ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ವೀಕ್ಷಿಸಲು ಪೋಷಕರೊಂದಿಗೆ ಬಂದಿದ್ದ ನಾಲ್ಕು ವರ್ಷದ ಬಾಲಕನ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಮೈಸೂರಿನ ಹೈವೇ ಸರ್ಕಲ್ ಬಳಿ ಜನಸಂದಣಿ ನಿಯಂತ್ರಿಸುವ ವೇಳೆ ಪೊಲೀಸರ ಲಾಠಿ ಬಾಲಕನಿಗೆ ತಗುಲಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಗಾಯಗೊಂಡ ಬಾಲಕನನ್ನು ಶಿಶಿರ್ ಎಂದು ಗುರುತಿಸಲಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ.
ಜನಸಂದಣಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಲಾಗಿತ್ತು
ಜಂಬೂಸವಾರಿ ವೀಕ್ಷಿಸಲು ಹೈವೇ ಸರ್ಕಲ್ ಬಳಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನಸಂದಣಿ ನಿಯಂತ್ರಿಸಲು ನಿಯೋಜಿಸಲಾಗಿದ್ದ ಪೊಲೀಸರು ಲಾಠಿ ಪ್ರಹಾರ ನಡೆಸಿದ ಸಂದರ್ಭದಲ್ಲಿ, ಪೋಷಕರ ಪಕ್ಕದಲ್ಲೇ ನಿಂತಿದ್ದ ಬಾಲಕನ ತಲೆಗೆ ಲಾಠಿ ಬಡಿದಿದೆ ಎಂದು ಬಾಲಕನ ತಂದೆ ಗಿರೀಶ್ ತಿಳಿಸಿದ್ದಾರೆ.
ಲಾಠಿ ತಗುಲಿದ ರಭಸಕ್ಕೆ ಬಾಲಕನ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ಇದನ್ನು ಕಂಡ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಬಾಲಕನ ತಲೆಗೆ ಹೊಲಿಗೆ ಹಾಕಿದ್ದು, ಆತನ ಆರೋಗ್ಯ ಸ್ಥಿತಿಯ ಬಗ್ಗೆ ಕುಟುಂಬದವರು ಕಳವಳ ವ್ಯಕ್ತಪಡಿಸಿದ್ದಾರೆ.
ತಲೆಬುರುಡೆ ತೆರೆಯುವ ಸಾಧ್ಯತೆ: ತಂದೆ ಆತಂಕ
“ದಸರಾ ನೋಡಲು ನಮ್ಮ ಮಗುವನ್ನು ಕರೆದುಕೊಂಡು ಬಂದಿದ್ದೆವು. ಆದರೆ, ಆತ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಲು ನಮ್ಮಿಂದ ಸಾಧ್ಯವಾಗಲಿಲ್ಲ. ಇಷ್ಟು ಚಿಕ್ಕ ಮಗುವಿನ ಮೇಲೆ ಲಾಠಿ ಬೀಸುವ ಅಗತ್ಯವಿತ್ತೇ?” ಎಂದು ಬಾಲಕನ ತಂದೆ ಗಿರೀಶ್ ನೋವು ವ್ಯಕ್ತಪಡಿಸಿದ್ದಾರೆ.
ಬಾಲಕನ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಲೆಬುರುಡೆಯನ್ನು ತೆರೆಯಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ವಿರುದ್ಧ ದೂರು ನೀಡಲು ನಿರ್ಧಾರ
ಬಾಲಕನಿಗೆ ಪೊಲೀಸರ ಲಾಠಿ ತಗುಲಿದ್ದೇ ಗಾಯಕ್ಕೆ ಕಾರಣ ಎಂದು ಕುಟುಂಬ ಆರೋಪಿಸಿದೆ. ಆದರೆ, ಘಟನೆ ನಡೆದ ಸಂದರ್ಭ, ನಿಖರ ಕಾರಣ ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯದಲ್ಲಿ ನಿರ್ಲಕ್ಷ್ಯವಿತ್ತೇ ಎಂಬುದನ್ನು ತನಿಖೆಯಿಂದ ದೃಢಪಡಿಸಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ನಗರಪಾಲಿಕೆ ಸದಸ್ಯ ರಂಗಸ್ವಾಮಿ, ಬಾಲಕನಿಗೆ ಹೊಡೆದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

