ಧರ್ಮಶಾಲಾ : 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ವೇಗಿ ಅರ್ಶದೀಪ್ ಸಿಂಗ್ ಈಗ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಕುರಿತು ಅವರು ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೊದಲು ರೆಕಾರ್ಡ್ ಆದ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅರ್ಷದೀಪ್, ತಿಲಕ್ ವರ್ಮಾರನ್ನು “ಓಯ್ ಅಂಧೇರೆ” ಎಂದು ಕರೆಯುತ್ತಿರುವುದು ಕೇಳಿಬಂದಿದೆ. ಬಳಿಕ “ಸನ್ಸ್ಕ್ರೀನ್ ಹಾಕ್ತಿಯಾ?” ಎಂಬ ಮಾತನ್ನೂ ಹೇಳಿದ್ದಾರೆ ಎಂದು ವಿಡಿಯೋದಲ್ಲಿ ಕಾಣುತ್ತದೆ. ಕೆಲವರು ಇದನ್ನು ತಿಲಕ್ ವರ್ಮಾ ಅವರ ಚರ್ಮದ ಬಣ್ಣವನ್ನು ಗುರಿಯಾಗಿಸಿಕೊಂಡ ವರ್ಣಭೇದದ ಹೇಳಿಕೆ ಎಂದು ಆರೋಪಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು “ಇದು ತಮಾಷೆ ಅಲ್ಲ”, “ಆಟಗಾರರ ನಡುವೆ ಗೌರವ ಇರಬೇಕು” ಎಂದು ಟೀಕಿಸಿದ್ದಾರೆ. ಕೆಲವು ಅಭಿಮಾನಿಗಳು ಅರ್ಷದೀಪ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು BCCIಗೆ ಒತ್ತಾಯಿಸಿದ್ದಾರೆ.
ಮಾಜಿ ಕ್ರಿಕೆಟಿಗ ಲಕ್ಷ್ಮಣನ್ ಶಿವರಾಮ ಕೃಷ್ಣನ್ ಕೂಡ ಈ ಘಟನೆ ಬಗ್ಗೆ ಕಠಿಣ ಪ್ರತಿಕ್ರಿಯೆ ನೀಡಿ, ಅರ್ಷದೀಪ್ ಮೇಲೆ ನಿಷೇಧ ಹೇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇನ್ನೊಂದು ವಲಯದ ಅಭಿಮಾನಿಗಳು “ಇದು ಸ್ನೇಹಿತರ ನಡುವಿನ ಸಾಮಾನ್ಯ ತಮಾಷೆ ಇರಬಹುದು” ಎಂದು ಅರ್ಷದೀಪ್ ಪರ ನಿಂತಿದ್ದಾರೆ. ವಿಡಿಯೋದಲ್ಲಿ ತಿಲಕ್ ವರ್ಮಾ ಕೂಡ ನಗುತ್ತಿರುವುದು ಕಾಣಿಸಿಕೊಂಡಿದ್ದು, ವಿಷಯವನ್ನು ಹೆಚ್ಚು ದೊಡ್ಡದಾಗಿಸಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದುವರೆಗೆ BCCI, ಪಂಜಾಬ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ವಿವಾದದ ನಡುವೆಯೇ ನಡೆದ ಪಂದ್ಯದಲ್ಲಿ ಮುಂಬೈ ತಂಡವು ಪಂಜಾಬ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ತಿಲಕ್ ವರ್ಮಾ ಕೇವಲ 33 ಎಸೆತಗಳಲ್ಲಿ 75 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು.

