ಬೆಂಗಳೂರು ಸೆ. 7: ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6ರಂದು ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಪ್ರಾರಂಭವಾದ ತಕ್ಷಣವೇ ಮನೆಯೊಳಗೆ ಆಟಕ್ಕಿಂತ ಮೊದಲು ಬೇರೊಂದು ಚರ್ಚೆ ಶುರುವಾಗಿದೆ. ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ ಅವರ ದೇಹದ ಬಗ್ಗೆ ಅಗ್ನಿಪರೀಕ್ಷೆಯಿಂದ ಮನೆಗೆ ಬಂದ ಕಿರಣ್ ಶಾಸ್ತ್ರಿ ಮಾಡಿದ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
ಪ್ರಥಮಾ ಅವರನ್ನು “ಆಂಟಿ” ಎಂದು ಕರೆಯುವುದು ಮತ್ತು “ಆನೆ ತರ ಇದ್ದೀರಾ” ಎಂಬಂತಹ ಮಾತುಗಳು ತಮಾಷೆಗೆ ಆಡಿದ್ದೇ ಅಥವಾ ಬಾಡಿ ಶೇಮಿಂಗ್ ಆಗಿವೆಯೇ ಎಂಬ ಪ್ರಶ್ನೆ ಈಗ ವೀಕ್ಷಕರ ಮುಂದಿದೆ. ಆಟದ ತಂತ್ರ, ನಡವಳಿಕೆ, ಕಾರ್ಯದ ಬಗ್ಗೆ ಟೀಕೆ ಮಾಡುವುದು ರಿಯಾಲಿಟಿ ಶೋನ ಸ್ವಭಾವ. ಆದರೆ ಒಬ್ಬ ವ್ಯಕ್ತಿಯ ತೂಕ, ರೂಪ ಅಥವಾ ದೇಹವನ್ನೇ ಗುರಿಯಾಗಿಸುವುದು ಎಷ್ಟು ಸೂಕ್ತ ಎಂಬುದು ಇದೀಗ ಗಂಭೀರ ಪ್ರಶ್ನೆಯಾಗಿದೆ.
ಪ್ರಥಮಾ ಪ್ರಸಾದ್ ಗ್ರ್ಯಾಂಡ್ ಪ್ರೀಮಿಯರ್ನಲ್ಲಿ ಸುದೀಪ್ ಜೊತೆ ಮಾತನಾಡುತ್ತಾ ತಾನು ತಾಯಿಯ ನೆರಳಿನಲ್ಲಿ ಬೆಳೆದ ಅನುಭವ, 50ಕ್ಕೂ ಹೆಚ್ಚು ರಿಜೆಕ್ಷನ್ಗಳು ಮತ್ತು ಸ್ವತಂತ್ರ ಐಡೆಂಟಿಟಿಗಾಗಿ ನಡೆಸಿದ ಹೋರಾಟದ ಬಗ್ಗೆ ಮಾತನಾಡಿದ್ದರು. ಅವರಿಗೆ ಮೊದಲ ದಿನವೇ ದೇಹದ ಬಗ್ಗೆ ಮಾತು ಬಂದಿರುವುದು ಅನೇಕರಿಗೆ ಅಸಮಾಧಾನ ತಂದಿದೆ.
ಇದು ಬಿಗ್ ಬಾಸ್ ಕನ್ನಡದಲ್ಲಿ ಮೊದಲ ಬಾರಿ ನಡೆದ ಘಟನೆ ಏನಲ್ಲ. ಹಿಂದಿನ ಸೀಸನ್ಗಳಲ್ಲಿ ಸಹ ಸ್ಪರ್ಧಿಗಳ ದೇಹದ ಬಗ್ಗೆ ಕಾಮೆಂಟ್ಗಳು ವೀಕ್ಷಕರ ಆಕ್ಷೇಪಕ್ಕೆ ಕಾರಣವಾಗಿದ್ದವು. ಗಿಲ್ಲಿ ನಟ ಅಶ್ವಿನಿ ಅವರ ವಿಷಯದಲ್ಲಿ ಮಾಡುತ್ತಿದ್ದ ಕೀಳುಮಟ್ಟದ ಕಾಮೆಂಟ್ ಗಳನ್ನು ಈಗ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಿಂದಿ ಬಿಗ್ ಬಾಸ್ 19ರಲ್ಲೂ ಅಶ್ನೂರ್ ಕೌರ್ ಅವರ ಮೇಲೆ ನಡೆದ ಬಾಡಿ ಶೇಮಿಂಗ್ ವಿವಾದ ಸಲ್ಮಾನ್ ಖಾನ್ ಅವರ ವಾರಾಂತ್ಯದ ಕಾರ್ಯಕ್ರಮದಲ್ಲಿ ಪ್ರಮುಖ ವಿಷಯವಾಗಿತ್ತು.
ಮನರಂಜನೆ ಮತ್ತು ಟಿಆರ್ಪಿ ಹೆಸರಿನಲ್ಲಿ ಯಾವ ಮಿತಿ ಮೀರಬಾರದು ಎಂಬುದು ಈಗ ಕೇಳಬೇಕಾದ ಪ್ರಶ್ನೆ. ಒಬ್ಬರ ದೇಹದ ಗೇಲಿ ಮಾಡಿ ನಗಿಸುವುದು ಸುಲಭ. ಆದರೆ ಅದೇ ಮಾತು ಆ ವ್ಯಕ್ತಿಯ ಆತ್ಮವಿಶ್ವಾಸ, ಮಾನಸಿಕ ಸ್ಥಿತಿ ಮತ್ತು ಕುಟುಂಬದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಯೋಚಿಸಬೇಕು. ರಿಯಾಲಿಟಿ ಶೋ ಒಂದು ಆಟದ ಕಣ. ಅದು ಯಾರ ದೇಹವನ್ನೂ ನಿಂದಿಸುವ ವೇದಿಕೆಯಾಗಬಾರದು ಅಲ್ಲವೇ ಎಂಬ ಚರ್ಚೆ ನಡೆಯುತ್ತಿದೆ.
ಮುಂದಿನ ಶನಿವಾರ ನಿರೂಪಕ ಸುದೀಪ್ ಈ ವಿಷಯವನ್ನು ಮನೆಯೊಳಗೆ ಚರ್ಚೆಗೆ ತೆಗೆದುಕೊಳ್ಳುತ್ತಾರಾ ಅಥವಾ ಇದು ಕೇವಲ ಮೊದಲ ದಿನದ ತಮಾಷೆಯಾಗಿ ಮುಚ್ಚಿಹೋಗುತ್ತದೆಯೇ ಎಂಬುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.

