Wednesday, May 22, 2024

ಮತಾಂಧರಿದ್ದಾರೆ ಎಚ್ಚರಿಕೆ

Most read

ಮತಾಂಧ ರವಿ ಹಾಗೂ ದ್ವೇಷಾಂಧ ಪುಂಗ್ಲಿಯನ್ನು ಸಂಪೂರ್ಣ ನಿರ್ಲಕ್ಷಿಸುವಂತೆಯೂ ಇಲ್ಲ. ಯಾಕೆಂದರೆ ಇವರು ಹೇಳುವ ಸುಂದರ ಸುಳ್ಳುಗಳನ್ನು ನಂಬುವ ಅಂಧ ಭಕ್ತರೂ ಇದ್ದಾರೆ. ದೇಶದ ಸಂವಿಧಾನಕ್ಕೆ ಗೌರವ ಕೊಡದ ಇಂತವರು ದೇಶದ್ರೋಹಿಗಳು. ಸರಕಾರ ಈ ಕೂಡಲೇ ಈ ಇಬ್ಬರೂ ಕೋಮುವಾದಿಗಳ ವಿರುದ್ಧ ಕೇಸು ದಾಖಲಿಸ ಬೇಕಿದೆ. ಅದಕ್ಕಿಂತ ಹೆಚ್ಚಾಗಿ ಈ ನಾಡಿನ ಜನರು ಕೋಮುದ್ವೇಷ ಪ್ರಚೋದಿಸುವವರನ್ನು ದೂರವಿಡಬೇಕಿದೆ. ಪ್ರಜಾತಂತ್ರ ಹಾಗೂ ಸಂವಿಧಾನ ಉಳಿಸಬೇಕಿದೆ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

ಈ ಕೋಮುವಾದದ ಮತ್ತೇರಿಸಿಕೊಂಡ ಮತಾಂಧರ ಮನಸ್ಥಿತಿ ಅರಿಯಲು ನಿನ್ನೆ ನಡೆದ ಈ ಎರಡು ಲೇಟೆಸ್ಟ್ ಘಟನೆಗಳು ಸಾಕ್ಷಿಯಾಗಿವೆ.

ಬಿಜೆಪಿ ಪಕ್ಷದಿಂದ ನಿರ್ಲಕ್ಷ್ಯಕ್ಕೊಳಗಾಗಿ ಯಾವುದೇ ಪದವಿ ಅಧಿಕಾರ ಇಲ್ಲದೇ ಪರಿತಪಿಸುತ್ತಿರುವ ಚಿಕ್ಕಮಗಳೂರಿನ  ಸಿಟಿ ರವಿ ಎನ್ನುವ ಔಟ್ ಡೇಟೆಡ್ ರಾಜಕಾರಣಿ ಆಗಾಗ ಅನಗತ್ಯ ಅಧಿಕಪ್ರಸಂಗಿತನದ ಹೇಳಿಕೆಗಳನ್ನು ಕೊಟ್ಟು ಹೈಕಮಾಂಡ್ ಗಮನ ಸೆಳೆಯಲು ವಿದೂಷಕನಂತೆ ವರ್ತಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗ “ಕುಂಕುಮ ಬೇಡ ಎನ್ನುವ ಸಿದ್ದರಾಮಯ್ಯ ಹಿಂದೂನಾ?”  ಎಂದು ಪ್ರಶ್ನಿಸುವ ಮೂಲಕ ತನ್ನ ಬೌದ್ಧಿಕ ದಿವಾಳಿತನವನ್ನು ಹಾಗೂ ಮತಾಂಧತೆಯ ಅತಿರೇಕವನ್ನೂ ಪ್ರದರ್ಶಿಸಿದ್ದಾರೆ.

ಭಾರತದ ಸಂವಿಧಾನ ಎಲ್ಲರಿಗೂ ಅವರವರ ಇಷ್ಟದಂತೆ ಧಾರ್ಮಿಕ ಆಚರಣೆಗಳನ್ನು ಮಾಡಲು ಹಾಗೂ ಧಾರ್ಮಿಕ ಸಂಕೇತಗಳನ್ನು ಬಳಸಲು  ಅವಕಾಶವನ್ನು ಕೊಟ್ಟಿದೆ. ಹಿಂದೂ ಎನ್ನುವುದು ಧರ್ಮವೇ ಅಲ್ಲ, ಅದೊಂದು ಜೀವನ ಕ್ರಮ ಎಂದು ಸರ್ವೋಚ್ಛ ನ್ಯಾಯಾಲಯವೇ ಹೇಳಿದೆ. ಆದರೆ ಈ ಕೇಸರಿಗರು ಈಗ ಹಿಂದೂ ಧರ್ಮ ಎಂದು ಹೇಳುತ್ತಲೇ ವೈದಿಕಶಾಹಿ ಹಿಂದುತ್ವವನ್ನು ಜಾರಿಗೆ ತರಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಯಾರು ಈ ಕೇಸರಿಗರು ಕೊಟ್ಟ ಮಂತ್ರಾಕ್ಷತೆ ಸ್ವೀಕರಿಸುವುದಿಲ್ಲವೋ, ಯಾರು ಶ್ರೀರಾಮನನ್ನು ಪೂಜಿಸುವುದಿಲ್ಲವೋ, ಯಾರು ಕೇಸರಿ ಬಾವುಟವನ್ನು ಇವರು ಹೇಳಿದಲ್ಲಿ ಹಾರಿಸುವುದಿಲ್ಲವೋ ಅಂತವರೆಲ್ಲಾ ಹಿಂದೂ ವಿರೋಧಿಗಳು, ದೈವದ್ರೋಹಿಗಳು ಎಂದು ನಿಂದನೆಗೆ ಗುರಿಯಾಗಬೇಕಾಗುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಿಟಿ ರವಿಯಂತವರು “ಯಾರು ಹಣೆಗೆ ಕುಂಕುಮ ಇಟ್ಟುಕೊಳ್ಳುವುದಿಲ್ಲವೋ ಅಂತವರು ಹಿಂದೂ ಆಗುವುದಿಲ್ಲ”ವೆಂಬ ಹೊಸ ವರಸೆ ಶುರು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರನ್ನೂ ಸಹ “ಕುಂಕುಮ ಬೇಡ ಎನ್ನುವ ಸಿದ್ದರಾಮಯ್ಯ ಹಿಂದೂನಾ?” ಎಂದು ಪ್ರಶ್ನಿಸುವ ಮೂಲಕ ಈ ಕೋಮುರವಿ ತನ್ನ ಕೋಮು ವಿಷವನ್ನು ಸಾರ್ವಜನಿಕವಾಗಿ ಕಕ್ಕಿದ್ದಾನೆ.

ಸಿದ್ದರಾಮಯ್ಯನವರಿಲ್ಲಿ ಸಾಂಕೇತಿಕ ಟಾರ್ಗೆಟ್ ಆಗಿದ್ದು ಈ ಹೇಳಿಕೆಯ ಹಿಂದಿನ ಉದ್ದೇಶ ಹಣೆಗೆ ಕುಂಕುಮ ಹಾಕದವರೆಲ್ಲಾ ಹಿಂದೂದ್ರೋಹಿಗಳು ಎನ್ನುವುದೇ ಆಗಿದೆ. ಬೂರ್ಖಾ ಹಿಜಾಬ್ ಧರಿಸದೆ ಯಾವ ಮಹಿಳೆಯೂ ಮನೆಯಿಂದ ಹೊರಗೆ ಬರಕೂಡದು ಎಂದು ಅಫ್ಘಾನಿಸ್ಥಾನದ ತಾಲಿಬಾನ್ ಸರಕಾರ ಆದೇಶ ಮಾಡಿದ ಹಾಗೆ ಈ ಹಿಂದುತ್ವವಾದಿ ತಾಲಿಬಾನಿಗಳು ಕುಂಕುಮ ಹಾಕದೆ ಹೊರಗೆ ಬಂದವರೆಲ್ಲಾ ಹಿಂದೂ ವಿರೋಧಿಗಳು ಎಂದು ಆದೇಶಿಸುವ ದಿನಗಳೂ ದೂರವಿಲ್ಲ.

ಕುಂಕುಮ ಹಾಕದವರು ಹಿಂದೂನಾ? ಭಗವಾದ್ವಜ ಹಾರಿಸದವರು ಹಿಂದೂನಾ? ಮಂತ್ರಾಕ್ಷತೆ ನಿರಾಕರಿಸಿದವರು ಹಿಂದೂನಾ? ಜೈಶ್ರೀರಾಮ್ ಹೇಳದವರು ಹಿಂದೂನಾ? ಎಂದು ಪ್ರಶ್ನಿಸುವ ಈ ಕೇಸರಿ ತಾಲಿಬಾನಿಗಳ ಕೈಗೆ ಮತ್ತೆ ದೇಶದ ಆಡಳಿತ ಸಿಕ್ಕರೆ ಹಿಂದೂರಾಷ್ಟ್ರವೆಂದು ಘೋಷಿಸಿ ಮನುಸ್ಮೃತಿಯನ್ನು ಸಂವಿಧಾನವಾಗಿಸುವುದಂತೂ ನಿಶ್ಚಿತ. ಸಂವಿಧಾನ ಪ್ರತಿಯೊಬ್ಬರಿಗೂ ಕೊಟ್ಟ ಧರ್ಮಾಚರಣೆಯ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಈ ಮತಾಂಧ ರವಿಯಂತವರು ಸಂವಿಧಾನದ ವಿರೋಧಿಗಳು. ದೇಶದ ಸಂವಿಧಾನಕ್ಕೆ ಗೌರವ ಕೊಡದ ಇಂತವರು ದೇಶದ್ರೋಹಿಗಳು. ಪ್ರಜಾತಂತ್ರಕ್ಕೆ ಮಾರಕವಾಗಿರುವ ಇಂತವರ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಮತೀಯವಾದಿಯನ್ನು ಸೋಲಿಸಿ ಮನೆಗೆ ಕಳುಹಿಸಿದ ಚಿಕ್ಕಮಗಳೂರಿನ ಜನತೆ ಮಾಡಿದಂತೆ ಸಂವಿಧಾನದ ಆಶಯಗಳ ವಿರುದ್ಧ ಇರುವ ಮತಾಂಧ ಶಕ್ತಿಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಾರಾಸಗಟಾಗಿ ಸೋಲಿಸುವ ಮೂಲಕ ಜನತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕು.

ಎಲ್ಲೂ ಸಲ್ಲದ ಇನ್ನೊಬ್ಬ ವಿದೂಷಕನ ಹೆಸರು ಹೆಂಗ್ ಪುಂಗ್ಲಿ ಅಲಿಯಾಸ್ ಸೂಲಿಬೆಲೆ. ಮತಾಂಧ ಶಕ್ತಿಗಳ ವಿಕ್ಷಿಪ್ತ ಸಮರ್ಥಕ. ಬಾಯಿ ಬಿಟ್ಟರೆ ಬರೀ ಸುಳ್ಳುಗಳನ್ನು ಹೇಳುವುದನ್ನೇ ವೃತ್ತಿ ಮಾಡಿಕೊಂಡಿದ್ದರಿಂದಾಗಿ ಕರುನಾಡ ಜನತೆ ಹೆಂಗ್ ಪುಂಗ್ಲಿ ಎನ್ನುವ ಬಿರುದನ್ನು ದಯಪಾಲಿಸಿದ್ದಾರೆ. ಈ ಪುಂಗ್ಲಿಯ ನರನಾಡಿಯಲ್ಲಿ ಹರಿಯುತ್ತಿರುವುದು ಅನ್ಯ ಧರ್ಮದ್ವೇಷ ಮತ್ತು ಸಂಘಿ ಪ್ರೇಮ. ಈಗ ಲೇಟೆಸ್ಟಾಗಿ ವಿದ್ಯಾರ್ಥಿಗಳ ಪರೀಕ್ಷಾ ದಿನದ ಕುರಿತು ಈ ಬಾಡಿಗೆ ಭಾಷಣಕಾರ ಕೋಮುವಿಷ ಕಾರಿದೆ.

ಮುಸ್ಲಿಂ ನಮಾಜು ಸಮಯವೆಂದು ಎಸೆಸೆಲ್ಸಿ ಪರೀಕ್ಷೆಯ ಕೊನೆಯ ದಿನ ಶುಕ್ರವಾರ ಬೆಳಿಗ್ಗೆ ಬದಲು ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ಸಮಯ ನಿಗದಿಮಾಡಲಾಗಿದೆ ಎಂದು ಪುಂಗ್ಲಿ ಟ್ವೀಟ್ ಮಾಡಿದೆ. ಶಾಲಾ ಮಕ್ಕಳ ಪರೀಕ್ಷೆ ಸಮಯದಲ್ಲೂ ಹಿಂದೂ ಮುಸ್ಲಿಂ ದ್ವೇಷವನ್ನು ಕಾರಿಕೊಳ್ಳುವ ಈ ಮತಾಂಧನ ನೀಚತನ ಅಕ್ಷಮ್ಯ. ಇಷ್ಟಕ್ಕೂ ಅವತ್ತು ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆಯ ದಿನ. ಅವತ್ತೆ ಪಿಯುಸಿ ಪರೀಕ್ಷೆಗಳೂ ಆರಂಭವಾಗುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ಇರುತ್ತದೆ. ಎರಡೂ ಕ್ಲಾಶ್ ಆಗಬಾರದು ಎನ್ನುವ ಕಾರಣಕ್ಕೆ ಪಿಯುಸಿ ಪರೀಕ್ಷೆಯನ್ನು ಬೆಳಿಗ್ಗೆ ನಡೆಸಿ ಮಧ್ಯಾಹ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಮೊದಲೇ ಘೋಷಿಸಿದೆ. ಆದರೆ ಅವತ್ತು ಶುಕ್ರವಾರವಾಗಿದ್ದರಿಂದ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆಯ ಪರೀಕ್ಷೆಗಳನ್ನು ನಮಾಜ್ ಸಮಯದ ನಂತರ ಇಡಲಾಗಿದೆ ಎಂದು ಪುಂಗ್ಲಿ ಕೋಮುದ್ವೇಷ ಭಾವನೆ ಕೆರಳಿಸುವ ನೀಚತನ ಮಾಡಿದೆ.

ಕೇಸರಿ ಕನ್ನಡಕ ಹಾಕಿಕೊಂಡು ಎಲ್ಲದರಲ್ಲೂ ಮುಸ್ಲಿಂ ದ್ವೇಷವನ್ನೇ ಕಾಣುವ ಹಾಗೂ ಕಂಡದ್ದನ್ನು ಕಕ್ಕುವ ಈ ವಿಷ ಸರ್ಪದ ದರ್ಪ ದಿನದಿಂದ ದಿನಕ್ಕೆ ಅತಿಯಾಗುತ್ತಿದೆ. ಈ ಹೆಂಗ್ ಪುಂಗ್ಲಿಯ ಕೋಮುದ್ವೇಷದ ಹಿಂದಿರುವ ಉದ್ದೇಶವೂ ಆರೆಸ್ಸೆಸ್ ಸಂಘಿ ನಾಯಕರ ಗಮನ ಸೆಳೆಯುವುದೇ ಆಗಿದೆ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಪಡೆಯುವುದೇ ಆಗಿದೆ. ಆದರೆ ಈ ಬಾಡಿಗೆ ಭಾಷಣಕಾರ ಹೀಗೆ ಬಹಿರಂಗವಾಗಿ ಕೋಮುದ್ವೇಷ ಕಾರುವುದಕ್ಕೆ ಪರೋಕ್ಷ ಬೆಂಬಲ ಕೊಡುವ ಸಂಘವು ಪ್ರತ್ಯಕ್ಷವಾಗಿ ಈತನನ್ನು ಪಕ್ಷಕ್ಕೋ ಇಲ್ಲವೇ ಸಂಘಕ್ಕೋ ಸೇರಿಸಿಕೊಳ್ಳಲು ನಿರಾಕರಿಸುತ್ತದೆ. ಇಂತಹ ವಿಷದ ಬಾಯಿಯ ನಾಗರವನ್ನು ಸೇರಿಸಿಕೊಂಡರೆ ಸಂಘದ ಹುಸಿ ವರ್ಚಸ್ಸಿಗೆ ಧಕ್ಕೆ ಆಗಬಹುದು ಎನ್ನುವುದು ಸಂಘದ ನಾಯಕರ ಲೆಕ್ಕಾಚಾರ. ಹೀಗಾಗಿ ಎಲ್ಲಿಯೂ ಸಲ್ಲದೆ ಸುಳ್ಳುಗಳ ಬುನಾದಿ ಮೇಲೆ ದ್ವೇಷಭಾಷಣ ಮಾಡಿಕೊಂಡು ಅಂಡಲೆಯುತ್ತಿರುವ  ಪುಂಗ್ಲಿ ಈ ಶತಮಾನದ ಅತ್ಯಂತ ಹಾಸ್ಯಾಸ್ಪದ ವ್ಯಕ್ತಿಯಾಗಿದ್ದಾನೆ.

ಹಾಗಂತ ಈ ಮತಾಂಧ ರವಿ ಹಾಗೂ ದ್ವೇಷಾಂಧ ಪುಂಗ್ಲಿಯನ್ನು ಸಂಪೂರ್ಣ ನಿರ್ಲಕ್ಷಿಸುವಂತೆಯೂ ಇಲ್ಲ. ಯಾಕೆಂದರೆ ಇವರು ಹೇಳುವ ಸುಂದರ ಸುಳ್ಳುಗಳನ್ನು ನಂಬುವ ಅಂಧಭಕ್ತರೂ ಇದ್ದಾರೆ. ಇಂತವರ ಪ್ರಚೋದನೆಗೆ ಒಳಗಾಗಿ ಕೋಮು ಸಾಮರಸ್ಯ ಹಾಳು ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಸರಕಾರ ಈ ಕೂಡಲೇ ಈ ಇಬ್ಬರೂ ಕೋಮುವಾದಿಗಳ ವಿರುದ್ಧ ಕೇಸು ದಾಖಲಿಸ ಬೇಕಿದೆ. ಕೋಮು ಸಾಮರಸ್ಯ ಕದಡುವಂತಹ ಯಾವುದೇ ಹೇಳಿಕೆಗಳನ್ನು ಯಾವುದೇ ರೂಪದಲ್ಲಿ ಕೊಡದಂತೆ ನ್ಯಾಯಾಲಯದಿಂದ ಆದೇಶ ತರಬೇಕಿದೆ. ಅದಕ್ಕಿಂತ ಹೆಚ್ಚಾಗಿ ಈ ನಾಡಿನ ಜನರು ಕೋಮುದ್ವೇಷ ಪ್ರಚೋದಿಸುವವರನ್ನು ದೂರವಿಡಬೇಕಿದೆ. ಪ್ರಜಾತಂತ್ರ ಹಾಗೂ ಸಂವಿಧಾನ ಉಳಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು, ರಂಗಕರ್ಮಿ

ಇದನ್ನೂ ಓದಿ-ಮುಸ್ಲಿಂ ದ್ವೇಷದ ಸುಳ್ಳು ಸುದ್ದಿಯನ್ನು ಶಾಲಾ ಮಕ್ಕಳ ಪರೀಕ್ಷೆಗೂ ಅಂಟಿಸಿದ ಕೋಣೆಮನೆ ಮತ್ತು ಸೂಲಿಬೆಲೆ

More articles

Latest article