ಬೆಂಗಳೂರು : ಕೇಂದ್ರ ಶಿಕ್ಷಣ ಸಚಿವಲಯ, ಸಿಬಿಎಸ್‌ಸಿ ಪಠ್ಯಕ್ರಮ ಮೂಲಕ 2026ರ ಜುಲೈ 1 ರಿಂದ ಜಾರಿಗೆ ಬರುವಂತೆ, 9ನೇ, 10ನೇ ತರಗತಿಗಳಿಗೆ ಮೂರು ಭಾಷೆಗಳ ಅಧ್ಯಯನ ಮತ್ತು ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ಹಿಂದೆ ದುರುದ್ದೇಶ ಅಡಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ. ಪಿ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು 2023 ರ ಅಡಿಯಲ್ಲಿ, 9 ಮತ್ತು 10 ನೇ ತರಗತಿಗಳ ಭಾಷಾ ಅಧ್ಯಯನವನ್ನು ಹೊಸ ಪಠ್ಯಕ್ರಮಕ್ಕೆ ಹೊಂದಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜುಲೈ 1, 2026 ರಿಂದ ಜಾರಿಗೆ ಬರುವಂತೆ, 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನ ಕಡ್ಡಾಯವಾಗಿರುತ್ತದೆ. ಇದರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಭಾಷೆಗಳಾಗಿರಬೇಕು. ಉಳಿದ ಭಾಷೆಯನ್ನು ಮೂರನೇ ಭಾಷೆಯಾಗಿ ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಆರ್3 ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಲು 19 ಭಾರತೀಯ ಭಾಷೆಗಳ ಪಟ್ಟಿಯನ್ನು ಒದಗಿಸಲಾಗಿದೆ.
ಈ ಪಟ್ಟಿಯಲ್ಲಿ ಹಿಂದಿಯನ್ನು ಸೇರಿಸದೆ ಇರುವ ಬುದ್ಧಿವಂತಿಕೆ ಎಷ್ಟು ಚಾಣಕ್ಷತನದಿಂದ ಕೂಡಿದೆಯೆಂದರೆ, ಆರ್1 ಮತ್ತು ಆರ್ 2, ಅಂದರೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಮಾತ್ರ ಹಿಂದಿಯನ್ನು ಕಲಿಸಬೇಕಾದ ದುರುದ್ದೇಶವಿದೆ. ಇದು ಹಿಂದಿ ಹೇರಿಕೆಯ ಹೊಸ ಅವತಾರ ಎಂದು ಕಿಡಿಕಾರಿದ್ದಾರೆ.
ಸಿಬಿಎಸ್ಇ ಸಂಯೋಜಿತ ಶಾಲೆಗಳಲ್ಲಿ ಆರ್1 ಮತ್ತು ಆರ್2 ಆಗಿ ಇಂಗ್ಲಿಷ್ ಮತ್ತು ಹಿಂದಿಗಳನ್ನು ಪರಿಗಣಿಸಿದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆರ್3 ಯಾಗಿ ಮಾತ್ರ ಕಲಿಸಬೇಕಾಗುವುದು.
ಅಂದರೆ ಕರ್ನಾಟಕದಲ್ಲಿ ಮಕ್ಕಳು ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಯಬೇಕು. ಇದು ನಮ್ಮ ಕನ್ನಡ ಕಲಿಕಾ ಅಧಿನಿಯಮ 2015ನ್ನು ಪೂರ್ಣವಾಗಿ ಹಳ್ಳ ಹಿಡಿಸುವ ಕಾರ್ಯಕ್ರಮ . ಇದರಿಂದ ಕರ್ನಾಟಕದಲ್ಲಿಸಿಬಿಎಸ್ಸಿ ಶಾಲೆಗಳಲ್ಲಿ ಕಲಿಯುವ ಕನ್ನಡದ ಮಕ್ಕಳು ಕನ್ನಡವನ್ನು ಕನಿಷ್ಠ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿಯೂ ಕಲಿಯಬೇಕಿಲ್ಲ. ಈ ಶಾಲೆಗಳಿಗೂ ಇದೇ ಬೇಕಿತ್ತು ಎಂದಿದ್ದಾರೆ.
ನೂರಾರು ತಂತ್ರ – ಕುತಂತ್ರದ ಮೂಲಕ ಹಿಂದಿ ಹೇರಿಕೆ ಮಾಡುವ ಏಕೈಕ ಅಜೆಂಡಾ ಮತ್ತು ಅಧಿಕೃತ ರಾಜ್ಯ ಭಾಷೆಗಳ ಕಡೆಗಣನೆ ಆಗಿದೆ. ರಾಜ್ಯ ಸರ್ಕಾರ ಮತ್ತು ಕ.ಅ.ಪ್ರಾ ಕೂಡಲೇ ಎಚ್ಚತ್ತುಕೊಳ್ಳುವ ಅವಶ್ಯಕತೆಯಿದೆ. ಇಲ್ಲವಾದಲ್ಲಿ ಕನ್ನಡ ಮಾಧ್ಯಮವಾಗುವುದಿರಲಿ , ಒಂದು ಭಾಷೆಯಾಗಿಯೂ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಆರ್3 ಆಯ್ಕೆಗೆ ಪಟ್ಟಿ ಮಾಡಿರುವ ಭಾಷೆಗಳು : ಅಸ್ಸಾಮಿ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂತಾಲಿ, ಸಿಂಧಿ, ತಮಿಳು, ತೆಲುಗು ಎಪಿ ಮತ್ತು ತೆಲುಗು ತೆಲಂಗಾಣ
ಸರ್ಕಾರಕ್ಕೆ ಕೆಲವು ಸಲಹೆಗಳು : ಸಿಬಿಎಸ್ಸಿ ಶಾಲೆ ಆರಂಭಿಸಲು ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಎನ್‌ಒಸಿ ಕೊಡಬೇಕಿದೆ. ಮತ್ತು ಒಮ್ಮೆ ಎನ್‌ಒಸಿ ಕೊಟ್ಟ ನಂತರ ಸಿಬಿಎಸ್ಸಿ ಶಾಲೆಗಳು ರಾಜ್ಯ ಸರ್ಕಾರದ ಶಾಲಾ ಇಲಾಖೆಯ ಕಂಟ್ರೋಲ್ ಇರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಅವರಿಗೆ ಲೆಕ್ಕಕ್ಕಿಲ್ಲ. ಈ ಎನ್‌ಒಸಿ ನೀಡುವ ನಿಯಮಾವಳಿಗಳನ್ನು ಇನ್ನಷ್ಟು ಕನ್ನಡ ಪರವಾಗಿ ಕಠಿಣ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಹತೋಟಿಗೆ ತರಬೇಕಿದೆ
ಕಡ್ಡಾಯವಾಗಿ ಆರ್ 1, ಆರ್ 2 ಯಾವುದಾದರೊಂದು ಭಾಷೆ ಸ್ಥಾನ ದಲ್ಲಿ ಕನ್ನಡ ಕಡ್ಡಾಯ ಗೊಳಿಸುವುದು. ಪ್ರತೀವರ್ಷ ಆರ್ ಆರ್ ನವೀಕರಣ ಷರತ್ತು ವಿಧಿಸುವುದು, ರಿನ್ಯವೆಬಲ್ ಸಿಸ್ಟಮ್ ಜಾರಿಯಾಗಿಸಿ ಕನ್ನಡ ಅನುಷ್ಠಾನ ದ ಬಗ್ಗೆ ರಾಜ್ಯ ಶಾಲಾ ಶಿಕ್ಷಣ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡುವುದು. ಕನ್ನಡ ಶಿಕ್ಷಕರ ನೇಮಕಾತಿ ಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವುದು . ಈಗಾಗಲೇ ಎನ್‌ಒಸಿ ಪಡೆದಿರುವ ಸಿಬಿಎಸ್ಸಿ ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಡ್ಡಾಯವಾಗಿಆರ್ 1, ಆರ್ 2 ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗಳು ಕನ್ನಡ ವನ್ನು ಆಯ್ಕೆಮಾಡಿರುವುದನ್ನು ಖಾತ್ರಿಪಡಿಸಲು ಕೂಡಲೇ ಇಲಾಖೆಯು ಸದನ ಸಮಿತಿ ಶಿಫಾರಸ್ಸು ತಂದು ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

