ಏರುತ್ತಿರುವ ತಾಪಮಾನ ಮತ್ತು ಕುಸಿಯುತ್ತಿರುವ ಮಳೆಯ ಪ್ರಮಾಣವನ್ನು ನಾವೀಗ ಅನುಭವಿಸುತ್ತಿದ್ದೇವೆ. ಭಾರತದ ಮುಂಗಾರಿನ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳ ಕುರಿತು ಸವಿವರವಾಗಿ ಬರೆದಿದ್ದಾರೆ ಹಾಸನದ ವಿಜ್ಞಾನ ಲೇಖಕ ಕೆ ಎಸ್ ರವಿಕುಮಾರ್. ಸರಣಿಯಲ್ಲಿ ಪ್ರಕಟವಾಗುತ್ತಿರುವ ಲೇಖನದ ಮೂರನೆಯ ಹಾಗೂ ಕೊನೆಯ ಭಾಗ ಇಲ್ಲಿದೆ.
ಮುಂಗಾರು ಕೈಕೊಟ್ಟಿತೆ, ಎಲ್ನಿನೊಗೆ ಉಗಿಯಿರಿ
2023ಕ್ಕಿಂತ 2024, 2024ಕ್ಕಿಂತ 2025, 2025ಕ್ಕಿಂತ 2026… ಹೀಗೆ ಮನುಷ್ಯ ಬಿಡುಗಡೆ ಮಾಡಿದ ಕಾರ್ಬನ್ ಕಾರಣಕ್ಕೆ ಒಂದಕ್ಕಿಂತ ಒಂದು ಜಗತ್ತು ಕಂಡ ಹೆಚ್ಚು ಬಿಸಿಯಾದ ಇಸವಿಗಳೆಂದು ತಾಪದ ಅಂಕಿಅಂಶಗಳು ಹೇಳುತ್ತಿವೆ. ಅದರ ನಡುವೆ ಪೆಸಿಫಿಕ್ ಹೆಗ್ಗಡಲಿಗೆ ಸೇರಿದ ಎಲ್ನಿನೊ ಎಂಬ ಲಾಗಾಯ್ತಿನಿಂದ ಇರುವ ವಿದ್ಯಮಾನದ ಬಗ್ಗೆ ತುಸು ಹೇಳಬೇಕು. ಆ ವಿದ್ಯಮಾನದಲ್ಲಿ ಪೆಸಿಫಿಕ್ ಹೆಗ್ಗಡಲಿನ ಉಷ್ಣವಲಯದ ಮೂಡಣ ಭಾಗದಲ್ಲಿ 2-7 ವರುಷಕ್ಕೊಮ್ಮೆ ಕಡಲಿನ ನೀರು ಹೆಚ್ಚುವರಿ ಕಾದು, ಉಬ್ಬಿ ತನ್ನ ಸಂಪರ್ಕಕ್ಕೆ ಬರುವ ವಾತಾವರಣದ ಗಾಳಿಯನ್ನೂ ಕಾಯಿಸುತ್ತದೆ. ಕಾದ ಕಡಲ ನೀರು ಮತ್ತು ಗಾಳಿಗಳು ಇತ್ತ ಆಫ್ರಿಕಾದಿಂದ ಹಿಡಿದು ಅತ್ತ ದಕ್ಷಿಣ ಅಮೆರಿಕಾವರೆಗೆ ಉಷ್ಣವಲಯದ ಆಚೀಚೆ ಇರುವ ತಾಣಗಳ ಮೇಲೆ ಬೀಸಿ ಮಳೆ ತರುವ ಎಂದಿನ ಗಾಳಿಗಳ ನಿಟ್ಟುಗಳನ್ನು ಕದಲಿಸಿ ಅಥವಾ ಬದಲಿಸಿ ಅಡ್ಡ ಪರಿಣಾಮ ಬೀರಬಹುದಾಗಿದೆ. ಹಲವೆಡೆ ಮಳೆಯ ಕೊರತೆ, ಬರಗಳು ಎರಗಿದರೆ, ಇನ್ನು ಹಲವೆಡೆ ಅತಿಮಳೆ ಬೀಳಬಹುದಾಗಿದೆ. ಎಲ್ನಿನೊ ಬಂದಾಗಲೆಲ್ಲ ಮೋಡಗಳ ಚಲನೆ ಏರುಪೇರಾಗಿ ಮಾನ್ಸೂನ್ ವ್ಯತ್ಯಯಗೊಂಡು ಭಾರತಕ್ಕೆ ಮುಂಗಾರುಮಳೆ ಕಮ್ಮಿಯಾಗುವುದುಂಟು. ಕಡಿಮೆ ಮಳೆಯೆಂದರೆ ಹೆಚ್ಚು ಬಿಸಿಲು ಮತ್ತು ಕಾವು. ಪೆಸಿಫಿಕ್ ಹೆಗ್ಗಡಲಿನ ಮೇಲುಮೈ ಸಾಮಾನ್ಯಕ್ಕಿಂತ 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪ ತೋರಿಸಿದರೆ ಎಲ್ನಿನೊ ಎದ್ದಿದೆ ಎನ್ನಲಾಗುತ್ತದೆ. ತಾಪದ ಪ್ರಮಾಣ 1.0 ಡಿಗ್ರಿ ಏರಿದರೆ ‘ಸಾಧಾರಣ’, 1.5 ಡಿಗ್ರಿ ಏರಿದರೆ ‘ಬಲವಾದ’ ಮತ್ತು 2.0 ಡಿಗ್ರಿ ಏರಿದರೆ ‘ಅತಿ ಬಲವಾದ’ ಎಲ್ನಿನೊ ಎಂದು ವಿಂಗಡಿಸಲಾಗಿದೆ. ಅತಿ ಬಲವಾದ ಎಲ್ನಿನೊಗೆ ‘ಸೂಪರ್ ಎಲ್ನಿನೊ’ ಎಂದೂ ಕರೆಯಲಾಗುತ್ತದೆ. 2026, ಸೂಪರ್ ಎಲ್ನಿನೊ ವರುಷ. ಈ ಜೂನ್ ನಂತರ ತೀವ್ರಗೊಳ್ಳುವ ಅದರ ಅಳವು ಮುಂದಿನ 9-12 ತಿಂಗಳು ಇರುತ್ತದೆ. ಮನುಷ್ಯ ಬಿಡುಗಡೆಯ ಕಾರ್ಬನ್ ಕಾರಣಕ್ಕೆ ಉಂಟಾದ ತಾಪವೂ ವರುಷದಿಂದ ವರುಷಕ್ಕೆ ಎಲ್ನಿನೊ ಹೆಚ್ಚೆಚ್ಚು ಕಾಯಲು ತಿದಿ ಒತ್ತುತ್ತಿದೆ. ಈ ಬಗ್ಗೆ ನಮ್ಮ ಹವಾಮಾನ ಇಲಾಖೆಯದು ಮಸಣಮೌನ.
ಜಗತ್ತು ಅಸಹನೀಯವಾಗಿ ಬಿಸಿಗೊಳ್ಳಲು ಎಲ್ನಿನೊ ಕಾರಣ ಎಂದು ಹೇಳುತ್ತ ಹವಾಮಾನ ಬದಲಾವಣೆಯ ತಾಪತೀವ್ರತೆಯನ್ನು ಮುಚ್ಚಿಟ್ಟು ಹೊಣೆಗೇಡಿ ಆಡಳಿತಗಳು ಮತ್ತು ಸರಕಾರಗಳ ಮುಖ ಉಳಿಸುವ ಪ್ರಯತ್ನಗಳು ಹಲವೆಡೆ ನಡೆಯುತ್ತವೆ. ಎಲ್ಲ ಅತಿರೇಕಗಳಿಗೆ ನಿಸರ್ಗವೇ ಕಾರಣವೆಂದು ಹೇಳುತ್ತ ಆಳುವವರು ಹವಾಮಾನ ಬದಲಾವಣೆ ತಡೆಯಲಾಗದ ತಮ್ಮ ತಪ್ಪುಗಳನ್ನು ಮರೆಮಾಚಿಕೊಳ್ಳಬಹುದು. ನಮ್ಮ ಹವಾಮಾನ ಇಲಾಖೆ ಕಳೆದ ಮಾರ್ಚಿಯಿಂದಲೆ ಎಲ್ನಿನೊ ಜಪ ಮಾಡುತ್ತ ಬಂದಿದೆ. 2027ರ ಜನವರಿ ತನಕವೂ ಅದಿರುತ್ತದೆ ಎಂದಿದೆ. ಅಲ್ಲಿಗೆ ಈ ವರುಷ ಯಾವುದೇ ತೀವ್ರ ನೈಸರ್ಗಿಕ ಅನಾಹುತ ಜರುಗಿದರೆ ಅದಕ್ಕೆ ಎಲ್ನಿನೊ ಕಾರಣ ಎಂದು ಚರ್ಚೆಯನ್ನು ಹುಗಿದುಬಿಡಬಹುದಾಗಿದೆ. ನಾವು ಅದನ್ನೆ ಗಿಳಿಪಾಠದಂತೆ ಒಬ್ಬರಿಗೊಬ್ಬರು ಒಪ್ಪಿಸಿಕೊಳ್ಳುತ್ತ, ನಮ್ಮ ಹಣೆಬರಹವನ್ನು ದೂರಿಕೊಳ್ಳುತ್ತ ಕಾಲ ಹಾಕುತ್ತೇವೆ. ಹವಾಮಾನ ಇಲಾಖೆ ಅಪ್ಪಿತಪ್ಪಿಯೂ ಹವಾಮಾನ ಬದಲಾವಣೆಯನ್ನು ಎದುರಿಸಲು ನಿಡುಗಾಲದ ಸಿದ್ಧತೆಗಳು ಹೇಗಿರಬೇಕು, ನಮ್ಮ ಬದುಕಿನಲ್ಲಿ ಕಾರ್ಬನ್ ಬಿಡುಗಡೆಯನ್ನು ಹೇಗೆಲ್ಲ ಕಮ್ಮಿಮಾಡಬಹುದು ಮುಂತಾದವುಗಳ ಬಗ್ಗೆ ಸೊಲ್ಲೆತ್ತುವುದಿಲ್ಲ. ಅದರ ಕ್ರಿಯೆ ತೀರ ಸಾಂದರ್ಭಿಕ ಅಷ್ಟೆ. ಎಲ್ನಿನೊ ಸಹಜತೆ ಮೀರಿ ಬಿರುಸುಗೊಳ್ಳಲು ಮನುಷ್ಯರ ಕೊಡುಗೆ ಇದೆ ಎಂದು ಅದು ಹೇಳಲು ತಯಾರಿಲ್ಲ. ಎಲ್ಲಿಯವರೆಗೆ ಅದು ಎಲ್ನಿನೊವಿನ ಟೊಂಗೆಗೆ ನೇತುಹಾಕಿಕೊಂಡಿರುತ್ತದೆ? ಅದೇ ಹೇಳಬೇಕು. ಬಿಸಿಯಲೆಗಳನ್ನು ಭಾರತದಲ್ಲಿ -ಭಾರೀ ಒತ್ತಾಯವಿದ್ದರೂ- ಇನ್ನೂ ‘ರಾಷ್ಟ್ರೀಯ ವಿಪತ್ತು’ ಎಂದು ಸಾರಿಲ್ಲ. ಹಾಗೆ ಮಾಡಿದರೆ ಬಿಸಿಯಲೆಗಳ ಹೊಡೆತಕ್ಕೆ ಸಿಕ್ಕು ಸತ್ತವರ ಕುಟುಂಬಕ್ಕೆ ಹಣಕಾಸಿನ ಪರಿಹಾರ ನೀಡಬೇಕಾಗುತ್ತದೆ. ಹವಾಮಾನ ಇಲಾಖೆ ಅಲ್ಲಿ ಇಲ್ಲಿ ಬಿಸಿಯಲೆಗಳು ಕವಿಯುತ್ತವೆ ಎಂದು ಮುನ್ಸೂಚನೆ ನೀಡುತ್ತದೆ. ರಾಷ್ಟ್ರೀಯ ವಿಪತ್ತು ಜಾರಿಯಾಗಬೇಕು ಎಂದು ಒತ್ತಾಯಿಸುವ ದನಿಗಳಿಗೆ ಒತ್ತಾಸೆಯಾಗುವುದಿಲ್ಲ. ಬಿರುಬಿಸಿಲಿನಲ್ಲಿ ಹೊರ ಹೋಗಬೇಡಿ, ಹೇರಳ ನೀರು ಕುಡಿಯುತ್ತಿರಿ, ಹತ್ತಿ ಬಟ್ಟೆ ಧರಿಸಿ, ಟೊಪ್ಪಿಗೆ ತೊಟ್ಟುಕೊಳ್ಳಿ, ಕೊಡೆ ಹಿಡಿದುಕೊಳ್ಳಿ… ಎಂದು ನಮ್ಮ ಹಿರಿಯರು ತಮ್ಮ ಸಾಮಾನ್ಯ ಅನುಭವಗಳಿಂದ ನೀಡುತ್ತ ಬಂದಿರುವ ಸೂಚನೆಗಳನ್ನೆ ನೀಡಿ ಮುಗುಮ್ಮಾಗುತ್ತದೆ. ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಹೇಳಬೇಕಾದ್ದು ಇನ್ನೂ ಬಹಳವಿದೆ ಎಂದು ಇಲಾಖೆಗೆ ಅನಿಸಿಲ್ಲ. ಆಡಳಿತಗಳು, ಆರೋಗ್ಯ ಇಲಾಖೆಗಳು ಹವಾಮಾನ ಇಲಾಖೆಯ ಈ ಯಾಂತ್ರಿಕ ಸಲಹೆಗಳನ್ನೆ ಸುತ್ತೋಲೆಯಾಗಿಸಿ ತಮ್ಮ ಜವಾಬ್ದಾರಿಗಳನ್ನು ಮುಗಿಸಿ ಅಡ್ಡಾಗುತ್ತವೆ. ವರುಷದಿಂದ ವರುಷಕ್ಕೆ ತಾಪ ಯಾಕೆ ಏರುತ್ತಲೆ ಇದೆ ಎಂಬ ಪ್ರಶ್ನೆಗೆ ಉತ್ತರ ಅರಸುವ ಗೊಡವೆಗೆ ಯಾರೂ ಮುನ್ನುಗ್ಗುವುದಿಲ್ಲ.

ಎಲ್ನಿನೊ ಕುರಿತ ಮಾಹಿತಿಗಳು ಮತ್ತು ಅಪ್ಡೇಟ್ಗಳು ನಮಗೆ ಮೂಲದಲ್ಲಿ ಹೆಚ್ಚು ದೊರೆಯುವುದು ಹಲವು ಹವ್ಯಾಸಿ ವಿದೇಶಿ ಅಧ್ಯಯನ ಸಂಸ್ಥೆಗಳು, ಅಮೆರಿಕಾದ National Oceanic and Atmospheric Administration (NOAA), ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಸರ್ವೀಸ್ ಮತ್ತು ಆಸ್ಟ್ರೇಲಿಯಾದ Bureau of Meteorology ಗಳ ನಿರಂತರ ಸಂಶೋಧನೆಗಳಿಂದ. ತನ್ನ ಉಪಗ್ರಹ ಜಾಲಗಳ ಮೂಲಕ ನಾಸಾ ಕೂಡಾ ಆ ನಿಟ್ಟಿನಲ್ಲಿ ನೆರವಾಗುತ್ತದೆ. ಇವರೆಲ್ಲರ ದುಡಿಮೆಯ ವರದಿಗಳನ್ನು ನಮ್ಮ ಹವಾಮಾನ ಇಲಾಖೆ ಮರು ಬಿಡುಗಡೆ ಮಾಡುತ್ತದೆ ಅಷ್ಟೆ. ಎಲ್ನಿನೊ ಜರುಗುವಿಕೆಯಲ್ಲಿ ಕಡಲಿನ ಹೆಚ್ಚುವರಿ ಕಾವು ಗಾಳಿಗೆ ವರ್ಗಾವಣೆಯಾಗುತ್ತದೆ. ಅದು ನಿಸರ್ಗ ಸಹಜ ವರ್ಗಾವಣೆ. ಆದರೆ ಹವಾಮಾನ ಬದಲಾವಣೆಯಿಂದ ಈಗಾಗಲೆ ಅಸಹಜವಾಗಿ ಕಾದ ಗಾಳಿಯು ಎಲ್ನಿನೊದಿಂದ ಹೆಚ್ಚುವರಿ ಕಾವನ್ನು ಪಡೆದಾಗ ನೈಸರ್ಗಿಕ ಏರುಪೇರುಗಳು ಮತ್ತಷ್ಟು ತೀವ್ರಗೊಳ್ಳುತ್ತವೆ. ವಿಪರೀತ ಧಗೆ, ಅತಿಮಳೆ, ಬಿರುಗಾಳಿ, ಸೈಕ್ಲೋನುಗಳ ಹೆಚ್ಚಳ, ಬರ ಎಲ್ಲವೂ ಒಂದರ ಹಿಂದೆ ಒಂದರಂತೆ ನೆಲದ ಮೇಲೆ ಎರಗಬಹುದು. ಎಲ್ಲವೂ ನಮ್ಮ ಕಲ್ಪನೆ ಮೀರಿ ಹಾನಿ ತರಬಹುದು.
ಭಾಗ ಒಂದು ಓದಿದ್ದೀರಾ – https://kannadaplanet.com/el-nino-the-crutch-of-the-escapists/ ಎಲ್ನಿನೊ, ಉಣುಚಿಕೊಳ್ಳುವವರ ಊರುಗೋಲು – ಭಾಗ 1
ಮೈಗಳ್ಳರ ‘ಜಾಣ’ ಮಂಡೆಗೆ ಮೊಟಕಿದ ದಿಟ್ಟ ವಿಜ್ಞಾನಿಗಳು
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ಹಲವು ಹವಾಮಾನ ವಿಜ್ಞಾನಿಗಳ ಗುಂಪು Mega Science Vision–2035 ಎಂಬ ಎಚ್ಚರಿಸುವ ವರದಿಯಲ್ಲಿ ಹೇಳಿರುವ ಮಾತುಗಳು ಒಕ್ಕೂಟ ಸರಕಾರದ ನಡೆಗಳು ಮತ್ತು ಆದ್ಯತೆಗಳನ್ನು ನನ್ನಂತ ಅಧಿಕಪ್ರಸಂಗಿಗಳಿಗೆ ಪ್ರಶ್ನಿಸಲು ಒತ್ತಾಸೆ ನೀಡುತ್ತವೆ. ಅವರು ಹೇಳಿದ್ದಿಷ್ಟೆ, ‘ಭಾರತ ಹವಾಮಾನದ ಅತಿರೇಕದ ಆಗುಹೋಗುಗಳನ್ನು ತಿಳಿಯಲು ಅಗತ್ಯವಿರುವ ತಾಂತ್ರಿಕ ಬೆಳವಣಿಗೆಯ ತೆರಹುಗಳನ್ನು ಕಳೆದುಕೊಂಡಿದೆ. ಅದರ ಹವಾಮಾನ ಸಂಬಂಧಿ ಅಧ್ಯಯನಗಳು ಬಹುತೇಕ ಆಮದು ಮಾಡಿಕೊಂಡ ವೈಜ್ಞಾನಿಕ ಸಲಕರಣೆಗಳನ್ನು ನೆಮ್ಮಿಕೊಂಡಿದೆ. ಅವು ಈಗಾಗಲೆ ತಮ್ಮ ಚೆಚ್ಚರಿಕೆ(ಎಫಿಶಿಯೆನ್ಸಿ)ಯನ್ನು ಕಳೆದುಕೊಂಡಿದ್ದು ಮತ್ತು ಇನ್ನೆಷ್ಟು ಮಾತ್ರವೂ ಅಳತೆಗೆ ಹೊಂದಿಸಲಾಗದ ಹಂತ ತಲುಪಿದ್ದು (uncalibrated condition) ಬೇಜವಾಬುದಾರಿಯ ಮಾಹಿತಿಗಳನ್ನು ನೀಡುತ್ತಿವೆ. ಆ ಮಾಹಿತಿಗಳು ದೇಶೀಯ ಮತ್ತು ಜಾಗತಿಕ ಪತ್ರಿಕೆಗಳಲ್ಲಿ ಕಾಣಿಸಿಕೊಂಡು ದೇಶದ ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನೆಗಳು ಹಾಗೂ ಬೆಳವಣಿಗೆಗಳ ಗಟ್ಟಿತನವನ್ನು ಜಗತ್ತು ಗುಮಾನಿಯಿಂದ ನೋಡುವಂತಾಗಿದೆ’. ನಮ್ಮ ಹವಾಮಾನ ಇಲಾಖೆಯ ನಿರ್ದೇಶಕರಾಗಿರುವ ಡಾ.ಮೃತ್ಯುಂಜಯ ಮೊಹಪಾತ್ರರ ಆಲೋಚನಾ ಲಹರಿಯನ್ನು ಗಮನಿಸಿದರೆ ಹತ್ತಿರ ಭವಿಷ್ಯದಲ್ಲಿ ಒಳ್ಳೆಯ ಭರವಸೆಗಳು ಸಿಗುವುದು ಅನುಮಾನವಿದೆ. ಒಂದು ರಾಜಕೀಯ ಪಕ್ಷದ ಅಜೆಂಡಾ ಆದ ‘ಒಂದು ದೇಶ, ಒಂದು ಚುನಾವಣೆ’ಯ ಬಗ್ಗೆ ಆತ 2024ರ ಒಂದು ಸುದ್ದಿಕೂಟದಲ್ಲಿ ಮಾತನಾಡುತ್ತ ‘ಈ ಗುರಿಯನ್ನು ಸಾಧಿಸಬೇಕೆಂದರೆ ಸರಕಾರ ಚುನಾವಣೆ ನಡೆಸುವ ಕಾಲದಲ್ಲಿ ಹವಾಮಾನದ ಏರಿಳಿತಗಳನ್ನು ಗಮನದಲ್ಲಿಸಿಕೊಂಡಿರಬೇಕು’ ಎಂದಿದ್ದರು. ವಿಜ್ಞಾನಕ್ಕೆ ತಲೆಬಾಗಿರಬೇಕಿದ್ದ ಆ ವ್ಯಕ್ತಿ ತನ್ನ ಇಲಾಖೆಗೆ ಸಂಬಂಧವೇ ಇಲ್ಲದ ಅಜೆಂಡಾಕ್ಕೆ ಹವಾಮಾನವನ್ನು ತಳಕುಹಾಕಿ ಕಾಳಜಿ ತೋರಿದ್ದರು (ನಿವೃತ್ತಿಯ ನಂತರ ಅವರಿಗೊಂದು ಸೀಟು ರಾಜ್ಯಸಭೆಯಲ್ಲಿ ಆ ಪಕ್ಷದಿಂದ ದೊರೆಯಬಹುದೆಂಬ ಗುಮಾನಿ ನನ್ನದು).

ಹಿಂದೆಲ್ಲ ಹಲವುಬಾರಿ ಮುಂಗಾರು ಮಳೆಯ ಶೇಕಡಾವಾರು ಪ್ರಮಾಣದ ಬಗ್ಗೆ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಗಳು ಲಾಗಾ ಹೊಡೆದಿವೆ. 2019ರಲ್ಲಿ ವಾಡಿಕೆಗಿಂತ ಕಮ್ಮಿ ಅಂದರೆ ಶೇಕಡಾ 96 ಮುಂಗಾರು ಮಳೆ ಬೀಳಬಹುದು ಎಂದು ಅದು ಹೇಳಿತ್ತು. ಆದರೆ ಶೇಕಡಾ 110 ರಷ್ಟು ಮಳೆಯಾಗಿ ದೇಶದೆಲ್ಲೆಡೆ ನೆರೆಹಾವಳಿ ವಿಪರೀತವಿತ್ತು. ಹಾಗೆ ನೋಡಿದರೆ ಆ ವರುಷ ಎಲ್ನಿನೊ ಇರಲಿಲ್ಲ (ತಟಸ್ಥ ವರುಷ). ಮಳೆ ಹೆಚ್ಚಾಗಿದ್ದಕ್ಕಾಗಲಿ, ಕಮ್ಮಿಯಾಗಿದ್ದಕ್ಕಾಗಲಿ ಎರಡೂ ಸಂದರ್ಭದಲ್ಲಿ ಎಲ್ನಿನೊ ಪಾತ್ರವಿರಲಿಲ್ಲ. ಆದರೂ ಹವಾಮಾನ ಇಲಾಖೆಯ ಲೆಕ್ಕಾಚಾರ ಎಡವಿತ್ತು. 2021ರಲ್ಲಿ ದೆಹಲಿಗೆ ಜೂನ್ 12ರಂದು ಮುಂಗಾರು ಬರುತ್ತದೆ ಎಂದು ಇಲಾಖೆ ಹೇಳಿತ್ತು. ಆದರೆ ಜುಲೈ 13ರಂದು ಬರುವ ಮೂಲಕ ಮುಂಗಾರು ಇಲಾಖೆಯನ್ನು ಅಣಕಿಸಿತ್ತು. 2024ರ ಮುಂಬಯಿಯ ಹುಚ್ಚಾಪಟ್ಟೆ ಮಳೆಗಳ ಬಗ್ಗೆ ಇಲಾಖೆಗೆ ಸುಳಿವೇ ಇರಲಿಲ್ಲ. ಜುಲೈನಲ್ಲಿ ಕಲ್ಪನೆಗೂ ನಿಲುಕದ ಮೋಡಸಿಡಿತಗಳು ಜರುಗಿ ಮುಂಬಯಿ ಜುಲೈನಲ್ಲಿ ಶೇಕಡಾ 42ರಷ್ಟು ಹೆಚ್ಚುಕಡಿಮೆ ಮಳೆಗೆ ಕೊಚ್ಚಿಹೋಯಿತು. ನಗರನೆರೆಯ ಸ್ವರೂಪಕ್ಕೆ ಮುಂಬಯಿಗರು ಮಾತ್ರವಲ್ಲ, ದೇಶವೆ ತತ್ತರಿಸಿತು. 2024ರ ಶುರುವಿನಲ್ಲೆ ಎಲ್ನಿನೊ ಕಾಣಿಸಿಕೊಂಡಿತ್ತು. ಅದರ ಪರಿಣಾಮದಿಂದ ಮುಂಗಾರಿನ ಬಿರುಸು ಕಡಿಮೆಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಹೀಗೆ ಹಲವು ಎತ್ತುಗೆಗಳನ್ನು ಓದುಗರ ಮುಂದೆ ಇಡಬಹುದು.
ಭಾಗ ಎರಡು ಓದಿದ್ದೀರಾ? ಎಲ್ನಿನೊ, ಉಣುಚಿಕೊಳ್ಳುವವರ ಊರುಗೋಲು | ಭಾಗ-2
ಹವಾಮಾನ ಇಲಾಖೆ ತಾಂತ್ರಿಕವಾಗಿ ಪುಟಿದೇಳದೆ ಹೋದರೆ ಹವಾಮಾನದ ಏರುಪೇರುಗಳಿಗೆ ಬಿಡುವಿಲ್ಲದೆ ತುತ್ತಾಗುತ್ತಿರುವ ಭಾರತಕ್ಕಾಗಿ ಪರಿಣಾಮಕಾರಿ ಮುನ್ಸೂಚನೆ ನೀಡಬಲ್ಲ ಮಾದರಿಗಳನ್ನು ಕಳೆದುಕೊಳ್ಳಲಿದೆ. ಹವಾಮಾನ ವಿಜ್ಞಾನಿಗಳ ಕಳವಳ ಇದೇ ಆಗಿದೆ. ಆದರೆ ಇಲಾಖೆಗೆ ಕಳಕಳಿ ಇರದೇ ಹೋದರೆ, ಅದು ಜಾಗತಿಕವಾಗಿ ಮೇಲುದರ್ಜೆಗೆ ಏರದೆ ಹೋದರೆ ಜಗತ್ತಿನ ಮುಂದುವರೆದ ಸಂಸ್ಥೆಗಳ ಸಂಶೋಧನೆಗಳ ಫಲಿತಾಂಶಗಳನ್ನೆ ನೆಚ್ಚಿಕೊಂಡು ಕೂರಬೇಕಾಗುತ್ತದೆ. ಈಗಾಗಲೆ ಸಮರ್ಥ ಹವಾಮಾನ ಪರಿಣಿತರನ್ನು ರೂಪಿಸುವಲ್ಲಿ ನಮ್ಮ ಸಂಶೋಧನಾಲಯಗಳು, ಯೂನಿವರ್ಸಿಟಿಗಳು ಹಿಂದೆ ಬಿದ್ದಿವೆ. ಹವಾಮಾನ ಸಂಬಂಧಿ ಅಧ್ಯಯನ ಕೋರ್ಸುಗಳನ್ನು ವಿಶೇಷವಾಗಿ ಆರಂಭಿಸಲು ಸರಕಾರಗಳು ಮನಸು ಮಾಡಬೇಕಿದೆ. ಬರುವ ದಿನಗಳಲ್ಲಿ ಹವಾಮಾನ ರಂಗವು ಲಕ್ಷಾಂತರ ನೌಕರಿಗಳಿಗೆ ದಾರಿಮಾಡಿಕೊಡಲಿದ್ದು ಸರಕಾರಗಳು ಈಗಲೇ ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ.
ನೆನಪಿರಲಿ, ಹವಾಮಾನ ಇಲಾಖೆಯ ಹೆಚ್ಚು ತಾಂತ್ರಿಕವಾಗಿ ಮುಂದುವರೆದ ಮುನ್ಸೂಚನೆಗಳು ನೈಸರ್ಗಿಕ ವಿಪತ್ತುಗಳನ್ನು ತಡೆಯಲಾರವು. ಆಸ್ತಿಹಾನಿಯನ್ನು ತಪ್ಪಿಸಲಾರವು. ಆದರೆ ಜೀವಹಾನಿಯನ್ನು ಸೊನ್ನೆ ಪ್ರಮಾಣದಲ್ಲಿ ತಪ್ಪಿಸಬಹುದಾಗಿದೆ ಮತ್ತು ಅದೇ ದೇಶದ ಮುಂಚೂಣಿಯ ಗುರಿಯಾಗಬೇಕು.
ರವಿಕುಮಾರ್ ಕೆ ಎಸ್
ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.
ಮೊ : 9964604297
ಇದನ್ನೂ ಓದಿ- ಜಿಗಜಿಣಗಿಯ “ದಲಿತ ಮನುಷ್ಯ” ಎಂಬ ಧ್ವನಿಯ ಸುತ್ತ….


