Saturday, July 27, 2024

 ವೈಚಾರಿಕ ಪ್ರಜ್ಞೆ ನಶಿಸುತ್ತಿರುವ ಸಮಾಜದಲ್ಲಿ ಪ್ರಶ್ನಿಸುವುದೂ ಅಪರಾಧವಾಗಿಬಿಡುತ್ತದೆ

Most read

 

ಸುಶಿಕ್ಷಿತ ಸಮಾಜದಲ್ಲೂ ವೈಚಾರಿಕ ಪ್ರಜ್ಞೆಯು ಸಮಾಧಿಯಾಗುತ್ತಿರುವ ಹೊತ್ತಿನಲ್ಲಿ ಕೇವಲ ಶಾಲೆಗಳು ಮಾತ್ರವಲ್ಲ ಸಮಾಜದ ಎಲ್ಲ ಸ್ತರಗಳಲ್ಲೂ ಕಾಣಬೇಕಾದುದು ʼಇಲ್ಲಿ ಯಾರೂ-ಯಾವುದೂ ಪ್ರಶ್ನಾತೀತವಲ್ಲʼ ಎಂಬ ಘೋಷವಾಕ್ಯ. ಇದನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕತೆ, ಬದ್ಧತೆ ನಮ್ಮ ಆಳ್ವಿಕೆಯಲ್ಲಿ ಕಾಣಲು ಸಾಧ್ಯವೇ?- ನಾ ದಿವಾಕರ, ಚಿಂತಕರು

ಸಾಹಿತ್ಯ, ಸಂಗೀತ, ಕಲೆ ಇತ್ಯಾದಿ ಸೃಜನಶೀಲ ಸಂವಹನ ಸಾಧನಗಳಿಗೆ ಎಳ್ಳಿನಷ್ಟೂ ಅವಕಾಶ ನೀಡದ ಕನ್ನಡದ ವಿದ್ಯುನ್ಮಾನ ಮಾಧ್ಯಮ ಲೋಕ ಏಕಾಏಕಿ ಸಾಹಿತ್ಯದ ಕೆಲವು ಸಾಲುಗಳನ್ನಾದರೂ ಚರ್ಚೆಗೊಳಪಡಿಸುವ ಮೂಲಕ ಸಾರ್ಥಕತೆ ಪಡೆದಿದೆ. ಹೊಯ್ಸಳರ ಕಾಲದ ಶಿಲ್ಪಕಲೆಗೆ ಸಾರ್ವಕಾಲಿಕ ಸಾಕ್ಷಿಯಾಗಿ ನಿಂತಿರುವ ಸೋಮನಾಥಪುರದ ಚೆನ್ನಕೇಶವ ದೇವಾಲಯದ ಶಿಲ್ಪ ಸೌಂದರ್ಯಕ್ಕೆ ಮನಸೋತು ರಾಷ್ಟ್ರಕವಿ ಕುವೆಂಪು ರಚಿಸಿದ ಗೀತೆಯೊಂದರ ಸಾಲುಗಳು “ ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು,,,,,”. ಈ ಸಾಲುಗಳನ್ನೇ ಅಪಭ್ರಂಶಗೊಳಿಸಿ ಕರ್ನಾಟಕದ ಕೆಲವು ಶಾಲೆಗಳಲ್ಲಿ “ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ” ಎಂಬ ಬೋರ್ಡುಗಳನ್ನು ನೇತುಹಾಕಲಾಗಿದೆ. ಈ ಫಲಕಗಳಲ್ಲಿ “ ಧೈರ್ಯವಾಗಿ ಪ್ರಶ್ನಿಸು” ಎಂದು ಹೇಳಿರುವುದು ಸುದ್ದಿಮನೆಗಳ ಚರ್ಚೆಗಳಿಗೆ ಸರಕು ಒದಗಿಸಿದೆ. ವಿದ್ಯೆ ಕಲಿಯುವ ಮಕ್ಕಳಿಗೆ ಶಾಲೆ ಒಂದು ದೇಗುಲವೇ ಹೌದು ಆದರೆ ಯಾವ ಮಾದರಿಯ ದೇಗುಲ ?

 ಈ ಪ್ರಶ್ನೆಗೆ ಉತ್ತರ ಶೋಧಿಸದೆ ಹೋದರೆ ಕೈ ಮುಗಿಯುವ ಒಂದು ಭಾವುಕ ಪ್ರಕ್ರಿಯೆ-ಪ್ರವೃತ್ತಿ ಗೌರವ-ಶ್ರದ್ಧೆ-ಭಕ್ತಿಗಳನ್ನು ದಾಟಿ ಶರಣಾಗತ ಮನೋಭಾವದವರೆಗೂ ವಿಸ್ತರಿಸುತ್ತದೆ. ಒಂದು ಪ್ರಬುದ್ಧ ಸಮಾಜದಲ್ಲಿ ಚರ್ಚೆಗೊಳಗಾಗಬೇಕಿರುವುದು ಈ ಪ್ರಶ್ನೆ. ಆದರೆ ಈಗ ಗಂಭೀರ ಚರ್ಚೆಗೊಳಗಾಗುತ್ತಿರುವುದು ಕುವೆಂಪು ಅವರ ಗೀತೆಯ ಅಂತರ್‌ಭಾವ ಅಲ್ಲ ಅಥವಾ ಅಂತರಾರ್ಥವೂ ಅಲ್ಲ. “ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ” ಇದು ಮೂಲತಃ ಕುವೆಂಪು ಅವರ ನುಡಿಗಳಲ್ಲ. ಕುವೆಂಪು ಅವರ ಗೀತೆಯ ಸಾಲುಗಳಿಂದ ಪ್ರೇರಿತವಾಗಿ ಶಾಲೆಗಳಲ್ಲೂ ಒಂದು ಘೋಷವಾಕ್ಯವನ್ನು ಅಳವಡಿಸಲಾಗಿದೆ. ಕುವೆಂಪು ತಮ್ಮ ಈ ಕವಿತೆಯಲ್ಲಿ ಶಿಲ್ಪಕಲೆಯ ವೈಭವವನ್ನು ಎತ್ತಿಹಿಡಿಯುತ್ತಲೇ, ಒಂದು ದೇವಾಲಯದಲ್ಲಿ ಭಕ್ತಿ-ಭಾವ-ಆರಾಧನಾ ಮನೋಭಾವಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಭಾವನೆಗಳನ್ನು ಉದ್ದೀಪನಗೊಳಿಸುವ ಶಿಲ್ಪಿಯ ಕೆತ್ತನೆಯ ಸೊಬಗು ಮತ್ತು ಶಿಲ್ಪಕಲೆಯ ಜೀವಂತಿಕೆಯನ್ನು ಕಾಣಲು ಪ್ರಚೋದಿಸುತ್ತಾರೆ.

 ಆದರೆ ಈಗ ಪ್ರಚೋದಿಸಿರುವ ವಿಚಾರ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಶಾಲೆಗಳ ಬಾಗಿಲಿನಲ್ಲಿ ನೇತುಹಾಕಿದ “ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು” ಎಂಬ ಘೋಷವಾಕ್ಯ. ಸರ್ಕಾರದಿಂದ ಈ ರೀತಿಯ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸಮಾಜಕಲ್ಯಾಣ ಸಚಿವರು ಹೇಳಿದ್ದರೂ, ಕೆಲವು ಶಾಲೆಗಳಲ್ಲಿ ಇದು ಕಂಡಿರುವುದು  ವಿವಾದಕ್ಕೆ ಕಾರಣವಾಗಿದೆ. ಈಗ ಪ್ರಮಾದವನ್ನು ಸರಿಪಡಿಸಲಾಗಿದೆಯಾದರೂ,  ಮೂಲ ವಾಕ್ಯವನ್ನು ಕುವೆಂಪು ಅವರಿಗೆ ಆರೋಪಿಸುವ ಮೂಲಕ ಕೆಲವು ʼ ಕನ್ನಡಪರ ʼ ಸಂಘಟನೆಗಳೂ ಪ್ರತಿಭಟನೆ ನಡೆಸಿರುವುದು ನಮ್ಮ ಸಾರ್ವಜನಿಕ ಬೌದ್ಧಿಕ ಮಟ್ಟವನ್ನು ಎತ್ತಿತೋರಿಸುವಂತಿದೆ. ಏನೇ ಆಗಲಿ, ಇಲ್ಲಿ ಪ್ರಶ್ನೆ ಎದ್ದಿರುವುದು ಪ್ರಶ್ನಿಸುವುದನ್ನುʼ ಕುರಿತು. ಶಾಲಾ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕೋ ಬೇಡವೋ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತ.

 ಪ್ರಶ್ನಿಸುವುದು ಎಂದರೆ ಮತ್ತೊಂದು ಬದಿಯಿಂದ ಮೌಖಿಕ/ಲಿಖಿತ ಪ್ರತ್ಯುತ್ತರ ಬಯಸುವ ಜಿಜ್ಞಾಸೆಯಲ್ಲ. ಪ್ರಾಚೀನ ಭಾರತೀಯ ಇತಿಹಾಸದಿಂದ ಇತ್ತೀಚಿನವರೆಗೂ ಗಮನಿಸುತ್ತಾ ಬಂದರೂ ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ಚಿಂತಕರು, ತತ್ವಜ್ಞಾನಿಗಳು, ಮೀಮಾಂಸಕಾರರು ಸ್ಥಾಪಿತ ವ್ಯವಸ್ಥೆಯ ಅಪಸವ್ಯಗಳನ್ನು, ಸಾಮಾಜಿಕ ಅನಿಷ್ಠಗಳನ್ನು, ಸಾಂಸ್ಕೃತಿಕ ವ್ಯತ್ಯಯಗಳನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಚಾರ್ವಾಕ-ಲೋಕಾಯತರಿಂದ ಇತ್ತೀಚಿನ ಬಂಡಾಯ ಸಾಹಿತ್ಯದವರೆಗೂ ಭಾರತದ ಬೌದ್ಧಿಕ ವಲಯ ತನ್ನ ಪ್ರಶ್ನಿಸುವ ಹಕ್ಕನ್ನು ಉಳಿಸಿಕೊಂಡಿದೆ. ಸಮಕಾಲೀನ ಭಾರತದ ಸಂದರ್ಭದಲ್ಲೇ ಠಾಗೋರ್-ವಿವೇಕಾನಂದರಿಂದ ಕುವೆಂಪು-ಅಂಬೇಡ್ಕರ್‌ವರೆಗೂ ʼಎಲ್ಲವನ್ನೂ ಪ್ರಶ್ನಿಸುವ ʼ ಅಥವಾ  ʼ ಪ್ರಶ್ನಿಸದೆ ಯಾವುದನ್ನೂ ಸ್ವೀಕರಿಸದಿರುವ ʼ ಒಂದು ಬೌದ್ಧಿಕ ಚಿಂತನೆ ಕಂಡುಬರುತ್ತದೆ.  ಇಲ್ಲಿ ಪ್ರಶ್ನಿಸುವುದು ಎಂದರೆ ಪ್ರತ್ಯುತ್ತರಕಾರದಿಂದ ಉತ್ತರದಾಯಿತ್ವ ಅಪೇಕ್ಷಿಸುವ ಒಂದು ಜಿಜ್ಞಾಸೆ ಎಂದೇ ಅರ್ಥೈಸಬೇಕಿದೆ. ಟೀಕೆ-ವಿಮರ್ಶೆ ಹಾಗೂ ಆತ್ಮಸಾಕ್ಷಿಯನ್ನು ಕೆಣಕುವ ಒಂದು ಭಾವವನ್ನೂ ಪ್ರಶ್ನಿಸುವುದರಲ್ಲಿ ಕಾಣಬಹುದು.

 ಹಾಗಾಗಿಯೇ ಯಥಾಸ್ಥಿತಿವಾದಿಗಳಿಗೆ, ಸಂಪ್ರದಾಯವಾದಿಗಳಿಗೆ, ಮೂಲಭೂತವಾದಿಗಳಿಗೆ ಪ್ರಶ್ನಿಸುವ ಮನೋಭಾವವೇ ಅಪಥ್ಯವಾಗುತ್ತದೆ. ಈ ನೆಲೆಯಲ್ಲೇ “ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು” ಎಂಬ ವಾಕ್ಯವೂ ಸಹ ಆಕ್ಷೇಪಾರ್ಹವಾಗಿ ಕಾಣುತ್ತದೆ. ಶಾಲಾ ಮಕ್ಕಳಿಗೆ ಹೀಗೆ ಹೇಳುವುದರಿಂದ ಅವರಲ್ಲಿ ಉದ್ಧಟತನ ಬೆಳೆಯಬಹುದು ಎಂಬ ಆತಂಕವನ್ನು ವ್ಯಕ್ತಪಡಿಸುತ್ತಲೇ, ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಯುವುದರಿಂದ ʼಗುರುಹಿರಿಯರನ್ನು ಗೌರವಿಸುವ ʼ ಮನಸ್ಥಿತಿಗೆ ಧಕ್ಕೆ ಉಂಟಾಗಬಹುದು ಎಂಬ ಅನಗತ್ಯ ಕಾಳಜಿಯೂ ಕೇಳಿಬರುತ್ತಿದೆ.

ಈ ಕಲ್ಪಿತ ಆತಂಕಗಳ ಹಿಂದೆ ವೈಚಾರಿಕ ಪ್ರಜ್ಞೆಯನ್ನು ಶಿಥಿಲಗೊಳಿಸುವ ತಾತ್ವಿಕ ನೆಲೆಗಳನ್ನೂ ಗುರುತಿಸಬೇಕಿದೆ. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಹೆಚ್ಚಾದಷ್ಟೂ ಅವರ ಅರಿವು ವಿಸ್ತರಣೆಯಾಗುತ್ತದೆ ಎಂಬ ವೈಜ್ಞಾನಿಕ ಅಂಶವನ್ನು ಸಂಪ್ರದಾಯವಾದಿಗಳು ಎಂದಿಗೂ ಒಪ್ಪುವುದಿಲ್ಲ. ಮಕ್ಕಳಲ್ಲಿ ಶಾಲಾ ಹಂತದಿಂದಲೇ ವೈಚಾರಿಕ ಪ್ರಜ್ಞೆಯನ್ನು ಬೆಳೆಸಬೇಕಾದರೆ ಅವರಲ್ಲಿ ʼಎಲ್ಲವನ್ನೂ ಪ್ರಶ್ನಿಸುವʼ ಮನೋಭಾವ ಅತ್ಯಗತ್ಯ. ಈ ಅಭಿಪ್ರಾಯವನ್ನು ಠಾಗೋರ್‌-ವಿವೇಕಾನಂದರಲ್ಲಿ ಕಾಣುವಷ್ಟೇ ಕುವೆಂಪು- ಅಂಬೇಡ್ಕರರಲ್ಲೂ ಕಾಣಬಹುದು.

 ಆರಾಧನಾ ಮನೋಭಾವಕ್ಕೆ ಶರಣಾಗಿ ಬೌದ್ಧಿಕ ಸ್ವಂತಿಕೆ ಮತ್ತು ಸ್ವಾಯತ್ತತೆಯನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿರುವ ಭಾರತದ ಶ್ರೇಣೀಕೃತ ಸಮಾಜದಲ್ಲಿ ಇಂದಿಗೂ ಸಹ ʼಪ್ರಶ್ನಿಸುವುದು ʼ ಎಂದರೆ ʼ ಧಿಕ್ಕರಿಸುವುದುʼ  ಎಂದೇ ಅರ್ಥೈಸಲಾಗುತ್ತದೆ. ಹಾಗಾಗಿಯೇ ಸರ್ಕಾರವನ್ನು, ಜನಪ್ರತಿನಿಧಿಗಳನ್ನು, ರಾಜಕೀಯ ನೇತಾರರನ್ನು, ಅಧಿಕಾರದ ಮೇಲ್‌ ಸ್ತರದಲ್ಲಿರುವ ಆಳ್ವಿಕೆಯ ಪ್ರತಿನಿಧಿಗಳನ್ನು ʼಪ್ರಶ್ನಿಸುವುದುʼ ಸಹ ಅಪರಾಧವಾಗಿ ಕಾಣುತ್ತದೆ. ಕೆಲವೊಮ್ಮೆ ಶಿಕ್ಷಾರ್ಹ ಅಪರಾಧವೂ ಆಗಿಬಿಡುತ್ತದೆ.

ಈ ಸಾಲಿಗೆ ಇತ್ತೀಚೆಗೆ ಚಲನಚಿತ್ರದ ಹೀರೋಗಳ ಸೇರ್ಪಡೆಯೂ ಆಗಿದೆ. ಒಬ್ಬ ಚಿತ್ರನಟನ ಕಲಾಕೌಶಲ್ಯವನ್ನು ವಿಮರ್ಶಾತ್ಮಕವಾಗಿ ನೋಡಲು ಹಿಂಜರಿಯಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಏಕಾಏಕಿ ಸ್ಟಾರ್‌ಗಿರಿ ಪಡೆದು, Iconಗಳಾಗಿ ರೂಪುಗೊಳ್ಳುವ ಈ ಹೀರೋಗಳಿಗೆ ಹಲವು ಆಯಾಮಗಳ ಅಸ್ಮಿತೆ-ಅಸ್ತಿತ್ವಗಳು ಅಂಟಿಕೊಂಡಿರುತ್ತವೆ. ಈ ಸ್ಟಾರ್‌ಗಳ ಪ್ರೌಢಿಮೆ-ಕಲಾ ಪ್ರತಿಭೆಯನ್ನು ಪ್ರಶ್ನಿಸುವುದೂ ಅಪರಾಧ ಎನಿಸಿಕೊಳ್ಳುವ ಸನ್ನಿವೇಶದಲ್ಲಿ ನಾವಿದ್ದೇವೆ. ರಂಗಭೂಮಿ ಮತ್ತು ಸಾಹಿತ್ಯದ ಹೊರತಾಗಿ ಉಳಿದೆಲ್ಲ ಸಾಂಸ್ಕೃತಿಕ ಕ್ಷೇತ್ರಗಳೂ ಈ ಪ್ರಶ್ನಾತೀತತೆಯ ಚೌಕಟ್ಟಿಗೆ ಒಳಪಟ್ಟಿರುವುದು ವರ್ತಮಾನದ ದುರಂತ.

 ಈ ದೃಷ್ಟಿಯಿಂದಲೇ ಬದಲಾಗುತ್ತಿರುವ ಭಾರತದಲ್ಲಿ ಪ್ರಶ್ನಿಸುವುದೇ ಮಹಾಪರಾಧವಾಗುತ್ತಿರುವ ಸನ್ನಿವೇಶವನ್ನು ಪರಾಮರ್ಶಿಸಬೇಕಿದೆ. ನವ ಉದಾರವಾದಿ ಕಾರ್ಪೋರೇಟ್‌ ಮರ್ಜಿಗೆ ಒಳಗಾಗಿ ತಮ್ಮ ಬೌದ್ಧಿಕ ಸ್ವಾಯತ್ತತೆ-ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿರುವ ಬಹುತೇಕ ದೃಶ್ಯ ಮಾಧ್ಯಮಗಳು ʼಪ್ರಶ್ನಿಸುವʼ ಮನಸ್ಥಿತಿಯನ್ನೇ ಕಳೆದುಕೊಂಡಿರುವ ಹೊತ್ತಿನಲ್ಲಿ, ಸಾರ್ವಜನಿಕ ವಲಯದಲ್ಲೂ ಸಹ ಪ್ರಶ್ನಾತೀತರ ಸಂಖ್ಯೆ ಹೆಚ್ಚಾಗುತ್ತಿದೆ. ಪೌರಾಣಿಕ-ಚಾರಿತ್ರಿಕ ವ್ಯಕ್ತಿಗಳಷ್ಟೇ ಅಲ್ಲದೆ ಸಮಕಾಲೀನ ಸಮಾಜದ ರಾಜಕೀಯ ವ್ಯಕ್ತಿಗಳೂ ಪ್ರಶ್ನಾತೀತರಾಗುತ್ತಿದ್ದಾರೆ. ಟೀಕೆ-ವಿಮರ್ಶೆಗಳನ್ನೂ ಸಹಿಸಲಾರದಷ್ಟು ಮಟ್ಟಿಗೆ ವ್ಯಕ್ತಿ ಆರಾಧನೆಯನ್ನು ಉಚ್ಛ್ರಾಯ ಮಟ್ಟಕ್ಕೆ ಕೊಂಡೊಯ್ದಿರುವ ಸಮಾಜದಲ್ಲಿ ವ್ಯವಸ್ಥೆಯ ಸಾಮಾಜಿಕ-ಸಾಂಸ್ಕೃತಿಕ ಅನಿಷ್ಠ-ಅಪಸವ್ಯಗಳನ್ನು ಪ್ರಶ್ನಿಸುವುದೂ ಘೋರ ಅಪರಾಧ ಎಂದೇ ಪರಿಗಣಿಸಲ್ಪಡುತ್ತಿದೆ. ಹಾಗಾಗಿಯೇ ಶಾಲಾ ಮಕ್ಕಳಿಗೆ ʼ ಧೈರ್ಯವಾಗಿ ಪ್ರಶ್ನಿಸಿ ʼ ಎಂದು ಹೇಳುವುದು ಸಹ ಘೋರ ಅಪರಾಧದಂತೆ ಕಾಣುತ್ತದೆ.

 ಆದರೆ ಒಂದು ಸಮಾಜವು ಭವಿಷ್ಯದತ್ತ ಸಾಗುವ ಹಾದಿಯಲ್ಲಿ ಯಥಾಸ್ಥಿತಿಯು ಪ್ರಶ್ನಿಸಲ್ಪಡದೆ ಹೋದರೆ ತಾನು ನಡೆದ ಹಾದಿಯೇ ಅಂತಿಮ ಸತ್ಯ ಎನ್ನುವ ಅಹಮಿಕೆ, ದಾರ್ಷ್ಟ್ಯ ಬೇರೂರಿಬಿಡುತ್ತದೆ. ʼಪ್ರಶ್ನಿಸುವುದುʼ ಆತ್ಮವಿಮರ್ಶೆಗೆ ತೆರೆದುಕೊಳ್ಳಲು ಅನುಕೂಲವಾಗುವ ಒಂದು ಬೌದ್ಧಿಕ ಪ್ರಕ್ರಿಯೆ ಎಂಬ ಕನಿಷ್ಠ ವ್ಯವಧಾನವನ್ನೂ ನಮ್ಮ ಕಲಿತ ಸಮಾಜ ಕಳೆದುಕೊಂಡಿದೆ. ಹಾಗಾಗಿಯೇ “ ಶಾಲಾ ಮಕ್ಕಳಿಗೆ ಪ್ರಶ್ನಿಸಲು ಪ್ರಚೋದಿಸುವುದು ” ಸಾಮಾಜಿಕ ಅಪರಾಧದಂತೆ ಕಾಣುತ್ತದೆ. ಆದರೆ ಅತಿ ಹೆಚ್ಚು , ಅತಿ ವೈವಿಧ್ಯಮಯ, ಬಹು ಆಯಾಮಗಳ ಪ್ರಶ್ನೆಗಳು ಮೂಡುವುದೇ ಮಕ್ಕಳ ಮನಸ್ಸುಗಳಲ್ಲಿ ಅಲ್ಲವೇ ? ಮಕ್ಕಳಿಗೆ ಧೈರ್ಯವಾಗಿ ಪ್ರಶ್ನಿಸಿ ಎಂದು ಹೇಳುವುದರ ಮೂಲಕ ಹಿರಿಯ ತಲೆಮಾರು ತನ್ನ ಅಂತರಾತ್ಮದ ಶೋಧನೆಗೆ ತಂತಾನೇ ತೆರೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಎಳೆಯ ಮಕ್ಕಳಲ್ಲಿ ವೈಚಾರಿಕತೆಯನ್ನು ರೂಢಿಸುವ ನಿಟ್ಟಿನಲ್ಲಿ “ ಎಲ್ಲವನ್ನೂ ಪ್ರಶ್ನಿಸುವ ” ಮನೋಭಾವ ಪ್ರಮುಖ ಪಾತ್ರ ವಹಿಸುತ್ತದೆ ಅಲ್ಲವೇ ?

 ಸುಶಿಕ್ಷಿತ ಸಮಾಜದಲ್ಲೂ ವೈಚಾರಿಕ ಪ್ರಜ್ಞೆಯು ಸಮಾಧಿಯಾಗುತ್ತಿರುವ ಹೊತ್ತಿನಲ್ಲಿ ಕೇವಲ ಶಾಲೆಗಳು ಮಾತ್ರವಲ್ಲ ಸಮಾಜದ ಎಲ್ಲ ಸ್ತರಗಳಲ್ಲೂ ಕಾಣಬೇಕಾದುದು ʼಇಲ್ಲಿ ಯಾರೂ-ಯಾವುದೂ ಪ್ರಶ್ನಾತೀತವಲ್ಲʼ ಎಂಬ ಘೋಷವಾಕ್ಯ. ಇದನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕತೆ, ಬದ್ಧತೆ ನಮ್ಮ ಆಳ್ವಿಕೆಯಲ್ಲಿ ಕಾಣಲು ಸಾಧ್ಯವೇ ?.

ನಾ. ದಿವಾಕರ, ಚಿಂತಕರು

More articles

Latest article