ತಮ್ಮದೇ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರಿಗೆ ಪಟಿಂಗಾ, ಅಂಡೆಪಿರ್ಕಿ, ಓಡುಕಳ್ಳ ಎಂದೆಲ್ಲಾ ನಿಂದಿಸಿದ ರಾಘವೇಂದ್ರ ಭಟ್ ರವರಂತಹ ಸಂಘಿ ಸಮರ್ಥಕನನ್ನು ಕಾಂಗ್ರೆಸ್ ವರಿಷ್ಠರು ಅದು ಹೇಗೆ ಮಾಧ್ಯಮ ಸಲಹೆಗಾರ ಎಂದು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ. ಅದು ಹೇಗೋ ಸಂಘಿಗಳು ಯಾವು ಯಾವುದೋ ರೂಪದಲ್ಲಿ ಆಳುವ ಪಕ್ಷದ ಒಳಗೆ ಸೇರಿಕೊಂಡು ತಮ್ಮ ತಂತ್ರಗಾರಿಕೆ ರೂಪಿಸುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ರಾಘವೇಂದ್ರ ಭಟ್ ರವರ ನೇಮಕಾತಿ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಕರ್ನಾಟಕದ ಮುಖ್ಯಮಂತ್ರಿಗಳಾದ ಮಾನ್ಯ ಡಿ.ಕೆ.ಶಿವಕುಮಾರರವರ ಮಾಧ್ಯಮ ಕಾರ್ಯದರ್ಶಿಗಳಾಗಿ ಪಿ.ತ್ಯಾಗರಾಜ್, ಆರ್.ಜಯಪ್ರಕಾಶ್ ಹಾಗೂ ರಾಘವೇಂದ್ರ ಭಟ್ ರವರು ಜುಲೈ 8 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಮೂಲಕ ನೇಮಕವಾಗಿದ್ದಾರೆ.
ಬಲಪಂಥೀಯ ಒಲವುಳ್ಳ ರಾಘವೇಂದ್ರ ಭಟ್ ರವರ ಆಯ್ಕೆ ಈಗ ವಿವಾದಕ್ಕೆ ಕಾರಣವಾಗಿದೆ. ಯಾಕೆಂದರೆ
* ಭಟ್ ರವರು ಈ ಹಿಂದೆ ಕಾಂಗ್ರೆಸ್ಸಿನ ಅಧಿನಾಯಕ ರಾಹುಲ್ ಗಾಂಧಿಯವರನ್ನು ಫಟಿಂಗ, ಅಂಡೆಪಿರ್ಕಿ, ಓಡುಕಳ್ಳ ಎಂದೆಲ್ಲಾ ನಿಂದಿಸಿದ್ದರು.
* ಪಕ್ಕಾ ಬಲಪಂಥೀಯ ಸಿದ್ಧಾಂತದ ದಿನ ಪತ್ರಿಕೆಗಳಾಗಿದ್ದ ವಿಜಯ ಕರ್ನಾಟಕ, ಉದಯವಾಣಿ ಹಾಗೂ ವಿಶ್ವವಾಣಿಯಲ್ಲಿ ಮುಖ್ಯ ವರದಿಗಾರರಾಗಿ ಕೆಲಸ ಮಾಡಿದವರು.
* ಅಮಿತ್ ಶಾ ರನ್ನು ಬಂಗಾಲದ ಹುಲಿ ಎಂದವರು
* ಪ್ರಧಾನಿ ಮೋದಿಯನ್ನು ಹಾಡಿ ಹೊಗಳುವವರು
* ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಠೀಕಿಸಿದ್ದರು.
* ಧಾರ್ಮಿಕ ಸಂಸ್ಥೆಗಳ ರಕ್ಷಣೆಯಲ್ಲಿ ಸಂಪ್ರದಾಯಬದ್ಧ ಧೋರಣೆಯನ್ನು ವ್ಯಕ್ತಪಡಿಸಿದ್ದರು.
* ಅವರ ಪತ್ರಿಕಾ ವರದಿಗಳಲ್ಲಿ ಸಂಪ್ರದಾಯಬದ್ಧತೆ ಎದ್ದು ಕಾಣುವಂತಿದ್ದವು.

ಇಂತಹ ರಾಘವೇಂದ್ರ ಭಟ್ ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕುರಿತ ವಿರೋಧಿ ಕಾಮೆಂಟ್ ಗಳು ಈ ಭಟ್ ರವರು ಪಕ್ಕಾ ಕಾಂಗ್ರೆಸ್ ವಿರೋಧಿ ಎಂಬುದಕ್ಕೆ ಪುರಾವೆಗಳಾಗಿವೆ. ಭಟ್ ರವರು ಫೇಸ್ಬುಕ್ ಕಮೆಂಟ್ ಒಂದರಲ್ಲಿ ಹೀಗೆ ಬರೆದಿದ್ದಾರೆ ” ಈ ಫಟಿಂಗ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗ ಎಂದು ಕರೆಸಿಕೊಳ್ಳುವುದಕ್ಕೆ ಅರ್ಹನೇ? ಬಂಗಾಳದಲ್ಲಿ ಪಕ್ಷ ಸೊನ್ನೆ ಸುತ್ತಲಿದೆ ಎಂದು ಅರ್ಥವಾಗುತ್ತಿದ್ದಂತೆ ರಣರಂಗದಿಂದ ಓಟಕಿತ್ತ ಓಡುಕಳ್ಳ.. ಟ್ವೀಟ್ ನಲ್ಲಿ ತರಲೆ ಮಾಡುತ್ತಾ ಕಾಲ ಕಳೆದ. ಈತನನ್ನು ಸಂಸದನನ್ನಾಗಿ ಆಯ್ಕೆ ಮಾಡಿದ ಕೇರಳದಲ್ಲಿ ಅಲ್ಪಸಂಖ್ಯಾತ ಸಮುದಾಯವೇ ಈತನನ್ನು ತಿರಸ್ಕರಿಸಿತು. ಆಸ್ಸಾಂ ಪದುಚೇರಿಯಲ್ಲೂ ಉರುಳಿದ. ಆದರೂ ಕಾಂಗ್ರೆಸ್ಸಿಗರಿಗೆ ಇನ್ನೂ ಈತನ ಮೇಲೆ ವಿಶ್ವಾಸ. ಮುಂದಿನ ಪ್ರಧಾನಿ ಎಂದು ಬಿಂಬಿಸುವ ತವಕ” ಎಂದು ಬರೆದ ಈ ಭಟ್ಟ ಮುಂದುವರೆದು “ನೋಡ್ತಾ ಇರಿ ಈ ಅಂಡೆಪಿರ್ಕಿ ಕೈಯಲ್ಲಿ ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೊಟ್ಟರೆ ಕರ್ನಾಟಕದಲ್ಲೂ ಅಷ್ಟೇ..” ಎಂದು 2021 ಮೇ 3 ರಂದು ತನ್ನ ಮುಖಪುಟದಲ್ಲಿ ಬರೆದು ರಾಹುಲ್ ಗಾಂಧಿಯವರ ಮೇಲೆ ವಿಷ ಕಾರಿದ್ದ. ಅಮಿತ್ ಶಾ ಅವರನ್ನು ಬೆಂಗಾಲ್ ಟೈಗರ್ ಎಂದು ಕರೆದು ಶಾ ಬಗೆಗಿನ ತನ್ನ ಆರಾಧನೆಯನ್ನು ಬಹಿರಂಗ ಪಡಿಸಿದ್ದ.
ಈಗ ಇಂತಹ ಕಾಂಗ್ರೆಸ್ ವಿರೋಧಿ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದ ರಾಘವೇಂದ್ರ ಭಟ್ ನನ್ನು ಕಾಂಗ್ರೆಸ್ ಪಕ್ಷದ ಸಿಎಂ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು ವಿಸ್ಮಯದ ಸಂಗತಿ.
ಕಾಂಗ್ರೆಸ್ ಪಕ್ಷದಲ್ಲಿ ಲಕ್ಷಾಂತರ ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ಪಕ್ಷ ಸಿದ್ಧಾಂತ ಎಂದು ವರ್ಷದ 365ದಿನ ಬಡಿದಾಡುವ ಇಂತಹವರ ಮನೋಸ್ಥೈರ್ಯವನ್ನು ಕುಂದಿಸುವ ರೀತಿಯಲ್ಲಿ ನೇಮಕಾತಿಗಳು ನಡೆದಾಗ ಸಹಜವಾಗಿ ಪಕ್ಷದ ಒಳಗೆ ಅಸಮಧಾನ ಕಾಣುತ್ತದೆ.
ಹೋಗಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕನನ್ನು ಕೆಟ್ಟದಾಗಿ ಟೀಕಿಸಿದ್ದ ರಾಘವೇಂದ್ರ ಭಟ್ ರವರು ಅದ್ಯಾವ ನೈತಿಕತೆ ಹೊತ್ತು ಕಾಂಗ್ರೆಸ್ ಸರಕಾರದಲ್ಲಿ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡ್ತಾರೆ? ಅವರಿಗೆ ಆತ್ಮಸಾಕ್ಷಿ ಎಂಬುದು ಇಲ್ವಾ?
ರಾಘವೇಂದ್ರ ಭಟ್ ರವರ ನೇಮಕಾತಿ ಹಿಂದೆ ಹಲವರ ಹಿತಾಸಕ್ತಿ ಅಡಗಿದೆ.
* ರಾಘವೇಂದ್ರ ಭಟ್ ರವರ ಆಯ್ಕೆಯಲ್ಲಿ ಬಿಜೆಪಿಯ ಮುಖವಾಣಿಯಂತಿರುವ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ರವರ ಕೈವಾಡ ಇರುವುದು ಗೋಚರವಾಗುತ್ತದೆ. ತಮ್ಮ ಪತ್ರಿಕೆಯ ಮುಖ್ಯ ವರದಿಗಾರನನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನನ್ನಾಗಿಸಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದು ವಿಶ್ವೇಶ್ವರ ಭಟ್ಟರ ತಂತ್ರಗಾರಿಕೆಯಾಗಿದೆ.
* ರಾಘವೇಂದ್ರ ಭಟ್ ರವರಂತಹ ಬಲಪಂಥೀಯ ಪತ್ರಕರ್ತ ಕಾಂಗ್ರೆಸ್ ಸರಕಾರದಲ್ಲಿ ಮಾಧ್ಯಮ ಸಲಹೆಗಾರನಾಗಿದ್ದು ಆರೆಸ್ಸೆಸ್ ಹಾಗೂ ಬಿಜೆಪಿಗರಿಗೆ ಸಂತಸದ ಸಂಗತಿಯಾಗಿದೆ. ತಮ್ಮ ಸಿದ್ಧಾಂತದ ವಿರುದ್ಧದ ಪತ್ರಿಕಾ ಹೇಳಿಕೆ ಹಾಗೂ ವರದಿಗಳನ್ನು ಸಾಧ್ಯವಾದಷ್ಟೂ ಮಟ್ಟಿಗೆ ರಾಘವೇಂದ್ರ ಭಟ್ ರವರ ಮೂಲಕ ನಿಯಂತ್ರಿಸಬಹುದು ಎಂಬುದು ಸಂಘ ಪರಿವಾರದವರ ನಿರೀಕ್ಷೆಯಾಗಿದೆ.
* ಹಾಗೆಯೇ ಮುಖ್ಯಮಂತ್ರಿಗಳು ಸಹ ಸಂಘಿ ಸಮರ್ಥಕ ಬಲಪಂಥೀಯರ ಒಲವು ಗಿಟ್ಟಿಸಲು ರಾಘವೇಂದ್ರ ಭಟ್ ರವರನ್ನು ತಮ್ಮ ಸಲಹೆಗಾರನನ್ನಾಗಿ ನೇಮಕಾತಿ ಮಾಡಿಕೊಂಡಿದ್ದಾರೆ ಎಂಬುದು ಪ್ರೆಸ್ ಕ್ಲಬ್ ನಲ್ಲಿ ಪ್ರತಿಧ್ವನಿಸುತ್ತಿದೆ.
ಈ ನೇಮಕಾತಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾಗಿದೆ ಹಾಗೂ ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಅಪಮಾನಕಾರಿಯಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಪಕ್ಷದ ಒಗ್ಗಟ್ಟು ಕಾಪಾಡಲು ಹಾಗೂ ಕೊಟ್ಟ ಮಾತಿನಂತೆ ನಡೆಯಲು ಮತ್ತು ಮತ್ತೆ ಕಾಂಗ್ರೆಸ್ ಸರಕಾರವನ್ನು ಅಸ್ತಿತ್ವಕ್ಕೆ ತರಲು ಅನಿವಾರ್ಯವಾಗಿ ಡಿಕೆ ಶಿವಕುಮಾರರವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಮಾಡಿರಬಹುದು. ಆದರೆ ತಮ್ಮದೇ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರಿಗೆ ಪಟಿಂಗಾ, ಅಂಡೆಪಿರ್ಕಿ, ಓಡುಕಳ್ಳ ಎಂದೆಲ್ಲಾ ನಿಂದಿಸಿದ ರಾಘವೇಂದ್ರ ಭಟ್ ರವರಂತಹ ಸಂಘಿ ಸಮರ್ಥಕನನ್ನು ಕಾಂಗ್ರೆಸ್ ವರಿಷ್ಠರು ಅದು ಹೇಗೆ ಮಾಧ್ಯಮ ಸಲಹೆಗಾರ ಎಂದು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ. ಅದು ಹೇಗೋ ಸಂಘಿಗಳು ಯಾವು ಯಾವುದೋ ರೂಪದಲ್ಲಿ ಆಳುವ ಪಕ್ಷದ ಒಳಗೆ ಸೇರಿಕೊಂಡು ತಮ್ಮ ತಂತ್ರಗಾರಿಕೆ ರೂಪಿಸುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ರಾಘವೇಂದ್ರ ಭಟ್ ರವರ ನೇಮಕಾತಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಕರಾವಳಿ ರಂಗಾಯಣ ವಿರುದ್ಧ ಯಕ್ಷ ರಂಗಾಯಣ ಕಾಳಗ


