ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನವು ಆಗಸ್ಟ್ 13ರಿಂದ 27ರವರೆಗೆ ನಡೆಯಲಿದ್ದು, ಈ ಕುರಿತು ರಾಜ್ಯಪಾಲರು ಅಧಿಕೃತ ಆದೇಶ ಹೊರಡಿಸಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡೂ ಸದನಗಳ ಅಧಿವೇಶನ ಇದೇ ಅವಧಿಯಲ್ಲಿ ನಡೆಯಲಿವೆ.
ಈ ಮೊದಲು ಸರ್ಕಾರವು ಆಗಸ್ಟ್ 6ರಿಂದ ಅಧಿವೇಶನ ಆರಂಭಿಸಲು ನಿರ್ಧರಿಸಿತ್ತು. ಆದರೆ ಆಡಳಿತಾತ್ಮಕ ಹಾಗೂ ರಾಜಕೀಯ ಕಾರಣಗಳಿಂದ ಅಧಿವೇಶನದ ದಿನಾಂಕವನ್ನು ಮುಂದೂಡಲಾಗಿದ್ದು, ಇದೀಗ ಒಂದು ವಾರ ತಡವಾಗಿ ಆಗಸ್ಟ್ 13ರಿಂದ ಆರಂಭಿಸುವಂತೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ.
ಅಧಿವೇಶನವು ಸುಮಾರು 15 ದಿನಗಳ ಕಾಲ ನಡೆಯಲಿದ್ದು, ಈ ವೇಳೆ ರಾಜ್ಯ ಸರ್ಕಾರ ಹಲವು ಮಹತ್ವದ ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಅಲ್ಲದೆ ಬಿಡದಿ ಟೌನ್ ಶಿಪ್ ಭೂಸ್ವಾಧೀನ ವಿವಾದ, ವಿವಿಧ ಇಲಾಖೆಗಳ ಕಾರ್ಯವೈಖರಿ, ಅಭಿವೃದ್ಧಿ ಕಾಮಗಾರಿಗಳು, ಕಾನೂನು-ಸುವ್ಯವಸ್ಥೆ, ಬೆಲೆ ಏರಿಕೆ, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಬಿಕ್ಕಟ್ಟು, ಕಾವೇರಿ ನೀರು ಹಂಚಿಕೆ, ಬೆಂಗಳೂರು ಮೂಲಸೌಕರ್ಯ, ಭ್ರಷ್ಟಾಚಾರದ ಆರೋಪಗಳು ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಸದನದಲ್ಲಿ ಪ್ರತಿಧ್ವನಿಸುವ ನಿರೀಕ್ಷೆಯಿದೆ.
ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರವನ್ನು ವಿವಿಧ ವಿಷಯಗಳಲ್ಲಿ ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಆಡಳಿತಾತ್ಮಕ ನಿರ್ಧಾರಗಳು ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ ಎನ್ನಲಾಗಿದೆ.
ಇನ್ನೊಂದೆಡೆ, ಸರ್ಕಾರವು ತನ್ನ ಅಭಿವೃದ್ಧಿ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಹೂಡಿಕೆ ಆಕರ್ಷಣೆ, ಕೈಗಾರಿಕಾ ಬೆಳವಣಿಗೆ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸದನದಲ್ಲಿ ವಿವರ ನೀಡಲು ಸಿದ್ಧತೆ ನಡೆಸಿದೆ.
ರಾಜ್ಯಪಾಲರ ಆದೇಶ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಆಗಸ್ಟ್ 13ರಿಂದ ಆರಂಭವಾಗಲಿರುವ ಈ ಅಧಿವೇಶನವು ಆಡಳಿತ ಮತ್ತು ರಾಜಕೀಯ ಎರಡೂ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

