ಬೆಂಗಳೂರು : ಐಪಿಎಲ್ 2026ರ ಅತ್ಯಂತ ಪ್ರಮುಖ ಪಂದ್ಯದಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ತಮ್ಮ ಅರ್ಧಶತಕ ಪೂರೈಸಿದ ಬಳಿಕ ಸೂರ್ಯವಂಶಿ ತಮ್ಮ ಬೆರಳುಗಳಿಂದ ‘A’ ಆಕಾರವನ್ನು ತೋರಿಸಿ ಸಂಭ್ರಮಿಸಿದ್ದರು.
ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರಲು ರಾಜಸ್ಥಾನ್ ರಾಯಲ್ಸ್ (RR) ತಂಡಕ್ಕೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಆರ್ಆರ್ 7 ವಿಕೆಟ್ಗಳಿಂದ ಸೋಲಿಸಿತು. ಆರ್ಆರ್ ತಂಡದ ಈ ಅದ್ಭುತ ಗೆಲುವಿನ ರೂವಾರಿ ಬೇರೆ ಯಾರೂ ಅಲ್ಲ, ಅದು 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ. ಲಕ್ನೋ ನೀಡಿದ 221 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ಆರ್ ತಂಡಕ್ಕೆ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 93 ರನ್ ಚಚ್ಚುವ ಮೂಲಕ ಇನ್ನು 5 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು. ತಮ್ಮ ಅರ್ಧಶತಕದ ಗಡಿ ದಾಟಿದ ತಕ್ಷಣ, ಸೂರ್ಯವಂಶಿ ತಮ್ಮ ಬೆರಳುಗಳ ಮೂಲಕ ‘A’ ಆಕಾರವನ್ನು ತೋರಿಸಿ ವಿಭಿನ್ನ ಶೈಲಿಯಲ್ಲಿ ಸಂಭ್ರಮಿಸಿದರು. ಈ ಸೆಲೆಬ್ರೇಷನ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪಂದ್ಯದ ನಂತರ ಅವರು ಇದರ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದು ಮಾತನಾಡಿದ ವೈಭವ್ ಸೂರ್ಯವಂಶಿ, ಈ ಸಂಭ್ರಮಾಚರಣೆಯನ್ನು ತಮ್ಮ ತಾಯಿಗೆ ಅರ್ಪಿಸಿದ್ದಾಗಿ ಹೇಳಿದರು. ಅವರ ತಾಯಿಯ ಹೆಸರು ‘A’ ಅಕ್ಷರದಿಂದ ಪ್ರಾರಂಭವಾಗುತ್ತದೆ.
“ಇದನ್ನು ನಾನು ನನ್ನ ಅಮ್ಮನಿಗೆ ಅರ್ಪಿಸಿದ್ದೇನೆ, ಅವರ ಹೆಸರು ‘A’ ಅಕ್ಷರದಿಂದ ಶುರುವಾಗುತ್ತದೆ. ಈ ವಿಷಯ ಎಲ್ಲರಿಗೂ ತಿಳಿಯುವುದು ನನಗೆ ಇಷ್ಟವಿರಲಿಲ್ಲ, ಏಕೆಂದರೆ ನಾನು ಇದೇ ಸೆಲೆಬ್ರೇಷನ್ ಅನ್ನು ಮುಂದುವರಿಸಲು ಬಯಸುತ್ತೇನೆ ಮತ್ತು ಇದಕ್ಕೆ ಯಾವುದೇ ದೃಷ್ಟಿ ಬೀಳಬಾರದು ಎಂದುಕೊಂಡಿದ್ದೆ. ಆದರೆ ನಿಜ ಹೇಳಬೇಕೆಂದರೆ ಇದು ಅವರಿಗಾಗಿಯೇ ಆಗಿತ್ತು,” ಎಂದು ವೈಭವ್ ತಿಳಿಸಿದ್ದಾರೆ.

