ಬೆಂಗಳೂರು: ಕಾಕ್ರೋಚ್ ಜನತಾ ಪಕ್ಷ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟದಿಂದ ಪ್ರಭಾವಿತರಾಗಿರುವ ಕಾಂಗ್ರೆಸ್ ವರಿಷ್ಠ ರಾಹುಲ್ಗಾಂಧಿ, ಕರ್ನಾಟಕ ರಾಜ್ಯದ ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಶೇ. 90 ರಷ್ಟು ಹೊಸಮುಖಗಳಿಗೆ ಅರ್ಥಾತ್ ಯುವಕರಿಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿ ಹಲವರು ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರ ರಾತ್ರಿವರೆಗೂ ಸಂಪುಟ ವಿಸ್ತರಣೆಯ ಚರ್ಚೆ ನಡೆದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಮಂಗಳವಾರ ಪಟ್ಟಿ ಬಹುತೇಕ ಅಂತಿಮ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಮಂಗಳವಾರದಿಂದ ಎರಡು ದಿನಗಳ ಕಾಲ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿರುವುದರಿಂದ, ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿನ 20 ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ಗೆ ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಮೂಲಗಳ ಪ್ರಕಾರ, ರಾಜ್ಯ ನಾಯಕರು ಮಂಗಳವಾರ ರಾತ್ರಿ 8 ಗಂಟೆಗೆ ಪಕ್ಷದ ಕೇಂದ್ರ ನಾಯಕತ್ವವನ್ನು ಭೇಟಿಯಾಗುವ ನಿರೀಕ್ಷೆಯಿದೆ.
ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಿದರೂ, ರಾಜ್ಯಪಾಲರು ಲಭ್ಯವಿಲ್ಲದಿರುವ ಕಾರಣ ಪ್ರಮಾಣವಚನ ಸ್ವೀಕಾರ ಸಮಾರಂಭ ವಿಳಂಬವಾಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ, ಸಚಿವರಾಗಿ ಆಯ್ಕೆಯಾದ ಶಾಸಕರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದು ಮೂಲವೊಂದು ತಿಳಿಸಿದೆ.
ಆದಾಗ್ಯೂ, ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ಕಂಡುಬಂದವು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಸಂಪುಟ ಸೇರಲು ಆಕಾಂಕ್ಷಿಗಳಾಗಿರುವವರು ಅಲ್ಲಿ ಬೀಡುಬಿಟ್ಟಿದ್ದರು. ಹೈಕಮಾಂಡ್ ಹೆಸರುಗಳನ್ನು ಅಂತಿಮಗೊಳಿಸಲು ಪಟ್ಟಿಗಳನ್ನು ಪರಿಶೀಲಿಸುತ್ತಿರುವಾಗ, ಅನೇಕರು ಫಲಿತಾಂಶದ ನಿರೀಕ್ಷೆಯಲ್ಲಿದ್ದರು.
ಮೊದಲ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮ್ಯ ಪುತ್ರ ಡಾ.ಯತೀಂದ್ರ ಅವರನ್ನು ಹೊರತುಡಪಡಿಸಿದರೆ ಹಳಬರಿಗೇ ಅವಕಾಶ ನೀಡಲಾಗಿದೆ. ಆದರೆ ಈಗ ಯುವಕರನ್ನು ಸಚಿವರನ್ನಾಗಿ ಮಾಡಿ ಒಂದು ಬಗೆಯಲ್ಲಿ ಕರ್ನಾಟಕದಿಂದಲೇ ಹೊಸ ಪ್ರಯೋಗ ಮಾಡಲು ರಾಹುಲ್ ಇಚ್ಚಿಸಿದ್ದು, ಇದಕ್ಕೆ ಕಾರಣ ವಿದ್ಯಾರ್ಥಿಗಳ ಹೋರಾಟಕ್ಕೆ ಜನ ಬೆಂಬಲ ಮತ್ತು ಜಯ ಸಿಕ್ಕಿದ್ದು ಕಾರಣ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
2028ರ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ. ಈಗಲಾದರೂ ಯುವಕರಿಗೆ ಆದ್ಯತೆ ನೀಡುವ ಮೂಲಕ ದೇಶಕ್ಕೆ ಹೊಸ ಸಂದೇಶ ನೀಡೋಣ, ಬೇರೆ ಎಲ್ಲೂ ನಮಗೆ ಈ ಅವಕಾಶ ಇಲ್ಲ. ಮುಂದಿನ ದಿನಗಳಲ್ಲಿ ಯುವಕರು ಪಕ್ಷದ ಪರ ನಿಲ್ಲಲಿ ಎಂದು ರಾಹುಲ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಖಡಾಖಂಡಿತವಾಗಿ ಹೇಳಿದ್ದಾರೆ.
ನಂತರದಲ್ಲಿ ಡಿ.ಕೆ. ಶಿವಕುಮಾರ್ ಅವರು ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ಬಳಿ ಚರ್ಚಿಸಿದ್ದಾರೆ. ಈ ವೇಳೆಯೂ ವಿಶೇಷವಾಗಿ ಪ್ರಿಯಾಂಕ ಗಾಂಧಿ ಅವರು ಯುವಕರಿಗೆ ಅವಕಾಶ ನೀಡುವುದು ಸೂಕ್ತ ಎಂದಿದ್ದಾರಂತೆ. ಆದರೆ, ಹಿರಿಯ ನಾಯಕಿ ಸೋನಿಯಾಗಾಂಧಿ ಅವರು ಶೇ. 25 ರಷ್ಟಾದರೂ ಹಳಬರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ಮಾಡಬಹುದು ಎಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಇದರ ಆಧಾರದ ಮೇಲೆ ಸಚಿವ ಪಟ್ಟಿಯನ್ನು ಸಿದ್ದಪಡಿಸಿದ್ದು, ಸಚಿವರಾಗುವವರ ಹೆಸರನ್ನು ಜುಲೈ 29 ರಂದು ಮುಖ್ಯಮಂತ್ರಿಗಳು ಪ್ರಕಟಿಸಲಿದ್ದಾರೆ. ರಾಜ್ಯಪಾಲರು ಲಭ್ಯವಿದ್ದರೇ ಜುಲೈ 31 ಇಲ್ಲದಿದ್ದರೇ ಆಗಸ್ಟ್ 3 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಲಿದೆ ಎಂಬುದು ದೆಹಲಿ ಮೂಲಗಳ ಅಭಿಪ್ರಾಯ.
ಮಹಿಳಾ ಶಾಸಕರಾದ ನಯನ ಮೋಟಮ್ಮ, ರೂಪಕಲಾ ಮುನಿಯಪ್ಪ, ಖನೀಜ್ ಫಾತಿಮಾ, ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ತಿನ ಸದಸ್ಯೆಯರಾದ ಆರತಿಕೃಷ್ಣ ಮತ್ತು ಉಮಾಶ್ರೀ ಅವರ ಹೆಸರುಗಳು ಚಾಲ್ತಿಯಲ್ಲಿದ್ದು, ಇದರಲ್ಲಿ ಇಬ್ಬರಿಗೆ ಸಚಿವರಾಗುವ ಅದೃಷ್ಟ ಇದೆ. ಈ ಪೈಕಿ ಪರಿಷತ್ತಿನ ಸದಸ್ಯೆ ಒಬ್ಬರನ್ನೂ ಸಚಿವ ಸ್ಥಾನ ಒಲಿಯುತ್ತದೆ ಎಂದು ಹೇಳಲಾಗಿದೆ.
ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಹೆಚ್ಚಿನ ಮನ್ನಣೆ ನೀಡಲಾಗಿತ್ತು. ಆದರೆ, ಈಗ ಎರಡನೇ ಅವಧಿಯಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಅವಕಾಶ ಸಿಗುತ್ತಿಲ್ಲ ಎನ್ನಲಾಗಿದೆ. ಸಿದ್ದರಾಮಯ್ಯ ಆಪ್ತರಾದ ಡಾ. ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಅವರಿಗೆ ಮತ್ತೆ ಅವಕಾಶ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಈ ಮಧ್ಯೆ ಯುವಜನರನ್ನು ಆಕರ್ಷಿಸಲು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ಅವರೂ ಸಹ ಸಂಪುಟ ಸೇರಿದರೆ ಅಚ್ಚರಿ ಇಲ್ಲ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಸಮುದಾಯಕ್ಕೆ ಸೇರಿದ ಪ್ರದೀಪ್ ಈಶ್ವರ್ ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ಸಹ ನಡೆಸುತ್ತಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಸಂಭಾವ್ಯರ ಪಟ್ಟಿ
ಎನ್.ಎ. ಹ್ಯಾರಿಸ್, ಜಮೀರ್ ಅಹಮದ್, ತನ್ವೀರ್ ಸೇಠ್, ಸಲೀಂ ಅಹಮದ್, ಡಾ. ಅಜಯ್ ಸಿಂಗ್, ವಿಜಯಾನಂದ ಕಾಶಪ್ಪ, ಲಕ್ಷ್ಮಣ ಸವದಿ, ಎಸ್.ಎಸ್. ಮಲ್ಲಿಕಾರ್ಜುನ, ಎನ್.ಎಸ್. ಭೋಸರಾಜು, ಜೆ.ಎಸ್. ಪಾಟೀಲ್, ಮಂಕಾಳ್ ವೈದ್ಯ, ಸತೀಶ್ ಸೈಲ್, ಮಧು ಬಂಗಾರಪ್ಪ, ಬಾದರ್ಲಿ ಹಂಪನಗೌಡ, ಬಸನಗೌಡ ದದ್ದಲ
ಒಕ್ಕಲಿಗ ಶಾಸಕರು
ಶರತ್ ಬಚ್ಚೇಗೌಡ, ಚೆಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ್
ದಲಿತ
ಪಿ.ಎಂ. ನರೇಂದ್ರಸ್ವಾಮಿ ಮಳವಳ್ಳಿ, ಎ.ಆರ್.ಕೃಷ್ಣಮೂರ್ತಿ ಕೊಳ್ಳೇಗಾಲ
ಉಪ್ಪಾರ ಜನಾಂಗ
ಪುಟ್ಟರಂಗಶೆಟ್ಟಿ (ಚಾಮರಾಜನಗರ)
ಸಿದ್ದರಾಮಯ್ಯ ಕೋಟಾ
ಉಮಾಶ್ರೀ, ಹರಿಪ್ರಸಾದ್ ಬಿ ಕೆ, ಸಂತೋಷ್ ಲಾಡ್, ಎ.ಎಸ್. ಪೊನ್ನಣ್ಣ
(ಪೊನ್ನಣ್ಣ ಅವರ ಹೆಸರೂ ಪಟ್ಟಿಯಲ್ಲಿ ಇದೆ. ಆದರೆ ಸಿದ್ದರಾಮಯ್ಯ ಬಣದ ಕಾರಣ ಹಿನ್ನಡೆ ಆಗುವ ಸಾಧ್ಯತೆ ಇದೆ)
ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವ ವಿಚಾರದ ಬಗ್ಗೆ ನಡೆದ ಚರ್ಚೆಯಲ್ಲಿ ಡಿ.ಕೆ. ಶಿವಕುಮಾರ್ ಅವರು, ಆಡಳಿತ ನಡೆಸಲು ಅನುಭವಿಗಳು ಬೇಕು. ಹಾಗಾಗಿ ಶೇ. 50 ರ ಅನುಪಾತದಲ್ಲಿ ಎರಡನೇ ಪಟ್ಟಿಯನ್ನು ಪ್ರಕಟಿಸುವುದು ಸೂಕ್ತ ಎಂದಿದ್ದಾರೆ. ಆಗ ರಾಹುಲ್ ಗಾಂಧಿ ಅವರು ನಿಮ್ಮನ್ನ 1990-91 ರಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಎಸ್. ಬಂಗಾರಪ್ಪ ಅವರು ಮಂತ್ರಿ ಮಾಡಿದಾಗ ನಿಮ್ಮ ವಯಸ್ಸು 28 ರಿಂದ 30. ನೀವು ಸಚಿವರಾಗಿ ಯಶಸ್ವಿ ಆಗಲಿಲ್ಲವೇ ? ಎಂದು ಪ್ರಶ್ನಿದ್ದಾರೆ. ಆಗ ಡಿಕೆಶಿ ಮೌನಕ್ಕೆ ಶರಣಾದರು ಎಂದು ತಿಳಿದಿದೆ.

