ಉಜಿರೆಯಲ್ಲಿ ಕಾಡಾನೆ ಕಡೆಗೆ ಫೈರಿಂಗ್? 3 ಸುತ್ತು ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿ; 2 ಗುಂಡು ಆನೆಗೆ ತಗುಲಿರುವ ಶಂಕೆ

ಬೆಳ್ತಂಗಡಿ ಸೆ. 6: ಉಜಿರೆಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ಬಳಿ ಒಂಟಿ ಸಲಗ ಪ್ರತ್ಯಕ್ಷಗೊಂಡಿದ್ದು, ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿರುವ ಆರೋಪ ಕೇಳಿಬಂದಿದೆ.

ಕಾಲೇಜು ಸಮೀಪದ ಅರಣ್ಯ ಪ್ರದೇಶದಿಂದ ಹೊರಬಂದ ಕಾಡಾನೆ ಸುತ್ತಮುತ್ತ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಂಗಳೂರು ಆನೆ ಕಾರ್ಯಪಡೆಯ ಸಿಬ್ಬಂದಿ ಧಾವಿಸಿ ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಮರಳಿಸುವ ಕಾರ್ಯಾಚರಣೆ ಆರಂಭಿಸಿದ್ದರು.

ಈ ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ದಿಕ್ಕಿನತ್ತ ಮೂರು ಸುತ್ತು ಗುಂಡು ಹಾರಿಸಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂರರ ಪೈಕಿ ಎರಡು ಸುತ್ತಿನ ಗುಂಡುಗಳು ಆನೆಗೆ ತಗುಲಿರುವ ಶಂಕೆಯೂ ವ್ಯಕ್ತವಾಗಿದೆ. ಗುಂಡಿನ ದಾಳಿ ಏಕೆ ನಡೆಸಲಾಯಿತು, ಯಾವ ರೀತಿಯ ಗುಂಡು ಬಳಸಲಾಯಿತು ಮತ್ತು ಆನೆಗೆ ಗಾಯವಾಗಿದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಆದರೆ ಕಾಡಾನೆ ಕಡೆಗೆ ಗುಂಡು ಹಾರಿಸಿರುವ ಘಟನೆ ಇದೀಗ ಕಾನೂನು ಪ್ರಶ್ನೆಯನ್ನೂ ಹುಟ್ಟುಹಾಕಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆನೆ ‘ಶೆಡ್ಯೂಲ್-1’ ವನ್ಯಜೀವಿಯಾಗಿದ್ದು, ಸಾಮಾನ್ಯವಾಗಿ ಅದರ ಬೇಟೆ ಅಥವಾ ಕೊಲ್ಲುವಿಕೆಗೆ ನಿಷೇಧವಿದೆ. ಜೀವಕ್ಕೆ ಅಪಾಯಕಾರಿ ಸ್ಥಿತಿಯಲ್ಲಿರುವ ನಿರ್ದಿಷ್ಟ ಪ್ರಾಣಿಯ ವಿರುದ್ಧ ಕ್ರಮ ಕೈಗೊಳ್ಳಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 11ರಲ್ಲಿ ವಿಶೇಷ ಅವಕಾಶವಿದೆ. ಆದರೆ ಅದಕ್ಕೂ ಮುಖ್ಯ ವನ್ಯಜೀವಿ ಪರಿಪಾಲಕರ ಲಿಖಿತ ಆದೇಶ ಮತ್ತು ಕಾರಣಗಳ ದಾಖಲಾತಿ ಅಗತ್ಯವಾಗುತ್ತದೆ.

ಮುಖ್ಯವಾಗಿ, ಆನೆಯನ್ನು ಕೊಲ್ಲುವ ಆದೇಶ ನೀಡುವ ಮೊದಲು ಅದನ್ನು ಹಿಡಿಯಲು, ಅರವಳಿಕೆ ನೀಡಿ ನಿಯಂತ್ರಿಸಲು ಅಥವಾ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂಬ ತೃಪ್ತಿ ಅಧಿಕಾರಿಗೆ ಇರಬೇಕು ಎಂಬುದು ಕಾನೂನಿನ ಸ್ಪಷ್ಟ ಷರತ್ತು. ಹೀಗಾಗಿ ಕೇವಲ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಜೀವಂತ ಗುಂಡು ಹಾರಿಸಬಹುದೇ ಎಂಬುದು ತನಿಖೆಗೆ ಒಳಪಡಬೇಕಾದ ಪ್ರಶ್ನೆಯಾಗಿದೆ.

ಇದೇ ವೇಳೆ, ತನ್ನನ್ನು ಅಥವಾ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಿಕೊಳ್ಳುವ ಅನಿವಾರ್ಯ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ವನ್ಯಜೀವಿಯನ್ನು ಕೊಲ್ಲುವುದು ಅಥವಾ ಗಾಯಗೊಳಿಸುವುದನ್ನು ಸೆಕ್ಷನ್ 11(2) ಅಪರಾಧವೆಂದು ಪರಿಗಣಿಸುವುದಿಲ್ಲ. ಹೀಗಾಗಿ ಅರಣ್ಯ ಸಿಬ್ಬಂದಿಯ ಮೇಲೆ ಅಥವಾ ಸಾರ್ವಜನಿಕರ ಮೇಲೆ ಆನೆ ತಕ್ಷಣ ದಾಳಿ ಮಾಡುವ ಪರಿಸ್ಥಿತಿ ಇತ್ತೇ ಎಂಬುದೂ ಘಟನೆ ಪರಿಶೀಲನೆಯಲ್ಲಿ ಪ್ರಮುಖ ಅಂಶವಾಗಲಿದೆ.

ಕರ್ನಾಟಕ ಹೈಕೋರ್ಟ್ ಕೂಡ 2025ರ ತೀರ್ಪಿನಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 11ರ ಅಧಿಕಾರವನ್ನು ಸೂಕ್ತ ಪ್ರಕರಣಗಳಲ್ಲಿ ಮಾತ್ರ, ಸಮಂಜಸವಾಗಿ ಹಾಗೂ ಸ್ವೇಚ್ಛಾಚಾರವಿಲ್ಲದೆ ಬಳಸಬೇಕು ಎಂದು ಅರಣ್ಯ ಇಲಾಖೆಗೆ ಸೂಚಿಸಿದೆ. ಅಧಿಕಾರದ ದುರ್ಬಳಕೆ ತಪ್ಪಿಸಲು ಅಗತ್ಯವಿದ್ದರೆ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.

ಹೀಗಾಗಿ ಉಜಿರೆಯ ಘಟನೆಯಲ್ಲಿ ಆನೆಗೆ ನಿಜವಾಗಿಯೂ ಗುಂಡು ತಗುಲಿದೆಯೇ? ತಗುಲಿದ್ದರೆ ಯಾವ ಕಾರಣಕ್ಕೆ ಗುಂಡು ಹಾರಿಸಲಾಯಿತು? ಸಿಬ್ಬಂದಿಗೆ ಗುಂಡು ಹಾರಿಸಲು ಮೇಲಧಿಕಾರಿಗಳ ಅನುಮತಿ ಇತ್ತೇ? ಆ ಕ್ಷಣದಲ್ಲಿ ಮಾನವ ಜೀವಕ್ಕೆ ನೇರ ಅಪಾಯವಿತ್ತೇ? ಎಂಬ ಪ್ರಶ್ನೆಗಳಿಗೆ ಅರಣ್ಯ ಇಲಾಖೆ ಸ್ಪಷ್ಟನೆ ನೀಡಬೇಕಿದೆ.

More articles

Latest article

Most read