ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಅದರ ಅಭಿವೃದ್ಧಿ ಇನ್ನೂ ಕಡತಗಳಲ್ಲೇ ಉಳಿದಿದೆ. ಸಮಸ್ಯೆ ಬಂದಾಗಷ್ಟೇ ಎಚ್ಚೆತ್ತುಕೊಳ್ಳುವ ಅಥವಾ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುವ ರಾಜ್ಯೋತ್ಸವ ನಮಗೆ ಬೇಕಿಲ್ಲ. ತಂತ್ರಜ್ಞಾನ, ವಲಸೆ, ಸಾಮಾಜಿಕ ನ್ಯಾಯದಂತಹ ಇಂದಿನ ಸವಾಲುಗಳಿಗೆ ಗತವೈಭವದ ಹಾಡುಗಳು ಉತ್ತರವಾಗಲಾರವು. ಶಾಲೆ, ಕಚೇರಿ, ಮಾರುಕಟ್ಟೆ ಮತ್ತು ತಂತ್ರಜ್ಞಾನದಲ್ಲಿ ಕನ್ನಡ ನಿತ್ಯ ಜೀವಂತವಾಗಿರುವಂತೆ ಮಾಡುವುದೇ ನಿಜವಾದ ದೂರದೃಷ್ಟಿ. ‘ಹೆಸರಾಯಿತು ಕರ್ನಾಟಕ’ ಎಂಬುದನ್ನು ‘ಉಸಿರಾಗಲಿ ಕನ್ನಡ’ವಾಗಿಸುವ ಹೊಣೆ ನಮ್ಮ ಮೇಲಿದೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ಜನಾಂಗದ ಸಾಂಸ್ಕೃತಿಕ ಸ್ಮೃತಿ ಮತ್ತು ಅಸ್ಮಿತೆ. ಹರಿದು ಹಂಚಿಹೋಗಿದ್ದ ಕನ್ನಡ ನೆಲವನ್ನು ಒಂದುಗೂಡಿಸುವಲ್ಲಿ ಸಾಹಿತ್ಯದ ಪಾತ್ರ ದೊಡ್ಡದು. ಗೋವಿಂದ ಪೈ, ಕುವೆಂಪು, ಬೇಂದ್ರೆಯವರಿಂದ ಹಿಡಿದು ಅಡಿಗ, ನಿಸಾರ್ ಅಹಮದ್ ಅವರವರೆಗೆ ನಮ್ಮ ಕಾವ್ಯಪರಂಪರೆ ಕನ್ನಡಿಗರಲ್ಲಿ ಸ್ವಾಭಿಮಾನ ಬೆಳೆಸುವ ಜೊತೆಗೆ, ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿ ಕಟ್ಟಿಕೊಟ್ಟಿತು. ಕನ್ನಡತ್ವವೆಂದರೆ ಎಲ್ಲರನ್ನೂ ಒಳಗೊಳ್ಳುವ ‘ತೋಟ’ ಎಂಬುದಕ್ಕೆ ಇತ್ತೀಚೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರೇ ಜೀವಂತ ಸಾಕ್ಷಿ. ಭಾಷೆ ರಕ್ತದಿಂದ ಬರುವ ಆಸ್ತಿಯಲ್ಲ, ಪ್ರೀತಿಯಿಂದ ಆಯ್ದುಕೊಳ್ಳುವ ಅಂತಃಕರಣದ ಮನೆ.
ಆದರೆ, ಕವಿಗಳು ಕಟ್ಟಿಕೊಟ್ಟ ಈ ಭದ್ರ ಬುನಾದಿಯ ಮೇಲೆ ಇಂದಿನ ವಾಸ್ತವವನ್ನು ನೋಡಿದರೆ, ‘ಕನ್ನಡ ನುಡಿ ಅನ್ನ ಕೊಡುತ್ತಿದೆಯೇ?’ ಎಂಬ ಗಂಭೀರ ಪ್ರಶ್ನೆ ಎದುರಾಗುತ್ತದೆ. ಕಳೆದ ಐವತ್ತು ವರ್ಷಗಳ ದೂರದೃಷ್ಟಿಯಿಲ್ಲದ ಭಾಷಾ ನೀತಿಗಳು ಹಾಗೂ ಅನುದಾನರಹಿತ ಇಂಗ್ಲಿಷ್ ಶಾಲೆಗಳ ಹಾವಳಿ ಕನ್ನಡದ ಅವನತಿಗೆ ಕಾರಣವಾಗಿವೆ. ಕನ್ನಡ ಕೇವಲ ಭಾವನೆಯಾಗಿ ಉಳಿಯದೆ, ಉದ್ಯೋಗ ಮತ್ತು ಆರ್ಥಿಕತೆಯ ಹೆಬ್ಬಾಗಿಲಾಗಬೇಕಿದೆ.
ಇಂದು ನಮಗೆ ಬೇಕಿರುವುದು ಬಿಡಿಬಿಡಿ ಹೋರಾಟಗಳಲ್ಲ, ಕನ್ನಡಿಗರ ಒತ್ತಡದಿಂದಲೇ ರೂಪುಗೊಳ್ಳುವ ಒಂದು ‘ಸಮಗ್ರ ಭಾಷಾ ನೀತಿ’. ಸರ್ಕಾರಿ ನೇಮಕಾತಿಯ ಸಿ ಮತ್ತು ಡಿ ದರ್ಜೆಯ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಪಾಲನ್ನು ಗುರುತಿಸುವ ‘ಉದ್ಯೋಗ ಪೋರ್ಟಲ್’ ಸ್ಥಾಪನೆಯಾಗಬೇಕು. ಮಿತಿಮೀರಿದ ವಲಸೆಯಿಂದ ಉದ್ಯೋಗ, ವ್ಯಾಪಾರ ಮತ್ತು ಭೂಮಿ ಅನ್ಯರ ಪಾಲಾಗುತ್ತಿದ್ದು, ಸೂಕ್ತ ವಲಸೆ ಹಾಗೂ ಭೂಖರೀದಿ ನೀತಿಗಳ ಅಗತ್ಯವಿದೆ. ಜೊತೆಗೆ, ಎಐ (AI) ಯುಗದಲ್ಲಿ ಕನ್ನಡ ಸಾಹಿತ್ಯ ಅಂತರ್ಜಾಲಕ್ಕೆ ಬಂದು, ತಂತ್ರಜ್ಞಾನ ಕನ್ನಡಕ್ಕೆ ಪೂರಕವಾಗಿ ಬೆಳೆಯುವುದು ಇಂದಿನ ತುರ್ತು.

ಮತ್ತೊಂದೆಡೆ, ಕೇಂದ್ರದ ನೇಮಕಾತಿ ಪರೀಕ್ಷೆಗಳಲ್ಲಿನ ತಾರತಮ್ಯ ಹಾಗೂ ಶಿಕ್ಷಣದಲ್ಲಿ ಹಿಂದಿ ಹೇರಿಕೆಯ ಪ್ರಯತ್ನಗಳು ನಡೆಯುತ್ತಲೇ ಇವೆ. ಕುವೆಂಪು ಎಚ್ಚರಿಸಿದಂತೆ ಇಂಗ್ಲಿಷ್-ಹಿಂದಿಗಳ ಬಲಾತ್ಕಾರದಲ್ಲಿ ಕನ್ನಡ ಮೂರನೇ ಸ್ಥಾನಕ್ಕೆ ಕುಸಿಯಬಾರದು. ಸಂಸ್ಕೃತ, ಹಿಂದಿಗಳ ಒತ್ತಡದಲ್ಲಿ ಕನ್ನಡ ಉಳಿದರೆ ಮಾತ್ರ ನಾಡಿನ ಇತರ ಒಳನುಡಿಗಳೂ ಉಳಿಯುತ್ತವೆ.
ಭಾಷೆಯ ಉಳಿವು ಕೇವಲ ಸರ್ಕಾರದ ಹೊಣೆಯಲ್ಲ, ನಮ್ಮದೂ ಹೌದು. ದೈನಂದಿನ ವ್ಯವಹಾರದಲ್ಲಿ ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಬಳಸಬೇಕು. ಕನ್ನಡ ಕಲಿಯುವ ಅನ್ಯಭಾಷಿಕರನ್ನು ಅಪಹಾಸ್ಯ ಮಾಡದೆ ಪ್ರೋತ್ಸಾಹಿಸಬೇಕು. ಬೆಂಗಳೂರಿನ ಸ್ಟಾರ್ಟ್ಅಪ್ಗಳಲ್ಲಿ ಕನ್ನಡಿಗರ ಪಾಲು ಹೆಚ್ಚಬೇಕು. ನಮ್ಮ ರೈತರು ಕೃಷಿ-ಉದ್ಯಮಿಗಳಾಗಿ ಬೆಳೆಯಬೇಕು ಹಾಗೂ ಕನ್ನಡಿಗರ ವ್ಯಾಪಾರವನ್ನು ಬೆಂಬಲಿಸುವ ‘ಬೈ ಲೋಕಲ್’ ಸಂಸ್ಕೃತಿ ಬೆಳೆಯಬೇಕು. ನುಡಿ ಅನ್ನದ ಭಾಷೆಯಾದಾಗ ಮಾತ್ರ ಮನೆಯಲ್ಲಿ ಉಳಿಯುತ್ತದೆ.
ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಅದರ ಅಭಿವೃದ್ಧಿ ಇನ್ನೂ ಕಡತಗಳಲ್ಲೇ ಉಳಿದಿದೆ. ಸಮಸ್ಯೆ ಬಂದಾಗಷ್ಟೇ ಎಚ್ಚೆತ್ತುಕೊಳ್ಳುವ ಅಥವಾ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುವ ರಾಜ್ಯೋತ್ಸವ ನಮಗೆ ಬೇಕಿಲ್ಲ. ತಂತ್ರಜ್ಞಾನ, ವಲಸೆ, ಸಾಮಾಜಿಕ ನ್ಯಾಯದಂತಹ ಇಂದಿನ ಸವಾಲುಗಳಿಗೆ ಗತವೈಭವದ ಹಾಡುಗಳು ಉತ್ತರವಾಗಲಾರವು. ಶಾಲೆ, ಕಚೇರಿ, ಮಾರುಕಟ್ಟೆ ಮತ್ತು ತಂತ್ರಜ್ಞಾನದಲ್ಲಿ ಕನ್ನಡ ನಿತ್ಯ ಜೀವಂತವಾಗಿರುವಂತೆ ಮಾಡುವುದೇ ನಿಜವಾದ ದೂರದೃಷ್ಟಿ. ‘ಹೆಸರಾಯಿತು ಕರ್ನಾಟಕ’ ಎಂಬುದನ್ನು ‘ಉಸಿರಾಗಲಿ ಕನ್ನಡ’ವಾಗಿಸುವ ಹೊಣೆ ನಮ್ಮ ಮೇಲಿದೆ.
ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು
ಇದನ್ನೂ ಓದಿ- ಶಾಸ್ತ್ರೀಯ ಸ್ಥಾನಮಾನ: ಬದುಕಿನ ಭಾಷೆ-ಭವಿಷ್ಯದ ದಾರಿ


