ಸಾಂಸ್ಕೃತಿಕ ಸಂಘಟನೆ ಮತ್ತು ಮೂಲಸೌಕರ್ಯಗಳ ಅಗತ್ಯ

ಕರ್ನಾಟಕ ರಂಗ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ಸಂಘಟಕರ ಸಮಾವೇಶದ ಗೋಷ್ಠಿಯೊಂದರಲ್ಲಿ ಸಾಂಸ್ಕೃತಿಕ ಲೋಕದ ಸಮಗ್ರ ಬೆಳವಣಿಗೆಗಾಗಿ ಶಶಿಕಾಂತ ಯಡಹಳ್ಳಿಯವರು ಹಂಚಿಕೊಂಡ ಮಾತುಗಳ  ಸಾರಾಂಶ ಇಲ್ಲಿದೆ.

“ಸಂಘಟಕರ ಸಮಾವೇಶ” ಆಯೋಜಿಸಿದ್ದು ಸಂತೋಷದ ಸಂಗತಿ. ಸಂಘಟಕರ ಸಂಭ್ರಮ ಸಂಕಟಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಿದ್ದಕ್ಕೆ ಕರ್ನಾಟಕ ರಂಗ ಪರಿಷತ್ತಿಗೆ ಅಭಿನಂದನೆಗಳು.

“ಸರಕಾರಿ ಅನುದಾನಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿ ಅನುದಾನವೋ?” ಎನ್ನುವ ಪ್ರಶ್ನೆ ಈ ಸಮಾವೇಶದಲ್ಲಿ ಭಾಗಿಯಾದ ನನ್ನನ್ನು ಕಾಡುತ್ತಿದೆ. ಅನುದಾನ ಸಿಗಲಿ ಸಿಗದೇ ಇರಲಿ ಸೂಕ್ತವೆನ್ನಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸಂಘಟಕರ ಕಾಯಕವಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಲೇ ಅನುದಾನಕ್ಕಾಗಿ ಒತ್ತಾಯಿಸಬೇಕಿದೆಯೇ ಹೊರತು ಸರಕಾರಿ ಸಹಾಯಧನಕ್ಕಾಗಿಯೇ ಕಾರ್ಯಕ್ರಮಗಳನ್ನು ಮಾಡುವುದು ಅಪೇಕ್ಷಣೀಯವಲ್ಲ.

ಸಾಂಸ್ಕೃತಿಕ ಕಾರ್ಯಕ್ರಮಗಳು ಅನುದಾನ ಕೇಂದ್ರಿತವಾಗಿರಬೇಕಿಲ್ಲ

ಸರಕಾರವು ಸಂಸ್ಕೃತಿ ಇಲಾಖೆಯ ಮೂಲಕ ಸಾಂಸ್ಕೃತಿಕ ಸಂಘಟನೆಗಳಿಗೆ ಕೊಡಮಾಡುವ ಸಹಾಯಧನ ಸರಕಾರಿ ಭಿಕ್ಷೆಯಲ್ಲ, ಅದು ಕಲಾವಿದರ, ಸಂಘಟಕರ ಹಕ್ಕಾಗಿದೆ. ಕಾರ್ಯಯೋಜನೆಗಳನ್ನು ಬದ್ಧತೆಯಿಂದ ಮಾಡುತ್ತಲೇ ಧನಸಹಾಯವನ್ನೂ ಕೇಳಬಹುದಾಗಿದೆ. ಇದರಿಂದಾಗಿ ಇನ್ನಷ್ಟು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಹೀಗಾಗಿ ಸಂಘಟಕರು ಆಯೋಜಿಸುವ ಕಾರ್ಯಕ್ರಮಗಳು ಸಾಂಸ್ಕೃತಿಕ ಕೇಂದ್ರಿತವಾಗಿರಬೇಕೇ ಹೊರತು ಅನುದಾನ ಕೇಂದ್ರಿತವಾಗಿರಬಾರದು.

ಸಾಂಸ್ಕೃತಿಕ ನೀತಿಯ ಸಂಪೂರ್ಣ ಜಾರಿ

ಕರ್ನಾಟಕಕ್ಕೆ ಒಂದು ಸಾಂಸ್ಕೃತಿಕ ನೀತಿ ಅಧಿಕೃತವಾಗಿ ಜಾರಿಯಾಗಿ ಆರು ವರ್ಷಗಳೇ ಕಳೆದರೂ ಇನ್ನೂ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಆಳುವ ಪಕ್ಷಗಳ ರಾಜಕಾರಣ ಹಾಗೂ ಅಧಿಕಾರಿಗಳ ಸ್ವಾರ್ಥದಿಂದಾಗಿ ಸಾಂಸ್ಕೃತಿಕ ನೀತಿಯ ಉದ್ದೇಶ ಈಡೇರಿಲ್ಲ. ತಮಗೆ ಬೇಕಾದ ಅಂಶಗಳನ್ನು ಮಾತ್ರ ಜಾರಿಗೆ ತಂದಿರುವ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಕ್ಕೆ ತರಲು ಆಸಕ್ತರಾಗಿಲ್ಲ.

ಅಕಾಡೆಮಿಗಳಿಗೆ ಸ್ವಾಯತ್ತತೆ

ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನಿಜವಾದ ಅರ್ಥದಲ್ಲಿ ಸ್ವಾಯತ್ತತೆಯನ್ನು ಪ್ರೊ.ಬರಗೂರುರವರ ನೇತೃತ್ವದ ಸಾಂಸ್ಕೃತಿಕ ನೀತಿ ಪ್ರತಿಪಾದಿಸುತ್ತದೆ. ಆದರೆ ಸರಕಾರ ಬದಲಾದಂತೆ ಅಧಿಕಾರಕ್ಕೆ ಬಂದ ಪಕ್ಷಗಳು ಅಕಾಡೆಮಿ ಪ್ರಾಧಿಕಾರಗಳ ಪದಾಧಿಕಾರಿಗಳನ್ನು ಬದಲಾಯಿಸುವ ಕೆಟ್ಟ ಪರಂಪರೆ ಜಾರಿಯಲ್ಲಿದೆ. ಇದರಿಂದಾಗಿ ಅಕಾಡೆಮಿಯ ಅವಧಿಯಲ್ಲಿ ಹಾಕಿಕೊಂಡ ಯೋಜನೆಗಳು ಅರ್ಧಕ್ಕೆ ಮೊಟಕಾಗುವಂತಾಗಿದೆ ಹಾಗೂ ಇದು ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಮಾಡುವ ಅಪಮಾನವೂ ಆಗಿದೆ. ಸಾಂಸ್ಕೃತಿಕ ನೀತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಇದೆ, ಆದರೆ ಜಾರಿ ಮಾಡಲು ಆಡಳಿತದವರ ಆಕ್ಷೇಪಣೆ ಇದೆ. ಇದನ್ನು ಸಂಘಟಕರ ಸಮಾವೇಶ ಪ್ರಶ್ನಿಸಬೇಕಿದೆ ಹಾಗೂ ಈಗಾಗಲೇ ಅಧಿಕೃತವಾಗಿ ಜಾರಿಯಾಗಿರುವ ಸಾಂಸ್ಕೃತಿಕ ನೀತಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಸಂಸ್ಕೃತಿ ಇಲಾಖೆಯ ಸಚಿವಾಲಯದ ಮೇಲೆ ಒತ್ತಡ ಹೇರಬೇಕಾಗಿದೆ.

ದಲ್ಲಾಳಿಗಳ ದರ್ಬಾರಿಗೆ ಅಂತ್ಯ

ಕಲಾವಿದರು, ಸಂಘಟಕರು ಹಾಗೂ ಸಂಸ್ಕೃತಿ ಇಲಾಖೆಯ ನಡುವೆ ಸಾಂಸ್ಕೃತಿಕ ಲೋಕದ ದಲ್ಲಾಳಿ ವರ್ಗವೊಂದು ಕ್ರಿಯಾಶೀಲವಾಗಿದೆ. ಸಂಘಟಕರು ಹಾಗೂ ಈ ದಲ್ಲಾಳಿಗಳ ನಡುವೆ ಪರ್ಸೆಂಟೇಜ್ ಕೂಡಾ ನಿಗದಿಯಾಗಿದೆ. ಇದರಲ್ಲಿ ಇಲಾಖೆಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಮೊದಲು ಈ ಮಧ್ಯವರ್ತಿಗಳನ್ನು ಸಂಘಟಕರು ದೂರವಿಡಬೇಕಿದೆ. ಸಂಬಂಧಿಸಿದ ಅಧಿಕಾರಿಗಳಲ್ಲಿ ನೇರವಾಗಿ ತಮ್ಮ ಹಕ್ಕನ್ನು ಪ್ರತಿಪಾದಿಸಬೇಕಿದೆ. ಅಧಿಕಾರಿಗಳು ಕಿರುಕುಳ ಕೊಟ್ಟು ಸತಾಯಿಸಿದರೆ ಸಂಘಟಕರು ಸಂಘಟನಾತ್ಮಕವಾಗಿ ಪ್ರತಿರೋಧ ತೋರಬೇಕಿದೆ. ಸಂಘಟಕರ ಸಮಾವೇಶ ಅಧಿಕಾರಿಗಳ ಕಿರುಕುಳ ಹಾಗೂ ವಿಳಂಬ ಧೋರಣೆಗೆ ಮದ್ದರೆಯಬೇಕಿದೆ.

ರಂಗಶಿಕ್ಷಕರ ನೇಮಕಾತಿ

ಈಗ ಕರ್ನಾಟಕ ಸರಕಾರವು 56 ಸಾವಿರದಷ್ಟು ಸರಕಾರಿ ನೌಕರರನ್ನು ನೇಮಕಾತಿ ಮಾಡಲು ಹೊರಟಿದೆ. ಇದರಲ್ಲಿ ಶಾಲಾ ಶಿಕ್ಷಕರ ಸಂಖ್ಯೆಯೂ ಅಧಿಕವಾಗಿದೆ. ಪ್ರತಿ ವರ್ಷ ಪ್ರಮುಖ ರಂಗಶಾಲೆಗಳಲ್ಲಿ ತರಬೇತಾಗಿ ಪದವಿ ಪಡೆದು ಬರುವ ಯುವಕರ ಸಂಖ್ಯೆಯೂ ಹೆಚ್ಚಾಗಿದೆ. ರಂಗಮುಖೇನ ಶಿಕ್ಷಣವೂ ಅಗತ್ಯವಿದೆ. ಹೀಗಾಗಿ ಸರಕಾರಿ ಶಾಲೆಗಳಿಗೆ ರಂಗಶಿಕ್ಷಕರನ್ನು ನೇಮಿಸಬೇಕು ಎಂದು ಸರಕಾರವನ್ನು ಒತ್ತಾಯಿಸಲು ಇದು ಅತ್ಯಂತ ಸೂಕ್ತವಾದ ಸಮಯ. ಇದಕ್ಕಾಗಿ ಸಂಸ್ಕೃತಿ ಇಲಾಖೆಯ ಸಚಿವರು, ಶಿಕ್ಷಣ ಇಲಾಖೆಯ ಸಚಿವರು ಹಾಗೂ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮನದಟ್ಟುಮಾಡುವ ಕೆಲಸವನ್ನು ಸಾಂಸ್ಕೃತಿಕ ಸಂಘಟಕರು ಮಾಡಲೇಬೇಕಿದೆ.

ಸರಕಾರಿ ಕೃಪಾ ಪೋಷಿತ ಸಂಸ್ಥೆಗಳ ಸಬಲೀಕರಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಕಾಡೆಮಿಗಳು, ಪ್ರಾಧಿಕಾರಗಳು, ರಂಗಾಯಣಗಳು ಹಾಗೂ ಟ್ರಸ್ಟ್ ಗಳು ಸರಕಾರಿ ಕೃಪಾ ಪೋಷಿತ ಸಂಸ್ಥೆಗಳಾಗಿದ್ದು ಅನುದಾನದ ಕೊರತೆಯಿಂದಾಗಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗದೇ ಇತಿ ಮಿತಿಯಲ್ಲಿ ಯೋಜನೆಗಳನ್ನು ರೂಪಿಸಲು ಹೆಣಗಾಡುತ್ತಿವೆ. ಇವುಗಳಿಗೆ ಸರಕಾರ ಕೊಡುವ ಅನುದಾನದಲ್ಲಿ ಅರ್ಧಕ್ಕೂ ಹೆಚ್ಚು ಕಚೇರಿ ನಿರ್ವಹಣೆ, ಅಧ್ಯಕ್ಷರು / ನಿರ್ದೇಶಕರುಗಳ ಸಂಬಳ ಹಾಗೂ ಸಾರಿಗೆಗೇ ಖರ್ಚಾಗುತ್ತದೆ. ಹೀಗಿರುವಾಗ ರಾಜ್ಯಾದ್ಯಂತ ಕಾರ್ಯಯೋಜನೆಗಳನ್ನು ರೂಪಿಸುವುದು ಅಸಾಧ್ಯವಾಗಿದೆ. ಮೊದಲು ಈ ಎಲ್ಲಾ ಸರಕಾರಿ ಕೃಪಾ ಪೋಷಿತ ಸಂಸ್ಥೆಗಳಿಗೆ ಅತೀ ಹೆಚ್ಚು ಅನುದಾನವನ್ನು ಸರಕಾರ ಒದಗಿಸಬೇಕಿದೆ. ಹಾಗೂ ಸಾಧ್ಯವಾದಷ್ಟೂ ಸ್ವಾಯತ್ತತೆಯನ್ನು ಕೊಡಬೇಕಿದೆ. ಆಯಾ ಅಕಾಡೆಮಿ, ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಾಹಿತಿಗಳು, ಕಲಾವಿದರು ಹಾಗೂ ಸಂಘಟಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಇದಕ್ಕಾಗಿ ಸಾಂಸ್ಕೃತಿಕ ಸಂಘಟನೆಗಳ ಸಮಾವೇಶ ಸರಕಾರವನ್ನು ಒತ್ತಾಯಿಸಬೇಕಿದೆ.

ಮೂಲಸೌಕರ್ಯಕ್ಕೆ (ಇನ್ಪ್ರಾಸ್ಟಕ್ಚರ್) ಆದ್ಯತೆ

ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವು ಅನುದಾನ, ಪ್ರಾಯೋಜನೆ, ಅದ್ದೂರಿ ಜಯಂತಿ ಉತ್ಸವಗಳಿಗಿಂತಲೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಪ್ರಾಶಸ್ತ್ಯವನ್ನು ಕೊಡಬೇಕಿದೆ.

* ಪ್ರತಿ ತಾಲ್ಲೂಕು ಹೋಬಳಿಗಳಲ್ಲೂ ಮಿನಿ ರಂಗಮಂದಿರಗಳನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಬೇಕಿದೆ.

* ಅಗತ್ಯ ಸೌಕರ್ಯಗಳಿರುವ ರಂಗಮಂದಿರ ಸಿದ್ಧವಾದರೆ ಅದರ ಸುತ್ತಲೂ ಸಾಂಸ್ಕೃತಿಕ ಚಟುಚಟಿಕೆಗಳು ಗರಿಗೆದರುತ್ತವೆ.

* ಆಯಾ ಪ್ರದೇಶದ ಕಲಾವಿದರು ಹಾಗೂ ಸಂಘಟಕರು ತಮ್ಮದೇ ಪ್ರದೇಶದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ.

* ಇಂತಹ ರಂಗಮಂದಿರಗಳಿಗೆ ಕಡಿಮೆ ಬಾಡಿಗೆ ನಿಗದಿಪಡಿಸಿದಲ್ಲಿ ಹೆಚ್ಚು ಕಾರ್ಯಕ್ರಮಗಳು ನಡೆಯುವ ಸಾಧ್ಯತೆಗಳಿವೆ.

* ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ನಂತರ ತಾಲ್ಲೂಕು, ಹೋಬಳಿಗಳಲ್ಲಿ ಮಿನಿ ರಂಗಮಂದಿರ ಸ್ಥಾಪನೆಗೆ ಸಂಸ್ಕೃತಿ ಇಲಾಖೆ ಪ್ರಾಮುಖ್ಯತೆ ಕೊಡಬೇಕಿದೆ.

* ಬೆಂಗಳೂರಿನಲ್ಲಿ ಪ್ರತಿ ಬಡಾವಣೆಯಲ್ಲಿ ಒಂದೊಂದು ಪುಟ್ಟ ರಂಗಮಂದಿರವನ್ನು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಿರ್ಮಿಸಬಹುದಾಗಿದೆ.

* ಈಗಾಗಲೇ ಬಿಬಿಎಂಪಿ ಅನೇಕ ಪಾರ್ಕ್ ಗಳನ್ನು ನಿರ್ವಹಿಸುತ್ತದೆ. ಕೆಲವು ಪಾರ್ಕ್ ಗಳಲ್ಲಿ ಪುಟ್ಟ ವೇದಿಕೆಗಳನ್ನೂ ನಿರ್ಮಿಸಲಾಗಿದೆ. ಅವುಗಳ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಆಯಾ ಬಡಾವಣೆಯ ಆಸಕ್ತ ತಂಡ ಅಥವಾ ಸಂಘಟಕರ ಸುಪರ್ದಿಗೆ ಈ ವೇದಿಕೆಗಳನ್ನು ವಹಿಸಿಕೊಟ್ಟಲ್ಲಿ ಹೆಚ್ಚು ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ.

ರಂಗಮಂದಿರ ಪ್ರಾಧಿಕಾರ

ಮಾನ್ಯ ಜೆ.ಲೊಕೇಶರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ, ನಾನು ಸದಸ್ಯನಾಗಿದ್ದಾಗ “ರಂಗಭೂಮಿ ಪ್ರಾಧಿಕಾರ’ ಒಂದನ್ನು ಸ್ಥಾಪಿಸಿ ರಾಜ್ಯದ ಎಲ್ಲಾ ಚಿಕ್ಕ ದೊಡ್ಡ ರಂಗಮಂದಿರಗಳ ನಿರ್ವಹಣೆಯ ಹೊಣೆಯನ್ನು ಪ್ರಾಧಿಕಾರಕ್ಕೆ ವಹಿಸಿಕೊಡಬೇಕು, ಹಾಗೂ ಹೊಸ ರಂಗಮಂದಿರಗಳ ನಿರ್ಮಾಣವೂ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ನಡೆಯಬೇಕು” ಎನ್ನುವ ಯೋಜನೆಯನ್ನು ಸಂಸ್ಕೃತಿ ಇಲಾಖೆಯ ಸಚಿವರ ಮುಂದೆ ಇಡಲಾಗಿತ್ತು. ಅವರೂ ಒಪ್ಪಿದ್ದರು. ಆದರೆ ತದನಂತರ ಸಚಿವರುಗಳು ಬದಲಾಗುತ್ತಲೇ ಹೋದರು. ಬಿಜೆಪಿ ಸರಕಾರ ಬಂದು ಅವಧಿಪೂರ್ವವಾಗಿ ಅಕಾಡೆಮಿಯ ಕಾಲಾವಧಿ ಬರಖಾಸ್ತಾಯ್ತು. ನಂತರ ಬಂದ ಅಧ್ಯಕ್ಷರು ಆ ಬಗ್ಗೆ ಆಸಕ್ತಿ ವಹಿಸಲೇ ಇಲ್ಲ.

ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯದಾದ್ಯಂತ ರಂಗ ಮಂದಿರಗಳ ಕೊರತೆ ಇದೆ. ಕೆಲವು ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡದಾದ ಸಮುದಾಯ ಭವನಗಳ ಮಾದರಿಯಲ್ಲಿ ಕಟ್ಟಡಗಳನ್ನು ಕಟ್ಟಲಾಗಿದ್ದರೂ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಬಾಡಿಗೆಯಲ್ಲೂ ಏಕರೂಪತೆ ಇಲ್ಲವಾಗಿದೆ. ಬೆಂಗಳೂರಿನಂತಹ ಮೆಟ್ರೋ ನಗರದಲ್ಲಿ ನಾಟಕ ನಿರ್ಮಿಸಲು ತಾಲಿಂ ಕೊಠಡಿಗಳೇ ಇಲ್ಲವಾಗಿದೆ.

ಸಾಂಸ್ಕೃತಿಕ ಸಂಘಟಕರು ಮೊದಲು

* ಸೂಕ್ತ ಪ್ರದೇಶಗಳಲ್ಲಿ ಸಾಂಸ್ಕೃತಿಕ ಭವನಗಳನ್ನು ಕಟ್ಟಿಸಿ ಕೊಡಲು ಸಂಸ್ಕೃತಿ ಸಚಿವಾಲಯವನ್ನು ಒತ್ತಾಯಿಸಬೇಕಿದೆ.

* ಅಗತ್ಯವಾದ ತಾಲಿಂ ಕೊಠಡಿಗಳ ನಿರ್ಮಾಣಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಸರಕಾರವನ್ನು ಆಗ್ರಹಿಸಬೇಕಿದೆ.

* ಇರುವ ರಂಗಮಂದಿರಗಳಿಗೆ ಏಕರೂಪದ ಕಡಿಮೆ ಬಾಡಿಗೆಯನ್ನು ನಿಗದಿಪಡಿಸಲು ಒತ್ತಾಯಿಸಬೇಕಿದೆ.

* ಬಡಾವಣೆಗೊಂದು ರಂಗಮಂದಿರ ನಿರ್ಮಿಸಬೇಕೆಂದು ಹಠ ಹಿಡಿಯಬೇಕಿದೆ.

* ಈಗಾಗಲೇ ಇರುವ ರಂಗಮಂದಿರಗಳಿಗೆ ಲೈಟ್ಸ್ ಸೌಂಡ್ ಗಳಂತಹ ಅಗತ್ಯ ಪರಿಕರಗಳನ್ನು ಒದಗಿಸಿ, ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಬೇಕೆಂದು ಸಂಸ್ಕೃತಿ ಇಲಾಖೆಯನ್ನು ಕೇಳಬೇಕಿದೆ.

* ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಂತಹ ಇತರೆ ಇಲಾಖೆಗಳ ಸುಪರ್ದಿಯಲ್ಲಿರುವ ಎಲ್ಲಾ ಸಾಂಸ್ಕೃತಿಕ ಮಂದಿರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಂತ್ರಣಕ್ಕೆ ತರಬೇಕೆಂದು ಹೋರಾಟ ಮಾಡಬೇಕಿದೆ.

* ಎಲ್ಲಾ ರಂಗಮಂದಿರಗಳ ನಿರ್ವಹಣೆಗಾಗಿ ರಂಗಮಂದಿರ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕಿದೆ.

ಹೀಗೆ ಮಾಡಿದಾಗ ರಾಜ್ಯಾದ್ಯಂತ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ರಂಗಶಾಲೆಗಳಲ್ಲಿ ತರಬೇತಿ ಪಡೆದು ಬರುವವರಿಗೆ ಅವರವರ ಊರು ಪ್ರದೇಶಗಳಲ್ಲಿ ರಂಗಚಟುವಟಿಕೆಗಳನ್ನು ಮಾಡಲು ಅವಕಾಶ ದೊರಕುತ್ತದೆ. ಸಂಘಟಕರಿಗೆ ಅಗತ್ಯವಾದ ವೇದಿಕೆ ಸಿಕ್ಕಂತಾಗುತ್ತದೆ.

ಆದ್ದರಿಂದ.. ಅನುದಾನ ಪ್ರಾಯೋಜನೆಗಳನ್ನೂ ಮೀರಿ ಇನ್ಫ್ರಾಸ್ಟ್ರಕ್ಚರ್ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ ಸರಕಾರದ ಅನುದಾನವನ್ನು ಬಳಸಬೇಕೆಂದು ಸಂಘಟಕರು ಒತ್ತಾಯಿಸಬೇಕಿದೆ.  

ಸಂಘಟಕರ ಸಮಾವೇಶವು ಕೇವಲ ಇಲಾಖೆ ಕೊಡಮಾಡುವ ಅನುದಾನ ಕೇಂದ್ರಿತವಾಗದೇ ಸಾಂಸ್ಕೃತಿಕ ಲೋಕದ ಸಮಗ್ರ ಬೆಳವಣಿಗೆಗಾಗಿ ಒತ್ತಾಯಿಸಬೇಕಿದೆ. ಹಾಗೂ ನಿಜವಾಗಿಯೂ ಆಸಕ್ತಿಯಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಸಂಘಟಕರಿಗೆ ಮಾತ್ರ ತಾರತಮ್ಯ ರಹಿತವಾಗಿ  ಧನಸಹಾಯ ಕೊಡಬೇಕೆಂದು ಸಂಘಟಕರೆಲ್ಲಾ ಸೇರಿ ಸಂಸ್ಕೃತಿ  ಇಲಾಖೆ ಹಾಗೂ ಸರಕಾರವನ್ನು ಆಗ್ರಹಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

(ದಿ.25-05-2026 ರಂದು ನಯನ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಂಘಟಕರ ಸಮಾವೇಶದಲ್ಲಿ ರಂಗಕರ್ಮಿ ಶಶಿಕಾಂತ ಯಡಹಳ್ಳಿಯವರು  ಮಾಡಿದ ಭಾಷಣದ ಸಾರಾಂಶವೇ ಈ ಲೇಖನ)

ಇದನ್ನೂ ಓದಿ- ಸಹಾಯಧನದ ಸುತ್ತ ಸಂಘಟಕರ ಸಮಾವೇಶದ ಚಿತ್ತ

More articles

Latest article

Most read