ಬೆಂಗಳೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು, ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ ‘ಆಗ್ರಹ ಅಭಿಯಾನ’ ಮೊದಲ ದಿನವನ್ನು ಯಶಸ್ವಿಯಾಗಿ ಪೂರೈಸಿದೆ.
ಅಭಿಯಾನದ ಮೊದಲ ದಿನವಾದ ಇಂದು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕರವೇ ಮುಖಂಡರ ಹತ್ತಕ್ಕೂ ಹೆಚ್ಚು ತಂಡಗಳು ಕಾರ್ಯಾಚರಣೆ ನಡೆಸಿ, 100ಕ್ಕೂ ಹೆಚ್ಚು ಐಟಿ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿವೆ. ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳಿಗೆ ಆಗ್ರಹ ಪತ್ರಗಳನ್ನು ಸಲ್ಲಿಸಿ, ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಮನವಿ ಮಾಡಿವೆ.
ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಕರವೇ ತಂಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಭರವಸೆಗಳು ದೊರೆತಿವೆ ಎಂದು ಕರವೇ ತಿಳಿಸಿದೆ.
ಕನ್ನಡಿಗರ ಉದ್ಯೋಗ ಹಕ್ಕುಗಳಿಗಾಗಿ ಅಭಿಯಾನ
ಕರ್ನಾಟಕದ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ–ಬಿಟಿ ಸೇರಿದಂತೆ ಎಲ್ಲ ರೀತಿಯ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಸಮರ್ಪಕ ಉದ್ಯೋಗಾವಕಾಶಗಳು ದೊರೆಯುತ್ತಿವೆಯೇ ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿದೆ. ಅರ್ಹತೆ ಮತ್ತು ಸಾಮರ್ಥ್ಯ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ನಿರಾಕರಿಸಲ್ಪಡುತ್ತಿವೆ, ನೇಮಕಾತಿಯಲ್ಲಿ ತಾರತಮ್ಯ ನಡೆಯುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಕನ್ನಡಿಗ ಐಟಿ ಉದ್ಯೋಗಿಗಳೇ ತಮ್ಮ ಅಳಲನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಎತ್ತಿತೋರಿಸಿದೆ. ಕರ್ನಾಟಕದ ಯುವಜನರು ಪ್ರತಿಭೆ, ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಸಾಮರ್ಥ್ಯದಲ್ಲಿ ಯಾರಿಗೂ ಕಡಿಮೆಯಿಲ್ಲ. ಆದರೂ ಸ್ಥಳೀಯ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕರವೇ ಈ ಅಭಿಯಾನವನ್ನು ಆರಂಭಿಸಿದೆ.
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಲಾಗುತ್ತಿದೆ, ನೇಮಕಾತಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತಾರತಮ್ಯವಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಪ್ರತಿಭಟನೆಯಲ್ಲ, ಮಾಹಿತಿ ಸಂಗ್ರಹದ ಅಭಿಯಾನ
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ‘ಆಗ್ರಹ ಅಭಿಯಾನ’ ಪ್ರತಿಭಟನೆಯಲ್ಲ, ಬದಲಿಗೆ ಖಾಸಗಿ ಸಂಸ್ಥೆಗಳ ಉದ್ಯೋಗ ನೇಮಕಾತಿ ಪ್ರಕ್ರಿಯೆ ಮತ್ತು ಕನ್ನಡಿಗರಿಗೆ ದೊರೆಯುತ್ತಿರುವ ಅವಕಾಶಗಳ ಕುರಿತು ಮಾಹಿತಿ ಸಂಗ್ರಹಿಸುವ ಪ್ರಯತ್ನ ಎಂದು ಸ್ಪಷ್ಟಪಡಿಸಿದ್ದಾರೆ.
“ನಮ್ಮ ಮುಖಂಡರು ಎಲ್ಲ ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಗೊಂದಲ ಸೃಷ್ಟಿಸುವ ಅಥವಾ ನೈತಿಕ ಪೊಲೀಸ್ಗಿರಿ ಮಾಡುವ ಚಟುವಟಿಕೆಯಲ್ಲ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಉದ್ಯೋಗಾವಕಾಶಗಳ ಸಿಂಹಪಾಲನ್ನು ಕನ್ನಡಿಗರಿಗೇ ನೀಡಬೇಕು ಎಂಬುದು ನಮ್ಮ ಆಗ್ರಹ. ಈ ಸಂಸ್ಥೆಗಳ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಕರವೇ ಐಟಿ–ಬಿಟಿ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳ ವಿರುದ್ಧ ಪೂರ್ವಾಗ್ರಹ ಹೊಂದಿಲ್ಲ. ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬ ನಿಲುವನ್ನು ಸಂಸ್ಥೆಗಳೂ ತಾತ್ವಿಕವಾಗಿ ಒಪ್ಪುತ್ತವೆ ಎಂಬ ವಿಶ್ವಾಸವಿದೆ ಎಂದು ನಾರಾಯಣಗೌಡ ಹೇಳಿದ್ದಾರೆ.
ಆದರೆ, ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೆಂಬಂತೆ ಮಾತನಾಡುವ ಕೆಲವರು ಕನ್ನಡಿಗರ ಉದ್ಯೋಗ ಹಕ್ಕುಗಳ ವಿರುದ್ಧ ಮಾತನಾಡುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳ ನಡುವೆಯೂ ಕರವೇ ಸಂಸ್ಥೆಗಳೊಂದಿಗೆ ಗೌರವಯುತ ಸಂವಾದದ ಮೂಲಕವೇ ಅಭಿಯಾನವನ್ನು ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಾದ್ಯಂತ ನವೆಂಬರ್ ತಿಂಗಳಿಡೀ ಅಭಿಯಾನ
‘ಆಗ್ರಹ ಅಭಿಯಾನ’ ಕರ್ನಾಟಕದ ಎಲ್ಲ ಭಾಗಗಳಲ್ಲೂ ಆರಂಭಗೊಂಡಿದ್ದು, ನವೆಂಬರ್ ತಿಂಗಳಿಡೀ ಮುಂದುವರಿಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರ ತಂಡಗಳು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ, ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಿವೆ.
ಸಂಸ್ಥೆಗಳು ಒದಗಿಸುವ ಅಂಕಿ ಅಂಶಗಳು ಮತ್ತು ಮಾಹಿತಿಯನ್ನು ಆಧರಿಸಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಇರುವ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಾಗುವುದು. ಬಳಿಕ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಮಗ್ರ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಕರವೇ ನಿರ್ಧರಿಸಿದೆ.
ಕನ್ನಡಿಗರ ಉದ್ಯೋಗ ಹಕ್ಕುಗಳನ್ನು ರಕ್ಷಿಸುವುದು, ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವುದು ಹಾಗೂ ನೇಮಕಾತಿಯಲ್ಲಿ ಪಾರದರ್ಶಕತೆ ಖಾತರಿಪಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ ಹೆಜ್ಜೆಯಾಗಿದೆ ಎಂದು ಕರವೇ ತಿಳಿಸಿದೆ.

