ಬೆಂಗಳೂರು : ಸುಡು ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಬೆಂಗಳೂರಿನ ಜನತೆಯನ್ನು ಮಳೆರಾಯ ತಂಪಾಗಿಸಿದ್ದಾನೆ. ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಬೆಂಗಳೂರು ಕೂಲ್ ಆಗಿದೆ. ಆದರೆ, ಅವಾಂತರ ಮಾತ್ರ ಅಷ್ಟಿಷ್ಟಲ್ಲ.
ನಗರದಾದ್ಯಂತ ಮೊದಲ ಮಳೆ ಜೋರಾಗಿ ಸುರಿದಿದ್ದು, ಕೆಲವೆಡೆ ಆಲಿಕಲ್ಲು ಮಳೆ ಕೂಡ ಆಗಿದೆ. ಬಿರುಗಾಳಿ ಸಹಿತ ಮಳೆಯಾಗಿದೆ. ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ಕೋರಮಂಗಲ , ಶಾಂತಿನಗರ, ಹೆಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಆರ್.ಟಿ.ನಗರ, ಜಯನಗರ, ಜೆ.ಪಿ ನಗರ, ಹೆಬ್ಬಾಳ, ಶಿವಾಜಿ ನಗರ, ಬನಶಂಕರಿ, ಸದಾಶಿವನಗರ, ವಿಲ್ಸನ್ ಗಾರ್ಡನ್, ಲಾಲ್ ಬಾಗ್, ಡಬಲ್ ರೋಡ್, ರಿಚ್ಮಂಡ್ ಸರ್ಕಲ್ ಮತ್ತು ವಿಧಾನಸೌಧದ ಸುತ್ತಮುತ್ತ ಸೇರಿದಂತೆ ಇಡೀ ಬೆಂಗಳೂರಲ್ಲಿ ಮಳೆ ಅಬ್ಬರಿಸಿದೆ.
ವಿವಿಧ ಭಾಗಗಳಲ್ಲಿ ಒಟ್ಟು 78 ಮಿ.ಮೀ ಮಳೆಯಾಗಿದ್ದು, ಹೆಚ್ಎಎಲ್ ಏರ್ಪೋರ್ಟ್ ಪ್ರದೇಶದಲ್ಲಿ ಮಾತ್ರವೇ 24.7 ಮಿ.ಮೀ ಮಳೆ ದಾಖಲಾಗಿದೆ. ಬೇಸಿಗೆಯ ಉರಿಯಾಟದಿಂದ ಕಂಗಾಲಾಗಿದ್ದ ನಗರಕ್ಕೆ ಮಳೆ ತಂಪು ನೀಡಿದರೂ, ಬಿರುಗಾಳಿ, ಆಲಿಕಲ್ಲು ಹಾಗೂ ಭಾರೀ ಮಳೆಯಿಂದ ಅನಾಹುತಗಳ ಸರಮಾಲೆ ಸಂಭವಿಸಿದೆ. ಬಿಬಿಎಂಪಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಪ್ರಕಾರ 50 ಸ್ಥಳಗಳಲ್ಲಿ ಮರಗಳು ಉರುಳಿವೆ.
ಅಬ್ಬರದ ಮಳೆಯಿಂದಾಗಿ ಬನಶಂಕರಿ ಮೆಟ್ರೋ ನಿಲ್ದಾಣದ ಒಳಗೆ ನೀರು ಹರಿದು ಬಂದಿದೆ. ನಿಲ್ದಾಣದ ಟಿಕೆಟ್ ಕೌಂಟರ್ ಪ್ರದೇಶ ಸೇರಿದಂತೆ ಪ್ರಯಾಣಿಕರು ಓಡಾಡುವ ಜಾಗಗಳಲ್ಲಿ ಮಳೆ ನೀರು ನಿಂತಿದೆ. ಛಾವಣಿಯಿಂದ ನೀರು ತೊಟ್ಟಿಕ್ಕುತ್ತಿರುವುದರಿಂದ ಮೆಟ್ರೋ ಏರಲು ಬಂದ ಜನರು ಅತ್ತ ಇತ್ತ ಚಲಿಸಲಾಗದೆ ಪರದಾಡುವಂತಾಯಿತು. ಮಳೆ ಹಾನಿಯಿಂದಾಗಿ ಮೆಟ್ರೋ ನಿಲ್ದಾಣದ ಆವರಣದ ಸ್ವಚ್ಛತೆಗೂ ಧಕ್ಕೆಯುಂಟಾಗಿದ್ದು, ಬಿಡುವುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಮೆಟ್ರೋ ಸೇವೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಮೆಜೆಸ್ಟಿಕ್ ಕಾರ್ ಪಾರ್ಕಿಂಗ್ ಪ್ರದೇಶದಲ್ಲೂ ಬೃಹತ್ ಮರ ಬಿದ್ದು ಮೂರು ಕಾರುಗಳು ಹಾನಿಗೊಳಗಾದವು. ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಮುಂಭಾಗದಲ್ಲಿದ್ದ ಕಟೌಟ್ ಕೂಡ ಗಾಳಿಗೆ ಬಿದ್ದು ಹಾನಿಯಾಗಿದೆ.
ಶಿವಾನಂದ ಸರ್ಕಲ್ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಅಂಡರ್ಪಾಸ್ನಲ್ಲಿ ದ್ವಿಚಕ್ರ ವಾಹನಗಳು ಸಿಲುಕಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಸವನಗುಡಿ ಅಂಡರ್ಪಾಸ್ ಕೂಡ ಸಂಪೂರ್ಣವಾಗಿ ನೀರಿನಿಂದ ತುಂಬಿ ಸಂಚಾರಕ್ಕೆ ಅಡ್ಡಿಯಾಗಿದೆ.

