ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸತತ ಎರಡು ಐಪಿಎಲ್ ಟ್ರೋಫಿಗಳನ್ನು ತಂದುಕೊಟ್ಟ ಯಶಸ್ವಿ ನಾಯಕ ರಜತ್ ಪಾಟಿದಾರ್, ತಮ್ಮ ಐಪಿಎಲ್ ವೃತ್ತಿಜೀವನದ ಆರಂಭಿಕ ದಿನಗಳ ಕುರಿತು ಆಘಾತಕಾರಿ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಆರಂಭದಲ್ಲಿ ತಮಗೆ ಆರ್ಸಿಬಿ ತಂಡವನ್ನು ಸೇರಲು ರವಷ್ಟೂ ಇಷ್ಟವಿರಲಿಲ್ಲ ಎಂದು ಪಾಟಿದಾರ್ ಬಹಿರಂಗಪಡಿಸಿದ್ದಾರೆ.
‘ರೊಟೊರಿಸ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಗಾಯದ ಕಾರಣದಿಂದಾಗಿ ಬದಲಿ ಆಟಗಾರನಾಗಿ ತಂಡ ಸೇರಿದರೆ ಆಡಲು ಹೆಚ್ಚಿನ ಅವಕಾಶ ಸಿಗಲಿಕ್ಕಿಲ್ಲ ಎಂಬ ಭಯದಿಂದ ತಾವು 2022 ರಲ್ಲಿ ಆರ್ಸಿಬಿ ಸೇರಲು ನಿರಾಕರಿಸಿದ್ದಾಗಿ ಹೇಳಿದ್ದಾರೆ.
ಬೆಂಚು ಕಾಯಲು ಇಷ್ಟವಿರಲಿಲ್ಲ
“ನನಗೆ ಆರ್ಸಿಬಿ ತಂಡವನ್ನು ಸೇರಲು ಎಂದಿಗೂ ಇಷ್ಟವಿರಲಿಲ್ಲ. ಅವರು ನನ್ನನ್ನು ಬದಲಿ ಆಟಗಾರನಾಗಿ ಕರೆಯುತ್ತಿದ್ದರಿಂದ, ಖಂಡಿತವಾಗಿಯೂ ನನಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡುವುದಿಲ್ಲ ಎಂಬ ಭಾವನೆ ಇತ್ತು. ನಾನು ತಂಡವನ್ನು ಸೇರಿದಾಗ ಮ್ಯಾನೇಜ್ಮೆಂಟ್ ಕೂಡ ಅದನ್ನೇ ಹೇಳಿತು. ‘ನೀನು ಕೇವಲ ಬದಲಿ ಆಟಗಾರ, ಯಾರಾದರೂ ಗಾಯಗೊಂಡರೆ ಮಾತ್ರ ಅವಕಾಶ ಸಿಗುತ್ತದೆ’ ಎಂದು ಸ್ಪಷ್ಟಪಡಿಸಿದ್ದರು. ಬೆಂಚ್ ಮೇಲೆ ಸುಮ್ಮನೆ ಕುಳಿತುಕೊಳ್ಳಲು ನನಗೆ ಇಷ್ಟವಿರಲಿಲ್ಲ,” ಎಂದು ಪಾಟಿದಾರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಮದುವೆ ಮುಂದೂಡಿ ಬಂದಿದ್ದ ಪಾಟಿದಾರ್
ಅದೇ ಸಮಯದಲ್ಲಿ ಪಾಟಿದಾರ್ ಅವರ ಮದುವೆಯ ದಿನಾಂಕವೂ ನಿಗದಿಯಾಗಿತ್ತು. ಕೇವಲ ಬೆಂಚ್ ಕಾಯಲು ಹೋಗುವ ಬದಲು ಮದುವೆಯಾಗುವುದೇ ಲೇಸು ಎಂದು ಅವರು ಭಾವಿಸಿದ್ದರು. ತಾವು ಬೆಂಗಳೂರಿಗೆ ಹೋಗುವುದಿಲ್ಲ ಎಂದು ಕುಟುಂಬ ಮತ್ತು ಕೋಚ್ಗಳಿಗೆ ನೇರವಾಗಿ ಹೇಳಿದ್ದರು. ಆದರೆ, ಆಪ್ತರ ಒತ್ತಾಯ ಹಾಗೂ ಮದುವೆಯನ್ನು ಎರಡು ತಿಂಗಳು ಮುಂದೂಡುವಂತೆ ಸಿಕ್ಕ ಸಲಹೆಯ ಮೇರೆಗೆ ಅವರು ಮನಸ್ಸು ಬದಲಾಯಿಸಿದ್ದರು.
ತಿರುವು ನೀಡಿದ ಅದೃಷ್ಟ
2021 ರಲ್ಲಿಆರ್ಸಿಬಿ ಪರ ಕೆಲವು ಪಂದ್ಯ ಆಡಿದ್ದ ಪಾಟಿದಾರ್, 2022 ರ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು. ಆದರೆ ಲವ್ನೀತ್ ಸಿಸೋಡಿಯಾ ಗಾಯಗೊಂಡ ಹಿನ್ನೆಲೆಯಲ್ಲಿ ಅವರು ಮಧ್ಯದ ಸೀಸನ್ನಲ್ಲಿ ಬದಲಿ ಆಟಗಾರನಾಗಿ ಆರ್ಸಿಬಿ ಸೇರಿದರು. ಸಿಕ್ಕ ಅವಕಾಶದಲ್ಲೇ ಅಬ್ಬರಿಸಿದ ಪಾಟಿದಾರ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಚಚ್ಚಿ ಇತಿಹಾಸ ನಿರ್ಮಿಸಿದರು.
ಅಲ್ಲಿಂದ ಮುಂದೆ ತಿರುಗಿ ನೋಡದ ಪಾಟಿದಾರ್, ಮಧ್ಯಮ ಕ್ರಮಾಂಕದ ಫಿನಿಶರ್ ಆಗಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡರು. ವಿರಾಟ್ ಕೊಹ್ಲಿ ನಂತರ 2025 ರಲ್ಲಿ ಆರ್ಸಿಬಿ ತಂಡದ ನಾಯಕತ್ವ ವಹಿಸಿಕೊಂಡ ರಜತ್ ಪಾಟಿದಾರ್, ತಂಡದ ಸುದೀರ್ಘ ಟ್ರೋಫಿ ಬರವನ್ನು ನೀಗಿಸಿದ್ದಲ್ಲದೆ, 2026 ರಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲಿಸಿಕೊಟ್ಟು ಇತಿಹಾಸ ಬರೆದಿದ್ದಾರೆ. ಆರಂಭದಲ್ಲಿ ಬರಲು ಇಷ್ಟಪಡದ ಆಟಗಾರನೇ ಇಂದು ಆರ್ಸಿಬಿಯ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿರುವುದು ನಿಜಕ್ಕೂ ರೋಚಕ ಇತಿಹಾಸ.

