ಮೈಸೂರು : ಜಿಲ್ಲೆಯ ಟಿ..ನರಸೀಪುರ ತಾಲೂಕಿನ ಬೇವನಹಳ್ಳಿ ಗ್ರಾಮದಲ್ಲಿ ಅಮಾನೀಯವಾದ ಅನಿಷ್ಠ ಜೀತ ಪದ್ಧತಿಯ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಇಟ್ಟಿಗೆ ತಯಾರಿಸುವ ಕಾರ್ಖಾನೆಯಲ್ಲಿ ಬಲವಂತದ ದುಡಿಮೆಗೆ ಒಳಗಾಗಿದ್ದ 18 ಮಂದಿ ಸೋಲಿಗ ಸಮುದಾಯದ ಕಾರ್ಮಿಕರನ್ನು ಪೊಲೀಸರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ರಕ್ಷಣೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗೆ ಕಾರ್ಖಾನೆ ಮಾಲೀಕರಾದ ಯತಿರಾಜ್, ಗಿರೀಶ್ ಹಾಗೂ ಮಹದೇವ್ ಅವರನ್ನು ಬನ್ನೂರು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ತಮಿಳುನಾಡಿನವರಾದ ಸೋಲಿಗ ಸಮುದಾಯಕ್ಕೆ ಸೇರಿದವರೆನ್ನಲಾದ 7 ಪುರುಷರು ಮತ್ತು 9 ಮಹಿಳೆಯರು ಸೇರಿದಂತೆ ಒಟ್ಟು 18 ಮಂದಿ ಹಲವು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 25 ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಮೈಸೂರು ಭಾಗಕ್ಕೆ ವಲಸೆ ಬಂದಿದ್ದ ಈ ಕುಟುಂಬಗಳು, ಮುಂಗಡವಾಗಿ ನೀಡಲಾಗಿದ್ದ ಹಣದ ಹೆಸರಿನಲ್ಲಿ ಜೀತ ಪದ್ಧತಿಗೆ ಒಳಗಾಗಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳು ಕಾರ್ಮಿಕರಿಗೆ ಸುಮಾರು 25 ಸಾವಿರ ಮುಂಗಡ ಹಣ ನೀಡಿ, ಅದನ್ನೇ ನೆಪವಾಗಿಟ್ಟುಕೊಂಡು ನಿರಂತರವಾಗಿ ಕೆಲಸ ಮಾಡಿಸುತ್ತಿದ್ದರು ಎನ್ನಲಾಗಿದೆ. ಕಾರ್ಮಿಕರಿಗೆ ಸ್ವಾತಂತ್ರ್ಯವಿಲ್ಲದ ವಾತಾವರಣ ನಿರ್ಮಿಸಿ, ಬೇರೆಡೆಗೆ ತೆರಳದಂತೆ ನಿರ್ಬಂಧ ಹೇರಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಈ ನಡುವೆ, ಕಾರ್ಮಿಕರಾದ ಮುತ್ತಣ್ಣ ಮತ್ತು ಜ್ಯೋತಿ ದಂಪತಿ ಕಾರ್ಖಾನೆಯಿಂದ ತಪ್ಪಿಸಿಕೊಂಡು ಹೊರಬರಲು ಯತ್ನಿಸಿದ್ದರು. ಆದರೆ ಅವರ ಬೆನ್ನತ್ತಿದ ಮಾಲೀಕರು ದಂಪತಿಯನ್ನು ಮರಳಿ ಕರೆತಂದು ಕೂಡಿ ಹಾಕಿದ್ದರು. ಬಳಿಕ ಮತ್ತೆ ಕೆಲಸಕ್ಕೆ ಸೇರಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ
ಘಟನೆಯ ಮಾಹಿತಿ ದೊರಕಿದ ಬಳಿಕ ತಹಶೀಲ್ದಾರ್ ಸುರೇಶ್ ಆಚಾರ್ ನೇತೃತ್ವದಲ್ಲಿ ಪೊಲೀಸರು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ ಜೀತ ಪದ್ಧತಿಗೆ ಒಳಗಾಗಿದ್ದ ಕಾರ್ಮಿಕರನ್ನು ರಕ್ಷಿಸಿ, ಗಾಯಗೊಂಡಿದ್ದ ಮುತ್ತಣ್ಣ ಹಾಗೂ ಜ್ಯೋತಿ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಪ್ರಕರಣ ಸಂಬಂಧ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ, ಹಲ್ಲೆ ಹಾಗೂ ಕಾರ್ಮಿಕರ ಶೋಷಣೆಗೆ ಸಂಬಂಧಿಸಿದ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿರುವ ಬನ್ನೂರು ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಮೈಸೂರು ಜಿಲ್ಲೆಯಲ್ಲಿ ಮತ್ತೆ ಜೀತ ಪದ್ಧತಿಯ ಕರಾಳ ಮುಖವನ್ನು ಬಯಲಿಗೆಳೆದಿದ್ದು, ಕಾರ್ಮಿಕರ ಹಕ್ಕುಗಳ ರಕ್ಷಣೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

