ದೇವರು, ನಂಬಿಕೆಗಳು ತಪ್ಪಲ್ಲ. ಆದರೆ ಅವುಗಳೇ ನಮ್ಮನ್ನು ಆಳುವಂತಿರಬಾರದು. ಪೂಜೆ, ಪ್ರಾರ್ಥನೆಗಳು ತಮ್ಮ ಮೇಲೆ ನಂಬಿಕೆ ಕಳಕೊಂಡ ಸೋಮಾರಿಗಳ ಮಾರ್ಗ ಎಂದು ಅಂದೇ ಪೆರಿಯಾರ್ ನಮ್ಮನ್ನು ಎಚ್ಚರಿಸಿದ್ದರು. ದೇವಾಲಯಗಳ ಗಂಟೆಗಿಂತ ಶಾಲೆಗಳ ಗಂಟೆ ಸದ್ದೇ ಹೆಚ್ಚೆಚ್ಚು ಕೇಳುವಂತಾಗಬೇಕು – ಶಂಕರ್ ಸೂರ್ನಳ್ಳಿ, ಬರಹಗಾರರು.
ದೇವರು, ಧರ್ಮ ಮೌಢ್ಯಗಳನ್ನು ಕಟುವಾಗಿ ವಿಮರ್ಶಿಸುವ ನಟ ಪ್ರಕಾಶ್ ರೈಯವರು ಇತ್ತೀಚೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿರುವ ತಮ್ಮ ತಾಯಿ ನಿಧನರಾದಾಗ ಆ ಕುರಿತಂತೆ ಚರ್ಚ್ ನಲ್ಲಿ ನಡೆದ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು. ಅದನ್ನು ನೋಡಿ ಅವರ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಕೆಟ್ಟದಾಗಿ ಆಡಿಕೊಂಡಿದ್ದರು. ಹಿಂದೂ ಧರ್ಮ, ದೇವರು, ಮಂದಿರಗಳ ವಿಚಾರ ಬಂದಾಗ ನಾಸ್ತಿಕನಂತೆ ಮಾತನಾಡುವ ರೈ ಚರ್ಚ್ ನ ವಿಚಾರ ಬಂದಾಗ ಹೀಗೆ ಬದಲಾದದ್ದು ಯಾಕೋ ಎಂಬುದವರ ಟೀಕೆ. ಇದಕ್ಕೆ ಪ್ರತಿಕ್ರಿಯಿಸಿರುವ ರೈಯವರು, ನಾನು ವೈಯಕ್ತಿಕವಾಗಿ ದೇವರನ್ನು ನಂಬದವನಾಗಿದ್ದರೂ ನನ್ನ ತಾಯಿಯ ನಂಬಿಕೆಯನ್ನು ಗೌರವಿಸುವುದೂ ಸಹ ನನ್ನ ಕರ್ತವ್ಯ ತಾನೇ ಎಂದಿದ್ದರು. ಅಷ್ಟಕ್ಕೂ ನಾಸ್ತಿಕನೆಂದರೆ ಆತ ಸದಾ ದೇವರೊಂದಿಗೆ ಜಗಳಾಡಿಕೊಂಡೇ ಇರುವಂತವನು ಎಂದರ್ಥವೇ ? ದೇವರ ಅಸ್ತಿತ್ವವೆಂಬುದೇ ಸುಳ್ಳು ಇವೆಲ್ಲ ದೇಶಕಾಲಗಳ ಸಾಂದರ್ಭಿಕ ಕಲ್ಪನೆಗಳಷ್ಟೆ ಎಂದು ನಂಬಿದವನಿಗೆ ಅಂದರೆ ಆತನ ಮಟ್ಟಿಗೆ ದೇವರೆಂಬುದೇ ಇಲ್ಲವಾದ ಮೇಲೆ ಜಗಳಾಡಿಕೊಳ್ಳಲು ಅಲ್ಲಿ ಏನಿದೆ?
ಮುಖ್ಯವಾಗಿ ಇಲ್ಲಿ ಗಮನಿಸಬೇಕಿರುವ ಸಂಗತಿಯೆಂದರೆ ನಾಸ್ತಿಕ ಎನಿಸಿಕೊಂಡಿರುವಾತನಿಗೆ ಈ ದೇವರು ಧರ್ಮ ಇತ್ಯಾದಿಗಳನ್ನು ತಲೆಗೇರಿಸಿಕೊಂಡು ಆಗಬೇಕಾದದ್ದು ಏನೂ ಇಲ್ಲ. ಬದಲಿಗೆ, ಇದೇ ದೇವರು, ಧರ್ಮ, ಮಂದಿರ, ಪೂಜೆ, ಸಂಪ್ರದಾಯ ಇತ್ಯಾದಿಗಳ ಹೆಸರಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅನಾಚಾರ, ಮೂಢನಂಬಿಕೆ, ಜಾತೀಯತೆ, ಶೋಷಣೆ ತಾರತಮ್ಯ ಇಂತಹ ವಿಚಾರಗಳ ಬಗ್ಗೆ ಅವರುಗಳಿಗೆ ಖಂಡಿತ ತಕರಾರುಗಳಿವೆ. ದುರದೃಷ್ಟವೆಂದರೆ ಧರ್ಮ, ಮಂದಿರ, ಮಸೀದಿ, ಪೂಜೆ, ಸಂಪ್ರದಾಯ, ಶೋಷಣೆ, ಆ ಸಂಬಂಧ ಧರ್ಮ ಧರ್ಮಗಳೊಳಗಿನ ಕಚ್ಚಾಟ ಮುಂತಾದವುಗಳ ಮೂಲ ಹುಡುಕ ಹೋದರೆ ಅವೆಲ್ಲ ಕೊನೆಗೆ ಬಂದು ನಿಲ್ಲುವುದು ಈ ದೇವರೆಂಬ ನಂಬಿಕೆಯ ಬುಡಕ್ಕೇನೆ. ಬಡಪಾಯಿ ದೇವರ ಹೆಸರಲ್ಲಿ ಪಾಪ, ಪುಣ್ಯ, ಕರ್ಮ, ಸ್ವರ್ಗ, ನರಕಗಳ ಭಯ ಹುಟ್ಟಿಸಿ ಇಡೀ ಸಮಾಜವನ್ನೇ ತನ್ನ ಇಶಾರೆಯಂತೆ ಆಡಿಸುತ್ತಿರುವ ಪುರೋಹಿತ ವರ್ಗ (ಇದು ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಯಾವ ಧರ್ಮದ್ದೇ ಆಗಿರಲಿ ಎಲ್ಲವೂ ಒಂದೇ) ಸದಾ ಅಪಾಯಕಾರಿ. ಹಾಗಾಗಿ ರೈಯಂತವರು ಈ ಅನಾಚಾರಗಳ ಬಗ್ಗೆ ಧ್ವನಿಯೆತ್ತಿದರೆ ಆತ ನಾಸ್ತಿಕ, ಧರ್ಮ ವಿರೋಧಿ ಎಂಬ ಪಟ್ಟ.

ಮಹಾಭಾರತದಲ್ಲೊಂದು ಪ್ರಸಂಗವಿದೆ. ಕುರುಕ್ಷೇತ್ರ ಯುದ್ಧ ಮುಗಿದು ಧರ್ಮರಾಯನ ಪಟ್ಟಾಭಿಷೇಕದ ವೇಳೆಯಲ್ಲಿ ಚಾರ್ವಾಕನೊಬ್ಬನ ಆಗಮನವಾಗುತ್ತದೆ. ಆತ ಅಲ್ಲಿ ಧರ್ಮರಾಯನಂತ ಧರ್ಮರಾಯನೆದುರೇ ನೀನು ಕೇವಲ ನಿನ್ನ ಸ್ವಾರ್ಥಕ್ಕಾಗಿ ಲೆಕ್ಕವಿಲ್ಲದಷ್ಟು ರಾಜರುಗಳ ಅಸಂಖ್ಯಾತ ಯೋಧರ ಸಾವಿಗೆ ಕಾರಣನಾದೆ ಅಸಂಖ್ಯಾತ ವಿಧವೆಯರು ತಂದೆ ತಾಯಿಗಳಿಲ್ಲದ ಮಕ್ಕಳಿಗೆಲ್ಲ ಹೊಣೆ ಯಾರು? ಯುದ್ಧದ ಕಾರಣಕ್ಕೆ ಆದಂತಹ ಅಪಾರ ಹಾನಿ ಮತ್ತು ಸಂಪತ್ತು ನಾಶಕ್ಕೆ ನಿನ್ನಲ್ಲಿ ಉತ್ತರವಿದೆಯೇ ಎಂದು ಪ್ರಶ್ನಿಸುತ್ತಾನೆ.. ಅದಕ್ಕೆ ಸಭೆಯಲ್ಲಿದ್ದ ಬ್ರಾಹ್ಮಣರು ಕೆರಳಿ ಅಲ್ಲೇ ಅವನನ್ನು ಬಡಿದು ಕೊಲ್ಲುತ್ತಾರೆ. ಬಹುಷ ಚಾರ್ವಾಕನ ಕಹಿಸತ್ಯದ ಈ ಮಾತಿಗೆ ಧರ್ಮರಾಯ ಜಾಗೃತಗೊಂಡು ಎಲ್ಲಿ ತಮ್ಮ ಕೂಳಿಗೆ ಬಿಟ್ಟಿ ಉಡುಗೊರೆಗಳಿಗೆ ಸಂಚಕಾರ ಬಂದೀತೋ ಎಂಬ ಭಯ ಅವರನ್ನು ಕಾಡಿದ್ದಿರಬೇಕು.
ಹೌದು, ಒಂದು ಬಗೆಯಲ್ಲಿ ಈ ನಾಸ್ತಿಕವಾದಿಗಳು ಇಲ್ಲಿ ಅಧಿಕಪ್ರಸಂಗಿಗಳ ತರಹವೇ ಕಾಣಿಸುತ್ತಾರೆ. ಅವರು ಏನು ಬೇಕಾದರೂ ಮಾಡಿ ಸಾಯಲಿ ಅದನ್ನು ಮೈಮೇಲೆ ಹಾಕಿಕೊಂಡು ಈತ ಸುಖಾಸುಮ್ಮನೆ ಸತ್ತನಲ್ಲ ಅಂತನ್ನಿಸದೇ ಇರದು. ಆದರೆ, ಬಹುತೇಕ ನಾಸ್ತಿಕವಾದಿಗಳು ಇರೋದೇ ಹೀಗೇನೆ. ಕೋಟ್ಯಂತರ ಆಸ್ತಿ, ಇನ್ನಿಲ್ಲದ ಜನಪ್ರಿಯತೆ ಹೊಂದಿರುವ ಬಹುಭಾಷಾ ನಟ, ಅಪ್ರತಿಮ ಪ್ರತಿಭಾವಂತ ರೈಯವರು ಸುಮ್ಮನೆ ಕೂರೋ ಬದಲು ಆಗಾಗ ಅನ್ಯಾಯದ ವಿರುದ್ಧ ದನಿಯೆತ್ತಿ ಮೌಢ್ಯಗಳ ವಿರುದ್ಧ ಮಾತನಾಡುತ್ತಾರಲ್ಲ ಅದೇ ತಪ್ಪು. ಈ ಕಾರಣಕ್ಕೆ ಹಾದಿ ಬೀದಿಯಲ್ಲಿ ಹೋಗುವವರಿಂದಲೂ ಆ ಮಗ ಈ ಮಗ ಎಂದು ತುಚ್ಛವಾಗಿ ಬೈಸಿಕೊಳ್ಳುತ್ತಿದ್ದಾರೆ.. ಕೇವಲ ಮೌಢ್ಯಗಳನ್ನು ಪ್ರಶ್ನಿಸಿದ್ದಕ್ಕೆ ಗೌರಿ ಲಂಕೇಶ್, ಪನ್ಸಾರೆ, ದಾಭೋಲ್ಕರ್ ರಂತವರ ಕಗ್ಗೊಲೆಯಾಗಿಲ್ಲವೇ. ಗೌರಿ, ಕಾರ್ನಾಡ್, ಅನಂತಮೂರ್ತಿಯವರು ನಿಧನರಾದಾಗ ಅವರ ಸಾವನ್ನು ಕೆಲ ನೀಚರು ಸಂಭ್ರಮಿಸಿದರು. ಮೌಢ್ಯಗಳನ್ನು ದಿಟ್ಟವಾಗಿ ಪ್ರಶ್ನಿಸಿದ್ದೇ ಅವರ ಘೋರ ಅಪರಾಧ.
ವೈಚಾರಿಕತೆ ಮತ್ತು ಜಿಗುಟು ಧಾರ್ಮಿಕತೆಗೂ ಯಾವತ್ತೂ ಕೂಡ ಆಗಿಬರದು. ಮೌಢ್ಯ ಪೋಷಿಸುವ ಸಂಪ್ರದಾಯವಾದಿಗಳ ಪ್ರಭುತ್ವದ ಮೇಲಿನ ಹಿಡಿತ ಕೇವಲ ಇವತ್ತಿನದ್ದೇನಲ್ಲ. ಸೂರ್ಯನ ಸುತ್ತ ಭೂಮಿ ತಿರುಗೋದು ಎಂದ ಗೆಲಿಲಿಯೋನನ್ನ ’ಸತ್ಯ” ಒಪ್ಪುವ ತನಕ ಜೈಲಿಗಟ್ಟಲಾಯ್ತು. ತಳಿಶಾಸ್ತ್ರದ ಪಿತಾಮಹ ಗ್ರೆಗರ್ ಮೆಂಡಲ್ ಜೀವ ಪ್ರಭೇದಗಳ ಬದಲಾಗುವಿಕೆಯ ಕುರಿತ ತನ್ನ ಸಂಶೋಧನೆಯನ್ನ ಗುಪ್ತವಾಗಿ ದಾಖಲಿಸಬೇಕಾಗಿ ಬಂತು. ಡಾರ್ವಿನ್ ಸಿದ್ಧಾಂತಕ್ಕೆ ಚರ್ಚ್ ಭಾಗಶ: ಮಾನ್ಯತೆ ನೀಡಿದ್ದು ತೀರಾ ಇತ್ತೀಚೆಗಷ್ಟೆ. ಭಾರತದಲ್ಲೂ ವೈಚಾರಿಕತೆಗೆ ಹತ್ತಿರವಿದ್ದ ಇಲ್ಲಿನ ನೆಲಮೂಲದ ಭೌದ್ಧಧರ್ಮವನ್ನು ದೇಶದಿಂದಲೇ ಓಡಿಸಲಾಯಿತು.
ಇವರೆಲ್ಲ ವ್ಯವಸ್ಥೆಯೊಂದಿಗೆ ರಾಜಿಯಾಗಿರುತ್ತಿದ್ದರೆ ಪ್ರಕಾಶ್ ರೈ, ಗೌರಿಯಂತವರು ಎಲ್ಲರಿಗೂ ಎಲ್ಲದಕ್ಕೂ ಸರಿ ಎನ್ನುತ್ತಾ ಸಮಯಸಾಧಕತನ ತೋರುತ್ತಿದ್ದರೆ ಇವರೇ ಎತ್ತಿ ಮೆರೆಸುತ್ತಿದ್ದರು. ಆದರೆ ತಮ್ಮ ಕಣ್ಣೆದುರು ನಡೆಯುತ್ತಿರುವ ಅನಾಚಾರಗಳನ್ನು ನೋಡಿಯೂ ಸುಮ್ಮನಿರಲು ಇಂತವರಿಗೆ ಸಾಧ್ಯವಾಗದು. ಆತ್ಮಸಾಕ್ಷಿ ಅವರನ್ನು ಕಾಡುತ್ತಿರುತ್ತದೆ. ಅದು ಯುಧಿಷ್ಟಿರನ ಸಭೆಗೆ ಬಂದಿದ್ದ ಚಾರ್ವಾಕನಿರಲಿ ಇವತ್ತಿನ ರೈಯಂತವರೂ ಆಗಿದ್ದಿರಬಹುದು. ವಾಸ್ತವದಲ್ಲಿ ದೇವರು ಧರ್ಮಗಳ ಹಂಗನ್ನೇ ಇಟ್ಟುಕೊಳ್ಳದ ಇವರುಗಳು ಇಲ್ಲಿ ದಾಖಲಿಸುವಂತ ವಿರೋಧ ನೇರವಾಗಿ ಯಾವುದೇ ಧರ್ಮ ಅಥವಾ ದೇವರ ಕುರಿತಂತೆ ಎಂದು ಭಾವಿಸುವುದಕ್ಕಿಂತ ಅವು ಹುಟ್ಟು ಹಾಕಿದ ಸಾಮಾಜಿಕ ದೋಷಗಳ ಮತ್ತು ಮೌಢ್ಯಗಳ ಕುರಿತಂತೆ ಎಂದಷ್ಟೇ ಭಾವಿಸಬೇಕು.



ಕಾರ್ಲ್ ಮಾರ್ಕ್ಸ್ ಹೇಳಿದಂತೆ ಧರ್ಮವೆಂಬುದು ಅಮಲಿನ ಚಟ ಹತ್ತಿಸುವ ಅಫೀಮಿನಂತೆ ಎಂಬ ಮಾತನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದಲ್ಲಿ ಈ ಧರ್ಮ ದೇವರುಗಳೆಂಬುದು ಒಂದು ರೀತಿಯ ಹುಲಿ ಸವಾರಿ ಇದ್ದಂತೆ ಎಂದೆನ್ನಬಹುದು. ದೇವರು ಧರ್ಮ ಪೂಜೆ ವೃತ ಇತ್ಯಾದಿಗಳ ಅತಿಯಾದ ಅವಲಂಬನೆಯಿಂದ ಹೊರಬರುವುದು ಸುಲಭದ ಮಾತಲ್ಲ. ತಾತ್ಕಾಲಿಕವಾಗಿ ಹೊರಬಂದು ಸಮಸ್ಯೆಗಳು ಎದುರಾದಲ್ಲಿ ಭಯಕ್ಕೆ ನಿಮ್ಮ ಕಂದಾಚಾರಗಳು ಇನ್ನೂ ದುಪ್ಪಟ್ಟಾಗುವ ಅಪಾಯವಿದೆ. ಜನರ ಇಂತಹ ದೌರ್ಬಲ್ಯಗಳ ಆಧಾರದಲ್ಲೇ ದೇವದಲ್ಲಾಳಿಗಳು ಅಥವಾ ಧರ್ಮೊದ್ಯಮಿಗಳು ಜನ ಹಾಗೂ ಸಮಾಜದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಿರುತ್ತಾರೆ.
ಈ ದೇವರು ಧರ್ಮ ನಂಬಿಕೆಗಳೆಲ್ಲ ವೈಯಕ್ತಿಕ ನೆಲೆಯಿಂದ ಹೊರಬಂದು ವ್ಯಾವಹಾರಿಕ ಸರಕುಗಳಾಗಿ ಮಾರ್ಪಾಡಾದಾಗ ಇಂತಹ ಸಮಸ್ಯೆಗಳು ಸಮಾಜದಲ್ಲಿ ಹುಟ್ಟಿಕೊಳ್ಳುತ್ತವೆ. ದೇವರೇ ಹೇಳಿದ ಮಾತೆಂದು ಧರ್ಮಗ್ರಂಥಗಳನ್ನುಲ್ಲೇಖಿಸಿ ಜಾತಿ, ಲಿಂಗ ತಾರತಮ್ಯಗಳಂತಹ ಶೋಷಣೆಗಳು, ಸತಿ, ದೇವದಾಸಿಯಂತಹ ಅನಿಷ್ಟಗಳು ಪಾರಂಪರಿಕ ಮೌಢ್ಯಗಳು ದೇವರ ಹೆಸರಲ್ಲಿ ವಿಜೃಂಭಿಸುತ್ತಿರುತ್ತವೆ. ಇತ್ತೀಚೆಗೆ ನರ್ಮದಾನದಿಗೆ ಬರೋಬ್ಬರಿ ೧೧,೦೦೦ ಲೀಟರ್ ಹಾಲನ್ನು ಭಕ್ತಿಯ ಹೆಸರಲ್ಲಿ ಸುರಿಯಲಾಯ್ತು. ಹಾಲನ್ನು ಒಂದು ದಿನ ಸಂಸ್ಕರಿಸದೇ ಅಥವ ಬಳಸದೇ ತೆರೆದಿಟ್ಟರೆ ಕೆಟ್ಟು ವಾಸನೆ ಬರುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ನದಿಗೆ ಸುರಿದ ಹಾಲು ಅ ನದಿಯನ್ನು ಮಲಿನಗೊಳಿಸಿದ್ದರ ಜೊತೆಗೆ ಅಲ್ಲಿನ ಜಲಚರಕ್ಕೂ ಕಂಟಕ. ಆದರೂ ಇಂತವನ್ನು ಪ್ರಶ್ನಿಸುವಂತಿಲ್ಲ ಪ್ರಶ್ನಿಸಿದರೆ ನಂಬಿಕೆಯನ್ನು ಪ್ರಶ್ನಿಸುವ ನೀನು ನಾಸ್ತಿಕನಾಗಿ ಬಿಡುತ್ತೀ.
ದೇವರು, ನಂಬಿಕೆಗಳು ತಪ್ಪಲ್ಲ. ಆದರೆ ಅವುಗಳೇ ನಮ್ಮನ್ನು ಆಳುವಂತಿರಬಾರದು. ಪೂಜೆ, ಪ್ರಾರ್ಥನೆಗಳು ತಮ್ಮ ಮೇಲೆ ನಂಬಿಕೆ ಕಳಕೊಂಡ ಸೋಮಾರಿಗಳ ಮಾರ್ಗ ಎಂದು ಅಂದೇ ಪೆರಿಯಾರ್ ನಮ್ಮನ್ನು ಎಚ್ಚರಿಸಿದ್ದರು. ದೇವಾಲಯಗಳ ಗಂಟೆಗಿಂತ ಶಾಲೆಗಳ ಗಂಟೆ ಸದ್ದೇ ಹೆಚ್ಚೆಚ್ಚು ಕೇಳುವಂತಾಗಬೇಕು.
ಸಂಪ್ರದಾಯವಾದಿ ಹಿನ್ನೆಲೆಯ ನಾಸ್ತಿಕವಾದಿ ’ದೇವರು” ಕೃತಿಯ ಲೇಖಕ ಎ ಎನ್ ಮೂರ್ತಿರಾಯರು ದೇವರನ್ನು ಪ್ರಶ್ನಿಸಿಯೂ ನೂರುವರ್ಷ ಆರೋಗ್ಯವಂತ ಬದುಕನ್ನು ಬದುಕಿದ್ದರು. ಅವರೇ ಆ ಕೃತಿಯಲ್ಲಿ “ನನಗೆ ಈ ದೇವರ ಬಗ್ಗೆ ಅಸಮಾಧಾನವಾಗಲೀ ಅಪನಂಬಿಕೆಯಾಗಲೀ ಕಿಂಚಿತ್ತೂ ಇಲ್ಲ. ಬದಲಿಗೆ, ಇಲ್ಲಿನ ಅನ್ಯಾಯ ಅನಾಚಾರ ಯುದ್ಧ ಬಡತನ ಅನಾರೋಗ್ಯ ಇತ್ಯಾದಿಗಳನ್ನೆಲ್ಲ ನೋಡುವಾಗ ನಮ್ಮನ್ನು ತಂದೆತಾಯಿಯಂತೆ ಮೇಲಿನಿಂದ ಸರ್ವಾಂತರಯಾಮಿಯಾಗಿ ಗಮನಿಸುತ್ತಾ ಬೇಕೆಂದಾಗ ತಿದ್ದುವಂತ ಮೇಲೆತ್ತುವಂತ ಸರ್ವಶಕ್ತನೆಂಬ ದೇವರು ನಿಜಕ್ಕೂ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಆದರೆ ಹಾಗಿಲ್ಲವಲ್ಲವೆಂಬ ವಿಷಾದವಷ್ಟೇ ಇದೆ “ ಎಂದಿದ್ದರು
ಹೌದಲ್ಲ, ದೇವರಿದ್ದಿದ್ದರೆ ಎಷ್ಟು ಚೆನ್ನಿತ್ತು. ದೇವರ, ಧರ್ಮದ ಹೆಸರಲ್ಲಿ ವಂಚಿಸುವವರ, ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುವವರ, ಶೋಷಿಸುವ ದೇವದಲ್ಲಾಳಿಗಳ ತಲೆಗೆ ಆಗಾಗ ಪೆಟ್ಟುಕೊಟ್ಟು ಮೂಲೆಗಾದರೂ ಕುಳ್ಳಿರಿಸುತ್ತಿದ್ದನಲ್ಲವೇ?
– ಶಂಕರ್ ಸೂರ್ನಳ್ಳಿ
ಬರಹಗಾರರು
ಇದನ್ನೂ ಓದಿ- ಉರುಳುವ ಕಾಲದ ಜೊತೆಗೆ ತುಳುವರ ವೃತ್ತಿ ಬದುಕು


