ನವದೆಹಲಿ : ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಅಯೋಗ ವಾಪಾಸ್ ಕಳುಹಿಸಿ ಅಗತ್ಯ ತಿದ್ದುಪಡಿಗಳೊಂದಿಗೆ ಮತ್ತೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಕೇಂದ್ರ ಜಲ ಆಯೋಗ ವರದಿಯನ್ನು ವಾಪಸು ಕಳಹುಸಿರುವುದರು ರಾಜ್ಯಕ್ಕೆ ಆದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕಾವೇರಿ ಜಲ ವಿವಾದ ನ್ಯಾಯಮಂಡಳಿ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ಆದೇಶದ ವ್ಯಾಪ್ತಿಗೆ ವರದಿ ಹೊಂದಿಕೆಯಾಗುವುದಿಲ್ಲ ಎಂದು ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ.
ಅಗತ್ಯ ತಿದ್ದುಪಡಿಗೆ ಸೂಚನೆ: ಕರ್ನಾಟಕ ಸರ್ಕಾರ ಯೋಜನೆಯಲ್ಲಿ ಕುಡಿಯುವ ನೀರಿನ ಬಳಕೆಯ ಪ್ರಮಾಣವನ್ನು 4.75 ಟಿಎಂಸಿಯಿಂದ 6.95 ಟಿಎಂಸಿಗೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಜೊತೆಗೆ, ಶಿವನಸಮುದ್ರ ರನ್-ಆಫ್-ದಿ-ರಿವರ್ ಜಲವಿದ್ಯುತ್ ಯೋಜನೆಯನ್ನೂ ಹೊಸದಾಗಿ ಸೇರಿಸಿದೆ. ಈ ಬದಲಾವಣೆಗಳು ಮೂಲ ಡಿಪಿಆರ್‌ನಲ್ಲಿ ಇಲ್ಲ . ಹೀಗಾಗಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ತಿಳಿಸಿ ಜೂನ್ 29ರಂದು ವರದಿಯನ್ನು ಆಯೋಗ ಹಿಂದಿರುಗಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
2019ರಲ್ಲಿ ಸಲ್ಲಿಸಿದ್ದ ಮೂಲ ಡಿಪಿಆರ್‌ಗೆ ಸಂಬಂಧಿಸಿದಂತೆ ಸಿಆಯೋಗ ಎತ್ತಿದ್ದ ಆಕ್ಷೇಪಣೆಗಳಿಗೆ ಉತ್ತರವಾಗಿ ಕರ್ನಾಟಕ ಸರ್ಕಾರ 2026ರ ಏಪ್ರಿಲ್ 21ರಂದು ಪರಿಷ್ಕೃತ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ‘ಶಿವನಸಮುದ್ರ ರನ್-ಆಫ್-ದಿ-ರಿವರ್ ಪವರ್ ಪ್ರಾಜೆಕ್ಟ್’ ಸೇರಿಸಲಾಗಿದ್ದು, ಇದೇ ಆಯೋಗದ ಪ್ರಮುಖ ಆಕ್ಷೇಪಣೆಗಳಲ್ಲಿ ಒಂದಾಗಿದೆ.
ಕರ್ನಾಟಕ ಸರ್ಕಾರ, 59.46 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಅಗತ್ಯ ಎಂದು ಸಮರ್ಥಿಸಿಕೊಂಡಿತ್ತು. ರಾಜ್ಯದ ಪ್ರಕಾರ, ಜೂನ್- ಜುಲೈ ತಿಂಗಳಲ್ಲಿ ತಮಿಳುನಾಡಿಗೆ ನೀರು ಹರಿಸಲು 13 ಟಿಎಂಸಿ, ಫೆಬ್ರವರಿಯಿಂದ ಮೇವರೆಗೆ ಪರಿಸರ ಹರಿವು ಕಾಪಾಡಲು 10 ಟಿಎಂಸಿ, 2044ರ ವೇಳೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕೆ 33.15 ಟಿಎಂಸಿ ಹಾಗೂ ಆವಿಯಾಗುವಿಕೆ, ಹೂಳು ಸಂಗ್ರಹಕ್ಕೆ 3.85 ಟಿಎಂಸಿ ಸೇರಿ ಒಟ್ಟು ಸುಮಾರು 60 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಅಗತ್ಯವಿದೆ ಎಂದು ವಾದಿಸಿತ್ತು.
ಆದರೆ, ಈ ಲೆಕ್ಕಾಚಾರದಲ್ಲಿ ಬಳಸಿರುವ ಅಂಕಿ-ಅಂಶಗಳು ಹಳೆಯವು ಎಂದು ಸಿಡಬ್ಲ್ಯುಸಿ ಅಭಿಪ್ರಾಯಪಟ್ಟಿದೆ. ಬೆಂಗಳೂರಿನ ಭವಿಷ್ಯದ ನೀರಿನ ಬೇಡಿಕೆಯನ್ನು ಲೆಕ್ಕ ಹಾಕುವಾಗ, ರಾಜ್ಯವು 1990ರ ನೀರು ಬಳಕೆಯ ಅಂಕಿ-ಅಂಶಗಳನ್ನು ಆಧಾರವಾಗಿಸಿಕೊಂಡಿದೆ ಎಂದು ಆಯೋಗ ಹೇಳಿದೆ.
ಅಲ್ಲದೆ 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕರ್ನಾಟಕದ ಒಟ್ಟು ಕುಡಿಯುವ ಹಾಗೂ ಗೃಹಬಳಕೆಯ ನೀರಿನ ಅಗತ್ಯವನ್ನು 33 ಟಿಎಂಸಿ ಎಂದು ಹಾಗೂ ಅದರಲ್ಲಿ ಬೆಂಗಳೂರುಗೆ 24 ಟಿಎಂಸಿ ಸಾಕು ಎಂದು ಈಗಾಗಲೇ ನಿರ್ಧರಿಸಲಾಗಿದೆ ಎಂದು ಸಿಡಬ್ಲ್ಯುಸಿ ಉಲ್ಲೇಖಿಸಿದೆ.
ಕಳೆದ ಮೂರು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ಮತ್ತು ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗಿದ್ದರೂ, ನಗರ ಪ್ರಸ್ತುತ ಎಷ್ಟು ನೀರನ್ನು ಬಳಸುತ್ತಿದೆ ಎಂಬ ನವೀಕೃತ ಮಾಹಿತಿ ಕರ್ನಾಟಕ ಸರ್ಕಾರ ನೀಡಿಲ್ಲ ಎಂದು ಆಯೋಗ ಗಮನಿಸಿದೆ.
ಕರ್ನಾಟಕವು ಹೆಚ್ಚುವರಿ 6.95 ಟಿಎಂಸಿ ನೀರನ್ನು ಬಳಸಲು ಅನುಮತಿ ಕೋರಿರುವುದನ್ನೂ ಸಿಡಬ್ಲ್ಯುಸಿ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 6.5 ಟಿಎಂಸಿ ಹೆಚ್ಚುವರಿ ಕುಡಿಯುವ ನೀರಿನ ಬಳಕೆಗೆ ಅವಕಾಶ ನೀಡಿದ್ದರೂ, ಅದರಲ್ಲಿ ಈಗಾಗಲೇ ಬಳಕೆಯಲ್ಲಿರುವ ಪ್ರಮಾಣವೂ ಸೇರಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
1990ರ ಲೆಕ್ಕದ ಪ್ರಕಾರ ಕರ್ನಾಟಕದ ಕುಡಿಯುವ ನೀರಿನ ಬಳಕೆ 2.9 ಟಿಎಂಸಿ ಆಗಿದ್ದರೆ, ಹೆಚ್ಚುವರಿ ಬಳಕೆಗೆ ಸುಮಾರು 3.6 ಟಿಎಂಸಿ ಮಾತ್ರ ಅವಕಾಶವಿದೆ. ಹೀಗಾಗಿ 6.95 ಟಿಎಂಸಿ ಬಳಕೆಯ ಪ್ರಸ್ತಾಪವು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಿತಿಯನ್ನು ಮೀರುತ್ತದೆ ಎಂದು ಆಯೋಗ ಹೇಳಿದೆ.
ಈ ಎಲ್ಲ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, ಸಿಡಬ್ಲ್ಯುಸಿ 2019ರ ಡಿಪಿಆರ್ ಅನ್ನು ಅಧಿಕೃತವಾಗಿ ಹಿಂದಿರುಗಿಸಿದ್ದು, ಕಾವೇರಿ ನ್ಯಾಯಮಂಡಳಿ ತೀರ್ಪು, ಸುಪ್ರೀಂ ಕೋರ್ಟ್ ಆದೇಶ ಹಾಗೂ ಸಿಡಬ್ಲ್ಯುಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೊಸ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ಹೊಸ ಪ್ರಸ್ತಾವನೆಯಲ್ಲಿ ನವೀಕೃತ ತಾಂತ್ರಿಕ ಮಾಹಿತಿ, ಪರಿಷ್ಕೃತ ಅಂಕಿ-ಅಂಶಗಳು ಮತ್ತು ಹೊಸ ನಕ್ಷೆಗಳನ್ನು ಸೇರಿಸುವಂತೆ ತಿಳಿಸಲಾಗಿದೆ.
ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಸಿಡಬ್ಲ್ಯುಸಿಯ ಆಕ್ಷೇಪಣೆಗಳು ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಆರಂಭದಿಂದಲೇ ವ್ಯಕ್ತಪಡಿಸುತ್ತಿದ್ದ ಆತಂಕವನ್ನು ಸಮರ್ಥಿಸಿವೆ. ಅವರ ಪ್ರಕಾರ, ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಭಾಗದಲ್ಲಿ ಹರಿಯುವ ಸುಮಾರು 80 ಟಿಎಂಸಿ ನೀರನ್ನು ಮೇಲ್ಭಾಗದಲ್ಲೇ ಸಂಗ್ರಹಿಸುವ ಉದ್ದೇಶದಿಂದ ಮೇಕೆದಾಟು ಯೋಜನೆ ರೂಪಿಸಲಾಗಿದೆ. ಇದರಿಂದ ತಮಿಳುನಾಡಿನ ಪಾಲಿನ ನೀರಿನ ಹರಿವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಆತಂಕವನ್ನು ರಾಜ್ಯ ಆರಂಭದಿಂದಲೇ ವ್ಯಕ್ತಪಡಿಸುತ್ತ ಬಂದಿದೆ. ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶವನ್ನು ಹೆಲಿಕಾಪ್ಟರ್‌ನಲ್ಲಿ ವೀಕ್ಷಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಆಗಸ್ಟ್ 3ರಂದು ವಿಜಯ್ ಬೆಂಗಳೂರಿಗೆ ಭೇಟಿ ನೀಡಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಚರ್ಚಿಸಲಿದ್ದಾರೆ. ಸಭೆಯಲ್ಲಿ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಸಹ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

