ನವದೆಹಲಿ ಏ.25 : ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಆಘಾತ ಎದುರಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತಂಡದ ನೆಟ್ಸ್ ಅಭ್ಯಾಸದ ವೇಳೆ, ಯುವ ಬ್ಯಾಟರ್ ಸಾಹಿಲ್ ಪರಾಖ್ ಅವರ ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ವೇಗವಾಗಿ ಬಂದ ಚೆಂಡು ನೇರವಾಗಿ ಸಾಹಿಲ್ ಅವರ ಮುಖಕ್ಕೆ ಅಪ್ಪಳಿಸಿದೆ. ಗಾಯದ ತೀವ್ರತೆ ಹೆಚ್ಚಾಗಿದ್ದು, ಸ್ಥಳದಲ್ಲಿಯೇ ರಕ್ತಸ್ರಾವವಾಗಿರುವುದು ಕಂಡುಬಂದಿದೆ. ಕೂಡಲೇ ಮೈದಾನದಲ್ಲಿದ್ದ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ರವಾನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಾಹಿಲ್ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಆತಂಕ ಮೂಡಿಸಿದೆ. ಡೆಲ್ಲಿ ಫ್ರಾಂಚೈಸಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಸಾಹಿಲ್ ಹಲವು ವೈದ್ಯಕೀಯ ಸ್ಕ್ಯಾನ್‌ಗಳಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಯಾರು ಈ ಸಾಹಿಲ್ ಪರಾಖ್?
ಮಹಾರಾಷ್ಟ್ರದ ನಾಸಿಕ್ ಮೂಲದ 18 ವರ್ಷದ ಸಾಹಿಲ್ ಪರಾಖ್, ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭೆ. ಎಡಗೈ ಬ್ಯಾಟಿಂಗ್ ಮತ್ತು ಪಾರ್ಟ್-ಟೈಮ್ ಲೆಗ್ ಸ್ಪಿನ್ ಬೌಲಿಂಗ್‌ನಲ್ಲಿ ಪರಿಣಿತರಾಗಿರುವ ಇವರು, ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಅಜೇಯ 109 ರನ್ ಸಿಡಿಸಿ ಕ್ರಿಕೆಟ್ ವಲಯದ ಗಮನ ಸೆಳೆದಿದ್ದರು. ಈ ಪ್ರತಿಭೆಯನ್ನು ಗುರುತಿಸಿದ ಡೆಲ್ಲಿ ಕ್ಯಾಪಿಟಲ್ಸ್, ಐಪಿಎಲ್ 2026ರ ಹರಾಜಿನಲ್ಲಿ 30 ಲಕ್ಷ ರೂಪಾಯಿಗೆ ಖರೀದಿಸಿತ್ತು.
ಪಾಯಿಂಟ್ ಟೇಬಲ್ ಮೇಲೆ DCಕಣ್ಣು
ಪ್ರಸ್ತುತ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಏರಿಳಿತದ ಹಾದಿಯಲ್ಲಿದೆ. ಆಡಿದ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲು ಕಂಡಿದೆ. ಇದೀಗ ಅಜೇಯವಾಗಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ (PBKS) ಸವಾಲನ್ನು ಎದುರಿಸಲು ಸಜ್ಜಾಗಿದೆ. ಈ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದರೆ, ಸನ್‌ರೈಸರ್ಸ್ ಹೈದರಾಬಾದ್ ಹಿಂದಿಕ್ಕಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವ ಅವಕಾಶ ಡೆಲ್ಲಿಗಿದೆ.
ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ ಟ್ರಿಸ್ಟಾನ್ ಸ್ಟಬ್ಸ್, “ನಮ್ಮ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದು ನಿಜ. ಆದರೆ ಸೋತ ಪಂದ್ಯಗಳಲ್ಲೂ 190ಕ್ಕೂ ಹೆಚ್ಚು ರನ್ ಗಳಿಸಿದ್ದೇವೆ. ತಂಡದಲ್ಲಿ ಸಕಾರಾತ್ಮಕ ವಾತಾವರಣವಿದ್ದು, ಗೆಲುವಿನ ವಿಶ್ವಾಸದಲ್ಲಿದ್ದೇವೆ” ಎಂದು ತಿಳಿಸಿದ್ದಾರೆ.
ತಂಡಕ್ಕೆ ಬಿಗ್ ಬೂಸ್ಟ್ ಗಾಯದ ಸಮಸ್ಯೆಯ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಮಾಧಾನಕರ ವಿಷಯವೆಂದರೆ, ಇಂಗ್ಲೆಂಡ್ ಆಲ್ ರೌಂಡರ್ ರೆಹಾನ್ ಅಹ್ಮದ್ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೆ, ಬೌಲಿಂಗ್ ದೈತ್ಯ ಮಿಚೆಲ್ ಸ್ಟಾರ್ಕ್ ಫಿಟ್ ಆಗಿದ್ದು, ಮೇ 1 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಲಭ್ಯವಿರಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

