ಬೆಂಗಳೂರು: ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಹಾಗೂ ತಂಬಾಕು-ನಿಕೋಟಿನ್ ಹೊಂದಿರುವ ಉತ್ಪನ್ನಗಳ ಮಾರಾಟಕ್ಕೆ ಒಂದು ವರ್ಷದ ನಿಷೇಧ ಹೇರಿರುವ ಕರ್ನಾಟಕ ಸರ್ಕಾರದ ನಿರ್ಧಾರ ಇದೀಗ ಆಡಳಿತಾರೂಢ ಕಾಂಗ್ರೆಸ್ನಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದ್ದು, ಹಿರಿಯ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಆಗಸ್ಟ್ 10ರಂದು ಹೊರಡಿಸಿರುವ ಆದೇಶದಂತೆ ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಉತ್ಪನ್ನಗಳ ತಯಾರಿಕೆ, ಸಂಗ್ರಹ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ.
ನಿಷೇಧದ ಬೆನ್ನಲ್ಲೇ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತದ ಆತಂಕ ವ್ಯಕ್ತವಾಗಿದೆ. ಹಿರಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಕೂಡ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಆರ್ಥಿಕ ಹೊಡೆತ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅಡಿಕೆ ಗುಟ್ಕಾ ಉತ್ಪಾದನೆಯಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇದೇ ವಿಚಾರವಾಗಿ ಕಾಂಗ್ರೆಸ್ನ ಕೆಲವು ಹಿರಿಯ ಶಾಸಕರು ನಿನ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ನಿಷೇಧ ಆದೇಶದ ಪರಿಣಾಮಗಳ ಬಗ್ಗೆ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಸುಮಾರು 7ರಿಂದ 8 ಜಿಲ್ಲೆಗಳ ಅಡಿಕೆ ಬೆಳೆಗಾರರು ಹಾಗೂ ಸಂಬಂಧಿತ ವಲಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಶಾಸಕರು ಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ “ಈ ವಿಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದ್ದು, ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲೂ ನಿಷೇಧ ಆದೇಶದ ವಿಚಾರ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ. ಗಂಭೀರ ಪರಿಣಾಮ ಬೀರುವಂತಹ ಆದೇಶವನ್ನು ತಮ್ಮ ಗಮನಕ್ಕೆ ತರದೇ ಹೇಗೆ ಹೊರಡಿಸಲಾಯಿತು ಎಂಬ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಮುಖ್ಯಮಂತ್ರಿ ವಿವರಣೆ ಕೇಳಿದ್ದಾರೆ ಎನ್ನಲಾಗಿದೆ.
ಆದೇಶವನ್ನು ತಕ್ಷಣವೇ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಗುಟ್ಕಾ ನಿಷೇಧ ಆದೇಶ ವಾಪಸ್ ಪಡೆಯುವ ಸಾಧ್ಯತೆ ಬಗ್ಗೆ ಇದೀಗ ಚರ್ಚೆ ತೀವ್ರಗೊಂಡಿದೆ.
ಈ ಮಧ್ಯೆ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಸರ್ಕಾರದ ಹಿಂದಿನ ನಿಲುವು ಕೂಡ ಗಮನಾರ್ಹ. ಸ್ವತಃ ಡಿ.ಕೆ. ಶಿವಕುಮಾರ್ ಅವರು ಜೂನ್ನಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾದಲ್ಲಿ ಅಮಲು ಪದಾರ್ಥ ಬೆರೆಸಿರುವುದು ಕಂಡುಬಂದರೆ ಮಾರಾಟವನ್ನೇ ನಿಷೇಧಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಹೀಗಾಗಿ ಸಾರ್ವಜನಿಕ ಆರೋಗ್ಯದ ಹಿತಾಸಕ್ತಿ ಹಾಗೂ ಅಡಿಕೆ ಬೆಳೆಗಾರರ ಆರ್ಥಿಕ ಹಿತಾಸಕ್ತಿ—ಇವೆರಡರ ನಡುವೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

