ಬೆಂಗಳೂರು : ಮೈಸೂರು ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ತೆರಳುತ್ತಿದ್ದ ಕೆಲವು ಸಚಿವರನ್ನು ಪೊಲೀಸರು ತಡೆದಿರುವ ವಿಡಿಯೋ ವೈರಲ್ ಆಗಿರುವ ಕುರಿತು ಹಾಗೂ ಈ ವಿಚಾರದಲ್ಲಿ ಬಿಜೆಪಿ ಮಾಡಿರುವ ಆರೋಪಗಳಿಗೆ ಡಿಸಿಎಂ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ಮೈಸೂರು ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಶಿಷ್ಟಾಚಾರ ಪಾಲಿಸುವ ವೇಳೆ ನಡೆದ ಘಟನೆಗಳಿಗೆ ಜಾತಿ ಬಣ್ಣ ಹಚ್ಚುವುದು ಕೀಳುಮಟ್ಟದ ಆಲೋಚನೆಯಾಗಿದೆ. ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗಳಿಗೆ ಅವರದೇ ಆದ ಶಿಷ್ಟಾಚಾರವಿರುತ್ತದೆ. ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ವಿಶೇಷವಾಗಿ ಅಪಾರ ಜನಸಂದಣಿ ಇರುವ ಸಂದರ್ಭಗಳಲ್ಲಿ ಭದ್ರತೆ ಮತ್ತು ಶಿಷ್ಟಾಚಾರದ ನಿಯಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂಬ ಸೂಚನೆ ಪೊಲೀಸರಿಗೆ ಇದ್ದಿರಬಹುದು. ಈ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ. ಆದರೆ, ಮೇಲಧಿಕಾರಿಗಳಿಂದ ಬಂದ ಸೂಚನೆಗಳನ್ನು ಪೊಲೀಸರು ಪಾಲಿಸಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಮುಂದೆ ಸಾಗುತ್ತಿದ್ದ ಸಂದರ್ಭದಲ್ಲಿ ಸಚಿವರನ್ನು ಪೊಲೀಸರು ತಡೆದಿದ್ದರೂ, ನಂತರ ಮುಖ್ಯಮಂತ್ರಿಗಳೇ ಹಿಂದಿರುಗಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
ಈ ಘಟನೆಯನ್ನು ಮುಂದಿಟ್ಟುಕೊಂಡು ‘ದಲಿತ ಸಚಿವರು’ ಎಂಬ ಪದವನ್ನು ಪದೇಪದೆ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಚಿವರು ಎಂದು ಕರೆದರೆ ಸಾಕಲ್ಲವೇ? ಪ್ರತಿಯೊಬ್ಬರನ್ನೂ ಅವರ ಜಾತಿಯ ಹೆಸರಿನಿಂದಲೇ ಗುರುತಿಸಬೇಕೇ? ಬೇರೆ ಸಚಿವರನ್ನು ಅವರ ಜಾತಿಯ ಹೆಸರಿನಿಂದ ಕರೆಯಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಲಕ್ಷಾಂತರ ಜನರು ಸೇರುವ ದೊಡ್ಡ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುವ ಸಾಧ್ಯತೆಯಿರುತ್ತದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವರಿಗೆ ಪ್ರವೇಶಪತ್ರ ತಲುಪದೇ ಇರಬಹುದು. ಪ್ರಮುಖ ವ್ಯಕ್ತಿಗಳಿಗೆ ಪಾಸ್ ನೀಡುವ ವಿಚಾರದಲ್ಲಿ ಸಂವಹನದ ಕೊರತೆ ಅಥವಾ ಗಮನಕ್ಕೆ ಬಾರದ ತಪ್ಪುಗಳು ಸಂಭವಿಸಬಹುದು. ಇಂತಹ ಲೋಪಗಳು ನಡೆದಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಅವುಗಳನ್ನೇ ದೊಡ್ಡ ವಿವಾದವನ್ನಾಗಿ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ನನಗೆ ದೊರೆತ ಮಾಹಿತಿಯ ಪ್ರಕಾರ, ಹತ್ತು ದಿನಗಳ ದಸರಾ ಉತ್ಸವದ ಅವಧಿಯಲ್ಲಿ ಸುಮಾರು 15ರಿಂದ 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಿಸಿವೆ. ದಸರಾ ವೀಕ್ಷಿಸಲು ಬಂದ ಜನರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಿದ್ದಾರೆ. ಈ ಸಾಧನೆಯನ್ನು ನಾವು ಮೆಚ್ಚಬೇಕಲ್ಲವೇ ಎಂದರು.
ತುಮಕೂರು ದಸರಾ ಉತ್ಸವದಲ್ಲಿಯೂ ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಇಂತಹ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸಂದಣಿಯನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ದೊಡ್ಡ ಕಾರ್ಯಕ್ರಮಗಳಲ್ಲಿ ಸಂಭವಿಸುವ ಸಣ್ಣಪುಟ್ಟ ಘಟನೆಗಳನ್ನು ಮುಂದಿಟ್ಟುಕೊಂಡು ಒಟ್ಟಾರೆ ವ್ಯವಸ್ಥೆಯನ್ನು ದೂಷಿಸುವುದು ಸರಿಯಲ್ಲ ಎಂದರು.
ಏನಿದು ಪ್ರಕರಣ
ಮೈಸೂರು ಅರಮನೆ ಆವರಣದಲ್ಲಿ ನಿನ್ನೆ (ಆ.21) ನಡೆದ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಪೂಜೆ ಆವರಣ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳು ನಿರ್ಬಂಧಿಸಿದ ವಿಚಾರವೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಘಟನೆ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಆದರೂ ಅಧಿಕಾರಿಗಳ ಉಡಾಫೆ ಸಹಿಸಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಅದೇಶಿಸಿದ್ದೇನೆ ಎಂದು ಸಿಎಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

