ಹಟ್ಟಿ ಪಟ್ಟಣ: ಕಳೆದ ರಾತ್ರಿ ಆರಂಭವಾದ ಧಾರಾಕಾರ ಮಳೆಗೆ ಜೋಪುಡಿಗಳಿಗೆ ನುಗ್ಗಿದ ಮಳೆ ನೀರು ಹಾಗೂ ಚರಂಡಿ ನೀರಿನಿಂದ ಜೋಪುಡಿ ನಿವಾಸಿಗಳ ಸಂಕಷ್ಟ ಹೇಳತೀರದಾಗಿದೆ.
ಹಟ್ಟಿ ಚಿನ್ನದ ಗಣಿ ಪಟ್ಟಣದ ಪಾಮನಕಲ್ಲೂರು ಕ್ರಾಸ್ ಸಮೀಪದ ಸುಡುಗಾಡು ಸಿದ್ಧರು ವಾಸಿಸುವ ಬಸವ ಜ್ಯೋತಿ ನಗರದಲ್ಲಿ ಇಂದು ರಾತ್ರಿ ಸುರಿದ ಭಾರೀ ಮಳೆಯಿಂದ ಮಳೆ ನೀರು ಮತ್ತು ಚರಂಡಿ ನೀರು ಜೋಪುಡಿಗಳಿಗೆ ನುಗ್ಗಿದ್ದು, ಪರಿಣಾಮ ನಿವಾಸಿಗಳು ನಿದ್ದೆಯಿಲ್ಲದೆ ರಾತ್ರಿಯಿಡೀ ಜೋಪುಡಿಗಳನ್ನು ಕಾಯುವ ಪರಿಸ್ಥಿತಿ ಎದುರಿಸುವಂತಾಗಿದೆ.


ಸರಿಯಾದ ಚರಂಡಿ ವ್ಯವಸ್ಥೆಯ ಕೊರತೆಯಿಂದ ಈ ಓಣಿಯ ನಿವಾಸಿಗಳು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದು, ಮಳೆಯಾದಾಗ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಈಗಲೂ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ನಿವಾಸಿಗಳ ಆತಂಕ ಹೆಚ್ಚಾಗಿದೆ. ಗ್ರಾಮಪಂಚಾಯತ್ ಇಂದ ಪಟ್ಟಣ ಪಂಚಾಯತ್ ದರ್ಜೆಗೆ ಈ ಗ್ರಾಮ ಏರಿ ದಶಕ ಕಳೆಯಲು ಬಂದರೂ ನಮ್ಮ ಕಷ್ಟ ಇದುವರೆಗೆ ಕೇಳುವವರಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಪಟ್ಟಣ ಪಂಚಾಯತ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಬಸವ ಜ್ಯೋತಿ ನಗರದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಹಾಗೂ ಚರಂಡಿ ನೀರು ಸುಗಮವಾಗಿ ಹರಿದು ಹೋಗುವಂತೆ ಶಾಶ್ವತ ಪರಿಹಾರದ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

