ಸ್ವಾತಂತ್ರ್ಯೋತ್ಸವದ ವಿಶೇಷ ಲೇಖನ
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಹೋರಾಟದ ಮೂಲಕ ಮತ್ತೆ ಪ್ರಜಾಪ್ರಭುತ್ವವು ಮೌಲ್ಯಗಳನ್ನು ರೂಪಿಸಲು ಸಾಧ್ಯವಿದೆ ಎಂಬ ಸಣ್ಣ ಆಶಾವಾದವನ್ನು ಜೆನ್ ಝೀ ಹೋರಾಟ ತೋರಿಸಿಕೊಟ್ಟಿದೆ – ಡಾ. ಗಣನಾಥ ಎಕ್ಕಾರು.
1926 ರಿಂದ ಡಾ| ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಹೋರಾಟದಷ್ಟೇ ಮಹತ್ವವನ್ನು ಅಸ್ಪೃಶ್ಯತೆ ಆಚರಣೆ ವಿರುದ್ಧದ ಹೋರಾಟಕ್ಕೂ ನೀಡಿದ್ದರು. ಸಮಾನತೆ ಇಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂಬುದು ಅಂಬೇಡ್ಕರ್ ಅವರ ದೃಢವಾದ ನಂಬಿಕೆಯಾಗಿತ್ತು. ಈ ಉದ್ದೇಶಕ್ಕಾಗಿಯೇ ಧಾರ್ಮಿಕ ನಂಬಿಕೆಗಳಲ್ಲಿ ವಿಶ್ವಾಸವಿಲ್ಲದ ಅಂಬೇಡ್ಕರ್ ಅವರು ನಾಸಿಕದ ಕೇಳರಾಮನ ದೇವಸ್ಥಾನ ಪ್ರವೇಶ ಮತ್ತು ಮಹಾಡದ ಚೌಡ ಕೆರೆಯ ವಿಷಯವಾಗಿ ಆಂದೋಲನವನ್ನೂ ರೂಪಿಸಿದರು. ಧಾರ್ಮಿಕ ನಂಬಿಕೆಗಳನ್ನು ಮುರಿಯದೆ ಸಮಾನತೆ ಸಾಧ್ಯವಿಲ್ಲ ಎಂಬುದನ್ನು ಅವರ ಈ ಹೋರಾಟವು ಸೂಚಿಸುತ್ತದೆ. ಸ್ವಾತಂತ್ರ್ಯ ಪಡೆದು 80 ವರ್ಷಗಳಾಗುತ್ತಿದ್ದರೂ ಇಂದು ಕೂಡ ಮನೋಭಾವದಲ್ಲಿ ವ್ಯಾಪಕ ಬದಲಾವಣೆ ಆಗದಿರುವುದನ್ನು ಗಮನಿಸಬಹುದಾಗಿದೆ. ಉತ್ತರಾಖಂಡದ ಹಲದ್ವಾನಿಯಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ಉದಾಹರಣೆ.
ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ರಾಷ್ಟ್ರದ ಅತಿ ದೊಡ್ಡ ರಾಜಕೀಯ ಪಕ್ಷದ ಮುತ್ಸದ್ದಿ ಮಾತ್ರವಲ್ಲ ಆರು ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾದ ಹಿರಿಯ ರಾಜಕಾರಣಿ. ಉತ್ತರಾಖಂಡದ ಹಲದ್ವಾನಿಯಲ್ಲಿ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ರಾಮಸೇನೆಯ ಗಿರೀಶ ಪಾಂಡೆಯ ನೇತೃತ್ವದಲ್ಲಿ ಶುದ್ಧೀಕರಿಸಲಾಯಿತು. ಈ ಶುದ್ಧೀಕರಣಕ್ಕೆ ಪಾಂಡೆಯವರು ನೀಡುವ ಎರಡು ಕಾರಣಗಳೆಂದರೆ- ಸನಾತನ ಸಂಸ್ಥೆಗಳನ್ನು ಖರ್ಗೆಯವರು ವಿಷ ಎಂದು ಕರೆದರು ಮತ್ತು ಹಿಂದೂಯೇತರರೊಂದಿಗೆ ಅವರು ವೇದಿಕೆಯನ್ನು ಹಂಚಿಕೊಂಡರು. ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಹಲವಾರು ಡಾಕ್ಟರೇಟ್ ಪಡೆದ ಮಹಾಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಭಾರತದಲ್ಲಿ ಅಸ್ಪೃಶ್ಯತೆಗೆ ಒಳಗಾದ ಕಥಾನಕವನ್ನು ಇದು ನೆನಪಿಸುತ್ತದೆ. ಸಂವಿಧಾನ ಅನುಷ್ಠಾನಗೊಂಡು ಎಪ್ಪತ್ತಾರು ವರ್ಷದ ಬಳಿಕವೂ ಪರಿಸ್ಥಿತಿಗಳಲ್ಲಿ ಹೆಚ್ಚು ಬದಲಾವಣೆಗಳಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಸಂವಿಧಾನದ ಹಲವು ವಿಧಿಗಳು ಮತ್ತು ಅದರ ಅನುಸಾರ ರಚಿತವಾದ ಬಲವಾದ ಕಾನೂನು ಇದ್ದರೂ ಸಂಬಂಧಿಸಿದ ಸರಕಾರಗಳು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಖರ್ಗೆಯಂಥ ನೇತಾರರ ಸ್ಥಿತಿಯೇ ಹೀಗಾದರೆ ಇನ್ನೂ ಸಾಮಾನ್ಯ ದಲಿತರ ಸ್ಥಿತಿ ಹೇಗಿರಬಹುದು ಎಂಬುದು ಚಿಂತಿಸಿದರೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಇದು ವ್ಯಂಗ್ಯ ಮಾಡುವಂತಿದೆ.
ಸ್ವಾತಂತ್ರ್ಯದ ಸಂದರ್ಭದಲ್ಲಿ ವಿಶ್ಲೇಷಣೆಗೆ ಅತ್ಯುತ್ತಮ ಉದಾಹರಣೆ ಎಂದರೆ ಕಾಕ್ರೋಚ್ ಜನತಾಪಕ್ಷ. ಇದು ಈಗಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ ಮತ್ತು ದೌರ್ಬಲ್ಯ ಎರಡಕ್ಕೂ ಸಂಕೇತ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಸೂರ್ಯಕಾಂತ್ ಅವರು ಯುವಕರಿಗೆ ಸಾಂದರ್ಭಿಕವಾಗಿ ಬಳಸಿದ ‘ಜಿರಳೆ’ಗಳು ಎಂಬ ಪದವು ಒಂದು ಪ್ರತಿಹೋರಾಟದ ಶಕ್ತಿಯ ಉದಯಕ್ಕೆ ಕಾರಣವಾಯಿತು. ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಹೇಳುವಂತೆ ಕೇವಲ ಎರಡು ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಶಕಗಳಿಗೂ ಹೆಚ್ಚು ಕಾಲದ ಸಾರ್ವಜನಿಕ ಇಮೇಜನ್ನು ನಾಶಗೊಳಿಸಿತು. ಈ ಮಾತಿನಲ್ಲಿ ಸತ್ಯಾಂಶವಿದೆ. 2014ರ ಚುನಾವಣೆಯ ಮೂಲಕ ಕಾಲ್ಪನಿಕ ವಿಶ್ವಗುರುವನ್ನು ಸೃಷ್ಟಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ಈ ರೀತಿ ಸೃಷ್ಠಿಗೆ ಸಾಕಷ್ಟು ಅವಕಾಶಗಳಿವೆ. ಬಸಂತಪ್ಪರಂತಹ ಸಾಮಾನ್ಯ ಕೂಲಿಕಾರ್ಮಿಕರ ಮಗನೊಬ್ಬ ಮಂತ್ರಿಯಾಗುವ ಅವಕಾಶವಿದ್ದ ಹಾಗೆಯೇ ಕೃತಕ ಇಮೇಜಿನ ಮೂಲಕ ಸಾರ್ವಜನಿಕ ವಲಯದಲ್ಲಿ ವ್ಯಕ್ತಿಗಳ ವ್ಯಕ್ತಿತ್ವ ನಿರ್ಮಾಣಕ್ಕೂ ಅವಕಾಶವಿದೆ. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯವಾಗಿಸುವ, ಆ ಸತ್ಯವನ್ನು ನಂಬಿಸಿ ಮಹಾತ್ಮನಾಗುವ ಸಾಧ್ಯತೆಯನ್ನು ಇದು ತೆರೆದಿಟ್ಟಿದೆ. ಇಲ್ಲಿ ಮಹಾತ್ಮಾಗಾಂಧಿ ಮತ್ತು ಮೋದಿಯವರಿಗಿರುವ ವ್ಯತ್ಯಾಸವನ್ನು ಉಲ್ಲೇಖಿಸಬೇಕು.

ಗಾಂಧೀಜಿಯವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು ಕೆಲವು ತತ್ವಗಳ ಪ್ರಯೋಗಶೀಲತೆಯ ಮೂಲಕ ಸತ್ಯವನ್ನು ಕಂಡು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದರು. ಅವರೆಂದೂ ಸುಳ್ಳನ್ನು ಸತ್ಯವೆಂದು ನಂಬಿಸುವ ಚಿಕ್ಕ ಪ್ರಯತ್ನವನ್ನೂ ಮಾಡಿಲ್ಲ. ಅನುಭವದ ಮೂಲಕ ಭ್ರಮೆಗಳಿಂದ ಕಳಚಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಇಡೀ ಭಾರತದ ನಾಯಕನಾಗಿ ಮೂಡಿಬಂದರು. ಗಾಂಧೀಜಿಯವರು ಗಳಿಸಿಕೊಂಡ ಇಮೇಜ್ ಕೃತಕವಾಗಿರಲಿಲ್ಲ ಸಹಜವಾಗಿತ್ತು. ಆದರೆ ಮೋದಿಯವರ ಕೃತಕ ಇಮೇಜಿನ ಒಂದೊಂದೇ ಪದರಗಳು ಕಳಚಲಾರಂಭಿಸಿದೆ. ಅದನ್ನು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಹೋರಾಟವು ಇನ್ನಷ್ಟು ಸ್ಫುಟಗೊಳಿಸಿದೆ.
ಆರಂಭದಲ್ಲಿ ವಿದ್ಯಾರ್ಥಿಗಳ ಹೋರಾಟವನ್ನು ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ 2014ರ ನಂತರ ಪ್ರಜಾಪ್ರಭುತ್ವದ ಮುಖ್ಯ ಶಕ್ತಿಯಾದ ಅಹಿಂಸಾತ್ಮಕವಾಗಿ ಹೋರಾಡುವ ಸ್ವಾತಂತ್ರ್ಯದ ಶಕ್ತಿಯನ್ನು ಹಂತಹಂತವಾಗಿ ಕುಗ್ಗಿಸುವ ಪ್ರಯತ್ನ ನಡೆಯಿತು. ಪಂಜಾಬಿನಲ್ಲಿ ಮತ್ತು ದೆಹಲಿಯಲ್ಲಿ ನಡೆದ ರೈತ ಹೋರಾಟ ಇದಕ್ಕೆ ಒಳ್ಳೆಯ ಉದಾಹರಣೆ. ಕಳೆದ 12 ವರ್ಷಗಳಲ್ಲಿ ಯಾವುದೇ ಅಹಿಂಸಾತ್ಮಕ ಹೋರಾಟ ಯಶಸ್ಸನ್ನು ಕಂಡಿಲ್ಲ. ಬೆಲೆಯೇರಿಕೆ, ಖಾಸಗೀಕರಣ, ಮಿತಿ ಮೀರಿದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳಿದ್ದರೂ ಅದನ್ನು ವಿರೋಧಿಸುವ ಶಕ್ತಿಯುತವಾದ ಹೋರಾಟ ರೂಪುಗೊಂಡಿರಲಿಲ್ಲ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಹೋರಾಟವು ಬಿಜೆಪಿ ಮತ್ತು ಕೇಜ್ರಿವಾಲ್ ಅವರ ರಾಜಕೀಯ ಅಧಿಕಾರಕ್ಕೆ ಮೆಟ್ಟಿಲಾಯಿತು. ಇದರಿಂದ ಜನರು ಹೋರಾಟಗಳನ್ನು ಸಂಶಯದಿಂದಲೇ ನೋಡುವಂತಾಯಿತು.
ಆದರೆ ಕಾಕ್ರೋಚ್ ಜನತಾ ಪಾರ್ಟಿಯಿಂದ ಆರಂಭವಾದ ವಿದ್ಯಾರ್ಥಿ ಹೋರಾಟವು ಹಲವು ಆಯಾಮಗಳನ್ನು ಪಡೆದುಕೊಂಡಿತು. ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭವಾದ ಸಣ್ಣ ಹೋರಾಟವು ಎಲ್ಲಾ ರಾಜ್ಯಗಳಿಗೂ ಹಬ್ಬಿ ಅದುವರೆಗೆ ಅದುಮಿಟ್ಟ ಹೋರಾಟದ ಕಿಚ್ಚನ್ನು ಬಡಿದೆಬ್ಬಿಸಿತು. ಕಾಕ್ರೋಚ್ ಜನತಾ ಪಕ್ಷಕ್ಕೆ ಸಂಬಂಧಿಸಿರದ ಎಡಪಂಥೀಯ ಮತ್ತು ಪ್ರಗತಿಶೀಲ ಮನೋಭಾವದ ವಿದ್ಯಾರ್ಥಿಗಳು ತಮ್ಮದೇ ಆದ ಹೋರಾಟ ತಂತ್ರವನ್ನು ರೂಪಿಸಿಕೊಂಡರು. ಅಖಿಲಭಾರತ ವಿದ್ಯಾರ್ಥಿ ಸಂಘಟನೆಯ ನೇಹಾ ಬೋರಾರಂತಹ ಯುವತಿಯರು ತೋರಿದ ದಿಟ್ಟತನ ಮತ್ತು ಸೈದ್ಧಾಂತಿಕ ಸ್ಪಷ್ಟತೆಯು ನಮ್ಮ ಗಮನ ಸೆಳೆಯುತ್ತದೆ. ಸರಕಾರವು ನಿರೀಕ್ಷೆ ಮಾಡದ ರೀತಿಯಲ್ಲಿ ರಾಷ್ಟ್ರದ ವಿವಿಧ ಭಾಗಗಳಲ್ಲಿ ಚಳವಳಿ ಹಬ್ಬಿ ಸರಕಾರವು ಮಣಿಯಿತು. ಮೋದಿ ಸರಕಾರ ಬಂದ ಬಳಿಕ ಅಪರೂಪವೆನ್ನುವಂತೆ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು. ಮುಂದೆ ಇದು ಯಾವ ರೀತಿಯ ತಿರುವನ್ನು ಪಡೆಯುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗದಿದ್ದರೂ ಪ್ರಜಾಪ್ರಭುತ್ವವು ವ್ಯವಸ್ಥೆಯ ಆಂತರ್ಯದಲ್ಲಿ ಹುದುಗಿರುವ ಅಹಿಂಸಾತ್ಮಕ ಹೋರಾಟದ ಕಿಚ್ಚನ್ನು ತೋರಿಸಿಕೊಟ್ಟಿದೆ. ಆಳುವ ಸರಕಾರಗಳು ತೋರಬಹುದಾದ ಕ್ರೌರ್ಯಗಳನ್ನು ಹೋರಾಟವು ಎದುರಿಸಬಲ್ಲದು ಎಂಬುದನ್ನು ಈ ಚಳವಳಿಯು ಸಾಬೀತುಪಡಿಸಿದೆ.
ಭಾರತದ ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಮೌಲ್ಯಗಳಿಗೆ ಮಹತ್ವವಿದೆ. ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಸಾಮಾಜಿಕ ನ್ಯಾಯಗಳು ಸಂವಿಧಾನದ ಅಡಿಗಲ್ಲುಗಳು. ಆದರೆ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ ಸ್ಥಳವನ್ನು ಶುದ್ಧೀಕರಿಸಿದ್ದನ್ನು ನೋಡಿದರೆ, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅಸಮಾನತೆಯನ್ನು ಅನುಭವಿಸಿ, ಅಸ್ಪೃಶ್ಯತೆಯ ವಿರುದ್ಧ ಹೋರಾಟ ರೂಪಿಸಿ, ಸಮಾನತೆಯ ಮೌಲ್ಯಗಳ ಸ್ಥಾಪನೆಗೆ ಬಹುಜನರ ಹೋರಾಟದ ಅಗತ್ಯವನ್ನು ಇಂದು ಪ್ರತಿಪಾದಿಸಿದ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ನೆನಪಾಗುತ್ತಾರೆ. ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ಜೆನ್ ಝೀಗಳು ನಡೆಸಿದ ಹೋರಾಟಕ್ಕೆ ಸರಕಾರ ಒಡ್ಡಿದ ತೊಂದರೆಗಳನ್ನು ಗಮನಿಸಿದರೆ, ನಿಜವಾಗಿಯೂ ಸಂವಿಧಾನದತ್ತ ಸ್ವಾತಂತ್ರ್ಯ ಇದೆಯೆ ಎಂಬ ಪ್ರಶ್ನೆ ಎದುರಾಗುತ್ತದೆ. ಸಿಬಿಐ, ಇ.ಡಿ., ಚುನಾವಣಾ ಆಯೋಗಗಳನ್ನು ಬಳಸಿಕೊಂಡು ತಮ್ಮ ವಿರೋಧಿಗಳನ್ನು ಸರಕಾರವು ದಮನಿಸುತ್ತಿರುವ ರೀತಿಗಳನ್ನು ಗಮನಿಸಿದರೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಕುರಿತಾಗಿ ಮೂಲಭೂತ ಪಶ್ನೆಗಳು ಎದುರಾಗುತ್ತವೆ. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿದಲ್ಲಿ ಅದು ನಿಜವಾದ ಪ್ರಜಾಪ್ರಭುತ್ವದ ಅನುಷ್ಠಾನಕ್ಕೆ ಬಹುದೊಡ್ಡ ಅಡ್ಡಿಯಾಗುತ್ತದೆ. ಚುನಾಯಿತ ಸರಕಾರವೊಂದು ಹೋರಾಟಗಳನ್ನು ದಮನಿಸುವ ರೀತಿಗಳನ್ನು ಗಮನಿಸಿದಲ್ಲಿ ಪ್ರಜಾಪ್ರಭುತ್ವದಲ್ಲಿ ದುರ್ಬಲರನ್ನು ಮುಖ್ಯವಾಹಿನಿಗೆ ತರುವ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭಕ್ಕಾಗಿ ಜನರನ್ನು ವಿಭಜಿಸುತ್ತಿರುವ ಪ್ರಜಾಪ್ರಭುತ್ವವು ಬಹು ಮುಖ್ಯ ಅಂಗ ಎಂದು ಪರಿಗಣಿತವಾಗಿರುವ ಕಾರ್ಯಾಂಗದಲ್ಲಿ ಮಾಡುತ್ತಿರುವುದನ್ನು ನೋಡಿದರೆ, ಸಹೋದರತೆಯ ಪ್ರಶ್ನೆ ಪ್ರಶ್ನಾರ್ಹವಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದ ನೋಡಿದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಹೋರಾಟದ ಮೂಲಕ ಮತ್ತೆ ಪ್ರಜಾಪ್ರಭುತ್ವವು ಮೌಲ್ಯಗಳನ್ನು ರೂಪಿಸಲು ಸಾಧ್ಯವಿದೆ ಎಂಬ ಸಣ್ಣ ಆಶಾವಾದವನ್ನು ಜೆನ್ ಝೀ ಹೋರಾಟ ತೋರಿಸಿಕೊಟ್ಟಿದೆ.
ಡಾ. ಗಣನಾಥ ಎಕ್ಕಾರು,
ಚಿಂತಕರು.
ಇದನ್ನೂ ಓದಿ- ವಿಶೇಷ | ಸ್ವಾತಂತ್ರ್ಯ ನಮ್ಮ ಮನೆಯ ಬಾಗಿಲಿಗೆ..


