ಇರಬೇಕಿತ್ತು ನೀನೀಗ
ಇವರ ಆಟ ಮಾಟ ಬಯಲಾಟ ನೋಡಲು
ನೀ ಕೊಟ್ಟ ಕುರುಹುಗಳು
ಅಧಿಕಾರದ ಮಹಲುಗಳ
ವಾಹಕಗಳಾಗಿ ಬದಲಾಗಿವೆ
ಕಿತ್ತೆಸೆದದ್ದು ಬರೀ
ಜನಿವಾರವೆಂದುಕೊಂಡಿದ್ದಾರೆ
ಬಾ ಹೇಳು ಇನ್ನೊಮ್ಮೆ ಎಸೆದದ್ದು
ಮತ್ತು ಎಸೆಯಬೇಕಾದದ್ದೇನೇನೆಂದು
ಎಷ್ಟೊಂದು ಉದಾಸೀನ ಈಗ
ನೀನು ಮತ್ತು ನಿನ್ನಂಥವರೆಂದರೆ !
ಕಿರೀಟವಿರದ ನಿನ್ನ
ಗುರುತಿಸದಾಗಿವೆ ಮಕ್ಕಳು
ದಯೆಯ ಸುಳಿವಿರದ ಪ್ರತಿ ಕಚೇರಿಯಲ್ಲಿ
ನಿನ್ನ ಕಿರೀಟಧಾರಿ ಫೋಟೋ
ಕೊನೆಕೊನೆಗೆ ನೀನೆಂದರೆ
ಸಿಂಹಾಸನ ಕುದುರೆ ಕಿರೀಟ
ಆಸೆ ಅರಸನಿಗಷ್ಟೇ ಎಂದವರ
ನೆನಪಾದರೂ ಉಂಟೆ ?
ಕೆಟ್ಟಿತೇ ಕಲ್ಯಾಣ?
ವ್ಯಥೆಯಾಗುತ್ತಿದೆ
ವ್ಯಥೆಯಿರದ ಕಾಲವೆಂದಾದರೂ ಇತ್ತೇ ?
ತಿರುಗಿ ನೀನೇ ಕೇಳಿದಂತಾಗಿ ಸ್ವಮರುಕಕ್ಕೆ
ನನಗೇ ನಾಚಿಕೆಯಾಗುತ್ತದೆ
ಇರಲಿ ಬಿಡು ಇಷ್ಟಿದ್ದದ್ದೇ
ಕೂಸಂತೆ ಎದೆಯೊಳಗಿಟ್ಟುಕೊಂಡು
ನಿನ್ನನ್ನು ಬದುಕುವವರೂ ಇದ್ದಾರೆ
ಆಗಾಗ ಅಲ್ಲಲ್ಲಿ ಕಾಣುತ್ತೇನೆ
ಅವರು ಜೊತೆ ಇದ್ದಾಗಲೆಲ್ಲ
ವಿರಳವಾದ ಗಾಳಿ ಬೆಳಕು
ಸಿಕ್ಕಂತಾಗುತ್ತದೆ
ಅಕ್ಕ ಬೇರೆ ಆಳಕ್ಕಿರಿದು
ಎಚ್ಚರಿಸುತ್ತಿದ್ದಾಳೆ
ನೀನಾನೆಂಬುದ ಹರಿದಂಗಲ್ಲದೆ
ಕಲ್ಯಾಣದ ಒಳಗು ತಿಳಿಯಬಾರದು

ಸಿ.ಬಿ.ಐನಳ್ಳಿ
ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ಕರ್ನಾಟಕ ಕಲಾಮಹಾವಿದ್ಯಾಲಯ, ಧಾರವಾಡ.
ಇದನ್ನೂ ಓದಿ- ವಿಶೇಷ | ಬಸವ ಜಯಂತಿ ಮತ್ತು ನಡೆ ನುಡಿ ಸಿದ್ಧಾಂತ


