ಜನ್ಮ ದಿನ ವಿಶೇಷ | 125ಕ್ಕೆ ಕಾರಂತರ ನೆನಪು

ಇಂದು ಶಿವರಾಮ ಕಾರಂತರ ಜನ್ಮದಿನ. ಡಾ. ಶಿವರಾಮ ಕಾರಂತರಿಗೆ ಮುಂದಿನ ವರ್ಷ ನೂರಿಪ್ಪತ್ತೈದು. ಕಾರಂತರಿಗೆ 125 ವರ್ಷ ತುಂಬುವ ಸಂದರ್ಭದಲ್ಲಿ ಒಂದು ವೇಳೆ ಕಾರಂತರು ಈಗ ಇರುತ್ತಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಅವರ ಬದುಕು-ಬರಹಗಳ  ಹಿನ್ನೆಲೆಯಲ್ಲಿ ವಿವೇಚಿಸಲು ಇದು ಒಳ್ಳೆಯ ಸಂದರ್ಭ – ಡಾ. ಗಣನಾಥ ಎಕ್ಕಾರು,  ಸಂಸ್ಕೃತಿ ಚಿಂತಕರು.     

ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಕಾರಂತರು ವಿರೋಧಿಸಿದ್ದು ಮಾತ್ರವಲ್ಲ  ಪದ್ಮಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು. ಆಗ ಪ್ರಗತಿಪರ ಶಕ್ತಿಗಳೆಲ್ಲವೂ ಒಂದಾಗಿ ಹೋರಾಡಿದ್ದವು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಸಾಧ್ಯವಾದರೂ ಮುಂದೆ ಕೋಮುವಾದಿ ಶಕ್ತಿಗಳು ಅಧಿಕಾರದ ಮೆಟ್ಟಲು ಏರಲು ತುರ್ತುಪರಿಸ್ಥಿತಿಯು ಪರೋಕ್ಷ ಕಾರಣವಾಯಿತು ಎಂಬುದು ವಿಚಿತ್ರ ಸತ್ಯ. ಆದರೆ ತುರ್ತು ಪರಿಸ್ಥಿತಿಗಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಗಂಭೀರವಾಗಿ ಅಪಾಯದಲ್ಲಿದೆ. ಸಾಂವಿಧಾನಿಕವಾಗಿ ಸ್ವಾಯತ್ತವಾಗಿರುವ ಚುನಾವಣಾ ಆಯೋಗದಂಥ ಸಂಸ್ಥೆಗಳೆಲ್ಲ ಆಳುವ ಪಕ್ಷದ ಕೈಗೊಂಬೆಗಳಾಗಿ ವರ್ತಿಸಿ, ಸರ್ವಾಧಿಕಾರಕ್ಕೆ ದಾರಿಮಾಡಿಕೊಡುತ್ತಿರುವುದು  ಸ್ಪಷ್ಟ. ಇಂಥ ಸಂದರ್ಭದಲ್ಲಿ ಕಾರಂತರಿರುತ್ತಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು. ಅವರ ವ್ಯಕ್ತಿತ್ವದ  ಹಿನ್ನೆಲೆಯಲ್ಲಿ ಅದನ್ನು ವಿಶ್ಲೇಷಿಸುವುದು ಪರೋಕ್ಷವಾಗಿ ಅವರ ಬಗ್ಗೆ ಹೊಸ ಚಿಂತನೆಗೆ ಕಾರಣವಾಗಬಹುದು.

ಆಧುನಿಕ ಕನ್ನಡ ಸಾಹಿತ್ಯ ಮಹತ್ವದ ಲೇಖಕರ ಬಗ್ಗೆ ಮಾತಾಡುವಾಗ ಸಹಜವಾಗಿ ಕುವೆಂಪು, ಕಾರಂತ ಹೀಗೆ ಪಟ್ಟಿ ಮಾಡತೊಡಗುತ್ತೇವೆ. ಅಂದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ  ಕಾರಂತರು ಬಹು ದೊಡ್ಡ ಶಕ್ತಿ ಎಂಬುದು ನಿರ್ವಿವಾದ. ಆದರೆ ಯಾವುದೇ ನಿರ್ದಿಷ್ಟ ಪಂಥ ಅಥವಾ ಸಿದ್ಧಾಂತಕ್ಕೆ ಅಂಟಿಕೊಳ್ಳದ ಶಿವರಾಮ ಕಾರಂತರು ಕನ್ನಡ ಸಾಹಿತ್ಯದಲ್ಲಿ  ಭಿನ್ನವಾಗಿ ಕಾಣುತ್ತಾರೆ. ವೈಚಾರಿಕ ಮತ್ತು ವೈಜ್ಞಾನಿಕ  ದೃಷ್ಟಿಕೋನ, ಪ್ರಗತಿಪರತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾರಂತರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಅಂದರೆ ನವೋದಯ, ಪ್ರಗತಿಶೀಲತೆ, ನವ್ಯ, ದಲಿತ-ಬಂಡಾಯ ಹೀಗೆ ಯಾವುದೇ ಸೈದ್ಧಾಂತಿಕ ನಿಲುವಿನ ಚೌಕಟ್ಟಿನಲ್ಲಿ  ಕಾರಂತರನ್ನು ಚರ್ಚಿಸುವುದು ಕಷ್ಟ. ಕಾಲದ ಪುರೋಗಾಮಿ ನಿಲುವುಗಳಿಗೆ ಬದ್ಧರಾಗಿ ಅನುಭವದ ಮೂಸೆಯಲ್ಲಿ ಬರೆದವರು ಕಾರಂತರು. ಕುವೆಂಪು ಅವರ ನಿಲುವಿನಲ್ಲಿ ಕಾಣುವ ಸೈದ್ಧಾಂತಿಕ  ಸ್ಪಷ್ಟತೆ ಕಾರಂತರಲ್ಲಿ ಕಾಣಲು ಸಾಧ್ಯವಿಲ್ಲ. ನವೋದಯದಿಂದ ದಲಿತ ಬಂಡಾಯದವರೆಗಿನ ಎಲ್ಲಾ ಸೈದ್ಧಾಂತಿಕ ನಿಯಮಗಳ ಛಾಯೆ ಕಾರಂತರ ಬದುಕು-ಬರಹದಲ್ಲಿದೆ.

‘ಬಾಳ್ವೆಯೇ ಬೆಳಕು’ ಪುಟ್ಟ ಕೃತಿಯು ಕಾರಂತರ ಬದುಕಿನ ಕುರಿತಾದ ನಿಲುವುಗಳನ್ನು ಸ್ಪಷ್ಟಪಡಿಸುತ್ತದೆ. ಬಾಳು ಇರುವುದು ಬದುಕುವುದಕ್ಕಾಗಿ ಹೊರತು ಬದುಕನ್ನು ನಿರಾಕರಿಸಲು ಅಲ್ಲ ಎಂಬ ನಿಲುವು ಅವರದು. ‘ನೀವು ಕಣ್ಣುಮುಚ್ಚಿ ದೇವರನ್ನು ನೆನೆದರೆ ಕ್ಯಾಲಂಡರಿನಲ್ಲಿರುವ ದೇವರ ಚಿತ್ರ ಅಥವಾ ಯಾರೋ ಶಿಲ್ಪಿ ಕೆತ್ತಿದ ಮೂರ್ತಿಯ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಆದರೆ ನಮ್ಮ ಉದಾತ್ತತೆ ಬೆಳೆದಷ್ಟು ನಮ್ಮ ದೇವರು ಬೆಳೆಯುತ್ತಾನೆ ಎಂಬ ನಿಲುವಿನಲ್ಲಿ ಆಸ್ತಿಕವಾದದ ನಿರಾಕರಣೆಯಿದೆ. ಹಲವು ಸಂದರ್ಭಗಳಲ್ಲಿ ಬದುಕು ಮತ್ತು ಬರಹ ಎರಡರಲ್ಲೂ ಕಾರಂತರು ನಾಸ್ತಿಕವಾದಕ್ಕೆ ಹತ್ತಿರವಾಗುತ್ತಾರೆ. ಮಡದಿ ಲೀಲಾ ಕಾರಂತರು ಸಾಯಿಬಾಬಾರ ಪರಮಭಕ್ತೆಯಾಗಿದ್ದು,  ಕಾರಂತರು ಮಡದಿಯನ್ನು ಸಾಯಿಬಾಬಾರ ಮಂದಿರಕ್ಕೆ ಬಿಟ್ಟು ಬರುತ್ತಿದ್ದರಂತೆ. ಅಂದರೆ ಸಂವಿಧಾನ ಹೇಳುವ ಸ್ವಾತಂತ್ರ್ಯವನ್ನು  ಅವರು ಪ್ರತಿಪಾದಿಸುತ್ತಿದ್ದರು. ಆದರೆ ಕೊನೆಯವರೆಗೂ ಧರ್ಮ ಮತ್ತು ದೇವರ ಕುರಿತಾದ ನಿಲುವಿನಲ್ಲಿ  ಕಾರಂತರು ರಾಜಿ ಮಾಡಿಕೊಂಡವರಲ್ಲ.

ಶಿವರಾಮ ಕಾರಂತರು ಮತ್ತು ಲೀಲಾ ಕಾರಂತರು

1933 ರಲ್ಲಿ ಕಾರಂತರು ‘ಚೋಮನ ದುಡಿ’ ಕಾದಂಬರಿಯನ್ನು ಬರೆಯುತ್ತಾರೆ. ಒಂದು ತುಂಡು ಸ್ವಂತ ಭೂಮಿಯ  ಒಡೆಯನಾಗುವುದು ಚೋಮನ ಕನಸು. ಇದು ಆ ಕಾಲದ ಚೋಮ ಮಾತ್ರವಲ್ಲ ಇದು ಆ ಕಾಲದ ಎಲ್ಲ ದಲಿತ-ಹಿಂದುಳಿದ ವರ್ಗದವರ ಸುಪ್ತ ಆಸೆಯಾಗಿತ್ತು. ಆದರೆ ಆ ಕನಸು ನನಸಾಗಲು ಸಾಧ್ಯವಾಗದ ಕಾರಣಗಳನ್ನು ಕಾದಂಬರಿಯಲ್ಲಿ ಕಾರಂತರು ಚರ್ಚಿಸುತ್ತಾರೆ. ಒಂದು ರೀತಿಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ದಲಿತ ಮತ್ತು ಹಿಂದುಳಿದ ವರ್ಗದ ಸಮಸ್ಯೆಗಳ ಸಂಕೀರ್ಣತೆಯು ಕಾದಂಬರಿಯಲ್ಲಿ ಅಭಿವ್ಯಕ್ತವಾಗುತ್ತದೆ. ಮುಂದೆ ಎಪ್ಪತ್ತರ ದಶಕದಲ್ಲಿ ದೇವರಾಜ ಅರಸರು ಚೋಮನ ಕನಸನ್ನು ನನಸು ಮಾಡುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾದರು. ಆದರೆ ಸ್ವಾತಂತ್ರ್ಯಪೂರ್ವದ ಆ ಕಾಲದಲ್ಲಿ ಕಾರಂತರದು ಕ್ರಾಂತಿಕಾರಕ ಚಿಂತನೆಯೇ ಆಗಿತ್ತು. ಭೂಮಿ ಯಾರಿಗೆ ಸೇರಿದ್ದು ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಲ್ಲಿ ಕಾರಂತರ ಈ ಕಾದಂಬರಿ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ಈ ನಿಟ್ಟಿನಲ್ಲಿ ಕಾರಂತರು ಎತ್ತಿದ ಪ್ರಶ್ನೆಯನ್ನು ನವೋದಯದ ಲೇಖಕರು ನೇರವಾಗಿ ಎತ್ತಿದ್ದು ಕಡಿಮೆ. ಕೊರಡ್ಕಲ್ ಶ್ರೀನಿವಾಸ ರಾಯರ ‘ದಣಿಯಾದ ಸತ್ಯನಾರಾಯಣ’ ಮುಂತಾದ ಕಥೆಗಳಲ್ಲಿ ಹಾಗೂ ಪ್ರಗತಿಶೀಲರ ಬರಹಗಳಲ್ಲಿ ಅದು ಸ್ವಲ್ಪಮಟ್ಟಿಗೆ ಅಭಿವ್ಯಕ್ತವಾಗಿರಬಹುದು.

ಕಾರಂತರ ಕಾದಂಬರಿಗಳಲ್ಲಿ ಕಾಣುವ ಇನ್ನೊಂದು ಮಹತ್ವದ ವಿಚಾರವೆಂದರೆ ಅದು ಸ್ತ್ರೀ ಪರವಾದ ನಿಲುವು. ಅವರ ಬಹುತೇಕ ಕಾದಂಬರಿಗಳಲ್ಲಿ ಈ ನಿಲುವನ್ನು ಕಾಣುತ್ತೇವೆ. ಅವರ ಬಹುತೇಕ ಕಾದಂಬರಿಗಳಲ್ಲಿ ಸ್ತ್ರೀಯರ ಬದುಕಿನ ಸಂಕೀರ್ಣ ಸಮಸ್ಯೆಗಳ ಚಿತ್ರಣವಿದೆ. ‘ಮೂಕಜ್ಜಿಯ ಕನಸು’ ಕಾದಂಬರಿಯ ಮೂಕಜ್ಜಿಯ ವೈಚಾರಿಕ ನಿಲುವು, ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯ ಮಂಜುಳೆಯ ಮನೋಭೂಮಿಕೆಯಲ್ಲಿರುವ ಮೈ ಮತ್ತು ಮನಸ್ಸಿನ ತಾಕಲಾಟ, ಧರ್ಮರಾಯನ ಸಂಸಾರದ ಸರಸ್ವತಿ, ಕನ್ಯಾಬಲಿಯ  ಮಾಲತಿ, ಚೋಮನ ದುಡಿಯ ಬೆಳ್ಳಿ-ಹೀಗೆ ಅವರ ಮುಖ್ಯ ಕಾದಂಬರಿಗಳು ಮಹಿಳಾವಾದದ ಚರ್ಚೆಗೆ ದಾರಿಮಾಡಿಕೊಡುತ್ತವೆ. ಬೆಟ್ಟದ ಜೀವ ಕಾದಂಬರಿಯಲ್ಲಿ ಗೋಪಾಲಯ್ಯ ಮತ್ತು ಶಂಕರಮ್ಮನ ಪರಸ್ಪರ ಅರಿವು, ಗಂಡುಹೆಣ್ಣಿನ ಸಂಬಂಧದ ಕುರಿತಾಗಿ ವಿಭಿನ್ನವಾಗಿ ಚಿಂತಿಸುವಂತೆ ಮಾಡುತ್ತದೆ. ಕಾರಂತರು ಚರ್ಚಿಸುವ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಎದುರಿಸುತ್ತಿರುವ ಸಂಕೀರ್ಣ ಸಾಮಾಜಿಕ ಸಮಸ್ಯೆಗಳ ಕುರಿತಾದ ಅವರ ನಿಲುವುಗಳು ಇಂದಿಗೂ ಪ್ರಸ್ತುತವಾಗುತ್ತದೆ. ಕುಡಿಯರ ಕೂಸು ಚೋಮನದುಡಿಯಂಥ ಕಾದಂಬರಿಗಳಲ್ಲಿ ಜಾತಿ ಮತ್ತು ವರ್ಣದ ನೆಲೆಯಲ್ಲಿ ಲೈಂಗಿಕ ಶೋಷಣೆಯ ಅಭಿವ್ಯಕ್ತಿಯಾಗಿದೆ. ‘ಅಳಿದ ಮೇಲೆ’ ಕಾದಂಬರಿಯ ಕಮಲಮ್ಮ, ನಂಬಿದವರ ಸಾಕದ ಸತ್ಯಭಾಮೆ ಮುಂತಾದ ಪಾತ್ರಗಳನ್ನು ಗಮನಿಸಬಹುದು. ಕನ್ನಡ ಸಾಹಿತ್ಯದಲ್ಲಿ ನವೋದಯ ಮತ್ತು ಪ್ರಗತಿಶೀಲ ಸಾಹಿತ್ಯದಲ್ಲಿ ಸ್ತ್ರೀಪರ ನಿಲುವುಗಳನ್ನು ಗಮನಿಸಬಹುದಾದರೂ ಎಪ್ಪತ್ತರ ದಶಕದ ನಂತರ ಕಾಣುವ ಮಹಿಳಾ ಪರವಾದ ಸ್ಪಷ್ಟವಾದ ನಿಲುವುಗಳನ್ನು ಕಾರಂತರ ಕಾದಂಬರಿಗಳಲ್ಲಿ ಗಮನಿಸಬಹುದು. ಗಾಂಧೀವಾದಿಯಾಗಿದ್ದ ಕಾರಂತರು ಗಾಂಧೀವಾದದಿಂದ ವಿಮುಖರಾಗಲು ಗಾಂಧೀಜಿಯವರ ವೇಶ್ಯೆಯರು ಬ್ರಹ್ಮಚರ್ಯೆಯನ್ನು ಪಾಲಿಸಬೇಕು ಎಂಬ ನಿಲುವು ಕಾರಣವಾಯಿತು ಎಂದು ತಿಳಿದುಬರುತ್ತದೆ.

ಕಾರಂತರು ಕನ್ನಡದ ಇತರ ಬರಹಗಾರರಿಗಿಂತ ಭಿನ್ನವಾಗಿ ಕಾಣುವುದು ಅವರ ಅಂತರ್‌ಶಿಸ್ತೀಯ ನಿಲುವಿನಿಂದ ಎನ್ನಬಹುದು. “ಆಡುಮುಟ್ಟದ ಸೊಪ್ಪಿಲ್ಲ ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ” ಎಂಬ ಮಾತು ಕ್ಲೀಷೆ ಎನಿಸಬಹುದಾದರೂ, ಅದರಲ್ಲಿ ಅವರ ಅಂತರ್‌ಶಿಸ್ತೀಯ ನಿಲುವಿನ ತಾತ್ವಿಕತೆಯಿದೆ. ಯಕ್ಷಗಾನದಂಥ ಕ್ಷೇತ್ರದಲ್ಲಿ  ನವೀನತೆಯನ್ನು ತರುವ ಪ್ರಯತ್ನಗಳಿಗೆ ಇಂದಿನ ಆಧುನಿಕ ಸಂದರ್ಭದಲ್ಲಿ  ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಕಾರಂತರು ರಷ್ಯಾದ ‘ಬ್ಯಾಲೆ’ಯನ್ನು ಯಕ್ಷಗಾನದೊಂದಿಗೆ  ಸಮೀಕರಿಸುವ ನವೀನ ಪ್ರಯೋಗವನ್ನು  ಮಾಡಿದರು. ಕಲಾ ಮೀಮಾಂಸೆಯ ಕುರಿತಾದ ಅವರ ಚಿಂತನೆಗಳಲ್ಲೂ ಈ ನಾವೀನ್ಯತೆಯನ್ನು ಕಾಣಬಹುದು. ಹಲವಾರು ಸಂಪ್ರದಾಯನಿಷ್ಠ ಯಕ್ಷಗಾನದ ಮನಸ್ಸುಗಳ ಮಧ್ಯೆಯೂ ಇಂಥ ಪ್ರಯೋಗಗಳಿಗೆ ಅವರು ದಾರಿಮಾಡಿಕೊಟ್ಟರು. ಅವಜ್ಞೆಗೆ ಒಳಗಾಗಿದ್ದ ಮಕ್ಕಳ ಶಿಕ್ಷಣ ಮತ್ತು ಸಾಹಿತ್ಯದ ಕುರಿತಾದ ಅವರ ಶ್ರಮಭರಿತ ಕೆಲಸಗಳು ಗಮನಾರ್ಹ. ಬಾಲಪ್ರಪಂಚ, ವಿಜ್ಞಾನ ಪ್ರಪಂಚ ಕೃತಿಗಳಲ್ಲಿ ಅವರ ಈ ಶ್ರಮ ಎದ್ದು ಕಾಣುತ್ತದೆ. ಪುತ್ತೂರಿನ ಬಾಲವನದ ಪ್ರಯೋಗವು ಇದಕ್ಕೆ ಸಾಕ್ಷಿಯಾಗಿದೆ. ಶಾಲಾ ಮಕ್ಕಳಿಗಾಗಿ ಅವರು ರಚಿಸಿದ ಪಠ್ಯಗಳು ಈ ನೆಲೆಯಲ್ಲಿ ಚಿಂತಿಸುವಂತೆ ಮಾಡುತ್ತವೆ. ಸಾಂವಿಧಾನಿಕ ಮೌಲ್ಯಗಳಿಗೆ ಚ್ಯುತಿ ಬಂದಾಗ ಅವರು ಕಾನೂನಾತ್ಮಕವಾಗಿ ಪ್ರತಿಭಟಿಸುತ್ತಿದ್ದ ಬಗ್ಗೆ ಹಲವಾರು ಉದಾಹರಣೆಗಳಿವೆ. ಕೈಗಾ ಅಣುಸ್ಥಾವರದ ವಿರುದ್ಧ ಅವರು ನಡೆಸಿದ ಹೋರಾಟ ಮತ್ತು ಅದಕ್ಕಾಗಿ ಚುನಾವಣೆಗೆ ಸಾಂಕೇತಿಕವಾಗಿ ಸ್ಪರ್ಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಚುನಾವಣೆಗೆ ನಾಮಪತ್ರ ಸಲ್ಲಿಸಿ, ಅಮೇರಿಕಾಕ್ಕೆ ಹೋದ ಕಾರಂತರಲ್ಲಿ ಯಾರೋ ಪ್ರಶ್ನಿಸಿದರಂತೆ. ನೀವು ಪ್ರಭಲ ಹೋರಾಟ ನೀಡುತ್ತಿದ್ದರೆ ಗೆಲ್ಲುತ್ತಿದ್ದಿರೋ ಏನೋ. ಆಗ ಕಾರಂತರ ಉತ್ತರ ಮಾರ್ಮಿಕವಾದುದು. ‘ನನ್ನನ್ನು ಗೌರವಿಸುವ ನನ್ನ ಎಲ್ಲಾ ಓದುಗರನ್ನು ಒಂದು ಗ್ರಾಮ ಪಂಚಾಯತಿನ ವ್ಯಾಪ್ತಿಗೆ ತಂದರೆ ಅಲ್ಲಿ ಗೆಲ್ಲುತ್ತಿದ್ದೆನೋ ಏನೋ?’ ರಾಜಕೀಯ ವಾಸ್ತವದ ಅರಿವು ಕಾರಂತರಿಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಕಾರಂತರು ಕೃತಿ ರಚನೆಯೊಂದಿಗೆ ಸಾಮಾಜಿಕ ಹೋರಾಟಗಳನ್ನು ಮಾಡಿದವರು. ಈ ದೃಷ್ಟಿಯಿಂದ ಕಾರಂತರು ಕನ್ನಡದ ಇತರ ಬರಹಗಾರಿಗಿಂತ ಭಿನ್ನವಾಗಿ ಕಾಣುತ್ತಾರೆ.

ಕಾರಂತರಿಗೆ 125 ವರ್ಷ ತುಂಬುವ ಸಂದರ್ಭದಲ್ಲಿ ಅವರ ಕೃತಿಗಳ ಮರುಚಿಂತನೆಯಾಗಲಿ ಎಂಬ ಆಶಯದಿಂದ ಈ ಪುಟ್ಟ ಟಿಪ್ಪಣಿ.

ಡಾ. ಗಣನಾಥ ಎಕ್ಕಾರು

ಚಿಂತಕರು       

ಇದನ್ನೂ ಓದಿ- ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ – 31 | ಮಂಗಳೂರು ವಾಸ ಆರಂಭ

More articles

Latest article

Most read