ನಾಟಕ ವಿಮರ್ಶೆ | ಸರಕಾರಿ ಶಾಲೆಯ ಸುತ್ತ, ಜ್ಞಾನದೇಗುಲದ ಚಿತ್ತ

ಇವತ್ತು ಎಪ್ರಿಲ್‌ 27, ದಿನಪತ್ರಿಕೆಗಳ ಮುಖಪುಟದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರಕಾರಿ ಶಾಲಾ-ಕಾಲೇಜುಗಳ ಕುರಿತು ಪೂರ್ಣ ಪುಟದ ಬಣ್ಣದ ಜಾಹೀರಾತು ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಎಂಟು ಗ್ಯಾರಂಟಿಗಳನ್ನು ಪ್ರಕಟಿಸಿದೆ. ಇದರಲ್ಲಿ ಪ್ರಸ್ತಾಪಿಸಲಾದ ಹಲವಾರು ಗ್ಯಾರಂಟಿಗಳ ಕುರಿತೇ “ಜ್ಞಾನ ದೇಗುಲ” ನಾಟಕವು ಚರ್ಚಿಸುತ್ತದೆ.

ಎಪ್ರಿಲ್ 26 ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡ “ಜ್ಞಾನ ದೇಗುಲ, ನಮ್ಮೂರ ಸರಕಾರಿ ಶಾಲೆ” ನಾಟಕವನ್ನು ಸಿದ್ದೇಶ್ವರ್ ನನಸುಮನೆಯವರು ತಮ್ಮ ಜನಪದರು ಸಾಂಸ್ಕೃತಿಕ ವೇದಿಕೆಯ ಕಲಾವಿದರುಗಳಿಗೆ ನಿರ್ದೇಶಿಸಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ ಸರಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಬಹುತೇಕ ಶಾಲೆಗಳಲ್ಲಿ ಅಗತ್ಯ ಪ್ರಮಾಣದ ಶಿಕ್ಷಕರು ಹಾಗೂ ಮೂಲ ಸೌಕರ್ಯಗಳ ಕೊರತೆ ಇದೆ. ಶಿಕ್ಷಕರು ಇದ್ದಲ್ಲಿ ಮಕ್ಕಳಿಲ್ಲ, ಮಕ್ಕಳು ಇದ್ದಲ್ಲಿ ಶಿಕ್ಷಕರಿಲ್ಲ, ಶಿಕ್ಷಕರು ಹಾಗೂ ಮಕ್ಕಳಿದ್ದಲ್ಲಿ ಶಾಲೆಗಳೇ ನೆಟ್ಟಗಿಲ್ಲ. ಈ ಎಲ್ಲವೂ ಇದ್ದಲ್ಲಿ ಕಲಿಕೆಯ ಗುಣಮಟ್ಟ ಗಮನಾರ್ಹವಾಗಿಲ್ಲ.

ಸರಕಾರವು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಬಟ್ಟೆ, ಮೊಟ್ಟೆ, ಬಿಸಿ ಊಟ, ಹಾಲು, ಬಾಳೆಹಣ್ಣು ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದರೂ ಯಾಕೆ ಸರಕಾರಿ ಶಾಲೆಗಳು ಮುಚ್ಚುತ್ತಿವೆ?, ಯಾಕೆ ಬಹುತೇಕ ಪೋಷಕರು ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಪಾವತಿಸಿ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ?. ಯಾಕೆ 2020 ರಿಂದ 2026 ರ ವರೆಗೆ ಕರ್ನಾಟಕದಲ್ಲಿ 3617 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಅಥವಾ ವಿಲೀನಗೊಂಡಿವೆ? ಅದೇ ಅವಧಿಯಲ್ಲಿ ರಾಜ್ಯದಲ್ಲಿರುವ 49,791 ರಷ್ಟಿದ್ದ ಸರಕಾರಿ ಶಾಲೆಗಳ ಸಂಖ್ಯೆ 46,174 ಕ್ಕೆ ಇಳಿದಿದೆ? ಇಂತಹ ಹಲವಾರು ಪ್ರಶ್ನೆಗಳಿಗೆ ನಾಟಕದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು “ಜ್ಞಾನದೇಗುಲ” ದಲ್ಲಿ ಮಾಡಲಾಗಿದೆ.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರಗಳು ಏನು ಎಂಬುದಕ್ಕೆ ಈ ನಾಟಕದ ಸಾಮಾಜಿಕ ಕಾರ್ಯಕರ್ತನ ಸಮಾಜಮುಖಿ ಪ್ರಯತ್ನ ಮಾದರಿಯಾಗಿದೆ. ಶಿಕ್ಷಣದ ಅಗತ್ಯ ಮತ್ತು ಸರಕಾರಿ ಶಾಲೆಗಳ ಸಕಾರಾತ್ಮಕತೆಯ ಕುರಿತು ಜನಜಾಗೃತಿಯನ್ನು ಮಾಡುವ ಜಗದೀಶ್ ಎನ್ನುವ ಪ್ರಜ್ಞಾವಂತ ಪಾತ್ರವೇ “ಜ್ಞಾನದೇಗುಲ”ನಾಟಕದ ಕೇಂದ್ರವಾಗಿದೆ. ಸರಕಾರಿ ಶಾಲೆಗಳ ಕುರಿತು ಜನರಲ್ಲಿರುವ ಕೀಳರಿಮೆ ಹಾಗೂ ಅಜ್ಞಾನವನ್ನು ಹೋಗಲಾಡಿಸಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಪ್ರೇರೇಪಿಸುವ ಆಶಯದ ಈ ನಾಟಕವು ಪ್ರತಿಯೊಂದು ಊರು ಪಟ್ಟಣಗಳಲ್ಲಿ ಪ್ರದರ್ಶನವಾಗಬೇಕಿದೆ, ಜನರಲ್ಲಿ ಸರಕಾರಿ ಶಾಲೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ. ಸರಕಾರ ಹಾಗೂ ಶಿಕ್ಷಣ ಕ್ಷೇತ್ರದ ಅಧಿಕಾರಿಗಳನ್ನು ಎಚ್ಚರಿಸಬೇಕಿದೆ.

ಶಿಕ್ಷಣದ ಹೆಸರಲ್ಲಿ ಖಾಸಗಿ ಶಾಲೆಗಳು ಮಾಡುವ ವ್ಯಾಪಾರೀಕರಣವನ್ನು ಪ್ರಶ್ನಿಸುವ ಈ ನಾಟಕವು ಆಡಂಬರಕ್ಕೆ ಮನಸೋತು ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಆರ್ಥಿಕ ಶೋಷಣೆಗೆ ಬಲಿಯಾಗುವ ಮಧ್ಯಮವರ್ಗದವರ ಬವಣೆ ಬಾಧೆಗಳನ್ನು ಅನಾವರಣಗೊಳಿಸುತ್ತದೆ. ಹಾಗೆಯೇ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುವ ಬಡಮಕ್ಕಳ ಪೋಷಕರನ್ನೂ ಪ್ರಶ್ನಿಸುತ್ತದೆ.

ಕೊನೆಗೆ.. ಶಿಕ್ಷಕರು, ಪೋಷಕರು, ಊರವರು ಮನಸ್ಸು ಮಾಡಿದರೆ, ಅಧಿಕಾರಿಗಳು ಸಹಕಾರ ಕೊಟ್ಟರೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರಕಾರಿ ಶಾಲೆಗಳನ್ನು ನಿರ್ವಹಿಸಿ ಬೆಳೆಸಬಹುದು ಎನ್ನುವ ಆದರ್ಶಮಯ ಮಾದರಿಯನ್ನು “ಜ್ಞಾನ ದೇಗುಲ” ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದೆ.

ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸೇರಿ ಹೇಗೆ ಸರಕಾರಿ ಶಾಲೆಗಳನ್ನು ಮುಚ್ಚಿಸಲು ಪ್ರಯತ್ನಿಸುತ್ತವೆ, ಹೇಗೆ ಕೆಲವು ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ದಿವ್ಯನಿರ್ಲಕ್ಷ್ಯ ವಹಿಸುತ್ತಾರೆ, ಹೇಗೆ ಶಿಕ್ಷಣೇತರ ಕಾರ್ಯಭಾರದಿಂದಾಗಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ವಿಫಲರಾಗುತ್ತಿದ್ದಾರೆ, ಹೇಗೆ ಕನ್ನಡ ಪರ ಹೋರಾಟವನ್ನು ರೋಲ್ಕಾಲ್ ಮಾಡಿಕೊಂಡಿರುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ.. ಎಂಬುದನ್ನೆಲ್ಲಾ ವಿಡಂಬನಾತ್ಮಕವಾಗಿ ಈ ನಾಟಕ ಬಿಂಬಿಸುತ್ತದೆ.

ಇಷ್ಟೊಂದು ವೈಚಾರಿಕವಾದ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ನಾಟಕದ ಆರಂಭದಲ್ಲಿ ದೊಡ್ಡದಾದ ಸರಸ್ವತಿಯ ಫೋಟೋ ಇಟ್ಟು “ತಾಯಿ ಶಾರದೆ ಲೋಕಪೂಜಿತೆ..” ಹಾಡು ಪೂಜೆ ಅಗತ್ಯವಿತ್ತೇ ಎನ್ನುವ ಪ್ರಶ್ನೆಯೂ ಕಾಡದಿರದು. ಯಾಕೆಂದರೆ ಸರಕಾರಿ ಶಾಲೆಗಳಿಗೆ ಎಲ್ಲಾ ಧರ್ಮದ ಮಕ್ಕಳೂ ಓದಲು ಬರುತ್ತಾರೆ. ಆದರೆ ಒಂದು ಧರ್ಮದ ಸಂಕೇತವಾದ ದೇವತೆಯನ್ನು ಪೂಜಿಸಿ ಭಜಿಸುವುದು ಹಾಗೂ ಅದಕ್ಕಾಗಿ ಪ್ರೇರೇಪಿಸುವುದು ಪ್ರಶ್ನಾರ್ಹವಾಗಿದೆ. ಬಹುಸಂಖ್ಯಾತ ಧರ್ಮೀಯರು ಅಲ್ಪಸಂಖ್ಯಾತ ಧರ್ಮಿಯರ ಮೇಲೆ ಮಾಡುವ ಹೇರಿಕೆಯಾಗಿದೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಕ್ರೈಸ್ತನ ಕುರಿತು ಪ್ರಚಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ ಸರಕಾರಿ ಶಾಲೆಗಳಲ್ಲೂ ಹಿಂದೂ ದೇವತೆಯ ಆರಾಧನೆ ಎಷ್ಟು ಸೂಕ್ತ ಎನ್ನುವುದನ್ನು ನಿರ್ದೇಶಕರು ಯೋಚಿಸಬೇಕಿದೆ. ಇಲ್ಲದೇ ಹೋದರೆ ಹಿಂದೂ ಸರಕಾರಿ ಶಾಲೆ ಎಂದು ಹೆಸರು ಬದಲಾಯಿಸಬೇಕಾಗುತ್ತದೆ.

ನಾಟಕದ ಕೊನೆಯ ಹಂತದಲ್ಲಿ  ಪೋಷಕರು ಶಿಕ್ಷಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಹಲವಾರು ಮೌಲಿಕ ಪ್ರಶ್ನೆಗಳನ್ನು ಗ್ರಾಮಸ್ಥರು ಎತ್ತುತ್ತಾರೆ. ಆದರೆ ಅದಕ್ಕೆ ಅಲ್ಲಿದ್ದ ಶಿಕ್ಷಕರು ಹಾರಿಕೆಯ ಉತ್ತರಗಳನ್ನು ಕೊಡುತ್ತಾರೆ. “ಯಾಕೆ ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದಿಲ್ಲ?” ಎನ್ನುವ ಪ್ರಶ್ನೆಗೆ ನೇರ ಉತ್ತರವೇ ಇಲ್ಲವಾಗಿದೆ. ಹೀಗಾಗಿ ಗ್ರಾಮಸ್ಥರ ಪ್ರಶ್ನೆಗಳಿಗೆಲ್ಲಾ ಸರಿಯಾದ ಉತ್ತರವನ್ನು ಈ ನಾಟಕ ಕಂಡುಕೊಂಡಿದ್ದೇ ಆದರೆ ತನ್ನ ಆಶಯದಲ್ಲಿ ಸಫಲವಾಗಬಹುದಾಗಿದೆ.

ನಾಟಕದ ಆಕೃತಿಯನ್ನು ಕಟ್ಟುವಲ್ಲಿ, ರಂಗ ವಿನ್ಯಾಸವನ್ನು ಮಾಡುವಲ್ಲಿ ಇನ್ನೂ ಸ್ವಲ್ಪ ಮುತುವರ್ಜಿ ವಹಿಸಬೇಕಿದೆ. ಸಾಂಪ್ರದಾಯಿಕ ನಾಟಕದ ವಿನ್ಯಾಸ ತಂತ್ರಗಳಿಂದ ನಿರ್ದೇಶಕರು ಹೊರಗೆ ಬಂದು ಆಧುನಿಕ ರಂಗತಂತ್ರಗಳನ್ನು ಬಳಸಿದರೆ ನಾಟಕ ಇನ್ನೂ ಹೆಚ್ಚು ಆಕರ್ಷಣೀಯವಾಗಬಹುದಾಗಿದೆ. ಬ್ಲಾಕಿಂಗ್, ಎಂಟ್ರಿ, ಎಕ್ಸಿಟ್ ಕುರಿತು ಕಲಾವಿದರಿಗೆ ಅರಿವು ಮೂಡಿಸಬೇಕಿದೆ. ಗುಂಪು ದೃಶ್ಯಗಳ ಸಂಯೋಜನೆಯಲ್ಲಿ ಕಲಾತ್ಮಕತೆ ಬೇಕಿದೆ. ನಾಟಕದಲ್ಲಿ ಪ್ರಸ್ತುತಪಡಿಸುವ ವಸ್ತು ವಿಷಯ ಆಶಯ ಎಷ್ಟು ಮುಖ್ಯವೋ, ಅವುಗಳನ್ನು ಪರಿಣಾಮಕಾರಿಯಾಗಿ ರಂಗ ತಂತ್ರ ವಿನ್ಯಾಸಗಳ ಮೂಲಕ ಪ್ರೇಕ್ಷಕರಿಗೂ ತಲುಪಿಸುವುದು ಅಷ್ಟೇ ಮುಖ್ಯವಾಗುತ್ತದೆ.

ನಿರ್ದೇಶಕರಾದ ಸಿದ್ದೇಶ್ವರ್ ರವರೇ ಜಗದೀಶ್ ಎನ್ನುವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ತಮ್ಮ ಸಂಯಮದ ನಟನೆಯಿಂದ ಗಮನ ಸೆಳೆಯುತ್ತಾರೆ. ಬಹುತೇಕ ಎಲ್ಲಾ ನಟ ನಟಿಯರು ಹಾಗೂ ಮಕ್ಕಳೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಒಂದು ಉತ್ತಮ ಸಾಮಾಜಿಕ ಆಶಯದ ಈ ನಾಟಕವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ಪ್ರಸ್ತುತಪಡಿಸಬಹುದು ಎಂಬುದರ ಕುರಿತು ನಿರ್ದೇಶಕರು ಯೋಚಿಸಬೇಕಿದೆ. ಆರ್ಡಿನರಿ ಪ್ರಸೆಂಟೇಶನ್ ಮೀರಿ ಎಕ್ಸ್ಟ್ರಾ ಆರ್ಡಿನರಿಯಾಗಿ ನಾಟಕವನ್ನು ಕಟ್ಟುವುದರತ್ತ ಗಮನ ಕೊಟ್ಟರೆ ಒಂದು ಉತ್ತಮ ವೈಚಾರಿಕ ಪ್ರಗತಿಪರ ಪ್ರಪಗಂಡಾ ನಾಟಕವನ್ನು ಕನ್ನಡ ರಂಗಭೂಮಿಗೆ ಕೊಟ್ಟಂತಾಗುತ್ತದೆ.

ಇಲ್ಲಿ ಹಾಡು ಮತ್ತು ಸಂಗೀತದ ಬಗ್ಗೆ ಹೇಳಲೇಬೇಕಿದೆ. ದೃಶ್ಯಗಳ ಬ್ಲಾಕೌಟ್ ಗಳಲ್ಲಿ ನಾಟಕದ ಆಶಯಕ್ಕೆ ಪೂರಕವಾಗಿ ಹಾಡುಗಳನ್ನು ಬಳಸಲಾಗಿದ್ದು, ಅವುಗಳಿಗೆ ಜನಾರ್ದನ್ ದಾಸರಹಳ್ಳಿಯವರು ಸಂಗೀತ ಸಂಯೋಜಿಸಿ ಹಾಡನ್ನೂ ಹಾಡಿ ನಾಟಕಕ್ಕೆ ವಿಶಿಷ್ಟ ಕಳೆಯನ್ನು ತಂದುಕೊಟ್ಟಿದ್ದಾರೆ. ಹಾಡಿನ ಕೆಲವು ಸಾಲುಗಳು ಹೀಗಿವೆ..

ಅಜ್ಞಾನ ಅಳಿಸಿ ಸುಜ್ಞಾನ ಬೆಳೆಸಿ

ಆಸೆ ಇದ್ದವನಿಗೆ ಆಸರೆಯಾಗಿ

ಕಾಸೇ ಇಲ್ಲದೇ ಶಾಲೆಗೆ ಹೋಗಿ

ಕೋಶ ಓದಲು ನೆರವಾಗುವ ದೇಗುಲ

ಜ್ಞಾನ ದೇಗುಲ ನಮ್ಮ ಸರಕಾರಿ ಶಾಲೆ..

ಏನೇ ಆದರೂ.. ಸರಕಾರ ಇಷ್ಟೆಲ್ಲಾ ಸವಲತ್ತುಗಳನ್ನು ಕೊಟ್ಟರೂ ಯಾಕೆ ಮಧ್ಯಮ, ಕೆಳಮಧ್ಯಮ ವರ್ಗದವರೂ ಸಹ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಬಯಸುತ್ತಾರೆ? ಈ ಪ್ರಶ್ನೆಗೆ ಈ ನಾಟಕ ಉತ್ತರ ಕಂಡುಕೊಳ್ಳಬೇಕಿದೆ. ವಿದ್ಯೆ ಎಂಬುದು ಜ್ಞಾನದ ಕಲಿಕೆಯಾಗಿರದೇ ಮಾರ್ಕ್ಸ್ ಪಡೆಯುವ ಹಾಗೂ ಮುಂದೆ ಉತ್ತಮ ನೌಕರಿ ಪಡೆಯುವ ರಹದಾರಿ ಎಂದೇ ಪೋಷಕರು ಭಾವಿಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ಕಲಿತವರಿಗೆ ಸರಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನೌಕರಿ ಕೊಡಬೇಕು ಎಂದು ಸರಕಾರ ಆದೇಶ ಮಾಡಿದರೆ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವ ಸಾಧ್ಯತೆಗಳು ಹೆಚ್ಚಿವೆ ಎಂಬುದನ್ನು ಈ ನಾಟಕದ ಮೂಲಕ ಸರಕಾರಕ್ಕೆ ಆಗ್ರಹಿಸಬಹುದಾಗಿದೆ. ಸರಕಾರಿ ಜ್ಞಾನ ದೇಗುಲಗಳು ವಿದ್ಯೆಯ ಜೊತೆಗೆ ನೌಕರಿಯ ಖಾತರಿಯನ್ನೂ ಪಡೆದರೆ, ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿಕೊಂಡರೆ, ಗುಣಮಟ್ಟದ ಶಿಕ್ಷಣ ನೀಡಿದರೆ ಖಾಸಗಿ ಶಾಲೆಗಳನ್ನು ಮುಚ್ಚಿಸಬಹುದಾಗಿದೆ. ಆದರೆ ರಾಜಕೀಯ ನಾಯಕರುಗಳೇ ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳ ಮಾಲೀಕರುಗಳು ಆಗಿರುವುದರಿಂದ ಸರಕಾರಿ ಶಾಲೆಗಳ ಸಬಲೀಕರಣ ಕಷ್ಟಕರವಾಗಿದೆ. ಹೋಗಲಿ ಕನಿಷ್ಟ ಪಂಜಾಬ್ ರಾಜ್ಯ ಸರಕಾರ ಮಾಡಿದಂತೆ “ಸರಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗಳಿಗೆ ಕಳುಹಿಸಬೇಕು” ಎಂದು ಕರ್ನಾಟಕ ಸರಕಾರ ಆದೇಶ ಮಾಡಿ ಅನುಷ್ಟಾನಕ್ಕೆ ತಂದರೆ ಸರಕಾರಿ ಜ್ಞಾನ ದೇಗುಲಗಳು ಮರುಜೀವ ಪಡೆಯುತ್ತವೆ. ಯಶಸ್ವಿಯಾಗಿ ಮುನ್ನಡೆಯುತ್ತವೆ. ಇಂತಹ ನಾಟಕಗಳು ಈ ಅಂಶಗಳನ್ನೂ ಅಳವಡಿಸಿಕೊಂಡು ಸರಕಾರದ ಮೇಲೆ ಒತ್ತಡ ಹೇರಬಹುದಾಗಿದೆ. ಒಟ್ಟಿನ ಮೇಲೆ ಸರಕಾರಿ ಶಾಲೆಗಳೆಲ್ಲಾ ಮಾದರಿ ಶಾಲೆಗಳಾಗಿ ಉತ್ತಮ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕಿದೆ. ಈ ನಾಟಕದ ಆಶಯ ಈಡೇರಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ಚೇತನ್ ಅನಿಸಿಕೆ ಮತ್ತು ಡಾ.ರಾಜ್ ಅಭಿಮಾನಿಗಳ ಆಕ್ರೋಶ

More articles

Latest article

Most read