಡಳಿತ ಹಾಗೂ ಸರಕಾರ ನಿಷ್ಕ್ರಿಯವಾಗಿ ಜಾಣಕುರುಡು ತೋರಿಸಿ ಸತ್ತಂತಿರಬೇಕು ಎಂಬುದು ಮತಾಂಧರ ಮನದಿಚ್ಚೆ.
ಆಡಳಿತ ವ್ಯವಸ್ಥೆಯು ಧರ್ಮದ ಹೆಸರಲ್ಲಿ ನಡೆಯುವ ಕಾನೂನು ಉಲ್ಲಂಘನೆಯನ್ನು ಪ್ರಶ್ನಿಸಿದರೆ ಅದು ಹಿಂದೂ ವಿರೋಧಿತನವಾಗುತ್ತದಂತೆ. ಸರಕಾರಿ ಜಾಗದ ದುರುಪಯೋಗವನ್ನು ವಿರೋಧಿಸಿದ ಸರಕಾರ ಧರ್ಮದ್ರೋಹಿಯಾಗುತ್ತದಂತೆ. ಆದರೆ, ಕೋಮು ಪ್ರಚೋದನೆಯನ್ನು ನಿಯಂತ್ರಿಸಿದರೆ ಅದು ಹೇಗೆ ಧರ್ಮದ್ರೋಹವಾಗುತ್ತದೆ? ಎಂದು ಕೇಳಿದರೆ ಅದೂ ಸಹ ಧರ್ಮನಿಂದನೆಯ ಭಾಗವಾಗುತ್ತದಂತೆ!
ಆಯಿತು. ಭಕ್ತರ ಭಾವನೆಗೆ ಬೆಲೆ ಕೊಡಬೇಕು ಅಂದುಕೊಳ್ಳೋಣ. ಈಗ ಹನುಮಧ್ವಜ ಹಾರಿಸಲು ರಾಮನವಮಿಯೂ ಇಲ್ಲ, ಹನುಮ ಜಯಂತಿಯೂ ಅಲ್ಲ. ಅಕಾಲದಲ್ಲಿ ಕೇಸರಿ ಬಾವುಟ ಹಾರಿಸುವ ಅಗತ್ಯವೇನಿತ್ತು? ಹಾರಿಸಲೇ ಬೇಕೆಂದಿದ್ದರೆ ಹನುಮ ದೇವಸ್ಥಾನದ ಮೇಲೆ ಎಷ್ಟು ದೊಡ್ಡ ಬಾವುಟವನ್ನಾದರೂ ಹಾರಿಸಲಿ. ಇಲ್ಲವೇ ಹನುಮ ಭಕ್ತರ ಪ್ರತಿ ಮನೆಯ ಮೇಲೆ ಸನಾತನ ಬಾವುಟ ರಾರಾಜಿಸಲಿ. ಆದರೆ ಪಂಚಾಯತಿಯ ಸಾರ್ವಜನಿಕ ಜಾಗದಲ್ಲೇ ಅನಧಿಕೃತವಾಗಿ ಹನುಮಧ್ವಜ ಹಾರಿಸಿಯೇ ತೀರುತ್ತೇವೆ ಎಂದು ಗಲಾಟೆ ಮಾಡುವುದು ತಪ್ಪಲ್ಲವೇ? ಹೀಗೆ ತಪ್ಪು ಅಂತಾ ಹೇಳುವುದೇ ಕೇಸರಿಗರ ಪ್ರಕಾರ ಧರ್ಮದ್ರೋಹವಾಗುತ್ತದಂತೆ!. ಹಿಂದೂ ಭಾವನೆಗಳಿಗೆ ಘಾಸಿಯಾಗುತ್ತದೆಯಂತೆ!. ಹಾಗಾದಾಗ ಈ ದೇಶವನ್ನು ಸಂವಿಧಾನದ ಕಾನೂನುಗಳು ನಿಯಂತ್ರಿಸಬೇಕೋ ಇಲ್ಲವೇ ಹಿಂದೂ ಧಾರ್ಮಿಕ ಭಾವನೆಗಳು ನಿರ್ಣಯಿಸಬೇಕೋ? ಎಲ್ಲರಿಗೂ ಒಂದು ಕಾನೂನಾದರೆ ಈ ಸಂಘಿ ಭಕ್ತರು ಆಡಿದ್ದು ಹಾಗೂ ಮಾಡಿದ್ದು ಕಾನೂನಾಗ ಬೇಕೋ? ಭಕ್ತಿ ಆಚರಣೆಗಳೆಂಬುದು ಅವರವರ ವೈಯಕ್ತಿಕ ನಂಬಿಕೆಗಳು. ಅವು ಯಾವತ್ತೂ ಹೀಗೆ ಕಾನೂನು ಉಲ್ಲಂಘನೆಗೆ ಕಾರಣವಾಗ ಬಾರದು. ಸಾರ್ವಜನಿಕ ಅಸಹನೆಗೆ ಆಕರವಾಗಬಾರದು. ಆದರೆ ಹಾಗಾಗಲೇಬೇಕು ಎನ್ನುವುದೇ ಸಂಘ ಪರಿವಾರದ ಕೇಸರಿ ಪಡೆಗಳ ತಂತ್ರಗಾರಿಕೆ. ಕೋಮು ಭಾವನೆ ಕೆರಳಿಸುವ ಮೂಲಕವೇ ಆಳುವ ಅಧಿಕಾರ ಗಿಟ್ಟಿಸಲು ಸಾಧ್ಯವೆಂಬುದು ಅವರ ನಾಯಕರುಗಳ ನಂಬಿಕೆ. ಹೀಗಾಗಿ ಆಗಾಗ ಅಂದರೆ ಚುನಾವಣೆಗಳು ಮುಂದಿದ್ದಾಗ ಈ ರೀತಿಯ ಕೋಮುಸೌಹಾರ್ದತೆ ಹಾಳು ಮಾಡಿ ಭಾವಪ್ರಚೋದಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತದೆ. ಅದರ ಭಾಗವಾಗಿಯೇ ಈ ಕೆರಗೋಡು ಗ್ರಾಮದ ಹನುಮಧ್ವಜ ಪ್ರಕರಣ ಮತ್ತು ನಂತರ ನಡೆದ ಕೇಸರಿ ಕಲಿಗಳ ಬೃಹನ್ನಾಟಕ.
ಇದು ಇಲ್ಲಿಗೆ ಮುಗಿಯುವುದಿಲ್ಲ. ಲೋಕಸಭಾ ಚುನಾವಣೆ ಮುಗಿಯುವವರೆಗೂ ರಾಜ್ಯಾದ್ಯಂತ ಸಾಧ್ಯವಾದಲ್ಲೆಲ್ಲಾ ಕೋಮುಕಿಡಿ ಹಚ್ಚುವ, ಸೌಹಾರ್ದತೆ ಕದಡುವ, ಮತಾಂಧ ಕಾರ್ಯಾಚರಣೆಗಳನ್ನು ಸೃಷ್ಟಿಸಲಾಗುತ್ತದೆ. ಅದಕ್ಕೆ ಧರ್ಮ ದೇವರುಗಳ ಬಣ್ಣ ಬಳಿಯಲಾಗುತ್ತದೆ. ಅಭಿವೃದ್ಧಿ ರಾಜಕಾರಣದ ಬದಲಾಗಿ ಧರ್ಮರಾಜಕಾರಣವನ್ನು ಕಾರ್ಯಗತಗೊಳಿಸಿ ಪಟ್ಟ ಗಿಟ್ಟಿಸುವ ಪ್ರಯತ್ನವನ್ನು ಕರ್ನಾಟಕ ರಾಜ್ಯದ ಪ್ರಜ್ಞಾವಂತ ಜನರು ಹಿಮ್ಮೆಟ್ಟಿಸಬೇಕಿದೆ. ಮೊದಲು ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮಗ್ರಂಥವಾಗಬೇಕಿದೆ. ಆ ನಂತರ ಅವರವರ ಇಚ್ಛಾನುಸಾರ ಧರ್ಮ ದೇವರ ಆಚರಣೆಗಳು ವ್ಯೆಯಕ್ತಿಕ ನೆಲೆಗಟ್ಟಿನಲ್ಲಿ ನಡೆಸಬಹುದಾಗಿದೆ ಹಾಗೂ ಅದಕ್ಕೆ ಸಂವಿಧಾನದ ಮಾನ್ಯತೆಯೂ ಇದೆ.
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಬಿಜೆಪಿಯವರು ರಾಷ್ಟ್ರಭಕ್ತರಾ ಇಲ್ಲಾ ನಕಲಿ ರಾಷ್ಟ್ರಪ್ರೇಮಿಗಳಾ? ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘಿಸುವ ಈ ಮತಾಂಧರು ದೇಶಭಕ್ತರಾ ಇಲ್ಲಾ ದೇಶದ್ರೋಹಿಗಳಾ? ಎಂಬುದನ್ನು ಈ ಕೆರಗೋಡು ಹೈಡ್ರಾಮಾಗೆ ಸಾಕ್ಷಿಯಾಗಿರುವ ಕರ್ನಾಟಕದ ಜನರು ಆಲೋಚಿಸಬೇಕಿದೆ. ಸತ್ಯವನ್ನು ಮರೆಮಾಚಿ ಬಿಜೆಪಿ ಪಕ್ಷದ ವಕ್ತಾರರಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಸುದ್ದಿ ವಾಹಿನಿಗಳಿಗೆ ಆತ್ಮಸಾಕ್ಷಿ ಇದ್ದಲ್ಲಿ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಿದೆ. ಕಾನೂನು ಭಂಜಕರಿಗೆ, ಸಂವಿಧಾನದ ವಿರೋಧಿಗಳಿಗೆ ಪ್ರಚಾರ ಕೊಡುವುದೂ ಸಹ ದೇಶದ್ರೋಹದ ಕೆಲಸವಾಗಿದೆ ಎಂಬುದನ್ನು ಈ ಮಾರಿಕೊಂಡ ಮಾಧ್ಯಮಗಳು ತಿಳಿದುಕೊಳ್ಳಬೇಕಿದೆ. ಇಲ್ಲದೇ ಹೋದರೆ ಧರ್ಮ ದೇವರ ಹೆಸರಲ್ಲಿ ಸಮಾಜದ ಶಾಂತಿ ನೆಮ್ಮದಿ ಸೌಹಾರ್ದತೆ ಕದಡುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಲೇ ಇರುತ್ತವೆ. ಕರಾವಳಿಯ ಹಾಗೆ ಮಂಡ್ಯ ಜಿಲ್ಲೆ ಸಹ ಸಂಘ ಪರಿವಾರದ ಕೋಮುವಾದಿ ಪ್ರಯೋಗ ಶಾಲೆಯಾಗುತ್ತದೆ. ಸೌಹಾರ್ದತೆಗೆ ಆದ್ಯತೆ ನೀಡುವ ಮಂಡ್ಯದ ಜನತೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಇಡೀ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲೇಬೇಕಿದೆ.
ಶಶಿಕಾಂತ ಯಡಹಳ್ಳಿ, ಪತ್ರಕರ್ತರು
ಇದನ್ನೂ ಓದಿ-ಕೆರೆಗೋಡು ಭಗವಾಧ್ವಜ ವಿವಾದವು ಜೆಡಿಎಸ್ ಸರ್ವನಾಶದ ಮುನ್ನುಡಿಯೇ?