ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರಿಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿಗೆ ಭೇಟಿ ನೀಡಿ 80 ಕೋಟಿ ರೂ. ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದರು.
ಮೊದಲು ಮೋದಿ ಗೋರಕ್ಷಕನಾಥ ತಪಸ್ಸು ಮಾಡಿ, ಜ್ವಾಲಾಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ,. ನಂತರ ಕಾಲಭೈರವೇಶ್ವರಸ್ವಾಮಿ ಸನ್ನಿಧಿಗೆ ತೆರಳಲಿದ್ದಾರೆ. ಅಲ್ಲಿ ದರ್ಶನ ಪಡೆದು ಮಂಗಳಾರತಿ ಮಾಡಿದರು. ಬಳಿಕ ಗುರು ಭೈರವೈಕ್ಯ ಮಂದಿರದ ಉದ್ಘಾಟಿಸಿದರು.
ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಮಾತನಾಡಿಸಿದರು. ಬಳಿಕ ಮಾತನಾಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸ್ಮರಿಸಿದ ಮೋದಿ, ಅವರು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದಿಂದ ಬಂದಿದ್ದರಿಂದ ಅವರಿಗೆ ಹಳ್ಳಿಯ ಯುವಕರ ಆಕಾಂಕ್ಷೆ ಮತ್ತು ಸವಾಲುಗಳ ಅರಿವಿತ್ತು. ಭಕ್ತಿ ಎಂದರೆ ಸಮಾಜದಿಂದ ದೂರ ಹೋಗುವುದಲ್ಲ, ಸಮಾಜದ ಜವಾಬ್ದಾರಿ ತೆಗೆದುಕೊಳ್ಳುವುದು ಎಂದು ಅವರು ತೋರಿಸಿಕೊಟ್ಟರು. ಬಡ ಮಕ್ಕಳಿಗೆ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡುವ ಮೂಲಕ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಸ್ಮರಿಸಿದರು.
ನೀರನ್ನು ಉಳಿಸಬೇಕು, ಗಿಡ ನೆಡಬೇಕು, ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು, ಸ್ಚಚ್ಚತೆಗೆ ಆದ್ಯತೆ ನೀಡುವಂತೆ ಆಗ್ರಹಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಆದಿಚೂಂಚನಗಿರಿ ಮಠವು ತ್ರಿವಿಧ ದಾಸೋಹವನ್ನು ಅನ್ನ, ಅಕ್ಷರ, ಆಶ್ರಯ ನೀಡುವ ಬಡ ಮಕ್ಕಳ ಕುಟುಂಬಕ್ಕೆ ಪ್ರತ್ಯಕ್ಷ ದೇವರಾಗಿ ಮಠ ಕಾರ್ಯನಿರ್ವಹಿಸುತ್ತಿದೆ, ಶಿಕ್ಷಣ ಪರಿಸರ ಆರೋಗ್ಯ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದೆ. ಇಂತಹ ಮಠದಲ್ಲಿ ಭೈರವೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವುದು ಹೆಮ್ಮೆ ಎಂದರು.
ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯನ್ನು ಗುರು ಭೈರವೈಕ್ಯ ಮಂದಿರವನ್ನಾಗಿ ಮಾಡಲಾಗಿದೆ. ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ. ಈ ಮಂದಿರವು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. ಕಳೆದ 10 ವರ್ಷಗಳಿಂದ ಈ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಚಾಲುಕ್ಯ ಹೊಯ್ಸಳ, ಚೋಳ, ಗಂಗರ ಶೈಲಿಗಳನ್ನು ಹೊಂದಿದೆ. ಶಿಲ್ಪಿ ಸ್ತಪತಿ ಅವರಿಂದ ರಾಜಗೋಪುರ ನಿರ್ಮಾಣವಾಗಿದೆ.
ಇದಕ್ಕೂ ಮೊದಲು ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಲು ಹೊದಿಸಿ, ನವಿಲು ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲನಾಂದನಾಥ ಸ್ವಾಮೀಜಿ, ಪರಮಾನಂದ ಸರಸ್ವತಿ ಮಹಾರಾಜ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಸಚಿವ ಚಲುವರಾಯಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ ಸೇರಿದಂರೆ ಹಲವರು ಉಪಸ್ಥಿತರಿದ್ದರು.

