ಕರ್ನಾಟಕದ ಪಕ್ಷಿಕಾಶಿ ರಂಗನತಿಟ್ಟು
ರಂಗನತಿಟ್ಟು ಕೇವಲ ಪ್ರವಾಸಿ ತಾಣವಲ್ಲ, ಅದು ನಮ್ಮ ಪರಿಸರದ ಆರೋಗ್ಯದ ಸೂಚಕ. ಬಾನಾಡಿಗಳ ಈ ಅರಮನೆಯನ್ನು ಉಳಿಸಿದರೆ ಮಾತ್ರ ಅಕ್ಟೋಬರ್ 9ರ ಆಚರಣೆಗೆ ಅರ್ಥವಿದೆ – ಕೆ ಎಸ್ ಜಯಶಂಕರ್, ಸಮರ್ಪಣ ಟ್ರಸ್ಟ್, ಶ್ರೀರಂಗ ಪಟ್ಟಣ.
ಅಕ್ಟೋಬರ್ 9 ವಿಶ್ವ ವಲಸೆ ಹಕ್ಕಿಗಳ ದಿನ. ಪರಿಸರ ಮತ್ತು ಪಕ್ಷಿ ಸಂರಕ್ಷಣೆಯ ಜಾಗೃತಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದ ಹೆಮ್ಮೆಯ, ದೇಶದ ಮೊದಲ ಪಕ್ಷಿಧಾಮಗಳಲ್ಲಿ ಒಂದಾದ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದ ಮಹತ್ವವನ್ನು ಮೆಲುಕು ಹಾಕುವುದು ಅತ್ಯವಶ್ಯಕ.
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದಿಂದ ಕೇವಲ 3 ಕಿ.ಮೀ. ದೂರದಲ್ಲಿ, ಮೈಸೂರಿನಿಂದ 16 ಕಿ.ಮೀ. ಉತ್ತರದಲ್ಲಿ ಕಾವೇರಿ ನದಿಯ ಮಧ್ಯೆ ರೂಪುಗೊಂಡಿರುವ 6 ಪುಟ್ಟ ನಡುಗಡ್ಡೆಗಳ ಸಮೂಹವೇ ರಂಗನತಿಟ್ಟು. ಒಟ್ಟು ವಿಸ್ತೀರ್ಣ ಕೇವಲ 0.67 ಚ.ಕಿ.ಮೀ. ಅಂದರೆ ಸುಮಾರು 40 ಎಕರೆ ಮಾತ್ರ. ಆದರೆ ಈ ಪುಟ್ಟ ದ್ವೀಪಗಳ ಜೈವಿಕ ವೈವಿಧ್ಯತೆ ಅಸಾಧಾರಣವಾದುದು. ಇದನ್ನು ಕರ್ನಾಟಕದ ‘ಪಕ್ಷಿಕಾಶಿ’ ಎಂದೇ ಕರೆಯುತ್ತಾರೆ.
ಇತಿಹಾಸ ಮತ್ತು ರಾಮ್ಸರ್ ಹೆಗ್ಗಳಿಕೆ
1645-48 ರಲ್ಲಿ ಮೈಸೂರು ಅರಸ ಕಂಠೀರವ ನರಸರಾಜ ಒಡೆಯರ್ ಕಾವೇರಿಗೆ ಅಡ್ಡಲಾಗಿ ಒಡ್ಡು ಕಟ್ಟಿಸಿದಾಗ ಈ ನಡುಗಡ್ಡೆಗಳು ಸೃಷ್ಟಿಯಾದವು. ಜನವಸತಿ ಇಲ್ಲದೆ, ಸುತ್ತಲೂ ಗದ್ದೆ ಬಯಲು, ಹಸಿರು ಮರಗಿಡಗಳಿಂದ ಕೂಡಿದ್ದ ಈ ಪ್ರದೇಶ ಪಕ್ಷಿಗಳಿಗೆ ಸ್ವರ್ಗವಾಯಿತು. 1939-40 ರಲ್ಲಿ ಮೈಸೂರು ಸಂಸ್ಥಾನದ ಹಕ್ಕಿಗಳ ಅಧ್ಯಯನಕ್ಕೆ ಬಂದ ಖ್ಯಾತ ಪಕ್ಷಿ ತಜ್ಞ ಡಾ. ಸಲೀಂ ಅಲಿ ಅವರು ಇದನ್ನು ಗಮನಿಸಿ, ಮಹಾರಾಜರಿಗೆ ಮನವಿ ಮಾಡಿ 1940ರಲ್ಲಿ ಇದನ್ನು ಪಕ್ಷಿಧಾಮವೆಂದು ಘೋಷಿಸುವಂತೆ ಮಾಡಿದರು.
ಇದರ ಅಂತಾರಾಷ್ಟ್ರೀಯ ಮಹತ್ವಕ್ಕೆ ಮತ್ತೊಂದು ಗರಿ 2022ರಲ್ಲಿ ಸಿಕ್ಕಿತು. ರಂಗನತಿಟ್ಟು ಕರ್ನಾಟಕದ ಪ್ರಥಮ ರಾಮ್ಸರ್ ಜೌಗು ಪ್ರದೇಶ (Ramsar Wetland Site) ಎಂದು ಘೋಷಣೆಯಾಯಿತು. ಅಂದರೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂರಕ್ಷಿಸಬೇಕಾದ ಜೌಗು ಪ್ರದೇಶ ಎಂಬ ಮಾನ್ಯತೆ ಪಡೆದಿದೆ.

ವಲಸೆ ಹಕ್ಕಿಗಳ ತವರು
ಜುಲೈ ನಿಂದ ಅಕ್ಟೋಬರ್ ಮತ್ತು ಜನವರಿಯಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಪಕ್ಷಿಗಳ ಸಂತಾನೋತ್ಪತ್ತಿ ಕಾಲ. ಈ ಸಮಯದಲ್ಲಿ ಸೈಬೀರಿಯಾ, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಿಂದ ಸಾವಿರಾರು ಹಕ್ಕಿಗಳು ತಮ್ಮ ವಂಶಾಭಿವೃದ್ಧಿಗಾಗಿ ಇಲ್ಲಿಗೆ ಬರುತ್ತವೆ.
ಇಲ್ಲಿ 220ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿದೆ. ಪೆಂಟೆಡ್ ಸ್ಟಾರ್ಕ್, ಓಪನ್ ಬಿಲ್ ಸ್ಟಾರ್ಕ್, ಚಮಚ ಕೊಕ್ಕಿನ ಹಕ್ಕಿ (Spoonbill), ಬಿಳಿ ಐಬಿಸ್, ಕಪ್ಪು ಐಬಿಸ್, ನೈಟ್ ಹೆರಾನ್, ಕಾರ್ಮೊರೆಂಟ್, ಡಾರ್ಟರ್ (ಹಾವಕ್ಕಿ), ರಿವರ್ ಟರ್ನ್, ಮೀನುಗೊಂದು, ಪೆಲಿಕಾನ್, ನಾರ್ದರ್ನ್ ಶಾವೆಲರ್ ಮುಂತಾದ ಅಪರೂಪದ ಹಕ್ಕಿಗಳು ಇಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಮಾಡುತ್ತವೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ನೀರಿನಲ್ಲಿ ಬಂಡೆಯ ಮೇಲೆ ಬಿಸಿಲು ಕಾಯುವ ಮೊಸಳೆಗಳು ಮತ್ತು ಬೋಟಿಂಗ್ ಮಾಡುವಾಗ ಕಾಣಸಿಗುವ ಅಪರೂಪದ ದೃಶ್ಯ.
ಸಂರಕ್ಷಣೆಯ ಸವಾಲು ಮತ್ತು ನೂತನ ಪ್ರಯತ್ನ
ಕಾವೇರಿ ನದಿಯಲ್ಲಿ ಕೃಷ್ಣರಾಜ ಸಾಗರದಿಂದ ನೀರು ಬಿಟ್ಟಾಗಲೆಲ್ಲಾ ಪ್ರವಾಹದಿಂದ ನಡುಗಡ್ಡೆಗಳ ಮಣ್ಣು ಕೊಚ್ಚಿ ಹೋಗಿ ಹಕ್ಕಿಗಳ ಗೂಡು, ಮೊಟ್ಟೆ, ಮರಿಗಳು ನೀರು ಪಾಲಾಗುತ್ತಿದ್ದವು. ಇದಕ್ಕೆ ಶಾಶ್ವತ ಪರಿಹಾರವಾಗಿ ಅರಣ್ಯ ಇಲಾಖೆ ಈಗ 1.50 ಕೋಟಿ ರೂ. ವೆಚ್ಚದಲ್ಲಿ ‘ಗ್ಯಾಬಿಯನ್ ಸ್ಟ್ರಕ್ಚರ್’ ತಂತ್ರಜ್ಞಾನ ಅಳವಡಿಸಿದೆ. ಸೈಜುಗಲ್ಲು ಮತ್ತು ಜಿಐ ಮೆಶ್ ನಿಂದ ನಡುಗಡ್ಡೆಗಳ ಸುತ್ತ ಬಲವಾದ ತಡೆಗೋಡೆ ನಿರ್ಮಿಸಿ 25 ನಡುಗಡ್ಡೆಗಳಲ್ಲಿ ಮೊದಲ ಹಂತದಲ್ಲಿ 5 ನಡುಗಡ್ಡೆಗಳನ್ನು ಭದ್ರಗೊಳಿಸಲಾಗಿದೆ.
ವಿಶ್ವ ವಲಸೆ ಹಕ್ಕಿಗಳ ದಿನದ ಸಂದೇಶ ಸ್ಪಷ್ಟವಾಗಿದೆ “ವಲಸೆ ಹಕ್ಕಿಗಳ ಸುರಕ್ಷಿತ ಪಯಣಕ್ಕೆ ಅವುಗಳ ಆವಾಸಸ್ಥಾನಗಳನ್ನು ಕಾಪಾಡೋಣ. ಪಕ್ಷಿ ಸಂರಕ್ಷಣೆಯ ಮೂಲಕ ಪ್ರಕೃತಿಯ ಸಮತೋಲನವನ್ನು ಉಳಿಸೋಣ.”
ರಂಗನತಿಟ್ಟು ಕೇವಲ ಪ್ರವಾಸಿ ತಾಣವಲ್ಲ, ಅದು ನಮ್ಮ ಪರಿಸರದ ಆರೋಗ್ಯದ ಸೂಚಕ. ಬಾನಾಡಿಗಳ ಈ ಅರಮನೆಯನ್ನು ಉಳಿಸಿದರೆ ಮಾತ್ರ, ಅಕ್ಟೋಬರ್ 9ರ ಆಚರಣೆಗೆ ಅರ್ಥವಿದೆ. ಎಂದು.
ಕೆ ಎಸ್ ಜಯಶಂಕರ್
ಸಮರ್ಪಣ ಟ್ರಸ್ಟ್, ಶ್ರೀರಂಗ ಪಟ್ಟಣ
ಇದನ್ನೂ ಓದಿ- https://kannadaplanet.com/sendil-fort-sandalwood-fort/ “ಸೆಂದಿಲ್ ಕೋಟೆ – ಶ್ರೀಗಂಧದ ಕೋಟೆ”


