ಮಧ್ಯಪ್ರದೇಶ : ದೀಪಾವಳಿ ಹಬ್ಬದ ಬಳಿಕ ಮಧ್ಯಪ್ರದೇಶದಲ್ಲಿ ಸಂಭವಿಸಿದ ಸರಣಿ ಅಗ್ನಿ ಅವಘಡಗಳಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಸಿಯೋನಿ ಮತ್ತು ಕಟ್ನಿ ಜಿಲ್ಲೆಗಳಲ್ಲಿ ತಲಾ ಆರು ಮಂದಿ ಮೃತಪಟ್ಟಿದ್ದರೆ, ಉಜ್ಜಯಿನಿಯಲ್ಲಿ ಹೊಗೆ ಉಸಿರಾಡಿ 107 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಸಿಯೋನಿಯಲ್ಲಿ ಆರು ಮಂದಿ ಸಾವು
ಸಿಯೋನಿ ಜಿಲ್ಲೆಯ ಛಪಾರಾ ಪಟ್ಟಣದ ಮಹಾವೀರ್ ವಾರ್ಡ್ನ ಜೈನ ಮಂದಿರದ ಸಮೀಪವಿರುವ ಚಿನ್ನಾಭರಣ ವ್ಯಾಪಾರಿ ಕುಂದನ್ ಲಾಲ್ ಸೋನಿ ಅವರ ಮೂರು ಅಂತಸ್ತಿನ ಮನೆಯಲ್ಲಿ ಸೋಮವಾರ ಬೆಳಗಿನ ಜಾವ 4 ರಿಂದ 4.30ರ ನಡುವೆ ಬೆಂಕಿ ಕಾಣಿಸಿಕೊಂಡಿದೆ.
ಘಟನೆ ವೇಳೆ ಮನೆಯಲ್ಲಿ ಹತ್ತು ಮಂದಿ ಇದ್ದರು. ಅವರಲ್ಲಿ ಆರು ಮಂದಿ ಮೃತಪಟ್ಟಿದ್ದು, ಉಳಿದ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಸ್ಥಳದಲ್ಲಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ಅಪೂರ್ವ ಭಲಾವಿ ತಿಳಿಸಿದ್ದಾರೆ.
ಮೃತರನ್ನು ಕುಂದನ್ ಲಾಲ್ ಸೋನಿ (75), ಅವರ ಪತ್ನಿ ರಾಜಕುಮಾರಿ ಸೋನಿ (65), ರಿತು ಸೋನಿ (42), ಸ್ಮೃತಿ ಸೋನಿ (40), ಸೂರ್ಯ ಸೋನಿ (45) ಮತ್ತು ಆದಿತ್ಯ ಸೋನಿ (16) ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಅಪ್ರಾಪ್ತ ವಯಸ್ಕ ಸೇರಿದ್ದಾರೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಕಟ್ನಿಯಲ್ಲಿ ಆರು ಮಂದಿ ಸಜೀವ ದಹನ
ಕಟ್ನಿ ಜಿಲ್ಲೆಯ ಬರ್ಹಿ ಪಟ್ಟಣದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿದ್ದ ಪಾತ್ರೆ ಅಂಗಡಿಯಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.
ಅಂಗಡಿ ಮಾಲೀಕ ಪುರಣ್ ಅಗರ್ವಾಲ್ (77), ಅವರ ಪತ್ನಿ ಚಂದ್ರಕಲಾ (74), ಸೊಸೆ ಪೂನಂ, ಮೊಮ್ಮಕ್ಕಳಾದ ಆರ್ಯ (14), ಅನ್ವಿ (6) ಹಾಗೂ ಎರಡು ತಿಂಗಳ ಮಗು ಮೃತಪಟ್ಟಿದ್ದಾರೆ.
ತಾಯಿ ಪೂನಂ ಅವರ ತೋಳಲ್ಲಿದ್ದ ಎರಡು ತಿಂಗಳ ಮಗು ಕೂಡ ಬೆಂಕಿ ಅವಘಡದಲ್ಲಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಜ್ಜಯಿನಿಯಲ್ಲಿ ಹೊಗೆ ಸೇವಿಸಿ 107 ವರ್ಷದ ವೃದ್ಧ ಸಾವು
ಉಜ್ಜಯಿನಿಯ ನಾಗ್ಝಿರಿ ಪ್ರದೇಶದಲ್ಲಿ ದೀಪಾವಳಿ ರಾತ್ರಿ ಸುಮಾರು 9 ಗಂಟೆಗೆ ಎರಡು ಅಂತಸ್ತಿನ ಕಟ್ಟಡದ ಕೆಳಭಾಗದಲ್ಲಿದ್ದ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಗಳಲ್ಲಿ ಹಾರ್ಡ್ವೇರ್, ಎಲೆಕ್ಟ್ರಾನಿಕ್ ವಸ್ತುಗಳು, ಆಯಿಲ್ ಪೇಂಟ್ ಸೇರಿದಂತೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಮಗ್ರಿಗಳಿದ್ದವು.
ಮೇಲಿನ ಮನೆಯಲ್ಲಿ ಕುಟುಂಬದ ಹತ್ತು ಮಂದಿ ಸಿಲುಕಿಕೊಂಡಿದ್ದರು. ಸ್ಥಳೀಯ ವ್ಯಾಪಾರಿಗಳು, ನಿವಾಸಿಗಳು, ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಹತ್ತು ಮಂದಿಯನ್ನೂ ಕೆಳಕ್ಕೆ ಕರೆತಂದಿದ್ದಾರೆ. ಆದರೆ 107 ವರ್ಷದ ಮೋಹನ್ಲಾಲ್ ಎಂಬ ವೃದ್ಧರು ಹೊಗೆಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದರು.
ಅವರನ್ನು ಸರ್ಕಾರಿ ಚರಕ್ ಭವನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೊಗೆ ಉಸಿರಾಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆಯಲ್ಲಿ ಕುಟುಂಬದ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ರಾತ್ರಿ ಸಂಭವಿಸಿದ ಈ ಮೂರು ಅಗ್ನಿ ಅವಘಡಗಳು ಮಧ್ಯಪ್ರದೇಶದಲ್ಲಿ ತೀವ್ರ ಆತಂಕ ಮತ್ತು ಶೋಕದ ವಾತಾವರಣ ಸೃಷ್ಟಿಸಿವೆ.

