Sunday, July 14, 2024

ಭಾರತ್ ಜೋಡೋ ನ್ಯಾಯ ಯಾತ್ರೆ | 18 ನೆಯ ದಿನ

Most read

ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಬಿಹಾರದಿಂದ ಪಶ್ಚಿಮ ಬಂಗಾಳದ ಉತ್ತರ ಭಾಗದ ಮಾಲ್ಡಾ ದೇಬಿಪುರದ ಮೂಲಕ ಇಂದು (ಜನವರಿ 31, 2024) ಮತ್ತೆ ಪಶ್ಚಿಮ ಬಂಗಾಳ ಪ್ರವೇಶಿಸಿತು.

ಮೊದಲ ಹಂತದ ಪಶ್ಚಿಮ ಬಂಗಾಳ ಯಾತ್ರೆ ಇಸ್ಲಾಮಪುರದಿಂದ ಬಿಹಾರ ಪ್ರವೇಶಿಸುವ ಮೂಲಕ ಕಳೆದ ಸೋಮವಾರ ಮುಕ್ತಾಯವಾಗಿತ್ತು.ಇಂದಿನ ಕಾರ್ಯಕ್ರಮಗಳು ಇಂತಿವೆ.

ಬಿಹಾರ ಕಟಿಹಾರ ಕೊಲಸಿಯಿಂದ ಯಾತ್ರೆ ಆರಂಭ. ಸಾರ್ವಜನಿಕ ಭಾಷಣ. 11.15 ಕ್ಕೆ ಪಶ್ಚಿಮ ಬಂಗಾಳ ಬಿಹಾರದ ಗಡಿ ಲಭಾ ಬ್ರಿಜ್ ನಲ್ಲಿ ಧ‍್ವಜ ಹಸ್ತಾಂತರ. ಮಧ್ಯಾಹ್ನ 2.00 ಪಶ್ಚಿಮ ಬಂಗಾಳದ ಮಾಲ್ಡಾ ರಟುವಾ ಸ್ಟೇಡಿಯಂನಿಂದ ಯಾತ್ರೆ ಪುನರಾರಂಭ. ಸಂಜೆ 5.00 ಕ್ಕೆ ಮಾಲ್ಡಾ, ಪೋಸ್ಟ್ ಆಫಿಸ್ ಮೋರ್ ನಲ್ಲಿ ವಿರಾಮ. ಸಾರ್ವಜನಿಕ ಭಾಷಣದ ಬಳಿಕ ಸುಜಾಪುರ ಹಟಿಮಾರಿ ಸ್ಟೇಡಿಯಂನಲ್ಲಿ ರಾತ್ರಿ ಹಾಲ್ಟ್.


ಬಂಗಾಳ ಪ್ರವೇಶಿಸುತ್ತಿದ್ದಂತೆ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಸುಜಾಪುರದೆಡೆಗೆ ಯಾತ್ರೆ ಸಾಗಿತು. ಅಲ್ಲಿ ರಾತ್ರಿ ತಂಗುವ ಮುನ್ನ ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.


“ಪ್ರೀತಿ ಮತ್ತು ಸಹೋದರ ಭಾವ ಭಾರತದ ಕಣ ಕಣದಲ್ಲಿಯೂ ಇದೆ. ಈ ಮಾತುಗಳನ್ನು ಕೇಳುವಾಗ ಖುಷಿಯಾಗುತ್ತದೆ. ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ ಇವುಗಳಿಂದ ತೊಂದರೆಗೊಳಗಾಗಿರುವ ಬಿಹಾರದ ಜನತೆ ಮುಂದಿನ ತಲೆಮಾರಿನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ, ಭರವಸೆ ಕಳೆದುಕೊಂಡಿರುವ ಜನತೆಯಲ್ಲಿ ಭಾರತ ಜೋಡೋ ನ್ಯಾಯ ಯಾತ್ರೆ ಹೊಸ ಭರವಸೆಯ ಕಿರಣವನ್ನು ಬೆಳಗಿದೆ. ಹೊಸ ಶಾಲೆ ಇಲ್ಲ, ಹೊಸ ಕಾಲೇಜು ಇಲ್ಲ, ದುಬಾರಿಯಾಗುತ್ತಿರುವ ಶಿಕ್ಷಣ, ಸಾಲದೆಂಬಂತೆ ಇಲ್ಲವಾಗುತ್ತಿರುವ ಉದ್ಯೋಗದ ಅವಕಾಶ, ಮುಂದಿನ ಗತಿ ಏನು ಎಂದು ಯೋಚಿಸುತ್ತಾ ಪ್ರತಿಯೋರ್ವ ತಂದೆ ತಾಯಿ ತಲ್ಲಣಿಸಿದ್ದಾರೆ. ಇದರ ವಿರುದ್ಧ ಹೋರಾಟಕ್ಕೆ ನಮ್ಮೊಂದಿಗೆ ಕೈ ಜೋಡಿಸಿ” ಎಂದು ಅವರು ಹೇಳಿದರು.


ಇದೇ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಮತ್ತು ಕನ್ಹಯ್ಯ ಕುಮಾರ್ ಅವರ ಪತ್ರಿಕಾಗೋಷ್ಠಿ ಕೂಡಾ ನಡೆದಿದ್ದು, ಅಗ್ನಿವೀರ ಯೋಜನೆ ಉಂಟು ಮಾಡಿರುವ ಸಮಸ್ಯೆಯನ್ನು ಅಲ್ಲಿ ಉಲ್ಲೇಖಿಸಿದರು. ನಿರುದ್ಯೋಗಿ ಯುವಕರಿಗೆ ನೆರವಾಗಲು ಕಾಂಗ್ರೆಸ್ ಒಂದು ವೆಬ್ ಸೈಟ್ ಆರಂಭಿಸಿದೆ ಅಲ್ಲದೆ ಫೋನ್ ನಂಬರ್ ಕೂಡಾ ನಿಗದಿಗೊಳಿಸಿದೆ, ಅದನ್ನು ಯುವಕರು ಸಂಪರ್ಕಿಸಬಹುದಾಗಿದೆ. ಎಂದೂ ಅವರು ಹೇಳಿದರು.


ಇದುವರೆಗೆ ಪಶ್ಚಿಮ ಬಂಗಾಳದಲ್ಲಿ 523 ಕಿಲೋಮೀಟರ್ ಸಾಗಿದ್ದು ಯಾತ್ರೆಯು ಡಾರ್ಜಿಲಿಂಗ್, ಆಲಿಪುರದ್ವಾರ್, ಉತ್ತರ ದಿನಾಪುರ ಮುಗಿಸಿ ಈಗ ಮಾಲ್ಡಾ ಮತ್ತು ಮುರ್ಶಿದಾಬಾದ್ ಮೂಲಕ ಸಾಗುತ್ತಿದೆ. ಉತ್ತರ ಬಂಗಾಳ ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಯಾತ್ರೆಯನ್ನು ಸ್ವಾಗತಿಸಿದರು.


ಇದುವರೆಗೆ ಯಾತ್ರೆ ಸಂಚರಿಸಿದ ಎಲ್ಲ ರಾಜ್ಯಗಳೂ ಕಾಂಗ್ರೆಸೇತರ ಸರಕಾರಗಳು ಇರುವ ರಾಜ್ಯಗಳು. ಹಾಗಾಗಿ ಮಣಿಪುರ, ಅಸ್ಸಾಂ ಗಳಲ್ಲಿ ಯಾತ್ರೆಗೆ ಅನುಮತಿ ಕುರಿತಂತೆ ಅನೇಕ ಸಮಸ್ಯೆಗಳು ಉಂಟಾಗಿವೆ. ಹಾಗೆಯೇ ಬಂಗಾಳದ ಜಲಪಾಯಿಗುರಿ, ಮಾಲ್ಡಾ ಮತ್ತು ಮುರ್ಶಿದಾಬಾದ್ ಗಳಲ್ಲಿ ಕೂಡಾ ಅನುಮತಿಯ ಸಮಸ್ಯೆ ಉಂಟಾಗಿತ್ತು. ಮಾಲ್ಡಾದಲ್ಲಿ ಇಂದು ರಾಹುಲ್ ಗಾಂಧಿಯ ಕಾರಿಗೆ ಕಲ್ಲು ಹೊಡೆದ ಪ್ರಕರಣವೂ ಸಂಭವಿಸಿದೆ. ಟಿಎಂಸಿ ಯು ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿದ್ದೂ ಇಂತಹ ಘಟನೆಗಳು ನಡೆಯುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

ಶ್ರೀನಿವಾಸ ಕಾರ್ಕಳ, ಮಂಗಳೂರು

More articles

Latest article