Thursday, July 25, 2024

ಜ್ಞಾನ ದೇಗುಲದಲ್ಲಿ ಪ್ರಶ್ನಿಸುವುದಕ್ಕೇ ಪ್ರಶ್ನೆ!

Most read

ವಿದ್ಯಾಲಯಗಳಲ್ಲಿ ಪ್ರಶ್ನಿಸುವುದನ್ನು ರೂಢಿಸಿಕೊಂಡ ಯುವಕರು ಮುಂದೆ ವೈಚಾರಿಕತೆಯನ್ನು ರೂಢಿಸಿಕೊಂಡು  ಆಧಾರ ರಹಿತ ಅವೈಜ್ಞಾನಿಕ ಆಚಾರ ವಿಚಾರಗಳನ್ನು ಪ್ರಶ್ನಿಸುತ್ತಾರೋ ಎಂಬುದು ಈ ಸನಾತನಿಗಳ ಆತಂಕ.  ಹಿಂದುತ್ವವನ್ನು ಪ್ರಶ್ನಿಸಿ ಬಹುತ್ವವನ್ನು ಒಪ್ಪಿಕೊಳ್ಳುತ್ತಾರೋ ಎಂಬ ಭಯ. ಜಾತಿಬೇಧ ಹಾಗೂ ವರ್ಗ ಶೋಷಣೆ ತಾರತಮ್ಯವನ್ನು ಪ್ರಶ್ನಿಸುತ್ತಾರೋ ಎನ್ನುವ ಸಂಕಟ. ಆದ್ದರಿಂದ ವಿದ್ಯಾಲಯಗಳಲ್ಲಿ ಧೈರ್ಯವಾಗಿ ಪ್ರಶ್ನಿಸಿ ಎನ್ನುವ ಘೋಷಣೆ ಬರೆಯುವುದನ್ನೇ ವಿರೋಧಿಸುವ ಹಾಗೂ ಆ ರೀತಿ ಆದೇಶ ಮಾಡಿದ ಸರಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಸಂಘ ಪರಿವಾರದವರು ಮಾಡಿದರು ಶಶಿಕಾಂತ ಯಡಹಳ್ಳಿ

ಈ ನಾಡಿನ ಪ್ರಖರ ವೈಚಾರಿಕ ಪ್ರಜ್ಞೆಯಾಗಿದ್ದ ಡಾ.ಹೆಚ್. ನರಸಿಂಹಯ್ಯನವರು ಬಸವನಗುಡಿಯಲ್ಲಿರುವ ನ್ಯಾಶನಲ್ ಕಾಲೇಜಿನಲ್ಲಿ “ಪ್ರಶ್ನಿಸದೇ ಏನನ್ನೂ ನಂಬಬೇಡ” ಎಂದು ಬರೆಸಿ ಜೊತೆಗೆ ಪ್ರಶ್ನಾರ್ಥಕ ಚಿಹ್ನೆಯನ್ನೂ ಚಿತ್ರಿಸಿದ್ದರು. ಪ್ರಶ್ನೆ ಮಾಡಿ ಸಮರ್ಥ ಉತ್ತರ ಕಂಡುಕೊಳ್ಳದೆ ಇರುವುದೇ ಸಕಲ ಮೌಢ್ಯಾಚರಣೆ ಹಾಗೂ ಅಂಧ ನಂಬಿಕೆಗಳಿಗೆ ಕಾರಣ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಪ್ರಶ್ನಿಸುವುದನ್ನು ಪ್ರೇರೇಪಿಸುತ್ತಿದ್ದರು.  

ಆದರೆ ಈಗ ಕಾಲ ಬದಲಾಗಿದೆ. ಮತಾಂಧರ ಆಡಳಿತದಲ್ಲಿ ಪ್ರಶ್ನಿಸುವುದೇ ಬಹು ದೊಡ್ಡ ಅಪರಾಧವಾಗಿದೆ. ಧರ್ಮಾಂಧತೆ ಹಾಗೂ ಧರ್ಮದ್ವೇಷವನ್ನು ಪ್ರಶ್ನಿಸುವವರನ್ನು ಧರ್ಮದ್ರೋಹಿಗಳು ಎಂದು ನಿಂದಿಸಲಾಗುತ್ತದೆ. ದೇಶದ್ರೋಹಿಗಳು ಎಂದು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಹಿಂದೂ ವಿರೋಧಿ ಎಂದು ಆರೋಪಿಸಿ ಹಲ್ಲೆ ಮಾಡಲಾಗುತ್ತದೆ. ಯಾರು ಯಾವ ಉಡುಪು ಧರಿಸಬೇಕು, ಯಾವುದನ್ನು ತಿನ್ನಬೇಕು, ಏನನ್ನು ಪೂಜಿಸಬೇಕು, ಯಾವ ದೇವರಿಗೆ ಜೈಕಾರ ಹಾಕಬೇಕು ಎನ್ನುವುದನ್ನೆಲ್ಲಾ ಬಲವಂತವಾಗಿ ಹೇರಲಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. 

ಶಾಲಾ ಕಾಲೇಜಿನ ಪ್ರವೇಶ ದ್ವಾರದಲ್ಲಿ ಬರೆಸಲಾಗಿದ್ದ ‘ಜ್ಞಾನದೇಗುಲವಿದು ಕೈಮುಗಿದು ಒಳಗೆ ಬನ್ನಿ’ ಎನ್ನುವುದನ್ನು ಬದಲಿಸಿ ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂಬ ಘೋಷಣೆ ಅಳವಡಿಸಲು ಅದೇಶಿಸಲಾಗಿದೆ. ಕೆಲವಾರು ವಸತಿ ಶಾಲೆಗಳಲ್ಲಿ ಈ ಘೋಷವಾಕ್ಯವನ್ನು ಬರೆಯಿಸಲಾಗಿದೆ.

ಹೀಗೆಲ್ಲಾ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಪ್ರಚೋದಿಸಿದರೆ ಮತಾಂಧ ಶಕ್ತಿಗಳು ಸುಮ್ಮನಿರಲು ಸಾಧ್ಯವೇ? ಅಂಧಭಕ್ತರು ಪ್ರಶ್ನಿಸುವುದನ್ನು ಬೆಂಬಲಿಸುತ್ತಾರಾ? ಮತಾಂಧ ಟ್ರೋಲಿಗರು ವಿರೋಧಿಸದೇ ಮೌನವಾಗಿರುತ್ತಾರಾ? ಭ್ರಮೆಗಳನ್ನೇ ಬಿತ್ತಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡ ಸಂಘ ಪರಿವಾರಿಗರಿಗೆ ಇಂತಹ ಆಘಾತಕಾರಿ ನಡೆ ಜೀರ್ಣವಾಗುತ್ತದಾ? 

ಸಾಧ್ಯವೇ ಇಲ್ಲ. ಯಾಕೆಂದರೆ ಶಾಲಾ ಕಾಲೇಜುಗಳಲ್ಲಿ ಕಲಿಯುವವರು, ಕಲಿತವರು ಪ್ರಶ್ನಿಸುವುದಕ್ಕೆ ಶುರುವಿಟ್ಟರೆ ಸುಳ್ಳಿನ ಬುನಾದಿಯ ಮೇಲೆ ಕಟ್ಟಲ್ಪಟ್ಟ ಹಿಂದುತ್ವವಾದಿ ಕಲ್ಪನಾ ಗೋಪುರದ ಬುಡವೇ ಅಲ್ಲಾಡುತ್ತದೆ. ಧರ್ಮ ಕರ್ಮಗಳನ್ನು, ಅಂಧಾಚರಣೆಗಳನ್ನು, ವರ್ಗ ತಾರತಮ್ಯವನ್ನು ಪ್ರಶ್ನಿಸಲು ಆರಂಭಿಸಿದರೆ ಸನಾತನಿಗಳ ವರ್ಣಾಶ್ರಮದ ಅಡಿಪಾಯವೇ ಕುಸಿಯ ತೊಡಗುತ್ತದೆ. ಇಂತಹ ಹೊಡೆತವನ್ನು ಸಂಘದ ಕಟ್ಟಾಳುಗಳು ಸಹಿಸಲು ಸಾಧ್ಯವೇ ಇಲ್ಲ. ಕೇವಲ ಒಂದು ವಾಕ್ಯವನ್ನು ಬರೆಯಿಸಿದ್ದಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದೆ. ಅದಕ್ಕೆ ಕುವೆಂಪುರವರನ್ನು ಗುರಾಣಿಯಾಗಿ ಬಳಸಲಾಗುತ್ತದೆ. 

‘ಪ್ರಶ್ನೆಮಾಡಿ ಎನ್ನುವುದನ್ನು ನಾವು ವಿರೋಧಿಸುತ್ತೇವೆ’ ಎಂದು ನೇರವಾಗಿ ಹೇಳಲಾಗದವರು ಇದು ಕುವೆಂಪುರವರಿಗೆ ಮಾಡಿದ ಅವಮಾನ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹ ಕುವೆಂಪುರವರಿಗೆ ಮಾಡಿದ ಅಪಮಾನ ಎಂದು ಸರಕಾರದ ನಡೆಯನ್ನು ವಿರೋಧಿಸಿದ್ದಾರೆ. ಸಂಘಿಗಳು ಪ್ರಶ್ನಿಸುವುದನ್ನು ವಿರೋಧಿಸಲು ಕುವೆಂಪುರವರನ್ನು ಎಳೆದು ತರುತ್ತಿದ್ದಾರೆ. ‘ಕೈಮುಗಿದು ಒಳಗೆ ಬಾ’ ಎಂದು ರಾಷ್ಟ್ರಕವಿ ಕುವೆಂಪುರವರ ಹೇಳಿಕೆಯನ್ನು ‘ಧೈರ್ಯವಾಗಿ ಪ್ರಶ್ನಿಸಿ’ ಎಂದು ತಿರುಚಿದ್ದು ಅಕ್ಷಮ್ಯ ಎಂದು ಸಾಮಾಜಿಕ ಜಾಲತಾಣಗಳ ಕೋಮುಕ್ರಿಮಿಗಳು ಅಪಪ್ರಚಾರ ಮಾಡಲು ಆರಂಭಿಸಿವೆ.

ಇಷ್ಟಕ್ಕೂ ಕೈಮುಗಿದು  ಒಳಗೆ ಬಾ ಎನ್ನುವ ಸಾಲು ಕುವೆಂಪುರವರ ಸಾಹಿತ್ಯದಲ್ಲಿ ಎಲ್ಲಿಯೂ ಇಲ್ಲ ಹಾಗೂ ಕುವೆಂಪುರವರು ಎಂದೂ ಹಾಗೆ ಹೇಳಿಲ್ಲ ಎಂದು ಈ ಅವಿವೇಕಿಗಳಿಗೆ ತಿಳಿಸಿ ಹೇಳುವವರಾದರೂ ಯಾರು? ಅವರ ಕವಿತೆಯೊಂದರಲ್ಲಿ “ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೇ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು” ಎನ್ನುವ ಸಾಲು ಇದೆ. ಈ ಸಾಲುಗಳೇ ಗುಡಿ ಸಂಸ್ಕೃತಿಯನ್ನು ಪ್ರಶ್ನಿಸಿ ಕಲೆಯನ್ನು ಆರಾಧಿಸಲು ಪ್ರೇರೇಪಿಸುವಂತಿವೆ. “ಶಿಲೆಯ ಗುಡಿಯೆಂದು ತಿಳಿದು ಕೈ ಮುಗಿದು ಬರಬೇಡಿ ಯಾತ್ರಿಕರೇ ಕಲೆಯೆಂದು ಕೈಮುಗಿದು ಬನ್ನಿ” ಎಂದು ಸಾರುವ ಈ ಸಾಲುಗಳು ಮಂದಿರ ಸಂಸ್ಕೃತಿಯ ಆಂಧಭಕ್ತರ ಕಣ್ತೆರೆಸುವಂತಿದೆ. ಈ ಕವಿತೆಯ ಸಾಲಿನಲ್ಲಿರುವ ʼಕೈಮುಗಿದು ಬನ್ನಿʼ ಯನ್ನು ಮಾತ್ರ ಎತ್ತಿಕೊಂಡು ಸಮರ್ಥನೆಗಿಳಿದಿರುವ ಮತಾಂಧರಿಗೆ ಸ್ಫೂರ್ತಿವಾಕ್ಯವಾದ “ಜ್ಞಾನಮಂದಿರವಿದು ಕೈಮುಗಿದು ಒಳಗೆ ಬನ್ನಿ” ಎನ್ನುವುದು ಕುವೆಂಪುರವರ ಮಾತು ಬರಹ ಅಲ್ಲ ಎಂದು ಹೇಳಬೇಕಿದೆ. ಇಂತಹ ಸುಳ್ಳುಗಳನ್ನು ಪ್ರಶ್ನಿಸಿ ಮತಾಂಧರ ಮುಖವಾಡಗಳನ್ನು ಬೆತ್ತಲೆ ಮಾಡಲು ಧೈರ್ಯವಾಗಿ ಪ್ರಶ್ನಿಸಿ ಎಂದು ಕರೆ ಕೊಡಬೇಕಿದೆ.

 “ಜ್ಞಾನಮಂದಿರವಿದು ಕೈಮುಗಿದು ಒಳಗೆ ಬನ್ನಿ” ಎಂಬುದು ಹಳೆಯ ಘೋಷಣೆ. ಇಷ್ಟಕ್ಕೂ ವಿದ್ಯಾರ್ಥಿಗಳು ಭಕ್ತಿಯಿಂದ ಕೈಮುಗಿದು ವಿದ್ಯಾಲಯಕ್ಕೆ ಬಂದು ಕುಳಿತುಕೊಂಡು ಮಾಡುವುದೇನಿದೆ?. ಅರ್ಥವಾಗದ ಪಾಠವನ್ನು ಅರಿಯಲು ಪ್ರಶ್ನೆಗಳನ್ನು ಕೇಳುವುದು ಬೇಡವೇ? ಪಾಠ ಎನ್ನುವುದು ಶಿಕ್ಷಕರ ಏಕಮುಖಿ ಪ್ರವಚನವಾಗ ಬೇಕೆ? ಗುರು ಶಿಷ್ಯರ ಚರ್ಚೆ ಸಂವಾದಗಳಿಂದ ಕಲಿಕೆ ಸುಲಭ ಅಲ್ಲವೇ? ಪ್ರಶ್ನಿಸಲೇ ಬೇಡ ಎನ್ನುವುದೇ ಆದರೆ ಶಾಲೆಗೆ ಯಾಕೆ ಹೋಗಬೇಕು? ಪಠ್ಯ ಪುಸ್ತಕ ಹಾಗೂ ಗೈಡ್ ಗಳನ್ನು ನೋಡಿಯೋ ಇಲ್ಲಾ ಯುಟ್ಯೂಬ್ ಪಾಠಗಳನ್ನು ಕೇಳಿಯೋ ಪರೀಕ್ಷೆ ಬರೆದರೆ ಸಾಕಲ್ಲವೇ? ಶಾಲೆ ಕಾಲೇಜು ಪಾಠ ಪ್ರವಚನಗಳನ್ನು ಬಂದ್ ಮಾಡುವುದೇ ಸೂಕ್ತವಲ್ಲವೇ? 

ಆದರೆ ಈ ಕಾಂಗ್ರೆಸ್ ಸರಕಾರ ಯು ಟರ್ನ್ ಸರಕಾರ ಎಂದೂ ಅಪಖ್ಯಾತಿಯನ್ನೂ ಪಡೆದಿದೆ. ಸಂಘಿ ಪರಿವಾರಿಗರ ಹೋರಾಟ ಹಾರಾಟಗಳಿಗೆ ಹೆದರಿ ತನ್ನದೇ ಆದೇಶಗಳನ್ನು ಹಿಂಪಡೆದ ಹಲವಾರು ಉದಾಹರಣೆಗಳಿವೆ. ಕೆಲವು ದಿನಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹಾದೇವಪ್ಪರವರ ಟಿಪ್ಪಣಿ ಆಧರಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು (ಕ್ರೈಸ್) “ಕಾಲೇಜುಗಳಲ್ಲಿ  ಕೇವಲ ರಾಷ್ಟ್ರೀಯ ಹಬ್ಬ, ನಾಡಹಬ್ಬ ಹಾಗೂ ಜಯಂತಿಗಳನ್ನು ಮಾತ್ರ ಆಚರಿಸಬೇಕು, ಅವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಧಾರ್ಮಿಕ ಹಬ್ಬಗಳ ಆಚರಣೆ ಮಾಡಿದರೆ ಸಂಬಂಧಿಸಿದ  ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸುತ್ತೋಲೆಯನ್ನು ಹೊರಡಿಸಲಾಗಿತ್ತು.  ಆದರೆ ಸಂಘಪರಿವಾರದ ಸಂಘಟನೆಗಳು ತೀವ್ರ ವಿರೋಧ ವ್ಯಕ್ತ ಪಡಿಸಿದವು. ಕಾಂಗ್ರೆಸ್ ಸರಕಾರವನ್ನು ಹಿಂದೂವಿರೋಧಿ ಎಂಬಂತೆ ಅಪಪ್ರಚಾರ ಶುರು ಮಾಡಿದವು. ಚುನಾವಣಾ ಕಾಲದಲ್ಲಿ ರಿಸ್ಕ್ ಬೇಡವೆಂದು ಒಂದೇ ದಿನದಲ್ಲಿ ಈ ಸುತ್ತೋಲೆಯನ್ನು ವಾಪಸ್ ಪಡೆಯಲಾಯ್ತು.

ಅದೇ ರೀತಿ “ಸರಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ  ಮಾತ್ರ ನಾಡಗೀತೆಯನ್ನು ಪ್ರತಿದಿನ ಮಕ್ಕಳಿಂದ ಹಾಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಫೆ.16 ರಂದು ಆದೇಶ ಮಾಡಿ ಅನಗತ್ಯ ವಿವಾದ ಸೃಷ್ಟಿಸಿತು. ನಾಡಗೀತೆಯಿಂದ ಖಾಸಗಿ ಹಾಗೂ ಅನುದಾನ ರಹಿತ ಶಾಲೆಗಳನ್ನು ಹೊರಗಿಟ್ಟಿತ್ತು. ಈ ಆದೇಶಕ್ಕೂ ವಿರೋಧ ವ್ಯಕ್ತವಾಯಿತು. ಕನ್ನಡ ವಿರೋಧಿ ಸರಕಾರ ಎಂದು ಬಿಂಬಿಸಲು ಸಂಘಿಗಳು ಕಾರ್ಯಪ್ರವೃತ್ತರಾದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸರಕಾರ ಫೆ. 21 ರಂದು ತಿದ್ದುಪಡಿ ಆದೇಶವನ್ನು ಹೊರಡಿಸಿ ಎಲ್ಲಾ ಶಾಲೆ ಕಾಲೇಜುಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿತು. ಈ ರೀತಿ ಅನಗತ್ಯ ವಿವಾದಗಳನ್ನು ಹುಟ್ಟಿಸುವ ಆದೇಶವನ್ನು ಈ ಸರಕಾರಿ ಇಲಾಖೆಗಳು ಯಾಕೆ ಹೊರಡಿಸುತ್ತವೆ, ಯಾಕೆ ಸಂಘಿಗಳ ಕೈಗೆ ಕೋಲು ಕೊಟ್ಟು ಹೊಡಿಸಿಕೊಳ್ಳುತ್ತವೆ, ಸರಕಾರಕ್ಕೆ ಮುಜುಗರ ತರುತ್ತವೆ.. ಗೊತ್ತಿಲ್ಲ. ಆದರೆ ಸರಕಾರದ ಇಲಾಖೆಗಳು ಏನೇ ಆದೇಶ ಮಾಡಿದರೂ ಜನರನ್ನು ಧರ್ಮ ದೇವರು ಭಾಷೆಯ ಹೆಸರಲ್ಲಿ ಎತ್ತಿಕಟ್ಟಿ ಭಾವನಾತ್ಮಕವಾಗಿ ಪ್ರಚೋದಿಸಲು ಸಂಘ ಪರಿವಾರದ ಅಂಗಸಂಸ್ಥೆಗಳು ಕಾಯುತ್ತಾ ಇರುತ್ತವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತವೆ. 

ವಸತಿ ಶಾಲೆಯ ಪ್ರವೇಶ ದ್ವಾರದ ಘೋಷವಾಕ್ಯ ಬದಲಾವಣೆಯ ಆದೇಶ ಅಗತ್ಯವಾಗಿತ್ತು. ಯಾವುದೇ ಕಾರಣಕ್ಕೂ ಸಂಘಿಗಳ ಒತ್ತಾಯಕ್ಕೆ ಮಣಿದು “… ಧೈರ್ಯವಾಗಿ ಪ್ರಶ್ನಿಸಿ” ಎಂದು ವಸತಿ ಶಾಲೆಗಳಲ್ಲಿ ಬರೆಸುವ ನಿರ್ಧಾರವನ್ನು ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್ ತೆಗೆದುಕೊಂಡಿದ್ದರು. ಇದು ಸರಕಾರದ ಆದೇಶವೂ ಆಗಿರಲಿಲ್ಲ. ಆದರೂ ಈ ಕ್ರಮ ಜಾರಿಯಾಗಲಿ ಹಾಗೂ ಒತ್ತಡಕ್ಕೆ ಮಣಿದು ಹಿಂಪಡೆಯದಿರಲಿ ಎಂಬುದು ಎಲ್ಲಾ ಪ್ರಜ್ಞಾವಂತರ ಆಶಯವಾಗಿತ್ತು. ಪ್ರಶ್ನಿಸುವ ಪ್ರವೃತ್ತಿಯೇ ವೈಚಾರಿಕತೆಗೆ ಪೂರಕವೆಂದು ಸರಕಾರ ಸಮರ್ಥನೆ ಮಾಡಿಕೊಳ್ಳಬಹುದಾಗಿತ್ತು. ಯಾವುದನ್ನೇ ಆಗಲಿ ಪ್ರಶ್ನಿಸದೇ ಒಪ್ಪಿಕೊಂಡು ಆಚರಿಸುವುದು ದಾಸ್ಯ ಹಾಗೂ ಮೌಢ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿತ್ತು. “ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬಾರದು” ಎನ್ನುವ ಬುದ್ದನ ಮಾತುಗಳನ್ನು ಎಲ್ಲರೂ  ಅಳವಡಿಸಿಕೊಳ್ಳಬೇಕಿದೆ ಎಂದು ಆಡಳಿತಾಂಗ ಹೇಳಬಹುದಾಗಿತ್ತು. ಆದರೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಇದನ್ನೂ ಸಹ ನಿಲ್ಲಿಸಲಾಯ್ತು. ಬದಲಾಯಿಸಿ ಬರೆಸಿದ್ದ ಘೋಷವಾಕ್ಯವನ್ನು ಅಳಿಸಿ ಮತ್ತೆ ಮೊದಲಿನಂತೆಯೇ ಬರೆಸಲಾಯ್ತು. 

ಸರಕಾರದ ಇಲಾಖೆಗಳು ಹಾಗೂ ಅಧಿಕಾರಿಗಳು ಈ ರೀತಿಯ ಸುತ್ತೋಲೆ ಹೊರಡಿಸುವುದು ಹಾಗೂ ವಿರೋಧ ಬರುತ್ತಿದ್ದಂತೆಯೇ ರದ್ದು ಮಾಡಲು ಕ್ರಮ ಕೈಗೊಳ್ಳುವುದರಿಂದಾಗಿ ಸರಕಾರದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ. ಏನೋ ಬದಲಾವಣೆ ಮಾಡಬೇಕು ಎಂದು ತರಾತುರಿಯಲ್ಲಿ ಕ್ರಮ ತೆಗೆದುಕೊಳ್ಳುವುದು ಹಾಗೂ ಯು ಟರ್ನ್ ಮಾಡಿ ತನ್ನದೇ ನಿರ್ಧಾರವನ್ನು ಹಿಂಪಡೆಯುವುದು ಸರಕಾರಿ ಇಲಾಖೆಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸಂಘ ಪರಿವಾರದವರು ಯಥಾಸ್ಥಿತಿ ವಾದಿಗಳು. ಸಕಾರಾತ್ಮಕ ಬದಲಾವಣೆಗೆ ಎಂದೂ ಆಸ್ಪದ ಕೊಡಲಾರರು.

ಉತ್ತಮ ವೈಚಾರಿಕ ಕ್ರಮಗಳನ್ನು ತೆಗೆದುಕೊಳ್ಳುವ ಮುನ್ನ ಸರಕಾರದ ಇಲಾಖೆಯ ಮಂತ್ರಿಗಳು ಹಾಗೂ ಅಧಿಕಾರಿಗಳು ಸಾಧಕ ಬಾಧಕ ಹಾಗೂ ಬರಬಹುದಾದ ಪ್ರತಿರೋಧ ಮತ್ತು ಅದನ್ನು ಎದುರಿಸುವ ಕ್ರಮಗಳ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಒಂದು ಸಲ ಬದಲಾವಣೆಗೆ ಕ್ರಮ ತೆಗೆದುಕೊಂಡರೆ ಅದೆಷ್ಟೇ ವಿರೋಧ ಬಂದರೂ ಹಿಂದಕ್ಕೆ ಹೆಜ್ಜೆ ಇಡಬಾರದು. ಆದರೆ ಅಂತಹ ಶಕ್ತಿ ಮತ್ತು ಸಾಮರ್ಥ್ಯವನ್ನು ಸರಕಾರ ರೂಢಿಸಿಕೊಳ್ಳಬೇಕು ಹಾಗೂ ತಾನು ಮಾಡುವ ಬದಲಾವಣೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ಸಂಘಿಗಳ ವಿರೋಧವನ್ನು ಮೆಟ್ಟಿ ನಿಲ್ಲಬಹುದು. ಇದನ್ನು ಸಿದ್ದರಾಮಯ್ಯರವರಂತಹ ಅನುಭವಿ ನೇತಾರರಿಗೆ ಹೇಳಿಕೊಡಬೇಕಿಲ್ಲ. ಆದರೆ ಅವರ ಗಮನಕ್ಕೆ ಬರದೇ ಈ ರೀತಿಯ ಪ್ರಮಾದಗಳು ಸಂಭವಿಸುತ್ತವೆ. ಸಮರ್ಥನೆ ಮಾಡಿಕೊಳ್ಳಬೇಕೆಂದರೆ ಲೋಕಸಭಾ ಚುನಾವಣೆ ಮುಂದಿದೆ. ಬಿಜೆಪಿ ಪಕ್ಷ ಸರಕಾರದ ಪ್ರತಿ ನಡೆಯನ್ನೂ ವಿರೋಧಿಸಿ ಸರಕಾರದ ವಿರುದ್ಧ ಜನರನ್ನು ಭಾವನಾತ್ಮಕವಾಗಿ ಎತ್ತಿಕಟ್ಟಲು ಸದಾ ಸಿದ್ಧವಾಗಿದೆ. ಕರ್ನಾಟಕ ಸರಕಾರ ಸದಾ ಎಚ್ಚರದಿಂದ ಇರಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತರು

ಇದನ್ನೂ ಓದಿ-ಚಂಡೀಗಢ  ಮೇಯರ್ ಚುನಾವಣೆ:ಫಲಿತಾಂಶ ಕದ್ದು ಸಿಕ್ಕಿಬಿದ್ದ ಬಿಜೆಪಿ

More articles

Latest article