ಬೆಂಗಳೂರು : ಆಯುಷ್ ಇಲಾಖೆಯ ವತಿಯಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು ಮುಂಜಾನೆ 6.00 ಗಂಟೆಯಿಂದ 9.00 ಗಂಟೆಯವರೆಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಡೆಯಿತು.
ಈ ವರ್ಷ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗʼ ಎಂಬ ಘೋಷವಾಕ್ಯದೊಂದಿಗೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗದಿಂದ ಸಾಧ್ಯ. ನಮ್ಮ ದೇಶಕ್ಕೆ ಮಾತ್ರವಲ್ಲ ವಿದೇಶಕ್ಕೂ ಯೋಗ ಹಬ್ಬಿದೆ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನವೂ ಯೋಗದಿನವಾಗಬೇಕು ಎಂದು ಯೋಗದ ಮಹತ್ವ ಸಾರಿದರು.
ಮುಂದಿನ ಪೀಳಿಗೆಗೆ ಯೋಗವನ್ನು ನಾವು ವರ್ಗಾಯಿಸಬೇಕು. ನಾವು ಆಸ್ಪತ್ರೆಗೆ ಹೋಗೋದನ್ನ ಕಡಿಮೆ ಮಾಡಬೇಕು. ಅದಕ್ಕಾಗಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತದೆ. ಗ್ರಾಮ ಗ್ರಾಮಕ್ಕೂ ಯೋಗ ವಿಸ್ತರಿಸುತ್ತೇವೆ. ಈಗಾಗಲೇ ಹಲವು ಗ್ರಾಮದಲ್ಲಿ ಯೋಗ ಗುರುಗಳಿದ್ದಾರೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೂ ರಾಜ್ಯದ ವಿವಿದೆಡೆ ಕೂಡ ಯೋಗ ದಿನಾಚರಣೆ ನಡೆಯಿತು. ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯೋಗಾಸನ ಮಾಡಿದರು. ಪಿಇಟಿ ಆವರಣದಲ್ಲಿ ಸಾರ್ವಜನಿಕರೊಂದಿಗೆ ಕುಮಾರಸ್ವಾಮಿ ಅವರು ಸ್ವತಃ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಗಮನ ಸೆಳೆದರು.

