ತುಳು  ಭಾಷೆ: ಚಾರಿತ್ರಿಕ ಹಿನ್ನೆಲೆ ಮತ್ತು ಜನ ಬಳಕೆಯಲ್ಲಿ ತುಳು

ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 18, 2026 ರಂದು ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಎರಡನೇ ಹೆಚ್ಚುವರಿ ಆಡಳಿತ ಭಾಷೆ’ಯ ಅಧಿಕೃತ ಸ್ಥಾನಮಾನವನ್ನು ಘೋಷಿಸಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಗೆ ಇದೊಂದು ಐತಿಹಾಸಿಕ ಹೆಜ್ಜೆ. ಈ ಹಿನ್ನೆಲೆಯಲ್ಲಿ ತುಳು ಭಾಷೆಯ ಚಾರಿತ್ರಿಕ ಹಿನ್ನೆಲೆ ಹಾಗೂ  ತುಳುವಿನ ಬಳಕೆಯ  ಸುತ್ತ ಬೆಳಕು ಚೆಲ್ಲಿದ್ದಾರೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್‌.   

ಕ್ರಿಸ್ತ ಪೂರ್ವದಿಂದ ಆಧುನಿಕ ಕಾಲದೆಡೆಗೆ  ತುಳು ಭಾಷೆಯ  ಮಹಾ ಹರಿವು:

ತುಳು ಭಾಷೆ ಪ್ರಧಾನ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು.  ಕರ್ನಾಟಕ ರಾಜ್ಯದ ಪಶ್ಚಿಮ ಕರಾವಳಿಯ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿ ವ್ಯವಹಾರಿಕ ಭಾಷೆಯಾಗಿ ತುಳು ಬಳಕೆಯಲ್ಲಿದೆ.  ಈ ಎರಡು ಜಿಲ್ಲೆಗಳ ವ್ಯಾಪ್ತಿಯನ್ನು ದಾಟಿ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ದೊಡ್ಡ ಸಂಖ್ಯೆಯಲ್ಲಿ ತುಳುವರಿದ್ದಾರೆ. ಗಡಿನಾಡು ಕಾಸರಗೋಡಿನಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ತುಳುವರಿದ್ದಾರೆ. ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ  ನೆಲೆಸಿರುವ  ತುಳುವರು  ತಮ್ಮ ಮಾತೃ ಭಾಷೆ ತುಳುವಿನ ಕಂಪನ್ನು ಜಗದಗಲ ಪಸರಿಸಿದ್ದಾರೆ.  2011ರ ಭಾರತೀಯ ಜನಗಣತಿಯಲ್ಲಿ 18.46 ಲಕ್ಷ ತುಳು ಭಾಷಿಗರು ಎಂಬ  ಮಾಹಿತಿ ಇದೆ, 2026ಕ್ಕೆ  ಸಹಜ ಸ್ವಾಭಾವಿಕವಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತದೆ.  ದಕ್ಷಿಣ ಕನ್ನಡ ಹಾಗೂ ಉಡುಪಿ ವ್ಯಾಪ್ತಿಯ ಹೊರಗಡೆ ಜನಗಣತಿಯ ವೇಳೆ  ಕನ್ನಡ ಅಥವಾ ಆಯಾ ರಾಜ್ಯದ ಭಾಷೆಯನ್ನೇ ಹೆಚ್ಚಿನ ತುಳುವರು ತಮ್ಮ  ಮಾತೃ ಭಾಷೆ ಎಂದು ದಾಖಲಿಸಿಕೊಳ್ಳುತ್ತಾರೆ.  ಈ ಕಾರಣದಿಂದಾಗಿ ತುಳು ಭಾಷಿಗರ ಒಟ್ಟು  ಗಣತಿಗೆ ಪ್ರತ್ಯೇಕವಾದ ಮಾದರಿಯನ್ನು ಅನುಸರಿಸಬೇಕಾಗಬಹುದು.  ಎಲ್ಲೆಡೆಯ ತುಳು ಭಾಷಿಗರ ಲೆಕ್ಕಹಾಕಿದರೆ ಅದೂ 70 ಲಕ್ಷ ದಾಟುತ್ತದೆ ಎಂಬುದು  ವಿವಿಧ ತುಳು ಸಂಘ ಸಂಸ್ಥೆಗಳ  ಅಭಿಪ್ರಾಯ.

ತುಳು ಭಾಷೆಯ ಹಿನ್ನೆಲೆ : ಉಲ್ಲೇಖಗಳು

ಕ್ರಿಸ್ತ ಪೂರ್ವ 3 ನೇ ಶತಮಾನದ ಅಶೋಕ ಮಹಾರಾಜನ ಶಾಸನ ಬರಹಗಳಲ್ಲಿ ತುಳುವಿನ ಬಗ್ಗೆ ಉಲ್ಲೇಖಗಳು ಲಭಿಸಿವೆ.  ಕ್ರಿಸ್ತ ಪೂರ್ವ 263ನೇಯ ಸಿದ್ಧಾಪುರದಲ್ಲಿ ಲಭಿಸಿದ ಅಶೋಕನ ಕಾಲದ ಶಾಸನವು ತುಳುನಾಡನ್ನು ಸತೀಯ ಪುತ್ರರು ಎಂದು ವರ್ಣಸಿದೆ. (ಸತೀಯಪುತ್ರ=ತುಳುನಾಡು- ಮಂಜೇಶ್ವರ ಗೋವಿಂದ ಪೈ)  ಕ್ರಿಸ್ತ ಪೂರ್ವ 2 ನೇ ಶತಮಾನದ ಗ್ರೀಕ್‌ ಪ್ಯಾಪಿರೈ ಎಲೆಯಲ್ಲಿ ಬರೆಯಲಾದ ಗ್ರೀಕ್‌ ಭಾಷೆಯ ಕಿರುನಾಟಕ ಚಾರಿಸನ್ ಕೃತಿಯಲ್ಲಿ  ತುಳು ಭಾಷೆಯ ಸಂಭಾಷಣೆಗಳು ಕಂಡು ಬಂದಿವೆ. ‘ಸರಿತಿ’ (ಪಿ.ಎಸ್. ರೈ ಸಂಪಾದಿತ ಕೃತಿ-2010). ಪ್ರಾಚೀನ ತಮಿಳಿನ ಸಂಗಮ ಸಾಹಿತ್ಯದಲ್ಲೂ ತುಳು ಭಾಷೆಯ ಬಗ್ಗೆ  ಸಾಕಷ್ಟು  ಉಲ್ಲೇಖಗಳಿವೆ. ಕ್ರಿಸ್ತ ಶಕ ಮೂರನೇ ಶತಮಾನದ ಮಾಮೂಲನಾರ್‌ ಎಂಬ ಸಂಘಂ ಕವಿಯು ತುಳುನಾಡನ್ನು ಸುವರ್ಣ ಆಭರಣಗಳಿಂದ ಅಲಂಕೃತರಾದ ಕೋಶರ್‌ ಜನಾಂಗದ ತುಳುನಾಡು ಎಂದು ತನ್ನ ಒಂದು ಪದ್ಯದಲ್ಲಿ ವರ್ಣಿಸಿದ್ದಾನೆ. ಕ್ರಿಸ್ತ ಶಕ 1514ರಲ್ಲಿ ಪೋರ್ಚುಗೀಸ್ ಪ್ರವಾಸಿ ದುಆರ್ತೆ ಬಾರ್ಬೋಸಾ ಕರಾವಳಿಯನ್ನು  ಸಂದರ್ಶಿಸಿ ಈ ಕರಾವಳಿಯು ‘ತುಳುನಾಡು” ಎಂದು ಉಲ್ಲೇಖಿಸಿದ್ದಾನೆ .

12 ನೇ ಶತಮಾನದ ಆರಂಭದಲ್ಲೇ ತುಳುನಾಡಿನಲ್ಲಿ ತುಳು ಲಿಪಿ  ಬಳಕೆಯಲ್ಲಿ  ಇತ್ತು.  ಸಂಸ್ಕೃತ ಮತ್ತು ತುಳು ಬರವಣಿಗೆಗಾಗಿ ತುಳು ಲಿಪಿ ಬಳಕೆಯಲ್ಲಿತ್ತು. 14 ನೇ ಶತಮಾನಕ್ಕೆ ಸೇರಿದ ಪ್ರಾಚೀನ ತುಳು ಮಹಾಕಾವ್ಯಗಳು ಈಗಾಗಲೇ ಲಭಿಸಿವೆ. ತಾಳೆ ಗರಿಯಲ್ಲಿ ಬರೆಯಲ್ಪಟ್ಟ  ಮಹಾಭಾರತೋ, ಕರ್ಣ ಪರ್ವ, ಭಾಗವತೋ, ಕಾವೇರಿ  ಕೃತಿಗಳು  ತುಳು ಭಾಷೆಯ ಬಳಕೆಯ ಹಿರಿತನಕ್ಕೆ ಸಾಕ್ಷಿಯಾಗಿವೆ.

19ನೇ ಶತಮಾನದ ಆದಿಯಲ್ಲಿ ಜರ್ಮನ್‌ ದೇಶದ ಬಾಸೆಲ್‌ ನಿಂದ  ಮಂಗಳೂರಿಗೆ ಬಂದಿಳಿದ ಮಿಷನರಿಗಳು  ತುಳುವಿನ ಬಗ್ಗೆ ಆಧುನಿಕ ಭಾರತದ ಮೊದಲ ತುಳು ಅಧ್ಯಯನ, ಸಂಶೋಧನೆಯನ್ನು ಕೈಗೊಂಡು ತುಳು ಭಾಷೆಯ ಉನ್ನತಿಗೆ ಹೊಸ ದಿಕ್ಸೂಚಿಯನ್ನು ತೋರಿಸಿದರು. ಈ ಸಂದರ್ಭದಲ್ಲಿ  ಮಿಷನರಿ ಅಧ್ಯಯನಕಾರರಾದ  ಎ.ಸಿ. ಬರ್ನೆಲ್‌ ಅವರು ತನ್ನ ಎಲಿಮೆಂಟ್ಸ್‌ ಆಫ್‌ ಸೌತ್‌ ಇಂಡಿಯಾ ಪಾಲಿಯೋಗ್ರಾಪಿ (1874) ಕೃತಿಯಲ್ಲಿ ತುಳು ಲಿಪಿಯ  ಪಠ್ಯ ಸಮೇತ ಉಲ್ಲೇಖ ನೀಡಿರುತ್ತಾರೆ.  ವಿದ್ವಾನ್‌ ಡಾ. ವೆಂಕಟರಾಜ ಪುಣಿಂಚತ್ತಾಯರು ಅರುಣಾಬ್ಜ ಕವಿಯ ತುಳು ಮಹಾಭಾರತೋ, ವಿಷ್ಣು ತುಂಗ ಕವಿಯ ಶ್ರೀ ಭಾಗವತೋ ಎಂಬ ತುಳು ಭಾಷೆ ತುಳು ಲಿಪಿಯ ಮಹಾಕಾವ್ಯನ್ನು ಶೋಧನೆ ಮಾಡಿದ ಬಳಿಕ ಸಾವಿರಾರು ತಾಳೆಗರಿಯ ತುಳು ಗ್ರಂಥಗಳು, ಸಾಹಿತ್ಯಗಳು ಬೆಳಕಿಗೆ ಬಂದವು. 

ತುಳು ಶಾಸನಗಳು :

ತುಳುನಾಡು ವ್ಯಾಪ್ತಿಯ ಕೇರಳದ ದಕ್ಷಿಣ ಕಾಸರಗೋಡಿನಿಂದ ಕರ್ನಾಟಕದ ಉತ್ತರ ಕನ್ನಡದ ಹೊನ್ನಾವರ ವ್ಯಾಪ್ತಿಯ ತನಕ ತುಳುನಾಡು ಎಂದು ಪ್ರಸಿದ್ದಿಯಾಗಿದ್ದ ಈ  ಪ್ರದೇಶ ವ್ಯಾಪ್ತಿಯಲ್ಲಿ 50 ಕ್ಕೂ ಹೆಚ್ಚು ಹಳೆಯ ಕಾಲದ ತುಳು ಭಾಷೆಯ ಶಾಸನಗಳು ಲಭಿಸಿವೆ. ಅಂದಿನ ರಾಜಾಡಳಿತದ ದಾನ ದತ್ತಿಗಳ ಬಗ್ಗೆ, ಕೆಲವು ಚಾರಿತ್ರಿಕ ವಿಚಾರಗಳ ಕುರಿತಾಗಿ ತುಳುವಿನಲ್ಲಿ ವಿವರಗಳು ಈ ಶಾಸನಗಳಲ್ಲಿ ಲಭಿಸಿವೆ. ಶಾಸನಗಳಲ್ಲೂ ತುಳು ಬಳಸಲ್ಪಡುತ್ತಿತ್ತು ಎನ್ನುವುದಕ್ಕೆ ಇವುಗಳು ಸಾಕ್ಷಿಯಾಗಿವೆ. ಅಕ್ಷರಗಳು ಮಾಸಿರುವ ಕಾರಣದಿಂದಾಗಿ ಒಂದೆರೆಡು ಶಾಸನಗಳ ಪಠ್ಯವನ್ನು ಪೂರ್ಣವಾಗಿ ಓದಲು ಅಸಾಧ್ಯವಾದರೂ, ಬಹುತೇಕ ಶಾಸನಗಳ ಪಠ್ಯಗಳನ್ನು ವಿವಿಧ ಸಂಶೋಧಕರ ಹಾಗೂ ಸಂಶೋಧನಾ ಕೇಂದ್ರಗಳ ಮೂಲಕ ದಾಖಲೀಕರಣ ಮಾಡಲಾಗಿದೆ. ಶಾಸನಗಳಲ್ಲಿ  ತುಳು, ತುಳುವ, ತುಳುನಾಡು ಎಂಬ ಉಲ್ಲೇಖಗಳು ಕ್ರಿಸ್ತ ಶಕ 731 ರಿಂದ 795 ರ ಕಾಲಘಟ್ಟದಲ್ಲಿ ಬದುಕಿದ್ದ ಪಲ್ಲವ ದೊರೆ ನಂದಿ ವರ್ಮನ ಪಟ್ಟಟ್ಟಲ್‌ ಮಂಗಲ ತಾಮ್ರಪತ್ರದಲ್ಲಿ ಲಭಿಸುತ್ತದೆ. ಕ್ರಿಸ್ತ ಶಕ 1012 ರ ಬಲ್ಮುರಿ ಶಾಸನದಲ್ಲಿ ತುಳುವ ಎಂದು ಈ ಪ್ರದೇಶವನ್ನು ಉಲ್ಲೇಖಿಸಲಾಗಿದೆ. (ಎ ಹಿಸ್ಟರಿ ಆಫ್‌ ಸೌತ್‌ ಕೆನರಾ- ಡಾ.ಕೆ.ವಿ.ರಮೇಶ್‌ -1970, ಮತ್ತು ತುಳುನಾಡಿನ ಶಾಸನಗಳು ಡಾ.ಕೆ.ವಿ.ರಮೇಶ್‌ ಮತ್ತು ಎಂ.ಜೆ. ಶರ್ಮ-1978  ಹಾಗೂ ತುಳು ಶಾಸನಗಳು- ಪ್ರಧಾನ ಸಂಪಾದಕರು- ಎಸ್.ಎ. ಕೃಷ್ಣಯ್ಯ-2022).

ಆಧುನಿಕ ಜಗತ್ತಿನ  ಗಮನ ಸೆಳೆದ ತುಳು :

ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣದ ಪಿತಾಮಹ ಎಂದೆನಿಸಿಕೊಂಡಿರುವ ರಾಬರ್ಟ್‌ ಕಾಲ್ಡ್‌ವೆಲ್‌ ತನ್ನ  ಉದ್ಗ್ರಂಥವಾದ ‘ ಎ ಕಂಪಾರೆಟಿವ್‌ ಗ್ರಾಮರ್‌ ಆಫ್‌ ದಿ ಡ್ರಾವಿಡಿಯನ್‌ ಓರ್‌ ಸೌತ್‌ ಇಂಡಿಯನ್‌  ಫ್ಯಾಮಿಲಿ ಆಫ್‌ ಲ್ಯಾಂಗ್ವೇಜಸ್‌ ‘(1856) (A Comparative Grammar of the Dravidian Or South-Indian Family of Languages) ಗ್ರಂಥದಲ್ಲಿ ತುಳು ಭಾಷೆಯು ಮೂಲ ಸ್ವತಂತ್ರ ದ್ರಾವಿಡ ಭಾಷೆ ಎಂಬುದಾಗಿ ನಿಖರವಾಗಿ ಉಲ್ಲೇಖಿಸಿ ಆಧುನಿಕ ಭಾಷಾ ಅಧ್ಯಯನ ಜಗತ್ತಿನ ಗಮನ ಸೆಳೆದರು. ರಷ್ಯಾ ದೇಶದ  ಭಾಷಾ ಶಾಸ್ತಜ್ಞ ಎಂ.ಎಸ್. ಆಂಡ್ರೊನೋವ್ ಅವರ ಪ್ರಕಾರ ತುಳು ಭಾಷೆಯು 2000  ವರ್ಷಗಳ ಹಿಂದೆಯೇ ಮೂಲ ದ್ರಾವಿಡದಿಂದ ಪ್ರತ್ಯೇಕಗೊಂಡ ಭಾಷೆ (ಎಂ.ಎಸ್. ಆಂಡ್ರೊನೋವ್, ಡ್ರವೀಡಿಯನ್ ಲ್ಯಾಂಗ್ವೇಜಸ್, 1970).  ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ಪ್ರಾಧ್ಯಾಪಕ ಡಾ.ಪಿ.ಎಸ್ ಸುಬ್ರಮಣ್ಯನ್ ಅವರು ಗುರುತಿಸಿರುವಂತೆ, ತುಳು 2000  ವರ್ಷಗಳ ಹಿಂದೆ ಮೂಲ ದ್ರಾವಿಡದಿಂದ ಹೊರಬಂದ ಭಾಷೆ. (ಪೊಸಿಶನ್ ಅಫ್ ತುಳು ಇನ್ ಡ್ರವೀಡಿಯನ್ ಇಂಡಿಯನ್ ಲ್ಯಾಂಗ್ವೇಜಸ್,1968)

ತುಳು ಭಾಷೆಯ ಮೊತ್ತ ಮೊದಲ ವ್ಯಾಕರಣ ಕೃತಿ ಬರೆದ ರೆವೆರೆಂಡ್‌ ಜೆ.ಬ್ರಿಗೆಲ್‌ ‘ ಎ ಗ್ರಾಮರ್‌ ಆಫ್‌  ದಿ ತುಳು ಲ್ಯಾಂಗ್ವೇಜ್‌’’ (1872)  ಹಾಗೂ ನಂತರದ ದಶಕದಲ್ಲಿ ರೆವೆರೆಂಡ್‌ ಎ. ಮೆನ್ನರ್‌ ಅವರು ಅಂದಿನ ಮದ್ರಾಸ್‌ ಸರಕಾರದ ಧನ ಸಹಾಯದೊಂದಿಗೆ  ಪ್ರಕಟಿಸಿದ ‘ತುಳು ಇಂಗ್ಲಿಷ್‌ ಡಿಕ್ಷನರಿ’ (1886)  ತುಳು ಭಾಷೆಯನ್ನು ಹೊಸ ಮಜಲಿಗೆ  ಪರಿಚಯಿಸಲು ಕಾರಣವಾಯಿತು.  ಎಂ. ಗಣಪತಿ ರಾವ್‌ ಐಗಳ್‌ ಅವರು  ತನ್ನ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ (1923) ಕೃತಿಯಲ್ಲಿ ಕರಾವಳಿಯಲ್ಲಿ ತುಳು ಭಾಷೆಯೇ ಪ್ರಧಾನ ಭಾಷೆಯಾಗಿತ್ತು ಎಂದು ಉಲ್ಲೇಖಿಸಿದ್ದಾರೆ.

ಆಧುನಿಕ ಮುದ್ರಣ ಮಾಧ್ಯಮ ಬಂದ ಬಳಿಕ ತುಳು ಭಾಷೆ  ಕನ್ನಡ ಲಿಪಿಯನ್ನು ಒಪ್ಪಿಕೊಂಡಿತು ಮತ್ತು ಅದಕ್ಕೆ ಒಗ್ಗಿಕೊಂಡಿತು. ಈ ಒಂದು ಶತಮಾನದ ಅವಧಿಯಲ್ಲಿ   ಕನ್ನಡ ಲಿಪಿಯ ಮೂಲಕ ಸಾವಿರಾರು ತುಳು ಸಾಹಿತ್ಯ ಕೃತಿಗಳು  ಪ್ರಕಟಗೊಂಡವು. ಇದೀಗ ಪ್ರತಿ ವರ್ಷವೂ ಅನೇಕ ತುಳು ಸಾಹಿತ್ಯ ಕೃತಿಗಳು ಪ್ರಕಾಶನವಾಗುತ್ತಿವೆ.  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರಗಳ ತುಳು ಸಾಹಿತ್ಯ ಕೃತಿಗಳಿಗೆ ಪುಸ್ತಕ ಬಹುಮಾನವನ್ನು ನೀಡುತ್ತಾ ಬಂದಿದೆ. ಈ ರೀತಿಯ ಪ್ರೋತ್ಸಾಹದಿಂದಾಗಿ  ತುಳು ಬರವಣಿಗೆಯ, ಪ್ರಕಟಣೆಯ ಸಂಖ್ಯೆಯೂ ವೃದ್ಧಿಸಿದೆ. ಪ್ರಸ್ತುತ ಕರ್ನಾಟಕ ಸರಕಾರದ ವತಿಯಿಂದ  ಜಾರಿಯಲ್ಲಿರುವ ತೃತೀಯ ಭಾಷಾ  ಶಾಲಾ  ತುಳು ಪಠ್ಯ ಕ್ರಮಗಳು ಕೂಡ ಕನ್ನಡ ಲಿಪಿಯ ತುಳು ಪಠ್ಯಗಳಾಗಿವೆ.

ಯು.ಎಸ್. ಪಣಿಯಾಡಿ ಅವರ ತುಳು ಭಾಷಾ ಚಳವಳಿ :

ರಾಷ್ಟ್ರೀಯ ಚಳವಳಿಯ ಹಿನ್ನೆಲೆಯಲ್ಲಿ ತುಳು ಭಾಷೆಯ ಸಾಹಿತ್ಯದ ಬಗ್ಗೆ ಹೊಸ ಎಚ್ಚರ ಮೂಡಿಸಿದ ಕೀರ್ತಿ ಉಡುಪಿಯ ಪಣಿಯಾಡಿ ಶ್ರೀನಿವಾಸ ಉಪಾಧ್ಯರಿಗೆ ಸಲ್ಲುತ್ತದೆ.  ದೇಶದಲ್ಲಿ  ಸ್ವಾತಂತ್ರ್ಯ  ಚಳವಳಿಯು ಬಿರುಸಾಗಿ ಎಲ್ಲೆಡೆಯೂ ನಡೆಯುತ್ತಿದ ಕಾಲ ಸಂದರ್ಭದಲ್ಲಿ ಉದ್ಯೋಗ ನಿಮಿತ್ತ ತನ್ನ ಊರು ಉಡುಪಿಯಿಂದ  ಗುಜರಾತಿನ ಬರೋಡಾಗೆ ತೆರಳಿದ್ದ ಶ್ರೀನಿವಾಸ ಉಪಾಧ್ಯ ಪಣಿಯಾಡಿಯವರು ಅಂದು ಮಹಾತ್ಮಾಗಾಂಧೀಜಿಯವರು ನೀಡಿದ  ಸಂದೇಶದಂತೆ  ಪ್ರತಿಯೊಬ್ಬರು ತಮ್ಮ ತಮ್ಮ ಊರಿನಲ್ಲಿದ್ದುಕೊಂಡು ಸ್ವಾತಂತ್ರ್ಯ ಚಳವಳಿಗೆ ಕೈಜೋಡಿಸಬೇಕೆಂಬ    ಪ್ರೇರಣೆಯಿಂದ ತನ್ನ ಊರಿಗೆ ಮರಳಿ ಬಂದು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಕೊಳ್ಳುತ್ತಾರೆ. ಈ  ಸಂದರ್ಭದಲ್ಲಿ ಪಣಿಯಾಡಿಯವರು ತನ್ನ ಮಾತೃ ಭಾಷೆಯಾದ ತುಳು ಭಾಷೆಯ ಬೆಳವಣಿಗಾಗಿ ತುಳು ಚಳವಳಿಯನ್ನು ಆರಂಭಿಸುತ್ತಾರೆ. ಪಣಿಯಾಡಿ ಶ್ರೀನಿವಾಸ ಉಪಾಧ್ಯರು ತಮ್ಮ ‘ತುಳುವ ಸಾಹಿತ್ಯ ಮಾಲೆ’ ಪ್ರಕಾಶನ ಸಂಸ್ಥೆಯ ಮೂಲಕ 1928 ರಿಂದ 1940 ರ ಅವಧಿಯಲ್ಲಿ ಅನೇಕ ತುಳು ಕೄತಿಗಳನ್ನು ಪ್ರಕಟಿಸಿ ದೇಶಿಯ ತುಳು ಬರಹಗಾರರಿಗೆ ವೇದಿಕೆ ಒದಗಿಸಿದರು. ಸ್ವಾತಂತ್ರ್ಯ ಚಳವಳಿಯ ಕಾರಣಕ್ಕಾಗಿ 1930 ರಲ್ಲಿ ಬಂಧಿತರಾಗಿ  ವೆಲ್ಲೂರು ಜೈಲಿನಲ್ಲಿದ್ದ  ಪಣಿಯಾಡಿಯವರು ಜೈಲಿನಲ್ಲಿದ್ದುಕೊಂಡೇ ತುಳು ವ್ಯಾಕರಣ ಕೃತಿ ಬರೆಯುತ್ತಾರೆ, ಅವರೊಂದಿಗೆ ಜೈಲಿನಲ್ಲಿದ್ದ ಪೊಳಲಿ ಶೀನಪ್ಪ ಹೆಗ್ಗಡೆ, ಎನ್. ಎಸ್. ಕಿಲ್ಲೆ ಅವರು ಈ ಕೃತಿ ರಚನೆಗೆ ಸಲಹೆ ಸೂಚನೆಯನ್ನು ನೀಡುತ್ತಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ   1932 ರಲ್ಲಿ  ತುಳು ವ್ಯಾಕರಣವನ್ನು ತುಳು ಭಾಷೆಯಲ್ಲಿ ಪ್ರಕಟಿಸುತ್ತಾರೆ. ಇದು ತುಳು ಭಾಷೆಯಲ್ಲೇ  ತುಳುವರಿಂದ ಪ್ರಕಟಗೊಂಡ ಮೊದಲ ವ್ಯಾಕರಣ ಪುಸ್ತಕ.  ಮುಂದೆ  ಮೊದಲ ತುಳು ನಾಟಕ  ( ಜನಮರ್ಲ್-ಮಾಧವ ತಿಂಗಳಾಯ -‌1933), ಮೊದಲ ಕಾದಂಬರಿ ( ಮಿತ್ಯನಾರಾಯಣ ಕತೆ- ಶೀನಪ್ಪ ಹೆಗ್ಡೆ-1935)  ಕೃತಿ ಸೇರಿದಂತೆ ಹನ್ನೊಂದು ಕೃತಿಗಳನ್ನು  ಪ್ರಕಟಿಸುತ್ತಾರೆ. ಪಣಿಯಾಡಿವರ ನೇತೃತ್ವದ ತುಳು ಭಾಷಾ ಚಳವಳಿ ಹೊಸ ತಲೆಮಾರಿಗೆ ತುಳುವಿನ ಶೋಧ ಹಾಗೂ ಹೊಸ ಕೃತಿ ರಚನೆಗೆ ಬಹುದೊಡ್ಡ ಪ್ರೇರಣೆ ನೀಡಿತು.

ಆಧುನಿಕ ತುಳು ನಿಘಂಟು:

1988 ರಲ್ಲಿ ಕರ್ನಾಟಕ ಸರಕಾರದ ಆರ್ಥಿಕ ಸಹಕಾರದೊಂದಿಗೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಪ್ರೊ.ಕು.ಶಿ.ಹರಿದಾಸ ಭಟ್ಟರ ಮಾರ್ಗದರ್ಶನದಲ್ಲಿ ವಿದ್ವಾಂಸ ಡಾ. ಯು.ಪಿ.ಉಪಾಧ್ಯಾಯರ ಪ್ರಧಾನ ಸಂಪಾದಕತ್ವದಲ್ಲಿ ರಚನೆಗೊಂಡ ತುಳು ನಿಘಂಟು ಆರು ಸಂಪುಟಗಳಲ್ಲಿ ಪ್ರಕಟಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. 1979 ರಿಂದ 1988 ರ ತನಕ  ನಿರಂತರ   ಒಂಭತ್ತು ವರ್ಷಗಳ ಕಾಲ ಬಹುಶ್ರುತ ವಿದ್ವಾಂಸರ ತಂಡದ  ಪರಿಶ್ರಮದಿಂದಾಗಿ ಸಿದ್ದಗೊಂಡ ಈ ತುಳು-ಕನ್ನಡ-ಇಂಗ್ಲಿಷ್‌ ಶಬ್ದಕೋಶ  ಭಾರತೀಯ ಭಾಷೆಗಳಲ್ಲಿ ರೂಪುಗೊಂಡ ಅತ್ಯಪೂರ್ವ ನಿಘಂಟು ಎಂಬ ಹೆಗ್ಗಳಿಗೆ ಪಾತ್ರವಾಗಿದೆ.  ಈ ನಿಘಂಟು 1993ರ ಗುಂಡರ್ಟ್‌ ಪ್ರಶಸ್ತಿ ಪುರಸ್ಕೃತವಾಗಿದೆ. 

2019 ರಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯವು ತುಳು ಜ್ಞಾತಿ ಪದ ಸಂಚಯವನ್ನು ಪ್ರಕಟಿಸಿ ಮಹತ್ವದ ದಾಖಲೀಕರಣ ಮಾಡಿದೆ.(ಈ ಯೋಜನೆಗೆ ತುಳು ಅಕಾಡೆಮಿ ಕೂಡ ಆರ್ಥಿಕ ಸಹಾಯ ಒದಗಿಸಿತ್ತು.)

ತುಳುವೇತರರಿಗಾಗಿ ತುಳು ಕಲಿಕೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು  ಪ್ರಕಟಿಸಿರುವ  ‘ತುಳು ಕೇನ್ದ್‌ ಓದುದು ಬರೆದ್‌ ಕಲ್ಪುಲೆ’ (ಕೆ.ಟಿ.ಗಟ್ಟಿ-2007)  ಹಾಗೂ ತುಳು ಕೈಪಿಡಿ ( ಡಾ.ಯು.ಪಿ. ಉಪಾಧ್ಯಾಯ-1998) ಮಹತ್ವದ ತುಳು ಪರಿಚಯಿಸುವ ಕೃತಿಗಳಾಗಿವೆ.

(ಮುಂದುವರಿಯುವುದು- ಸಂ)

ತಾರಾನಾಥ್ ಗಟ್ಟಿ ಕಾಪಿಕಾಡ್

ಇವರು ಕಳೆದ ಎರಡೂವರೆ ದಶಕಗಳಿಂದ ಮಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವವರು. ನಾಟಕ, ರಂಗಭೂಮಿ ಬಗ್ಗೆ ಆಸಕ್ತರು. ತುಳು ಸಂಘಟನೆಯಲ್ಲಿ ಸಕ್ರಿಯರು. ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.

More articles

Latest article

Most read