ಮಂಗಳೂರು : ಸಾಂಪ್ರದಾಯಿಕ ಇತಿಹಾಸದಿಂದ ಬಿಟ್ಟು ಹೋದ ಅನೇಕ ಅಂಶಗಳನ್ನು ಅಂಡಮಾನ್ ಇತಿಹಾಸದೊಳಗೊಂದು ಪಯಣ ‘ಕೃತಿಯು ಹೇಳುತ್ತದೆ . ಈ ಪುಸ್ತಕವು ಬ್ರಿಟಿಷ್ ವಸಾಹತುಶಾಹಿ ಅವಧಿ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಕೈದಿಗಳು ಮತ್ತು ಸ್ಥಳೀಯ ನಿವಾಸಿಗಳ ದೈನಂದಿನ ಜೀವನವನ್ನು ಸ್ಪಷ್ಟವಾಗಿ ದಾಖಲಿಸುತ್ತದೆ ಎಂದು ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಜಯ ಪೂಣಚ್ಚ ತಂಬಂಡ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ಶನಿವಾರ ಅನೇಕಾಂತ ಫೌಂಡೇಷನ್ ಟ್ರಸ್ಟ್ ಮತ್ತು ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ರಾಜಲಕ್ಷ್ಮಿ ಅವರ ಅನುವಾದಿತ ಕೃತಿ ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ( ಹಿಂದಿ ಮೂಲ-ಶಕುಂತಳಾ ಶಿವರಾಂ) ಪುಸ್ತಕ ಬಿಡುಗಡೆ ಹಾಗೂ ‘ಅಂಡಮಾನ್ ಇತಿಹಾಸ: ದುಡಿದ ಕೈಗಳು ಮಿಡಿದ ಮನಗಳು’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಚಿಕ್ಕ ಪುಟ್ಟ ಅಪರಾಧಗಳಿಗಾಗಿ ಶಿಕ್ಷೆಗೊಳಗಾಗಿ ಇಲ್ಲಿಗೆ ಕಳುಹಿಸಲ್ಪಟ್ಟ, ಅವರ ಕುಟುಂಬಗಳಿಂದ ಕೈ ಬಿಡಲ್ಪಟ್ಟ ಮತ್ತು ಪ್ರತ್ಯೇಕವಾಗಿ ತಮ್ಮ ಬದುಕನ್ನು ಪುನರ್ನಿರ್ಮಿಸಲು ಒತ್ತಾಯಿಸಲ್ಪಟ್ಟ ಮಹಿಳಾ ಕೈದಿಗಳ ಬೇಗುದಿಯನ್ನು ಭಾವನಾತ್ಮಕವಾಗಿ ಮತ್ತು ಬಹಳ ಸೂಕ್ಷ್ಮವಾಗಿ ಈ ಕೃತಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಬೆಂಬಲಿಸಿದ ಮತ್ತು ಅಲ್ಲಿ ಬೀಡುಬಿಟ್ಟಿದ್ದ ಜಪಾನಿನ ಸೈನಿಕರು ಅನುಭವಿಸಿದ ಸಾಂಸ್ಕೃತಿಕ ಬಿಕ್ಕಟ್ಟು, ದೈಹಿಕ ಸಂಕಷ್ಟ ಮತ್ತು ಮಾನಸಿಕ ಹಿಂಸೆಯನ್ನು ಈ ಪುಸ್ತಕವು ಅಚ್ಚುಕಟ್ಟಾಗಿ ಚಿತ್ರಿಸುತ್ತದೆ. ಇದೊಂದು ಅನುವಾದ ಕೃತಿಯಂತೆ ಕಾಣಿಸಿಕೊಳ್ಳದೆ ಸರಾಗವಾಗಿ ಓದಿಸಿಕೊಂಡು ಸಾಗುವುದೇ ಈ ಕೃತಿಯ ವಿಶೇಷ ಎಂದು ಅವರು ಶ್ಲಾಘಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳ್ಯಾರು ಅವರು ದಿಟ್ಟ ಹೆಜ್ಜೆಯ ಗಟ್ಟಿಗಿತ್ತಿಯರು ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಹೆಣ್ಣಿನ ಅವಶ್ಯಕತೆ ಎಷ್ಟು ಮುಖ್ಯ ಎಂಬುದನ್ನು ಅಂಡಮಾನ್ ಸಮಾಜ ಹಿನ್ನೆಲೆಯಲ್ಲಿ ಅವರು ಅವಲೋಕಿಸಿದರು. ಅಂಡಮಾನ್ ನಲ್ಲಿ ಹುಟ್ಟಿದ ಸಮಾಜ ಭಾರತದ ಪಡಿಯಚ್ಚು ಅಲ್ಲ, ಅಲ್ಲಿ ಸಲಿಂಗ ಕಾಮವಿತ್ತು. ಬ್ರಿಟಿಷ್ ವಸಾಹತು ಶಾಹಿ ಕಾಲಘಟ್ಟದಲ್ಲಿ ಕೈದಿಗಳಾಗಿ ಬಂದವರ ಪತ್ನಿಯರು ಅಲ್ಲಿಗೆ ಬರಲು ಒಪ್ಪಲಿಲ್ಲ. ಸಣ್ಣಪುಟ್ಟ ಅಪರಾಧಗಳಲ್ಲಿ ಕೊಲೆ ಆಪಾದಿತರಾಗಿ ಬಂದವರೇ ಹೆಚ್ಚಿದ್ದರು. ಕಾಲಾಪಾನಿ ಶಿಕ್ಷೆ, ಕುಟುಂಬದಿಂದ ಪರಿತ್ಯಕ್ತರಾದವರು, ಮರಳಿ ಕುಟುಂಬವನ್ನು ಸ್ವೀಕರಿಸಲಾಗದವರು ಕೂಡ ಶಿಕ್ಷೆಯ ನಂತರದಲ್ಲಿ ದಿಟ್ಟತನದಿಂದ ಬದುಕನ್ನು ಸ್ವೀಕರಿಸಿದರು. ಒಳಗಿನ ಕಿಚ್ಚನ್ನು ಧೈರ್ಯವನ್ನು ಬತ್ತಿಸಿಕೊಳ್ಳದೆ ಸಂಕಟ ಮತ್ತು ಸಂಘರ್ಷದ ಸಂದರ್ಭದಲ್ಲಿ ಪ್ರತಿಕ್ರಿಯೆ ಮತ್ತು ಪ್ರತಿರೋಧಗಳನ್ನು ಕೂಡ ತೋರಿದ್ದಾರೆ. ನೂರಾರು ಹೆಣ್ಣು ಮಕ್ಕಳ ಕಥೆಯಲ್ಲಿ ಕೆಲವೇ ಕೆಲವು ಹೆಣ್ಣು ಮಕ್ಕಳ ಕಥೆಗಳು ಮಾತ್ರ ಇಲ್ಲಿ ದಾಖಲಾಗಿವೆ ಎಂದರು.

ಅಂಡಮಾನ್ ಗೆ ಗಡಿ ಪಾರಾಗಿ ಬಂದ ಹೆಣ್ಣು ಮಕ್ಕಳು, ಜಪಾನೀಯರ ಆಕ್ರಮಣಕ್ಕೆ ಹಿಂಸೆಗೆ ತುತ್ತಾದಾಗ ಕುಟುಂಬ ಪೋಷಿಸಿದ ಹೆಣ್ಣು ಮಕ್ಕಳು, ವಿದ್ಯಾವಂತರಾಗಿ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಮುನ್ನಡೆದವರು, ಹೋರಾಟದ ಬದುಕಿಗೆ ಮುನ್ನುಡಿ ಬರೆದವರು ಎಂದು ಈ ಕೃತಿಯಲ್ಲಿ ದಾಖಲಾದ ಅಂಡಮಾನ್ ಮಹಿಳೆಯರ ನಾಲ್ಕು ಸ್ವರೂಪಗಳನ್ನು ಅವರು ಎಳೆ ಎಳೆಯಾಗಿ ತೆರೆದಿಟ್ಟರು.
ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಗಣಪತಿ ಗೌಡ ಎಸ್. ಅವರು ವಸಾಹತುಶಾಹಿ ಪ್ರಭುತ್ವ ಮತ್ತು ಪ್ರತಿರೋಧ ವಿಷಯದ ಕುರಿತು ಮಾತನಾಡಿದರು.
ಕೃತಿಯ ಲೇಖಕಿ ಡಾ. ರಾಜಲಕ್ಷ್ಮಿ ಎನ್.ಕೆ, ಅಂಡಮಾನ್ ಕೇವಲ ಇತಿಹಾಸ, ರಕ್ತದ ಕಲೆ ಇರುವ ನೆಲವಲ್ಲ, ಬದಲಾಗಿ ಅಲ್ಲಿನ ಜನರ ಆರ್ತಧ್ವನಿಯನ್ನು ಹುಡುಕುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಹಿಂದಿ ಭಾಷೆಯಲ್ಲಿ ಶಕುಂತಲಾ ಶಿವರಾಂ ಅವರು ಬರೆದ ಕೃತಿಯನ್ನು ಈಗಾಗಲೇ ಇಂಗ್ಲಿಷ್ ಭಾಷೆಗೆ ಅನುವಾದ ಮಾಡಲಾಗಿದೆ ಎಂದು ಹೇಳಿದರು.
ಕರಾವಳಿ ಲೇಖಕಿಯರು-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಅನೇಕಾಂತ ಫೌಂಡೇಶನ್ ಟ್ರಸ್ಟ್ನ ಡಾ. ಉದಯ ಕುಮಾರ್ ಇರ್ವತ್ತೂರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸಹನಾ ನಿಡಗುಂದಿ ಯವರು ಆಶಯ ಗೀತೆ ಹಾಡಿದರು.


