ಗುವಾಹಟಿ: ಅಸ್ಸಾಂನ ಗುವಾಹಟಿ ನಗರದ ಪ್ರತಿಷ್ಠಿತ ಪ್ರದೇಶವೊಂದರಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಘನಕಾಂತ ಗೊಗೊಯ್ನನ್ನು ಗುವಾಹಟಿ ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಬೋರಾ ಸರ್ವೀಸ್ ಪ್ರದೇಶದ ಬಿಲಾಸ್ ಇನ್ ಹೋಟೆಲ್ ಸಮೀಪದ ರಸ್ತೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರಲ್ಲಿ ಒಬ್ಬರನ್ನು ನಾರಾಯಣ ದಾಸ್ (48) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ನಡೆಸಿದವರು ಯಾರು ಮತ್ತು ದಾಳಿಯ ಹಿಂದಿನ ಉದ್ದೇಶವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗುವಾಹಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಂತ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ದಾಳಿಗೆ ಬಳಸಲಾದ ಪರವಾನಗಿ ಹೊಂದಿರುವ ಪಿಸ್ತೂಲ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆಯು ವ್ಯವಹಾರಕ್ಕೆ ಸಂಬಂಧಿಸಿದ ವಿವಾದದಿಂದ ನಡೆದಿದೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಂತ ಖಚಿತಪಡಿಸಿದ್ದಾರೆ.

