Tuesday, December 10, 2024

ʼಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆʼ ಎಂಬ ಒಂದು ಬಹು ದೊಡ್ಡ ಜೋಕ್

Most read

ಬಿಜೆಪಿ ಬಳಿ ಸರಕಾರೀ ಯಂತ್ರ ಇದೆ, ಚುನಾವಣಾ ಬಾಂಡ್‌ ನ ಕೋಟಿಗಟ್ಟಲೆ ಹಣ ಇದೆ, ನಡುಬಗ್ಗಿಸಿ ನಿಂತ ಚುನಾವಣಾ ಆಯೋಗ ಇದೆ, ತನಗೆ ಅನುಕೂಲಕರವಾಗಿ ನಡೆದುಕೊಳ್ಳುವ ನ್ಯಾಯಾಂಗ ಇದೆ, ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಯೆಂದೇ ಹೆಸರಾದ ಐಟಿ ಸೆಲ್‌ ಇದೆ, ಎಲ್ಲಕ್ಕಿಂತ ಮುಖ್ಯವಾಗಿ ನಾಚಿಕೆಯಿಲ್ಲದ ಗೋದಿ ಮೀಡಿಯಾ ಇದೆ. ಎದುರಾಳಿ ಪಕ್ಷಗಳ ಬಳಿ ಈ ಯಾವುವೂ ಇಲ್ಲ. ಇದನ್ನು ನೋಡಿದಾಗ ಮಹಾರಾಷ್ಟ್ರದಲ್ಲಿ ನಡೆದುದು ನ್ಯಾಯ ಸಮ್ಮತ ಚುನಾವಣೆ ಎಂದು ನಿಮಗೆ ಅನಿಸುತ್ತದೆಯೇ?- ಶ್ರೀನಿವಾಸ ಕಾರ್ಕಳ.

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ʼಮಹಾ ವಿಕಾಸ ಅಘಾಡಿʼಗೆ ತಾನೇಕೆ ಸೋತೆ ಎಂದು ಅಚ್ಚರಿಯಾದರೆ, ನಂಬಲೇ ಆಗದ ರೀತಿಯಲ್ಲಿ ಅದಕ್ಕೂ ಹೆಚ್ಚು ಅಚ್ಚರಿಯಾದುದು ಬಿಜೆಪಿಯ ಮಹಾಯುತಿ ಮೈತ್ರಿಕೂಟಕ್ಕೆ-  ʼತಾವು ಇಷ್ಟೊಂದು ಸೀಟುಗಳನ್ನು ಹೇಗೆ ಗೆದ್ದೆವು?ʼ ಎಂದು. ಈ ಹಿನ್ನೆಲೆಯಲ್ಲಿ, ಅಮೃತ ಕಾಲದ ಭಾರತದಲ್ಲಿ ʼಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆʼ ಮತ್ತು ʼಚುನಾವಣೆ ಎಂಬ ಪ್ರಜಾತಂತ್ರದ ಉತ್ಸವʼದ ವಾಸ್ತವ ಸ್ಥಿತಿ ಹೇಗಿದೆ ಎಂದು ಒಮ್ಮೆ ತಿರುಗಿ ನೋಡೋಣವೇ?

ಸರಕಾರವನ್ನು ಉರುಳಿಸಿದ ಬಿಜೆಪಿ, ಕಣ್ಣು ಮುಚ್ಚಿ ಕುಳಿತ ಸುಪ್ರೀಂ ಕೋರ್ಟ್

2022 ರ ಜೂನ್‌ ನಲ್ಲಿ ಬಿಜೆಪಿಯು ಅನೈತಿಕ ಮಾರ್ಗದಿಂದ, ಉದ್ಧವ್‌ ಠಾಕ್ರೆ ನೇತೃತ್ವದ ಎಂವಿಎ ಮೈತ್ರಿಕೂಟದ (ಶಿವಸೇನೆ, ಎನ್‌ ಸಿ ಪಿ, ಕಾಂಗ್ರೆಸ್‌) ಮಹಾರಾಷ್ಟ್ರ ಸರಕಾರವನ್ನು ಉರುಳಿಸಿ, ಏಕನಾಥ ಶಿಂಧೆ ನೇತೃತ್ವದ ʼಮಹಾಯುತಿʼ ಸರಕಾರವನ್ನು ಸ್ಥಾಪಿಸುತ್ತದೆ. ಇದಕ್ಕಾಗಿ ಶಿವಸೇನೆಯನ್ನು ಮತ್ತು ಮುಂದೆ ಎನ್‌ ಸಿ ಪಿ ಯನ್ನು (ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ) ಒಡೆಯಲಾಗುತ್ತದೆ.

ಇದು ಸಂವಿಧಾನದ 10 ನೇ ಶೆಡ್ಯೂಲ್‌ ಪ್ರಕಾರ ಸಂವಿಧಾನ ಬಾಹಿರ ಕ್ರಮವಾದುದರಿಂದ ಶಿವಸೇನೆ ಮತ್ತು ಎನ್‌ ಸಿ ಪಿ ನ್ಯಾಯಾಲಯದ  ಬಾಗಿಲು ಬಡಿಯುತ್ತವೆ. ಪಕ್ಷಾಂತರ ಮಾಡಿದ ಶಾಸಕರ ಸದಸ್ಯತ್ವ ರದ್ಧತಿಗೆ ಆಗ್ರಹಿಸುತ್ತವೆ.  ಕಾನೂನು ಬಾಹಿರ ಸರಕಾರವೊಂದು ಆಳ್ವಿಕೆ ನಡೆಸುತ್ತಿದ್ದರೂ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಕ್ಷಿಪ್ರ ತೀರ್ಪು ನೀಡುವುದೇ ಇಲ್ಲ. ತೀರ್ಪು ನೀಡಬೇಕಾದ ಸಿಜೆಐ ಚಂದ್ರಚೂಡ್‌ ಅಂತಿಮವಾಗಿ ನಿವೃತ್ತರಾಗುತ್ತಾರೆ, ಮಹಾರಾಷ್ಟ್ರ ಅಸೆಂಬ್ಲಿಗೆ  ಹೊಸ ಚುನಾವಣೆ ಘೋಷಣೆಯೂ ಆಗುತ್ತದೆ. ಉದ್ಧವ್‌ ನೇತೃತ್ವದ ಶಿವಸೇನೆ ಮತ್ತು ಶರದ್‌ ಪವಾರ್‌ ನೇತೃತ್ವದ ಎನ್‌ ಸಿ ಪಿ ಗೆ ನ್ಯಾಯ ಸಿಗುವುದೇ ಇಲ್ಲ.

ಉದ್ಧವ್‌ ಅವರದ್ದು ಮೂಲ ಶಿವಸೇನೆ ಮತ್ತು ಶರದ್‌ ಪವಾರ್‌ ಅವರದ್ದು ಮೂಲ ಎನ್‌ ಸಿ ಪಿ ಯಾದರೂ, ಬಿಜೆಪಿಯ ಅಂಗಪಕ್ಷದಂತೆ ವರ್ತಿಸುವ ಚುನಾವಣಾ ಆಯೋಗ ಆ ಎರಡು ಪಕ್ಷಗಳ ಚುನಾವಣಾ ಚಿಹ್ನೆಯನ್ನು ಕಿತ್ತು ಕ್ರಮವಾಗಿ ಏಕನಾಥ ಶಿಂಧೆಯ ಶಿವಸೇನೆ, ಅಜಿತ್‌ ಪವಾರ್‌ ಅವರ ಎನ್‌ ಸಿ ಪಿ ಗೆ ಕೊಡುತ್ತದೆ. ಕ್ಷಿಪ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದರೂ  ಈ ಬಗ್ಗೆ ಸುಪ್ರೀಂ ಕೋರ್ಟ್‌ ಒಂದು ನಿರ್ಧಾರಕ್ಕೆ ಬರುವುದೇ ಇಲ್ಲ. ಉದ್ಧವ್‌ ಮತ್ತು ಶರದ್‌ ಪವಾರ್‌ ಅವರು, ಜನರಿಗೆ ಹೆಚ್ಚು ಪರಿಚಿತವಲ್ಲದ ಹೊಸ ಚಿಹ್ನೆಯೊಂದಿಗೆ ಚುನಾವಣೆ ಸ್ಪರ್ಧಿಸಬೇಕಾಗುತ್ತದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌

ಚುನಾವಣೆಗೆ ಒಂದೋ ಎರಡೋ ತಿಂಗಳು ಇರುವಾಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಯವರನ್ನು ತನ್ನ ಮನೆಗೆ ಕರೆಸಿ ಗಣೇಶ ಪೂಜೆ ನಡೆಸುತ್ತಾರೆ.

ಸುಪ್ರೀಂ ಕೋರ್ಟ್‌ ನ ಕಣ್ಗಾವಲಿನ ನಡುವೆಯೇ ಆರ್‌ ಎಸ್‌ ಎಸ್‌ + ಬಿಜೆಪಿ ರಚಿತ ಒಂದು ಕಾನೂನು ಬಾಹಿರ ಸರಕಾರ ತನ್ನ ಉಳಿದ ಅವಧಿಯನ್ನು ಯಶಸ್ವಿಯಾಗಿ ಪೂರೈಸುತ್ತದೆ.

ಚುನಾವಣಾ ಆಯೋಗದ ಆಟ ಶುರು

2024 ಬಂತು. ಜಮ್ಮು ಕಾಶ್ಮೀರ ಮತ್ತು ಹರ್ಯಾಣ ಚುನಾವಣೆಯೊಂದಿಗೆ ಮಹಾರಾಷ್ಟ್ರಕ್ಕೂ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗ ಉದ್ದೇಶ ಪೂರ್ವಕವಾಗಿಯೇ ಮಹಾರಾಷ್ಟ್ರದ ಚುನಾವಣೆಯನ್ನು ಒಂದು ತಿಂಗಳು ತಡಮಾಡುತ್ತದೆ.

ಈ ಅವಧಿಯಲ್ಲಿ ಏಕನಾಥ ಶಿಂಧೆ 2000 ಕ್ಕೂ ಅಧಿಕ GR (Government Resolutions) ಗಳನ್ನು ಹೊರಡಿಸುತ್ತಾರೆ. ಸರಕಾರಿ ಹಣದಲ್ಲಿ ʼಲಡ್ಕಿ ಬಹಿನ್‌ʼ ಯೋಜನೆಗೆ ವ್ಯಾಪಕ ಪ್ರಚಾರ ನೀಡುತ್ತಾರೆ, ಕೋಟ್ಯಂತರ ಹಣವನ್ನು ಜನಪ್ರಿಯ ಕಾರ್ಯಕ್ರಮಗಳಿಗೆ ಸುರಿಯುತ್ತಾರೆ. ಚುನಾವಣಾ ಆಯೋಗ ಈ ಬಗ್ಗೆ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತದೆ.

ಧಾರಾವಿ ಪುನರ್‌ ಅಭಿವೃದ್ಧಿ ಹೆಸರಿನಲ್ಲಿ ಮುಂಬಯಿಯ ಮಹತ್ವದ ರಿಯಲ್‌ ಎಸ್ಟೇಟ್‌ ಅನ್ನು ಅದಾನಿಗೆ ಧಾರೆ ಎರೆದು ಕೊಡಲಾಗುತ್ತದೆ.

ʼಲಡ್ಕಿ ಬಹಿನ್‌ʼ ಯೋಜನೆ

ಮತದಾನದ ದಿನ ಪ್ರಚಾರ ಮಾಡುವಂತಿಲ್ಲ. ಆದರೆ ಬಿಜೆಪಿಯು ಮಹಾರಾಷ್ಟ್ರದ ಪ್ರತಿಯೊಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿ ಮತ ಯಾಚಿಸುತ್ತದೆ.

ಮತದಾನ ಮುಗಿದ ಬಳಿಕ VTR (voters turn out raţe ಮತದಾನ ಮಾಡಿದವರ ವಿವರ) ಇದ್ದಕ್ಕಿದ್ದಂತೆ ೨% ಹೆಚ್ಚಳವಾಗುತ್ತದೆ, ಅಂದರೆ ೨೦ ಲಕ್ಷಕ್ಕೂ ಅಧಿಕ ಮತಗಳನ್ನು ಸೇರಿಸಲಾಗುತ್ತದೆ.

ಫಲಿತಾಂಶದ ಮುನ್ನಾ ದಿನ ಮಹಾರಾಷ್ಟ್ರ ಸಿಇಒ ಅವರ ವೆಬ್‌ ಸೈಟಿನಲ್ಲಿ ́ಸಹಿ ರಹಿತ  ́ VTR data ಪ್ರಕಟಗೊಳ್ಳುತ್ತದೆ.  ಮಹಾರಾಷ್ಟ್ರ ಡಿಜಿಐಪಿಆರ್‌ ಈ ಸಹಿ ರಹಿತ ಡಾಟಾ ವನ್ನು ವ್ಯಾಪಕವಾಗಿ ಹಂಚುತ್ತಾರೆ. ಮಹಾರಾಷ್ಟ್ರ ಸಿಇಒ ಅವರು ́ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ, ಇದು ಮಹಾರಾಷ್ಟ್ರದಲ್ಲಿ ಇದುವರೆಗಿನ ಗರಿಷ್ಠ VTR  ́ ಎಂದು ಒತ್ತಿ ಒತ್ತಿ ಹೇಳುತ್ತಾರೆ. ʼಲಡ್ಕಿ ಬಹಿನ್ ಯೋಜನೆ‌ʼ ಕ್ಲಿಕ್‌ ಆಗಿದೆ, ಇದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಸುಳಿವು ನೀಡುವುದು ಇದರ ಉದ್ದೇಶ?

ಪ್ರಶ್ನಿಸದೆಯೇ ಮುಖ್ಯವಾಹಿನಿ ಮತ್ತು ಸೋಶಿಯಲ್‌ ಮೀಡಿಯಾ ಸಹಿ ರಹಿತ ಈ ಮತದಾರ ಡಾಟಾವನ್ನು ಎತ್ತಿಕೊಳ್ಳುತ್ತವೆ.

ಅದೇ ಹೊತ್ತಿನಲ್ಲಿ ʼಪಕ್ಷಾಂತರ ಮಾಡಿದ ತಮ್ಮ ಯಾರೇ ಶಿವಸೇನಾ ಶಾಸಕ ಸೋತರೂ ತಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆʼ ಎಂದು ಏಕನಾಥ ಶಿಂಧೆ ಘೋಷಿಸುತ್ತಾರೆ. ಈ ಆತ್ಮವಿಶ್ವಾಸ ಅವರಿಗೆ ಬಂದುದು ಹೇಗೆ?

ಮತದಾನ ಮುನ್ನಾ ದಿನ ಬಿಜೆಪಿ ನಾಯಕ ಮತ್ತು ಶಿಂಧೆ ಶಿವಸೇನಾ ನಾಯಕರ ಬಳಿ ಕೋಟ್ಯಂತರ ನಗದು ಪತ್ತೆಯಾಗುತ್ತದೆ.

ಐಎಎಸ್‌, ಐಪಿಎಸ್‌, ಐ ಎಫ್‌ ಎಸ್‌, ಐ ಆರ್‌ ಎಸ್‌ ಮತ್ತಿತರ ಎಲೈಟ್‌ ಸೇವೆಗಳ ಗುಲಾಮ ಬಾಬುಗಳ ಕೃಪೆಯಿಂದ ಆರ್‌ ಎಸ್‌ ಎಸ್‌, ಮೊದಾನಿ ಭಾರತದ ಪ್ರಜಾತಂತ್ರವನ್ನು ಸಂಪೂರ್ಣ ಹೈಜಾಕ್‌ ಮಾಡಿದ್ದಾರೆ.

ಪ್ರಚೋದನಕಾರಿ ಭಾಷಣ ಮತ್ತು ಚುನಾವಣಾ ಆಯೋಗದ ಮೌನ ಸಮ್ಮತಿ

ಆದಿತ್ಯನಾಥ ʼಬಾಟೇಗೆ ಕಾಟೇಂಗೆ…..

ಚುನಾವಣಾ ಪೂರ್ವದಲ್ಲಿ ನಿತೇಶ್‌ ರಾಣೆ  ಮುಸ್ಲಿಮರ ವಿರುದ್ಧ ಅತ್ಯಂತ ಪ್ರಚೋದಕ ಭಾಷಣ ಮಾಡಿ ಬಿಜೆಪಿ ಗೆಲುವಿಗೆ ವೇದಿಕೆ ಸಿದ್ಧ ಮಾಡಿದರೆ, ಚುನಾವಣಾ ಸಮಯದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ʼಬಾಟೇಗೆ ಕಾಟೇಂಗೆʼ ಮಾತುಗಳನ್ನು ಆಡುತ್ತಾರೆ. ಮೋದಿಯವರು ಎಂದಿನಂತೆ ಸುಳ್ಳುಗಳನ್ನು ಹರಡುವ ಕೆಲಸ ಮಾಡುತ್ತಾರೆ. ದೂರು ನೀಡಿದರೂ ಚುನಾವಣಾ ಆಯೋಗ ಬೇರೆಡೆಗೆ ನೋಡುತ್ತಾ ಕೂರುತ್ತದೆ.

ಬಿಜೆಪಿ ಬಳಿ ಸರಕಾರೀ ಯಂತ್ರ ಇದೆ, ಚುನಾವಣಾ ಬಾಂಡ್‌ ನ ಕೋಟಿಗಟ್ಟಲೆ ಹಣ ಇದೆ, ನಡುಬಗ್ಗಿಸಿ ನಿಂತ ಚುನಾವಣಾ ಆಯೋಗ ಇದೆ, ತನಗೆ ಅನುಕೂಲಕರವಾಗಿ ನಡೆದುಕೊಳ್ಳುವ ನ್ಯಾಯಾಂಗ ಇದೆ, ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಯೆಂದೇ ಹೆಸರಾದ ಐಟಿ ಸೆಲ್‌ ಇದೆ, ಎಲ್ಲಕ್ಕಿಂತ ಮುಖ್ಯವಾಗಿ ನಾಚಿಕೆಯಿಲ್ಲದ ಗೋದಿ ಮೀಡಿಯಾ ಇದೆ. ಎದುರಾಳಿ ಪಕ್ಷಗಳ ಬಳಿ ಈ ಯಾವುವೂ ಇಲ್ಲ. ಕೆಲವೊಮ್ಮೆ ಉಮೇದುವಾರರ ಠೇವಣಿಗೂ ಹಣವಿಲ್ಲ!

ಇದು ನಮ್ಮ ʼಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆʼಯ ಕತೆ. ಇದು ನಮ್ಮ ಸದ್ಯದ ಅಮೃತ ಕಾಲದ ʼಸಂಸದೀಯ ಪ್ರಜಾತಂತ್ರʼದ ಕತೆ. ಇದನ್ನು ನೋಡಿದಾಗ ಮಹಾರಾಷ್ಟ್ರದಲ್ಲಿ ನಡೆದುದು ನ್ಯಾಯ ಸಮ್ಮತ ಚುನಾವಣೆ ಎಂದು ನಿಮಗೆ ಅನಿಸುತ್ತದೆಯೇ?

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- ಕೃಷಿ ಸಾಲಕ್ಕೂ ಆಪತ್ತು; ಕಡಿತವಾಯ್ತು ನಬಾರ್ಡ್ ಸವಲತ್ತು

More articles

Latest article