ಪುಸ್ತಕದ ಓದು ಕೂಡಾ ವ್ಯವಹಾರವಾದಾಗ…

ಯಾವುದೇ ಪುಸ್ತಕದ ಕೊನೆಯ ಪುಟವನ್ನು ಓದಿ ಮಗುಚಿಟ್ಟ ಮೇಲೆ ಒಂದೋ ನಿಮ್ಮೊಳಗೆ ಲವಲವಿಕೆಯ ಖುಷಿ ಮೂಡಿರಬೇಕು ಅಥವಾ ವಿಮರ್ಶಾತ್ಮಕ ಚಿಂತನೆಯ ಪ್ರಶ್ನೆಗಳು ಗರಿಬಿಚ್ಚಿರಬೇಕು. ಇವೆರಡೂ ನಿಮ್ಮನ್ನು ಹಗುರಗೊಳಿಸುವಂತಿರಬೇಕು ಅಥವಾ ವಿಶಾಲಗೊಳಿಸುವಂತಿರಬೇಕು. ಒತ್ತಡ, ಧಾವಂತ, ಉದ್ವೇಗಗಳನ್ನು ಹೇರುವ ಓದು, ಓದಲ್ಲ! ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದೇ ಇಂಥಾ ಒತ್ತಡದ, ಉದ್ವೇಗದ ಓದಿನ ಕಾರಣಕ್ಕೆ ಗಿರೀಶ್‌ ತಾಳಿಕಟ್ಟೆ, ಪತ್ರಕರ್ತರು.

ಬೆಂಗಳೂರಿನ ಮೆಟ್ರೋದಲ್ಲಿ ಓಡಾಡುವಾಗ, ಕೆಲವರು ಮೊಬೈಲ್‌ ಸಂಕಲೆಯಿಂದ ಹೊರಬಂದು ಪುಸ್ತಕ ಓದುವುದನ್ನು ಕಂಡು ಖುಷಿಯಾಗಿತ್ತು. ನಿಧಾನಕ್ಕೆ ಅವರು ಓದುತ್ತಿರುವ ಕೃತಿಗಳ ವಸ್ತುವಿನ ಮೇಲೆ ಕಣ್ಣಾಡಿಸುತ್ತಾ ಬಂದಾಗ, ಬೇರೆಯದೇ ಆಲೋಚನೆ ನನ್ನನ್ನು ಕೆಣಕಲಾರಂಭಿಸಿತು. ಅದನ್ನಿಲ್ಲಿ ಹಂಚಿಕೊಂಡಿದ್ದೇನೆ.

ಪುಸ್ತಕಗಳು ಕೂತಲ್ಲಿಯೇ ನಮಗೆ ಇಡೀ ಜಗತ್ತನ್ನು ತಂದು ತೋರಿಸುತ್ತವೆ; ಕೂತಲ್ಲಿಯೇ ನಮ್ಮ ಒಳಗನ್ನೂ ತೆರೆದು ತೋರುತ್ತವೆ. ರಂಜನೆ ಮತ್ತು ಚಿಂತನೆ ಎರಡೂ ಸಿಗುವುದು ಪುಸ್ತಕದ ಓದಿನಿಂದ. ಆದರೆ ಈಗಿನ ನಾವಿನ್ಯಮಯ ಬದುಕು ನಮ್ಮಿಂದ ಬಹಳಷ್ಟು ಖುಷಿಗಳನ್ನು ಕಿತ್ತುಕೊಂಡಂತೆ, ಓದಿನ ಖುಷಿಯನ್ನೂ ಕಿತ್ತುಕೊಂಡಿದೆ. ಪುರಸೊತ್ತಿನ ಅಭಾವ ಒಂದು ಕಡೆಗಾದರೆ, ಅನಗತ್ಯ ಆಸಕ್ತಿಗಳ ಸುಳಿ ಓದಿಗೆ ಅಡ್ಡಿಯಾಗಿವೆ. ಇಲ್ಲೀಗ ಊಟ ಚುಟುಕು, ನಿದ್ರೆ ಚುಟುಕು, ಖುಷಿ ಚುಟುಕು, ನೋವು ಚುಟುಕು, ಸಂಬಂಧಗಳು ಚುಟುಕು, ಸ್ನೇಹಗಳು ಚುಟುಕು, ವಿಶ್ವಾಸಗಳು ಚುಟುಕು, ಬದುಕುಗಳೂ ಚುಟುಕು, ಸಾವುಗಳೂ ಚುಟುಕು. ಇಂಥಾ ಚುಟುಕಿನ ಪ್ರಪಂಚದಲ್ಲಿ ಸಾವಧಾನವಾಗಿ ಕೂತು ಓದುವ ವ್ಯವಧಾನ ಮೊಟಕಾಗುತ್ತಿದೆ. ಹಾಗೊಮ್ಮೆ ಓದಿದರು ಕೂಡಾ, ಆ ಓದು ಕೂಡಾ ವ್ಯವಹಾರಮಯದ್ದು. ಮೋಟಿವೇಷನಲ್‌ ಹೆಸರಿನಲ್ಲಿ, ಸಕ್ಸಸ್‌ಫುಲ್‌ ಬ್ಯುಸಿನೆಸ್ ಮನ್‌ ಆಗುವುದು ಹೇಗೆ; ಟೈಮ್ ಮ್ಯಾನೇಜ್‌ ಮಾಡುವುದು ಹೇಗೆ; ಆಫೀಸ್‌ ಒತ್ತಡ ನಿಭಾಯಿಸುವುದು ಹೇಗೆ; ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆ; ಹೂಡಿಕೆ ಮಾಡುವುದು ಹೇಗೆ; ಹಣ ಗಳಿಸುವುದು ಹೇಗೆ- ಉಳಿಸುವುದು ಹೇಗೆ…. ಇಂಥಾ  ಓದಿನ ಸರಕುಗಳೇ ಹೆಚ್ಚಾಗಿವೆ. ವಿಪರ್ಯಾಸವೆಂದರೆ ಇಂಥಾ ಓದುಗಳು ನಮ್ಮನ್ನು ಸುಳಿಯಿಂದ ಹೊರಕ್ಕೆ ಕರೆದೊಯ್ದಂತೆ ಗೋಚರಿಸುತ್ತಲೇ, ಇನ್ನಷ್ಟು ಅದೇ ಸುಳಿಯೊಳಗೆ ಅದುಮಿಬಿಡುವಂತಹ ಓದುಗಳು. ಯಾವ ಧಾವಂತಗಳ ಬಲೆಯಲ್ಲಿ ಬಿದ್ದು ಚೆಂದವಾಗಿ, ಸರಳವಾಗಿ ಬದುಕುವುದನ್ನು ಮರೆತಿದ್ದೇವೆಯೋ, ಅದೇ ಧಾವಂತಗಳನ್ನೆ ನಮ್ಮ ಬದುಕಿನ ಗುರಿಯಾಗಿಸಿ, ಅಲ್ಲಿ ಸಿಕ್ಕಿ ನರಳಾಡುವುದೇ ಗೆಲುವು ಎಂದು ಮೊಳೆ ಹೊಡೆಯುತ್ತವೆ. ಗೆಲ್ಲುವುದು ನಮ್ಮ ಗುರಿಯಾಗುವ ಬದಲು, ನಮ್ಮ ಉದ್ವೇಗವಾಗುತ್ತದೆ. ಆದರೆ ಓದಿನ ಮೂಲಗುಣ ಉದ್ವೇಗವನ್ನು ಹುಟ್ಟುಹಾಕುವುದಲ್ಲ; ನಮ್ಮ ಉದ್ವೇಗಗಳನ್ನು ತಣಿಸಿ, ನೋಟಗಳನ್ನು ವಿಶಾಲಗೊಳಿಸುವುದು.

ಓದಿನ ಖುಷಿ ಎಷ್ಟು ಆಹ್ಲಾದಕರವಾಗಿರಬೇಕೆಂದರೆ, ಗಿಡವೊಂದರ ತುದಿಯಲ್ಲಿ ಹೂವು ತಾನಾಗಿಯೇ ಅರಳಿದಂತಿರಬೇಕು. ಆ ಅರಳುವಿಕೆ ಒಂದು ಪ್ರಕ್ರಿಯೆ ಎನ್ನುವುದಾದರೆ, ಆ ಪ್ರಕ್ರಿಯೆಗೆ ಒಂದಷ್ಟು ಆಂತರಿಕ ಮತ್ತು ಬಾಹ್ಯ ಪ್ರೇರಣೆಗಳು ಇರುತ್ತವೆ. ನೀರು, ಗಾಳಿ, ನೆಲ, ನೇಸರ ಉದ್ದೇಶವಿಲ್ಲದೆ ಕಲೆತು ಆ ಅರಳುವಿಕೆಗೆ ಪ್ರೇರಣೆಯಾಗುತ್ತವೆ. ಆದರೆ ಆ ಅರಳುವಿಕೆಯೇ ಒಂದು ಉದ್ದೇಶಿತ ಉದ್ಯಮವಾದರೆ! ಗಿಡದ ಬುಡಕ್ಕೆ ರಾಸಾಯನಿಕಗಳು ಬಂದು ಬೀಳುತ್ತವೆ; ಎಲೆ ಕಾಂಡಗಳನ್ನು ಕೀಟನಾಶಕಗಳು ಆವರಿಸಿಕೊಳ್ಳುತ್ತವೆ; ಹೂವು ಬಲವಂತಕ್ಕೆ ಬಸಿರಾದಂತೆ ಅರಳಬೇಕಾಗುತ್ತದೆ. ಆ ಕ್ಷಣಕ್ಕೆ ಅದು ಲಾಭದಾಯಕ, ಅದೇ ಸರಿ ಅಂತನ್ನಿಸಿದರೂ ನಿಸರ್ಗದ ಸತ್ವವನ್ನು ಅವು ಹೀರಿಹಾಕಿದ್ದು ಅರ್ಥವಾಗಲು ತುಂಬಾ ಸಮಯವೇ ಬೇಕಾಗುತ್ತದೆ. ಆ ಹೀರುವಿಕೆಯಲ್ಲಿ ಅರಳುವಿಕೆಯ ಆಹ್ಲಾದವೂ ಉದ್ವೇಗವಾಗಿ ಬದಲಾಗಿರುತ್ತದೆ.

ನಿಜವಾದ ಓದಿನ ಗುಣ ಇದಲ್ಲ. ಓದು, ಅನುದ್ದೇಶವಾಗಿ ರಂಜಿಸುತ್ತಲೇ ನಮ್ಮ ಆಲೋಚನೆಗಳನ್ನು ವಿಶಾಲಗೊಳಿಸಬೇಕು, ಆ ಮೂಲಕ ನಮ್ಮಲ್ಲಿ ಚಿಂತನೆಗಳನ್ನು ಕಡೆಯಬೇಕು. ಆ ಚಿಂತನೆಗಳು ನಮ್ಮನ್ನು ಪ್ರಬುದ್ಧರಾಗಿಸುತ್ತವೆ. ಆ ಪ್ರಬುದ್ಧತೆ ನಮ್ಮಲ್ಲಿ ಬದುಕುವ ಆತ್ಮವಿಶ್ವಾಸ, ಅಂತಃಕರಣವನ್ನು ಪ್ರಚೋದಿಸುತ್ತವೆ. ಅಂತಹ ಪ್ರಚೋದನೆಗಳು ಯಾವುದೇ ಸವಾಲು, ಸಮಸ್ಯೆ, ಸಂಕೀರ್ಣತೆಗಳನ್ನು ಎದುರಿಸಲು ನಮ್ಮಲ್ಲಿ ಭರವಸೆ ತುಂಬುತ್ತವೆ. ಸೃಜನಶೀಲ ಸಾಹಿತ್ಯ, ಚಿಂತಕರ ನೋಟಗಳು, ದೇಶ-ವಿದೇಶಗಳ ಜನಜೀವನವನ್ನು ಕಟ್ಟಿಕೊಡುವಂತಹ ಅನುಭವ ಕಥನಗಳು, ವಿಜ್ಞಾನದ ಕೌತುಕಗಳು, ನಿಸರ್ಗದ ವಿಸ್ಮಯಗಳು ಹೀಗೆ ನಮ್ಮನ್ನು ನಮಗರಿವಿಲ್ಲದೆ ವಿಶಾಲಗೊಳಿಸುವ ಸಾಕಷ್ಟು ಸಾಹಿತ್ಯಗಳು ಲಭ್ಯವಿವೆ. ರಂಜನೆ, ಚಿಂತನೆ, ಪ್ರಚೋದನೆಗಳು ಅಲ್ಲಿ ನಮ್ಮ ನಿಲುಕಿಗೆ ತಕ್ಕಂತೆ ಲಭಿಸುತ್ತಾ, ಮುಖ್ಯವಾಗಿ ನಮಗೆ ನಿಗದಿತ ಗುರಿಗಳನ್ನು ಹೇರಿ ನಮ್ಮನ್ನು ಉದ್ವೇಗಕ್ಕೆ ತಳ್ಳದಂತೆ,  ಹಗುರವಾಗಿಸುತ್ತವೆ. ಅಂತಹ ಓದು ನಮ್ಮ ಆಯ್ಕೆಯಾಗಬೇಕಿದೆ.

ಬಹುಶಃ ಗೆದ್ದೇ ಬಿಡಬೇಕೆಂಬ ಧಾವಂತದಲ್ಲಿರುವವರಿಗೆ ಈ ಬರಹ ರುಚಿಸದಿರಬಹುದು; ಅಥವಾ ಆಕ್ಷೇಪಣೆಗಳನ್ನೂ ಹುಟ್ಟಿಸಬಹುದು. ಅದು ಕಾಲದ ಮಹಿಮೆ. ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂದು ಕೊಪರ್ನಿಕಸ್‌ ಮೊದಲ ಬಾರಿ ಹೇಳಿದಾಗ, ಜನ ಅವನನ್ನು ಹುಚ್ಚ ಎಂದರು. ಯಾಕೆಂದರೆ ಆಗಿನ ಕಾಲದ ಓಘಕ್ಕಿಂತ ಭಿನ್ನವಾಗಿತ್ತು ಅವನ ವಾದ. ನನ್ನನ್ನು ನಾನು ಕೊಪರ್ನಿಕಸನಿಗೆ ಅಥವಾ ನನ್ನ ವಾದವನ್ನು ಅವನ ವೈಜ್ಞಾನಿಕ ಸತ್ಯಕ್ಕೆ ಸಂತುಲಿಸಿಕೊಳ್ಳುತ್ತಿಲ್ಲ. ಕಾಲದ ಮಹಿಮೆ ಒಮ್ಮೊಮ್ಮೆ ಸತ್ಯ-ಮಿಥ್ಯಗಳನ್ನು ಅದಲುಬದಲಾಗಿಸಿ ತೋರುತ್ತದೆ ಎಂಬುದಕ್ಕಷ್ಟೇ ಈ ಉದಾಹರಣೆ.

ಕೊನೆಯದಾಗಿ, ಯಾವುದೇ ಪುಸ್ತಕದ ಕೊನೆಯ ಪುಟವನ್ನು ಓದಿ ಮಗುಚಿಟ್ಟ ಮೇಲೆ ಒಂದೋ ನಿಮ್ಮೊಳಗೆ ಲವಲವಿಕೆಯ ಖುಷಿ ಮೂಡಿರಬೇಕು ಅಥವಾ ವಿಮರ್ಶಾತ್ಮಕ ಚಿಂತನೆಯ ಪ್ರಶ್ನೆಗಳು ಗರಿಬಿಚ್ಚಿರಬೇಕು. ಇವೆರಡೂ ನಿಮ್ಮನ್ನು ಹಗುರಗೊಳಿಸುವಂತಿರಬೇಕು ಅಥವಾ ವಿಶಾಲಗೊಳಿಸುವಂತಿರಬೇಕು. ಒತ್ತಡ, ಧಾವಂತ, ಉದ್ವೇಗಗಳನ್ನು ಹೇರುವ ಓದು, ಓದಲ್ಲ! ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದೇ ಇಂಥಾ ಒತ್ತಡದ, ಉದ್ವೇಗದ ಓದಿನ ಕಾರಣಕ್ಕೆ.

ಗಿರೀಶ್‌ ತಾಳಿಕಟ್ಟೆ

ಪತ್ರಕರ್ತರು, ಕನ್ನಡದ ಪ್ರಸಿದ್ಧ ಲೇಖಕರು ಮತ್ತು ಅನುವಾದಕರು.

ಇದನ್ನೂ ಓದಿ- ಮತ್ತೆ ವಂದೇ ಮಾತರಂ ವಿವಾದ

More articles

Latest article

Most read