ಸನ್ಮಾನ್ಯ ಮೋದೀಜಿಯವರೇ,
ಹೀಗೆ ಇದ್ದಕ್ಕಿದ್ದಂಗೆ ನೀವು ಮಾತು ಬದಲಾಯಿಸಿದರೆ ಹೇಗೆ?. ಮತಾಂಧತೆಯ ಹಾದಿಯಲ್ಲಿ ಸಾಗಿದ ನೀವು ಯು ಟರ್ನ್ ಹೊಡೆದರೆ ಜೀರ್ಣಿಸಿಕೊಳ್ಳುವುದೇ ಬಲು ದೊಡ್ಡ ಬೇಗೆ. ನೀವು ಹಾಗೂ ನಿಮ್ಮ ಸಂಘ ನಿರಂತರವಾಗಿ ಬಿತ್ತಿದ ಮುಸ್ಲಿಂ ದ್ವೇಷವನ್ನು ನಂಬಿಕೊಂಡು, ತನುಮನದೊಳಗೆ ಧರ್ಮದ್ವೇಷವನ್ನೇ ತುಂಬಿಕೊಂಡು ದಿನನಿತ್ಯ ಸಾಬರ ವಿರುದ್ಧ ವಿಷ ಕಾರುತ್ತಲೇ ಇರುವ ಹಿಂದೂ ಭಕ್ತರ ಗತಿ ಏನು? ನಂಬಿಸಿ ಕತ್ತು ಕುಯ್ಯುವುದು ಅಂದ್ರೆ ಇದೇನಾ? ಮಂದಿ ಮಕ್ಕಳಲ್ಲಿ ಭ್ರಮೆ ಹುಟ್ಟಿಸಿ ಬಳಸಿ ಬಿಸಾಕುವುದು ಅಂದ್ರೆ ಹೀಗೇನಾ?
‘ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಮ್ಮ ಆಸ್ತಿಯ ಜೊತೆ ಹಿಂದೂ ಮಹಿಳೆಯರ ಮಾಂಗಲ್ಯವನ್ನೂ ಕಿತ್ತುಕೊಂಡು ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತಾರೆ’ ಎಂದು ಪ್ರಧಾನಿಗಳಾದ ನೀವೇ ಹೇಳಿದಾಗ ನಿಜ ಇದ್ದರೂ ಇರಬಹುದೆಂದು ನಿಮ್ಮ ಅಂಧಭಕ್ತರು ಆಕ್ರೋಶ ಗೊಂಡಿದ್ದರು. ಆದರೆ ಈಗ ಹೆಚ್ಚು ಮಕ್ಕಳಿದ್ದವರು ಅಂದ್ರೆ ಬಡವರೇ ಹೊರತು ಮುಸ್ಲಿಮರಲ್ಲ ಅಂತಾ ನೀವೇ ಮಾತು ಬದಲಾಯಿಸಿದರೆ ನಿಮ್ಮನ್ನು ನಂಬುವುದಾದರೂ ಹೇಗೆ? ಕಾಂಗ್ರೆಸ್ ಸರಕಾರ ಬಂದು ಬಡವರು ದಲಿತರಿಗೆ ಸಂಪನ್ಮೂಲಗಳನ್ನು ಹಂಚಿದರೆ ತಪ್ಪೇನಿದೆ. ನಿಮ್ಮ ಪ್ರಕಾರ ಬಡವರೂ ಹಿಂದೂಗಳಲ್ಲವೇ? ನೀವು ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುವುದಾದರೆ ಮಾಡಲಿ ಬಿಡಿ.
ಅಲ್ಲಾ ಮೋದೀಜಿ, ನೀವು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮ್ ಮೀಸಲಾತಿಯನ್ನು ತೆಗೆಯುವುದಾಗಿ ಹೇಳಿದ್ದು ನೀವೇ ಅಲ್ಲವೇ? ನಿಮ್ಮ ಬಂಟ ಅಮಿತ್ ಶಾ ಸಹ ಅದನ್ನೇ ಹೇಳುತ್ತಾ ಹಿಂದೂ ಮತಗಳನ್ನು ಬಾಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರಲ್ಲವೇ? ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆಂಬ ಸುಳ್ಳು ಹೇಳಿದವರು ನೀವೇ ತಾನೆ? ‘ಹಿಂದೂಗಳ ಸಂಪತ್ತನ್ನು ಹೆಚ್ಚು ಮಕ್ಕಳಿರುವವರಿಗೆ, ನುಸುಳುಕೋರರಿಗೆ ಕಾಂಗ್ರೆಸ್ಸಿನವರು ಹಂಚುತ್ತಾರೆ’ ಎಂದು ಹೇಳಿ ಮುಸ್ಲಿಂ ವಿರೋಧಿ ಭಾಷಣ ಮಾಡಿದವರೂ ನೀವೇ ಹೌದಲ್ವೇ? “ಎಸ್ಸಿ ಎಸ್ಟಿ ಓಬಿಸಿ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಬಾಬ್ರಿ ಬೀಗ ಬೀಳುತ್ತದೆ, ಕಾಂಗ್ರೆಸ್ಸಿಗರು ಹಿಂದೂ ದೊರೆಗಳನ್ನು ನಿಂದಿಸುತ್ತಾರೆಯೇ ಹೊರತು ನವಾಬರನ್ನು ಟೀಕಿಸುವುದಿಲ್ಲ, ಭಾರತದ ಕ್ರಿಕೆಟ್ ತಂಡದಲ್ಲಿ ಬರೀ ಮುಸ್ಲಿಮರೇ ಇರುತ್ತಾರೆ” ಎಂದೆಲ್ಲಾ ಹೇಳಿಕೆ ಕೊಡುವ ಮೂಲಕ ಮುಸ್ಲಿಂ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರ ನಿಮ್ಮದೇ ಅಲ್ಲವೇ ಮೋದೀಜಿ. ಇವೆಲ್ಲವೂ ಸುಳ್ಳು ಎಂದು ನಿಮಗೂ ಗೊತ್ತು, ದೇಶದ ಪ್ರಜ್ಞಾವಂತ ಜನರಿಗೂ ಗೊತ್ತು. ನಿಮ್ಮದೇ ಪಕ್ಷದ ನಾಯಕರುಗಳಿಗೂ ಗೊತ್ತು. ಆದರೆ ಮುಸ್ಲಿಂ ವಿರೋಧಿ ಮಾತುಗಳು ಎನ್ನುವ ಕಾರಣಕ್ಕೆ ನಿಮ್ಮ ಅಂಧಾಭಿಮಾನಿಗಳಿಗೆ ನೀವು ಹೇಳಿದ್ದೆಲ್ಲವೂ ಪರಮ ಸತ್ಯವೆಂದು ಎನ್ನಿಸಿದ್ದಲ್ಲಿ ಅಚ್ಚರಿ ಏನಿಲ್ಲ.
ಆದರೆ ಈಗ ಅಂಧಭಕ್ತರ ಆರಾಧ್ಯ ದೈವವಾದ ನೀವು “ಹಿಂದು ಮುಸ್ಲಿಂ ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ” ಎಂದು ಹೇಳುವುದನ್ನು ಕೇಳಿ ಭಕ್ತರು ತಲ್ಲಣ ಗೊಂಡಿದ್ದಾರೆ. “ನಿಮ್ಮ ಮೋದಿಗೆ ಎಷ್ಟು ನಾಲಿಗೆ, ಎಷ್ಟು ಬಣ್ಣ ಬದಲಾಯಿಸುತ್ತಾರೆ?, ಸಮಯಕ್ಕೊಂದು ಸುಳ್ಳು ಯಾಕೆ ಹೇಳುತ್ತಾರೆ?” ಎಂದೆಲ್ಲಾ ಮೋದಿ ವಿರೋಧಿಗಳು ಕಿಚಾಯಿಸುತ್ತಿದ್ದಾರೆ. ಅವರಿಗೆಲ್ಲಾ ಏನಂತಾ ಉತ್ತರ ಕೊಡೋದು ಅನ್ನೋದೆ ಕೇಸರಿಗಳಿಗೆ ಬಲು ದೊಡ್ಡ ಸಮಸ್ಯೆಯಾಗಿದೆ. ನಿನ್ನೆಯವರೆಗೂ ಮುಸ್ಲಿಮರ ಮೇಲೆ ನೀವು ಕೆಂಡ ಕಾರಿದಿರಿ. ನಿಮ್ಮ ಅನುಯಾಯಿಗಳು ಆ ಕೆಂಡದುಂಡೆಗಳನ್ನು ಎದೆಯಲ್ಲಿಟ್ಟುಕೊಂಡು ಮುಸಲ್ಮಾನರ ಮೇಲೆ ಎರಚುತ್ತಾ ಹೋದರು. ಆದರೆ ಈಗ ಭಕ್ತರೆದೆಯಲ್ಲಿ ಉರಿಯುತ್ತಿದ್ದ ಇಸ್ಲಾಂ ವಿರೋಧಿ ಉರಿಬೆಂಕಿಗೆ ಹೀಗೆ ಇದ್ದಕ್ಕಿದ್ದಂತೆ ತಣ್ಣೀರು ಎರಚಿದರೆ ಹೇಗೆ ಮೋದೀಜಿ? ನಿಮ್ಮ ಹಿಂದೂ ಮುಸ್ಲಿಂ ಧರ್ಮವಿಭಜನೆಯ ರಾಜಕೀಯವೇ ನಿಮ್ಮನ್ನು ಪ್ರಧಾನಿಯನ್ನಾಗಿಸಿದ್ದು. ಆದರೆ “ಹಾಗೆ ಮಾಡಿದರೆ ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ” ಎನ್ನುವ ಕಟುಸತ್ಯವನ್ನು ಕೊನೆಗೂ ಒಪ್ಪಿಕೊಂಡ ನೀವು ಸಾರ್ವಜನಿಕ ಬದುಕಿಗೆ ಅಯೋಗ್ಯ ಎಂದು ಘೋಷಿಸಿ ಕೊಂಡಿದ್ದು ಮೆಚ್ಚಬೇಕಾದದ್ದೇ. ಆದರೆ ನಿಮ್ಮ ಕೋಮುದ್ವೇಷ ಸಿದ್ಧಾಂತವನ್ನೇ ನಂಬಿದ್ದ ಅನುಯಾಯಿಗಳ ಗತಿಯೇನು? ನಿಮ್ಮ ಮೇಲೆ ಅತೀವ ವಿಶ್ವಾಸ ಇಟ್ಟುಕೊಂಡ ಮಡಿಲ ಮಾಧ್ಯಮಗಳ ಸ್ಥಿತಿ ಏನು? ನಿಮ್ಮ ಸರ್ವಾಧಿಕಾರಿ ಆಡಳಿತದಲ್ಲಿ ದೇಶದ ಸಂಪನ್ಮೂಲಗಳನ್ನು ಕಬಳಿಸಿ ಕೊಬ್ಬಿ ನಿಂತ ಆದಾನಿ ಅಂಬಾನಿಗಳಂತಹ ಕಾರ್ಪೋರೇಟ್ ಕುಳಗಳ ಪರಿಸ್ಥಿತಿ ಏನು?
ಮೋದೀಜಿ, ನಿಮ್ಮ ಕೋಮುದ್ವೇಷದ ಸಿದ್ಧಾಂತಕ್ಕೆ ಬದ್ಧರಾಗಿದ್ದ ಅದೆಷ್ಟೋ ಕೇಸರಿ ಕಾರ್ಯಕರ್ತರು ಕೋಮುಗಲಭೆಗಳನ್ನು ಹುಟ್ಟುಹಾಕಿದ್ದಾರೆ, ಗಲಾಟೆ ಗದ್ದಲ ದಂಗೆಗಳನ್ನು ಮಾಡಿದ್ದಾರೆ. ಹಿಜಾಬ್ ಹಲಾಲ್ ಆಜಾನ್ ಅಂತಾ ಸಮಯ ಸಿಕ್ಕಾಗಲೆಲ್ಲಾ ಗಲಭೆ ಸೃಷ್ಟಿಸಿ ಕಾನೂನಿನ ಕುಣಿಕೆಗೆ ಸಿಕ್ಕು ಒದ್ದಾಡಿದವರಿದ್ದಾರೆ. ಕೊಲೆ ಮಾಡಿದ್ದಾರೆ, ಕೊಲೆಯಾಗಿದ್ದಾರೆ. ಅನೇಕರು ಕೇಸುಗಳನ್ನು ಹಾಕಿಸಿಕೊಂಡು ಪೊಲೀಸ್ ವಿಚಾರಣೆ, ಕೋರ್ಟು ಕೇಸು ಅಂತಾ ಅಲೆದಾಡುತ್ತಲೇ ಇದ್ದಾರೆ. ಅದೆಷ್ಟೋ ಹಿಂದುತ್ವವಾದಿ ಕಾರ್ಯಕರ್ತರ ಮನೆಗಳೇ ಒಡೆದಿವೆ. ನಿಮ್ಮ ಹಿಂದುತ್ವದ ಮೋಡಿಗೊಳಗಾಗಿ ಬಂಧುತ್ವವನ್ನು ಮರೆತ ಲಕ್ಷಾಂತರ ಹಿಂದೂ ಯುವಕರು ಮುಸ್ಲಿಂ ದ್ವೇಷವನ್ನು ಉಸಿರಾಡುತ್ತಾ ತಮ್ಮ ಬದುಕನ್ನೇ ಬಲಿಯಾಗಿಸಿಕೊಂಡಿದ್ದಾರೆ. ವಿಶ್ವಗುರುವನ್ನೇ ತಮ್ಮ ಆದರ್ಶ ನಾಯಕ ಎಂದುಕೊಂಡಿದ್ದಾರೆ. ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೀರಿ, ಎಲ್ಲಾ ಮುಸ್ಲಿಮರನ್ನೂ ಪಾಕಿಸ್ತಾನಕ್ಕೆ ಗಡಿಪಾರು ಮಾಡುತ್ತೀರಿ ಎಂದು ಕಾಯುತ್ತಿದ್ದಾರೆ.
ಆದರೆ ಮೋದೀಜಿ.. ಈಗ ನೀವು ವಾರಣಾಸಿಯಲ್ಲಿ ಸುದ್ದಿ ಮಾಧ್ಯಮದ ಮುಂದೆ ಬಂದು “ಹಿಂದೂ ಮುಸ್ಲಿಂ ಅಂತಾ ರಾಜಕೀಯ ಮಾಡೋದೇ ಇಲ್ಲಾ. ಆಸ್ತಿ ಹಂಚಿಕೆ ಹೇಳಿಕೆ ನೀಡುವಾಗ ಮುಸ್ಲಿಂ ಪದ ಬಳಸಿಲ್ಲ, ಹಿಂದು ಮುಸ್ಲಿಂ ಬೇಧ ಮಾಡೋದಿಲ್ಲಾ, ಇದು ನನ್ನ ಸಂಕಲ್ಪ” ಎಂದು ಹೇಳುವ ಮೂಲಕ ನಿಮ್ಮ ಕೋಟ್ಯಾಂತರ ಅಂಧಾಭಿಮಾನಿಗಳಿಗೆ ಶಾಕ್ ಕೊಟ್ಟಿದ್ದೀರಿ. “ನನ್ನ ಅನೇಕ ಸ್ನೇಹಿತರು ಮುಸ್ಲಿಮರು, ಈದ್ ದಿನಗಳಲ್ಲಿ ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ, ಮುಸ್ಲಿಂ ಕುಟುಂಬಗಳಿಂದ ಊಟ ಬರುತ್ತಿತ್ತು” ಎಂದು ಹೇಳಿ ಮುಸ್ಲಿಂ ವಿರೋಧಿ ಹಿಂದುತ್ವವಾದಿ ಕಾರ್ಯಕರ್ತರಿಗೆ ಸಂಕಟ ಸೃಷ್ಟಿಸಿದ್ದೀರಿ.
ಇದನ್ನೂ ಓದಿ- ಪುರಕಾಯಸ್ಥರ ಬಿಡುಗಡೆಗೆ ಸುಪ್ರೀಂ ಆದೇಶ; ಮೋದಿ ಮುಖವಾಡದ ನಾಶ
ಇಷ್ಟೆಲ್ಲಾ ನಿಮ್ಮ ಬದಲಾದ ಹೇಳಿಕೆಗಳನ್ನು ಕೇಳಿದ ನಂತರವೂ ಇನ್ನೂ ನಿಮ್ಮನ್ನು ನಂಬುವವರು ಇದ್ದಾರೆ ಎಂದರೆ ಅವರಿಗೆ ಮೆದುಳು ಇರುವುದೇ ಅನುಮಾನ. ಅನೇಕರ ಮೆದುಳನ್ನೇ ನೀವು ಹಾಗೂ ನಿಮ್ಮ ಸಂಘಪರಿವಾರ ತೊಳೆದು ಕೋಮುದ್ವೇಷವನ್ನು ತುಂಬಿಯಾಗಿದೆ. ಈಗ ನೀವು ಅದೆಷ್ಟೇ ಕೋಮು ಸೌಹಾರ್ದತೆಯ ಬಗ್ಗೆ ಓಟಿನ ಕಾರಣಕ್ಕೆ ಮಾತಾಡಿದರೂ ಮೆದುಳಿಲ್ಲದ ಭಕ್ತರ ಮನದೊಳಗಿನ ಮುಸ್ಲಿಂ ದ್ವೇಷವನ್ನು ಕಿತ್ತೆಸೆಯಲಂತೂ ಸಾಧ್ಯವಿಲ್ಲ. ಅಗತ್ಯಬಿದ್ದರೆ ಈ ರೀತಿ ದ್ವಂದ್ವ ಹೇಳಿಕೆ ಕೊಡುತ್ತಿರುವ ನಿಮ್ಮನ್ನೇ ಬೇಕಾದರೆ ಅದ್ವಾನಿಯವರಿಗೆ ಮಾಡಿದಂತೆ ಆರೆಸ್ಸೆಸ್ ಸಂಘ ಕಿತ್ತೆಸೆಯಬಹುದು. ಇಲ್ಲವೇ ನೀವೇ ಹೇಳಿದಂತೆ ಸಾರ್ವಜನಿಕವಾಗಿ ನೀವು ಯೋಗ್ಯರಲ್ಲ ಎಂದು ನಿರ್ಧರಿಸಿದ ಭಾರತದ ಜನತೆ ನಿಮ್ಮನ್ನು ಈ ಚುನಾವಣೆಯಲ್ಲಿ ಸೋಲಿಸಿ ನಿರ್ಗಮನದ ದ್ವಾರ ತೋರುವುದರಲ್ಲಿ ಅನುಮಾನವೂ ಇಲ್ಲ ಹಾಗೂ ಇನ್ನೊಬ್ಬ ಮೋದಿಯನ್ನೋ ಯೋಗಿಯನ್ನೋ ಗುರುತಿಸಿ ಕೋಮುದ್ವೇಷ ರಾಜಕಾರಣವನ್ನು ಸಂಘ ಮುಂದುವರೆಸುವುದರಲ್ಲಿ ಸಂದೇಹವೇ ಇಲ್ಲಾ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ಹುಚ್ಚು ದೊರೆಯ ಹತಾಶ ಮುಖಗಳು