ಶಿಕ್ಷಣ, ಉದ್ಯೋಗ, ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ನಡುವಿನ ಸಂಘರ್ಷ
ಮೀಸಲಾತಿಯ ಪ್ರಯೋಜನ ಪಡೆದ ಪ್ರತಿಯೊಬ್ಬರೂ ತಮ್ಮ ಜಾತಿಯ ಗುರುತಿನಲ್ಲೇ ಬದುಕಬೇಕು ಎಂಬ ನಿಯಮವಿಲ್ಲ. ಆದರೆ ತಮ್ಮ ಪ್ರಗತಿಯ ಹಿಂದೆ ನಡೆದ ಹೋರಾಟಗಳನ್ನು ಅರಿಯುವುದು, ಮುಂದಿನ ತಲೆಮಾರಿಗೆ ಸಮಾನ ಅವಕಾಶ ಕಲ್ಪಿಸುವುದು ಮತ್ತು ಸಾಮಾಜಿಕ ಅನ್ಯಾಯವನ್ನು ಪ್ರಶ್ನಿಸುವುದು ಪ್ರಜ್ಞಾವಂತ ಸಮಾಜದ ಕರ್ತವ್ಯ – ಭಅಗ್ಯ ಮರವಾಸಿ, ಉಪನ್ಯಾಸಕರು.
ನಗರದ ಪ್ರತಿಷ್ಠಿತ ಬಡಾವಣೆಯಲ್ಲೊಂದು ಸುಂದರವಾದ ಮನೆ. ಆಧುನಿಕ ಸೌಲಭ್ಯಗಳು, ಐಷಾರಾಮಿ ಜೀವನಶೈಲಿ, ಮನೆಯ ಮುಂದೆ ಕಾರು. ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ನಿವೃತ್ತರಾದ ಮನೆಯ ಯಜಮಾನರು. ಮೀಸಲಾತಿಯ ಅವಕಾಶಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆದವರು. ಅವರ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬಳು ವೈದ್ಯೆ, ಮತ್ತೊಬ್ಬಳು ಇಂಜಿನಿಯರ್, ಇನ್ನೊಬ್ಬಳು ಎಂ.ಎಸ್ಸಿ ಪದವೀಧರೆಯಾಗಿ ಕೇಂದ್ರ ಸರ್ಕಾರಿ ಕಂಪನಿಯಲ್ಲಿ ಉದ್ಯೋಗಿ. ಒಂದು ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಸುಂದರ ಚಿತ್ರಣವಿದು.
ಆದರೆ ಆ ಮನೆಯ ಗೋಡೆಗಳಲ್ಲಿ ಅಂಬೇಡ್ಕರ್ ಅವರ ಚಿತ್ರವಿರಲಿಲ್ಲ. ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹನೀಯರ ನೆನಪಿನ ಗುರುತುಗಳೂ ಕಾಣಲಿಲ್ಲ. ಬದಲಾಗಿ, ಆರ್ಎಸ್ಎಸ್ಗೆ ಸಂಬಂಧಿಸಿದ ಪತ್ರಿಕೆಯೊಂದು ಮನೆಯಲ್ಲಿತ್ತು. ಇತ್ತೀಚೆಗೆ ಮನೆಯ ಯಜಮಾನರು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಚಿತ್ರಗಳನ್ನು ‘ನಮ್ಮ ದೇಶ, ನಮ್ಮ ಸನಾತನ ಸಂಸ್ಕೃತಿ, ನಮ್ಮ ಹೆಮ್ಮೆ’ ಎಂಬ ಅಭಿಮಾನದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅದನ್ನು ಕಂಡಾಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯೊಂದಕ್ಕೆ ಅವರು ನೀಡಿದ ಉತ್ತರ ಇನ್ನಷ್ಟು ಚಿಂತನೆಗೆ ದೂಡಿತು.
“ಮತ್ತೆ ಮತ್ತೆ ನಾವು ಎಸ್.ಸಿ ಎಂದು ಗುರುತಿಸಿಕೊಳ್ಳುವ ಅಗತ್ಯವಿಲ್ಲ. ಅಂಬೇಡ್ಕರ್ ಅವರ ಚಿತ್ರ ಇಟ್ಟುಕೊಂಡು, ದಲಿತ ಚಳವಳಿಗಳಲ್ಲಿ ಭಾಗವಹಿಸಿದರೆ ಸಮಾಜ ನಮ್ಮನ್ನು ಕೀಳಾಗಿ ನೋಡುತ್ತದೆ. ಮೇಲ್ವರ್ಗದವರೊಂದಿಗೆ ಬೆರೆತಾಗ ಮಾತ್ರ ಗೌರವ ಸಿಗುತ್ತದೆ” ಎಂಬುದು ಅವರ ನಿಲುವು.
ಇಲ್ಲಿ ಪ್ರಶ್ನೆ ಅವರು ಯಾವ ಸಂಘಟನೆಯಲ್ಲಿ ಭಾಗವಹಿಸುತ್ತಾರೆ ಎಂಬುದಲ್ಲ. ಪ್ರತಿಯೊಬ್ಬರಿಗೂ ತಮ್ಮ ಇಷ್ಟದ ಸಂಘಟನೆಯಲ್ಲಿ ಭಾಗವಹಿಸುವ, ತಮ್ಮದೇ ಆದ ಸಾಂಸ್ಕೃತಿಕ ನಿಲುವು ಹೊಂದುವ ಸ್ವಾತಂತ್ರ್ಯವಿದೆ. ಆದರೆ ಸಮಾಜದ ಗೌರವಕ್ಕಾಗಿ ನಮ್ಮನ್ನು ಈ ಹಂತಕ್ಕೆ ತಲುಪಿಸಿದ ಇತಿಹಾಸವನ್ನೇ ಮರೆತುಬಿಡಬೇಕೇ ಎಂಬುದೇ ಮೂಲ ಪ್ರಶ್ನೆ.
ಮೀಸಲಾತಿ: ದಾನವಲ್ಲ, ಸಾಮಾಜಿಕ ನ್ಯಾಯದ ಹಕ್ಕು
ಭಾರತೀಯ ಸಮಾಜದಲ್ಲಿ ಶತಮಾನಗಳ ಕಾಲ ಜಾತಿ ಮತ್ತು ವರ್ಣ ವ್ಯವಸ್ಥೆಗಳು ಶಿಕ್ಷಣ, ಉದ್ಯೋಗ, ಆಸ್ತಿ ಹಾಗೂ ಅಧಿಕಾರದ ಅವಕಾಶಗಳನ್ನು ಅಸಮಾನವಾಗಿ ಹಂಚಿದ್ದವು. ಇಂತಹ ಅನ್ಯಾಯದ ವಿರುದ್ಧ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜರು, ಪೆರಿಯಾರ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟಗಳು ಸಾಮಾಜಿಕ ಪರಿವರ್ತನೆಗೆ ದಾರಿ ಮಾಡಿಕೊಟ್ಟವು.

ವಿಶೇಷವಾಗಿ ಅಂಬೇಡ್ಕರ್ ಅವರು ಶಿಕ್ಷಣವನ್ನು ಕೇವಲ ಉದ್ಯೋಗದ ಸಾಧನವಾಗಿ ನೋಡದೆ, ಸ್ವಾಭಿಮಾನ ಮತ್ತು ವೈಚಾರಿಕ ವಿಮೋಚನೆಯ ಅಸ್ತ್ರವೆಂದು ಪ್ರತಿಪಾದಿಸಿದರು. ಸಂವಿಧಾನದ ವಿಧಿ 14, 15, 16 ಮತ್ತು 17 ಸಮಾನತೆ, ಅವಕಾಶ ಹಾಗೂ ಅಸ್ಪೃಶ್ಯತೆಯ ನಿರ್ಮೂಲನೆಗೆ ಬುನಾದಿಯಾದರೆ, ವಿಧಿ 46 ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತದೆ.
ಹೀಗಾಗಿ ಮೀಸಲಾತಿ ಯಾರಿಗೋ ನೀಡಿದ ದಾನವಲ್ಲ; ಐತಿಹಾಸಿಕ ಅನ್ಯಾಯ ಮತ್ತು ಸಾಮಾಜಿಕ ಅಸಮಾನತೆಯನ್ನು ಸರಿಪಡಿಸುವ ಸಾಂವಿಧಾನಿಕ ಕ್ರಮ. ಇಂದು ಉನ್ನತ ಹುದ್ದೆ, ವೃತ್ತಿಪರ ಶಿಕ್ಷಣ ಮತ್ತು ಆರ್ಥಿಕ ಭದ್ರತೆ ಸಾಧಿಸಿರುವ ಕುಟುಂಬಗಳ ಯಶಸ್ಸಿನಲ್ಲಿ ವೈಯಕ್ತಿಕ ಪರಿಶ್ರಮದ ಜೊತೆಗೆ ಸಾಮಾಜಿಕ ನ್ಯಾಯದ ವ್ಯವಸ್ಥೆಯ ಕೊಡುಗೆಯನ್ನೂ ಗುರುತಿಸಬೇಕು.
ಶಿಕ್ಷಣ ಮತ್ತು ವೈಚಾರಿಕತೆ
ಮೀಸಲಾತಿಯ ಮೂಲಕ ಶಿಕ್ಷಣ ಪಡೆದು, ಸರ್ಕಾರಿ ಉದ್ಯೋಗ ಗಳಿಸಿ, ನಗರಗಳಲ್ಲಿ ಮನೆ ನಿರ್ಮಿಸಿಕೊಂಡು, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ಸಂತೋಷದ ಸಂಗತಿ. ಆದರೆ ಈ ಪ್ರಗತಿಯೊಂದಿಗೆ ಸಾಮಾಜಿಕ ಜವಾಬ್ದಾರಿಯೂ ಹೆಚ್ಚಿದೆ.
ನಮ್ಮ ಮನೆಯಲ್ಲಿ ಆಧುನಿಕ ಸೌಲಭ್ಯಗಳಿವೆ; ಆದರೆ ಸಮಾನತೆಯ ಚಿಂತನೆಗೆ ಎಷ್ಟು ಜಾಗವಿದೆ? ನಮ್ಮ ಮಕ್ಕಳು ಉನ್ನತ ಹುದ್ದೆಯಲ್ಲಿದ್ದಾರೆ; ಆದರೆ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ನೆರವಾಗುವ ಮನೋಭಾವ ನಮ್ಮಲ್ಲಿದೆಯೇ? ನಮ್ಮ ಬದುಕು ಬದಲಾಗಿದೆ; ಆದರೆ ಸಮಾಜದ ಅಸಮಾನತೆಯನ್ನು ಪ್ರಶ್ನಿಸುವ ವೈಚಾರಿಕತೆ ನಮ್ಮಲ್ಲಿ ಬೆಳೆದಿದೆಯೇ?
ಮೇಲ್ವರ್ಗದವರ ಒಪ್ಪಿಗೆಯೇ ಗೌರವ ಎಂಬ ಭಾವನೆ ನಮ್ಮಲ್ಲಿ ಬೇರೂರಿದರೆ, ಅದು ಸ್ವಾಭಿಮಾನದ ಬದುಕಲ್ಲ. ಜಾತಿಯ ಕಾರಣಕ್ಕೆ ಯಾರನ್ನೂ ಕೀಳಾಗಿ ಕಾಣದ ಸಮಾಜ ನಿರ್ಮಾಣವಾಗಬೇಕು; ಅದಕ್ಕಾಗಿ ಅನ್ಯಾಯವನ್ನು ಅನುಭವಿಸಿದವರು ತಮ್ಮ ಇತಿಹಾಸವನ್ನು ಮರೆಮಾಚಬೇಕಾದ ಅಗತ್ಯವಿಲ್ಲ.
ಅಸ್ಮಿತೆ, ಸ್ವಾಭಿಮಾನ ಮತ್ತು ಸಾಮಾಜಿಕ ಹೊಣೆಗಾರಿಕೆ
ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದುವುದರಲ್ಲಿ ತಪ್ಪಿಲ್ಲ. ಆದರೆ ಸಂಸ್ಕೃತಿಯ ಹೆಸರಿನಲ್ಲಿ ಇತಿಹಾಸದ ಅಸಮಾನತೆಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ಯಾವುದೇ ಸಂಘಟನೆಯ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವಾಗ ಅದರ ಚಿಂತನೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ವೈಚಾರಿಕ ಸ್ವಾತಂತ್ರ್ಯ ಇರಬೇಕು.
ಮೀಸಲಾತಿಯ ಪ್ರಯೋಜನ ಪಡೆದ ಪ್ರತಿಯೊಬ್ಬರೂ ತಮ್ಮ ಜಾತಿಯ ಗುರುತಿನಲ್ಲೇ ಬದುಕಬೇಕು ಎಂಬ ನಿಯಮವಿಲ್ಲ. ಆದರೆ ತಮ್ಮ ಪ್ರಗತಿಯ ಹಿಂದೆ ನಡೆದ ಹೋರಾಟಗಳನ್ನು ಅರಿಯುವುದು, ಮುಂದಿನ ತಲೆಮಾರಿಗೆ ಸಮಾನ ಅವಕಾಶ ಕಲ್ಪಿಸುವುದು ಮತ್ತು ಸಾಮಾಜಿಕ ಅನ್ಯಾಯವನ್ನು ಪ್ರಶ್ನಿಸುವುದು ಪ್ರಜ್ಞಾವಂತ ಸಮಾಜದ ಕರ್ತವ್ಯ.
ಮೀಸಲಾತಿ ಉದ್ಯೋಗದ ಬಾಗಿಲು ತೆರೆಯಬಹುದು. ಶಿಕ್ಷಣ ಅಧಿಕಾರದ ಸ್ಥಾನಕ್ಕೆ ಕರೆದೊಯ್ಯಬಹುದು. ಆರ್ಥಿಕ ಪ್ರಗತಿ ಸುಂದರವಾದ ಮನೆಯನ್ನು ಕಟ್ಟಿಕೊಡಬಹುದು. ಆದರೆ ಮನುಷ್ಯನನ್ನು ನಿಜವಾದ ಅರ್ಥದಲ್ಲಿ ಗೌರವಯುತ ವ್ಯಕ್ತಿಯನ್ನಾಗಿ ರೂಪಿಸುವುದು ವೈಚಾರಿಕತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಪ್ರಜ್ಞೆ.
ನಮ್ಮನ್ನು ಮೇಲಕ್ಕೆತ್ತಿದ ಸಂವಿಧಾನದ ಆಶಯಗಳನ್ನೇ ಮರೆತು, ನಮ್ಮ ಹಕ್ಕುಗಳ ಇತಿಹಾಸವನ್ನೇ ನಿರಾಕರಿಸುವಷ್ಟು ನಾವು ದೂರ ಸಾಗಬಾರದು. ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವುದು ಎಂದರೆ ಕೇವಲ ಅವರ ಭಾವಚಿತ್ರಕ್ಕೆ ಹಾರ ಹಾಕುವುದಲ್ಲ; ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ವೈಚಾರಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು.
ಅಂತಿಮವಾಗಿ ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಒಂದೇ: ಮೀಸಲಾತಿಯ ಮೆಟ್ಟಿಲೇರಿ ಉನ್ನತ ಸ್ಥಾನ ತಲುಪಿದ್ದೇವೆ; ಆದರೆ ನಮ್ಮ ವೈಚಾರಿಕತೆಯ ಬೇರುಗಳು ಇನ್ನೂ ಸಾಮಾಜಿಕ ನ್ಯಾಯದ ನೆಲದಲ್ಲಿವೆಯೇ?
ಭಾಗ್ಯ ಮರವಾಸಿ
ಉಪನ್ಯಾಸಕರು
ಇದನ್ನೂ ಓದಿ- ಶಾಸ್ತ್ರೀಯ ಸ್ಥಾನಮಾನ: ಬದುಕಿನ ಭಾಷೆ-ಭವಿಷ್ಯದ ದಾರಿ


