ಕನ್ನಡವನ್ನು ಗೆಲ್ಲಿಸುವರೇ ದಾವಣಗೆರೆ, ಬಾಗಲಕೋಟೆಯ ಜನ?

ಪರಿಣಾಮಗಳ ದೃಷ್ಟಿಯಿಂದ ನೋಡುವುದಾದರೆ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಎದುರಾಗಿರುವ ಉಪಚುನಾವಣೆಗಳು ಸಾಧಿಸಿ, ಸಾಬೀತುಪಡಿಸುವಂತದ್ದು ಏನೂ ಇರಲಿಲ್ಲ. ಯಾಕೆಂದರೆ, ಈ ಎರಡು ಕ್ಷೇತ್ರಗಳ ಫಲಿತಾಂಶ ಸರ್ಕಾರದ ಮೇಲೆ ಯಾವ ಪರಿಣಾಮವನ್ನು ಬೀರಲಾರವು. ಸರಳ ಬಹುಮತಕ್ಕಿಂತ ಸಾಕಷ್ಟು ಕಂಫರ್ಟಬಲ್‌ ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಇಲ್ಲಿನ ಸೋಲು-ಗೆಲುವುಗಳು ದೊಡ್ಡ ಬಾಧ್ಯತೆಯಲ್ಲ. ಇನ್ನು ಬಿಜೆಪಿ-ಜೆಡಿಎಸ್‌ ಮೈತ್ರಿಗಳ ಸಂಖ್ಯಾಬಲ ಎಂಬತ್ತೈದರ ಗಡಿ ಕೂಡಾ ದಾಟಿಲ್ಲ. ಹಾಗಾಗಿ ದಾವಣಗೆರೆ, ಬಾಗಲಕೋಟೆಯಲ್ಲಿ ಗೆದ್ದರೂ ಮಿಕ್ಕುಳಿದ ಎರಡು ವರ್ಷದ ಅವಧಿಗೆ ಆಪರೇಷನ್‌ ಕಮಲ ಮಾಡಿ ಸರ್ಕಾರ ರಚಿಸುವ ರಿಸ್ಕಿ ಸಾಧ್ಯತೆ ಅವುಗಳ ಮುಂದಿಲ್ಲ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಆಯಾ ಕ್ಷೇತ್ರದ ಮತದಾರರು, ಆಳುವ ಸರ್ಕಾರದ ಪಕ್ಷದತ್ತಲೇ ಒಲವು ತೋರುವುದು ಹೆಚ್ಚು. ಯಾಕೆಂದರೆ, ಆ ಪಕ್ಷದ ವ್ಯಕ್ತಿಯೇ ತಮ್ಮ ಶಾಸಕನಾದರೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ, ಯೋಜನೆಗಳಿಗೆ ಅನುಮೋದನೆ ದೊರಕಲಿವೆ ಎಂಬ ಸಹಜ ಲೆಕ್ಕಾಚಾರ ಇದರ ಹಿಂದೆ ಇರುತ್ತದೆ. ಇಂಥಾ ಉಪಚುನಾವಣೆಗಳಲ್ಲಿ ವಿರೋಧ ಪಕ್ಷದಲ್ಲಿ ಕೂರುವುದಕ್ಕೋಸ್ಕರ ಶಾಸಕನನ್ನು ಆಯ್ಕೆ ಮಾಡಲು ಮತದಾರರು ಬಯಸುವುದಿಲ್ಲ. ಇದು ಇಷ್ಟು ದಿನಗಳ ಕಾಲ ನಡೆದುಕೊಂಡು ಬಂದಿರುವ ರಾಜಕೀಯ ನಡಾವಳಿ. ಈಗಲೂ ಅದು ಮುಂದುವರೆಯುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಈ ಉಪಚುನಾವಣೆಗಳು ಪರಿಣಾಮಗಳ ದೃಷ್ಟಿಯಿಂದ ವಿಶೇಷತೆಯನ್ನು ಪಡೆದುಕೊಂಡಿರಲಿಲ್ಲ. ಆದರೆ ಇದೀಗ ದಿಢೀರ್‍‌ ಅಂತ ಈ ಉಪಚುನಾವಣೆಗಳಿಗೆ ಒಂದು ಹೊಣೆ ಬಂದಿದೆ.

ಅದು ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಹೊಣೆ! ಹಿಂದಿ ಹೇರಿಕೆಯ ವಿರುದ್ಧ ದೃಢವಾದ ಹೆಜ್ಜೆಯನ್ನು ಬಲಗೊಳಿಸುವ ಹೊಣೆ!!

ಹೌದು, ಕನ್ನಡಿಗರ ನಿರಂತರ ಒತ್ತಾಯಕ್ಕೆ ಮಣಿದು ಯಾವಾಗ ಕಾಂಗ್ರೆಸ್‌ ಸರ್ಕಾರ ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ (ಹಿಂದಿ) ಭಾಷೆಯ ಅಂಕಗಳನ್ನು ಕಡ್ಡಾಯಗೊಳಿಸದೆ, ಗ್ರೇಡ್‌ ನೀಡುವ ತೀರ್ಮಾನ ಪ್ರಕಟಿಸಿತೋ, ಆಗಿನಿಂದ ಈ ಉಪಚುನಾವಣೆಗಳು ಹಿಂದಿ ಹೇರಿಕೆ ವಿರುದ್ಧದ ಕನ್ನಡಿಗರ ಧ್ವನಿಯ ಪ್ರತಿಧ್ವನಿಯನ್ನು ತಮ್ಮದಾಗಿಸಿಕೊಂಡಿವೆ.

ಈ ಉಪಚುನಾವಣೆಗಳು ಹೇಗೆ ಹಿಂದಿ ಹೇರಿಕೆ ವಿರುದ್ಧದ ಧ್ವನಿಯಾಗಬಲ್ಲವು? ಎಂಬುದನ್ನು ಗಮನಿಸೋದಕ್ಕು ಮೊದಲು, ತ್ರಿಭಾಷಾ ನೀತಿಯ ಹೆಸರಿನಲ್ಲಿ ದಕ್ಷಿಣ ಭಾರತೀಯರ ಮೇಲೆ ಆಗುತ್ತಿದ್ದ ದಬ್ಬಾಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.

ನಾವೆಲ್ಲಾ ಈ ಹಿಂದಿ ಹೇರಿಕೆಯನ್ನು ತುಂಬಾ ಸಂಕೀರ್ಣವಾಗಿ ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತೇವೆ. ಸರಳವಾಗಿ ಯೋಚಿಸಿ ನೋಡಿ, ಸಾಮಾನ್ಯವಾಗಿ ಅಪ್ಪಟ ಕನ್ನಡಾಭಿಮಾನ ಎದ್ದು ಕಾಣೋದು ನಮ್ಮ ಆಟೋ ಡ್ರೈವರುಗಳಲ್ಲಿ. ಪ್ರತಿ ಏರಿಯಾದಲ್ಲೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವವರು, ತಮ್ಮ ಆಟೋಗಳ ಮೇಲೆ ಕನ್ನಡದ ಬಾವುಟವನ್ನು ರಾರಾಜಿಸುವವರು ಅವರೇ. ಆದರೆ, ಬೆಂಗಳೂರಿನಲ್ಲಿ ನಮ್ಮ ಆಟೋ ಬಂಧುಗಳ ಪರಿಸ್ಥಿತಿ ಹೇಗಿದೆ?  ಅಪ್ಪಟ ಕನ್ನಡಿಗನೆನಿಸಿದ ಆಟೋ ಡ್ರೈವರ್‍‌ ಕೂಡಾ ತಮ್ಮ ಗ್ರಾಹಕನನ್ನು ಕಂಡೊಡನೆ, “ಆಯಿಯೇ ಸರ್, ಕಹಾ ಜಾನಾ ಹೈ ಮೇಡಂ?” ಎಂದು ಮಾತಿಗಿಳಿಯುತ್ತಾರೆ? ವಿಪರ್ಯಾಸವೆಂದರೆ, ಗ್ರಾಹಕರಾದ ನಾವು ಕನ್ನಡದವರಾಗಿದ್ದರೂ, ಅವರು ಹಿಂದಿಯಲ್ಲೇ ನಮ್ಮನ್ನು ಮೊದಲು ಹೀಗೆ ವಿಚಾರಿಸುತ್ತಾರೆ. ನಾವು ಕನ್ನಡದಲ್ಲಿ ಪ್ರತಿಕ್ರಿಯಿಸಿದ ನಂತರ ಕನ್ನಡದಲ್ಲಿ ವ್ಯವಹಾರ ಮುಂದುವರೆಸುತ್ತಾರೆ.

ಒಬ್ಬ ಕನ್ನಡಿಗ, ತನ್ನದೇ ಕನ್ನಡದ ನೆಲದಲ್ಲಿ, ತನ್ನ ಸ್ವಂತ ಆಟೋದಲ್ಲಿ ದುಡಿಯಲು ಹಿಂದಿ ಬಳಸುವಂತಾದದ್ದು ಯಾಕೆ?

ಯಾವುದೇ ಒಂದು ಭಾಷೆ ಉಳಿದು ಬೆಳೆಯುವುದು ಅದು ದುಡಿಮೆಯ ಭಾಷೆಯಾದಾಗ, ಅನ್ನ ಕೊಡುವ ಶಕ್ತಿ ಆ ಭಾಷೆಗೆ ದಕ್ಕಿದಾಗ. ಇವತ್ತು ಇಂಗ್ಲಿಷ್‌ ಇಡೀ ಪ್ರಪಂಚದಾದ್ಯಂತ ಅನಿವಾರ್ಯ ಸಂಪರ್ಕ ಭಾಷೆಯಾಗಿರುವುದು, ಅದಕ್ಕಿರುವ ದುಡಿಮೆಯ ಶಕ್ತಿಯಿಂದ. ಯಾವುದೇ ಕ್ಷೇತ್ರ ಅಥವಾ ಯಾವುದೇ ಉದ್ಯೋಗವಾದರೂ ಅಲ್ಲಿ ಸಂಶೋಧನೆ, ವಿಸ್ತರಣೆ, ಆವಿಷ್ಕಾರಗಳು ನಡೆಯುವುದು ಇಂಗ್ಲಿಷ್‌ ಭಾಷಾ ವಾತಾವರಣದಲ್ಲಿ. ಹಾಗಾಗಿ ಇಂಗ್ಲಿಷ್‌ ಕಲಿಯುವಿಕೆಯಿಂದ ನಮಗೆ ಉದ್ಯೋಗ ಸಾಧ್ಯತೆಗಳು ಹೆಚ್ಚಾಗುತ್ತವೆ ಮಾತ್ರವಲ್ಲ, ನಮ್ಮ ಕೌಶಲ್ಯಗಳೂ ಅಭಿವೃದ್ಧಿಯಾಗುತ್ತವೆ. ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲೇ ಸರ್ಕಾರಿ ಕಚೇರಿಗಳ ವಹಿವಾಟು ನಡೆಯಬೇಕು, ಪ್ರಾದೇಶಿಕ ನೇಮಕಾತಿಯಲ್ಲಿ ಆ ಭಾಷೆಯವರಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಅಥವಾ ಹೋರಾಟಗಳು ನಡೆದುಕೊಂಡು ಬರುತ್ತಿರುವುದರ ಅಸಲೀ ಕಾರಣವೇ, ಆ ಭಾಷೆಯನ್ನು ದುಡಿಮೆಯ ಭಾಷೆಯಾಗಿಸುವ ಮೂಲಕ, ಜಾಗತೀಕರಣದ ಒತ್ತಡದ ನಡುವೆಯೂ ಅದನ್ನು ಉಳಿಸಬೇಕೆನ್ನುವ ಕಾಳಜಿಯಿಂದ.

ಆದರೆ, ಪ್ರಾದೇಶಿಕ ಚೌಕಟ್ಟಿನಾಚೆಗೆ ಇಂತಹ ದುಡಿಮೆಯ ಅವಕಾಶಗಳನ್ನು ಸೃಷ್ಟಿಸುವ ಯಾವ ವಿಶೇಷ ಶಕ್ತಿಯೂ ಇಲ್ಲದ ಹಿಂದಿಯನ್ನು ನಮ್ಮ ಆಟೋ ಡ್ರೈವರ್‍‌ಗಳು, ತಳ್ಳುಗಾಡಿ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು ಯಾಕೆ ಕಷ್ಟಪಟ್ಟು ಕಲಿತು, ಕಷ್ಟಪಟ್ಟೇ ಬಳಸಬೇಕು? ಒಂದುವೇಳೆ, ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿ, ಇಂಗ್ಲಿಷ್‌ ತರಹದಲ್ಲಿ ಸಾರ್ವತ್ರಿಕವಾಗಿ ಉದ್ಯೋಗ ಸೃಷ್ಟಿಸುವ ತಾಕತ್ತು ಹಿಂದಿ ಭಾಷೆಗೆ ಇದ್ದಿದ್ದರೆ, ಹಿಂದಿ ಭಾಷಿಕರೇಕೆ ತಮ್ಮ ರಾಜ್ಯಗಳನ್ನು ತೊರೆದು ಕರ್ನಾಟಕಕ್ಕೋ, ಅಥವಾ ಮತ್ತ್ಯಾವುದೋ ದಕ್ಷಿಣ ರಾಜ್ಯಗಳಿಗೆ ಬರುತ್ತಿದ್ದರು? ಇಂಗ್ಲಿಷ್‌ ಕಲಿತರೆ ಉದ್ಯೋಗ ಅವಕಾಶಗಳ ಲಭ್ಯತೆ ಹೆಚ್ಚಾಗುತ್ತವೆ, ಹಾಗಾಗಿ ಅದನ್ನು ಕಲಿಯುವುದರಲ್ಲಿ ಅರ್ಥವಿದೆ. ಆದರೆ ತನ್ನದೇ ಜನರಿಗೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿಲ್ಲದೆ, ಬೇರೆಡೆಗೆ ವಲಸೆ ಹೋಗುವಂತೆ ಮಾಡುತ್ತಿರುವ ಹಿಂದಿ ಭಾಷೆಯನ್ನು ನಮ್ಮ ಜನ ಯಾಕೆ ಕಲಿತು, ಬಳಸಲು ಪರದಾಡಬೇಕು?

ಇದಕ್ಕೆ ಉತ್ತರ ತ್ರಿಭಾಷಾ ನೀತಿಯ ವಂಚನೆಯಲ್ಲಿದೆ. 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ತ್ರಿಭಾಷಾ ನೀತಿಯನ್ನು ಭಾರತ ಸರ್ಕಾರ ಪರಿಚಯಿಸುವಾಗ ಮೂರು ಮುಖ್ಯ ಉದ್ದೇಶಗಳಿದ್ದವು. ಮೊದಲನೆಯದು, ಮಾತೃಭಾಷಾ ಕಲಿಕೆಗೆ ಒತ್ತು ನೀಡುವ ಮೂಲಕ ಪ್ರಾದೇಶಿಕ ಭಾಷಾ ಅಸ್ಮಿತೆಗಳನ್ನು ಕಾಪಾಡಬೇಕು. ಎರಡನೆಯದು, ಇಂಗ್ಲಿಷ್‌ ಕಲಿಕೆಯ ವಿಸ್ತರಣೆ ಮೂಲಕ ನಮ್ಮ ವಿದ್ಯಾರ್ಥಿಗಳ ಕಲಿಕೆ-ಕೌಶಲ್ಯ-ಭವಿಷ್ಯವನ್ನು ಸದೃಢಗೊಳಿಸಬೇಕು. ಮೂರನೆಯದು ಮತ್ತು ಹಿಂದಿ ಹೇರಿಕೆ ಆಯಾಮದಿಂದ ಅತಿ ಮುಖ್ಯವಾದುದು…. ಭಾಷಾ ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ, ಭಾಷೆಗಳ ಕಾರಣಕ್ಕೆ ಮುಂದೆಂದೂ ಭಿನ್ನಾಭಿಪ್ರಾಯಗಳು ಮೂಡದೆ, ಭಾಷಾ ಸೌಹಾರ್ದತೆಯ ಮೂಲಕ ದೇಶದ ಐಕ್ಯತೆಗೆ ಅಡಿಪಾಯ ಗಟ್ಟಿಗೊಳಿಸಬೇಕು ಎಂಬುದು ನೀತಿನಿರೂಪಕರ ಆಶಯವಾಗಿತ್ತು. ಅಂದರೆ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಥಮ ಭಾಷೆ ಹಿಂದಿ, ದ್ವಿತೀಯ ಭಾಷೆ ಇಂಗ್ಲಿಷ್‌ (ಅಥವಾ ಅದಲು-ಬದಲು) ಜೊತೆಗೆ ಹಿಂದಿಯೇತರ ಯಾವುದಾದರು ಭಾರತೀಯ ಆಧುನಿಕ ಸಂವಹನ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸಬೇಕು; ಅದೇರೀತಿ, ಹಿಂದಿಯೇತರ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆ, ಇಂಗ್ಲಿಷ್‌ ಜೊತೆಗೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಸಬೇಕು ಎಂಬುದು ಈ ನೀತಿಯ ಸಾರಾಂಶ. ಹಿಂದಿ ರಾಜ್ಯದ ಮಕ್ಕಳು ಕನ್ನಡವನ್ನೊ, ತಮಿಳನ್ನೊ, ತೆಲುಗನ್ನೋ, ಮಲೆಯಾಳಂ ಅನ್ನೋ ಕಲಿಯುವುದರಿಂದ ಆ ಭಾಷೆಗಳು ನಮ್ಮವು ಎಂಬ ಅರಿವು, ಅಭಿಮಾನ ಬೆಳೆಸಿಕೊಳ್ಳುತ್ತಾರೆ. ಬೇರೆ ಭಾಷೆಯ ಮಕ್ಕಳು ಹಿಂದಿಯನ್ನು ಕಲಿಯುವುದರಿಂದ, ಹಿಂದಿ ನಮ್ಮದು ಎಂಬ ಅಭಿಮಾನ ತಳೆಯುತ್ತಾರೆ. ಇದರಿಂದ ಭಾಷಾ ಬಿರುಕುಗಳು ಮೂಡದೆ, ದೇಶದಲ್ಲಿ ಐಕ್ಯತೆ ಸಾಧ್ಯವಾಗಲಿದೆ ಎಂಬುದು ಆಶಯವಾಗಿತ್ತು. ಅಂದರೆ, ಕೇವಲ ಭಾಷಾ ಸಂವಹನ ಅನುಕೂಲ ಮಾತ್ರವಲ್ಲದೆ, ಭಾಷಾ ವೈವಿಧ್ಯತೆಯ ಅಭಿಮಾನವನ್ನು ಬೆಳೆಸುವುದು ತ್ರಿಭಾಷಾ ನೀತಿಯ ಆಶಯವಾಗಿತ್ತು.

ಇದೇ ಆಶಯದೊಂದಿಗೆ ತ್ರಿಭಾಷಾ ನೀತಿ ದೇಶಾದ್ಯಂತ ಜಾರಿಯಾಗಿದ್ದರೆ ಖಂಡಿತ ಯಾವುದೇ ತಕರಾರು ತೆಗೆಯುವ ಅವಕಾಶ ಇರುತ್ತಿರಲಿಲ್ಲ. ಇವತ್ತು ಉತ್ತರ ಭಾರತದಿಂದ ಕರ್ನಾಟಕಕ್ಕೆ ಉದ್ಯೋಗವರಿಸಿ ಬರುತ್ತಿದ್ದ `ನಾರ್ಥಿ’ಗಳು, ತಮ್ಮ ಶಿಕ್ಷಣದಲ್ಲೇ ಕನ್ನಡವನ್ನು ಕಲಿತು (ಯಾವ ಪ್ರದೇಶದಲ್ಲಿ ತಮಗೆ ಭವಿಷ್ಯದಲ್ಲಿ ಉದ್ಯೋಗ ಸಾಧ್ಯತೆಯಿದೆಯೋ, ಮುಂದಿನ ದಿನಗಳಲ್ಲಿ ಅನುಕೂಲವಾಗುವಂತೆ ಅಲ್ಲಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು) ಇಲ್ಲಿಗೆ ಬರುತ್ತಿದ್ದರು, ನಾವು ಅವರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಆಗಿದ್ದೇ ಬೇರೆ!

ನಾವಿಲ್ಲಿ, ಆಡುಭಾಷೆಯೂ ಅಲ್ಲದ, ಉದ್ಯೋಗ ಸೃಷ್ಟಿ ಸಾಧ್ಯತೆಯ ಭಾಷೆಯೂ ಅಲ್ಲದ ಹಿಂದಿಯನ್ನು ನಮ್ಮ ಮಕ್ಕಳಿಗೆ ತೃತೀಯ ಭಾಷೆಯಾಗಿ ಕಡ್ಡಾಯಗೊಳಿಸಿ, ಅವರ ಮೇಲೆ ಕಲಿಕೆಯ ಒತ್ತಡ ಹೆಚ್ಚಿಸಿದೆವು. ಆದರೆ ಇದೇ ತ್ರಿಭಾಷಾ ನೀತಿಯ ಅನ್ವಯ ದಕ್ಷಿಣ ರಾಜ್ಯದ ಭಾಷೆಗಳನ್ನು ಕಲಿಸಬೇಕಿದ್ದ ಹಿಂದಿ ರಾಜ್ಯಗಳು ಅಲ್ಲಿನ ಮಕ್ಕಳಿಗೆ ಕನ್ನಡವನ್ನೊ, ತೆಲುಗನ್ನೊ, ತಮಿಳನ್ನೊ, ಮಲೆಯಾಳಂ ಅನ್ನೋ ಕಲಿಸಲೇ ಇಲ್ಲ. ಭಾಷಾ ಶಿಕ್ಷಕರ ಕೊರತೆಯ ನೆಪವನ್ನು ಹೇಳಲಾಯ್ತು. ಬದಲಿಗೆ ನೆಪಕ್ಕೆಂಬಂತೆ ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡವು. ಕೆಲವು ಕಡೆ ಅದೂ ಇಲ್ಲ! ಕೇವಲ ಹಿಂದಿ ಮತ್ತು ಇಂಗ್ಲಿಷ್‌ ಎರಡು ಭಾಷಾ ಕಲಿಕೆ ಮಾತ್ರ!!

ಮೊದಲನೆಯದಾಗಿ, ಸಂಸ್ಕೃತ ಸಹಜ ಸಂವಹನ ಭಾಷೆಯಲ್ಲ; ಮೇಲಾಗಿ, ತ್ರಿಭಾಷಾ ನೀತಿಯ ಆಶಯವಾದ ಭಾಷಾ ಐಕ್ಯತೆಯನ್ನು ಸಾಧಿಸುವ ಆಯಾಮದಿಂದಲೂ ಸಂಸ್ಕೃತ ಸೂಕ್ತವಲ್ಲ. ಯಾಕೆಂದರೆ, ಚಾರಿತ್ರಿಕವಾಗಿ ಒಂದು ಸಮುದಾಯದ ಬಿಗಿಹಿಡಿತದಲ್ಲೇ ನಲುಗುತ್ತಾ ಬಂದ  ಅದು ಯಾವುದೇ ನಿರ್ದಿಷ್ಟ ಪ್ರಾದೇಶಿಕತೆಯನ್ನು ಪ್ರತಿನಿಧಿಸುವ ಭಾಷೆಯಾಗಿ ಉಳಿದಿಲ್ಲ. ಅಂದರೆ, ದಕ್ಷಿಣ ದ್ರಾವಿಡ ರಾಜ್ಯಗಳ ಭಾಷೆಯನ್ನು ಕಲಿಯಬಾರದು ಎಂಬ ಹಠಕ್ಕೆ, ಹಿಂದಿ ಭಾಷಿಕ ರಾಜ್ಯಗಳು ಉದ್ದೇಶಪೂರ್ವಕವಾಗಿ ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡವು. ಆದರೆ ನಾವು ಮಾತ್ರ ಇಲ್ಲಿ, ಕಷ್ಟಪಟ್ಟು ಹಿಂದಿಯನ್ನು ಕಲಿಯುತ್ತಾ ಬಂದೆವು. ತೃತೀಯ ಭಾಷೆಯಾಗಿ ಸಂಸ್ಕೃತ ಒಳಗೊಂಡಂತೆ, ಬೇರೆ ಭಾಷೆಗಳನ್ನು ನಮ್ಮಲ್ಲಿಯೂ ಕೆಲವು ಕಡೆ ಕಲಿಸಲಾಗುತ್ತದೆಯಾದರೂ, ಹಿಂದಿಗೆ ಹೋಲಿಸಿದರೆ ಆ ಪ್ರಮಾಣ ತುಂಬಾ ಕಡಿಮೆ.

ಈ ಹಿಂದಿ ಹೇರಿಕೆಗೆ ಪೂರಕವಾಗಿ `ಹಿಂದಿ ರಾಷ್ಟ್ರಭಾಷೆ’ ಎಂಬ ಸುಳ್ಳನ್ನೂ ನಮ್ಮ ಮೇಲೆ ಹೇರಲಾಯ್ತು. ನಮ್ಮ ಸಂವಿಧಾನ ಇಪ್ಪತ್ತೆರಡು ದೇಶೀ ಭಾಷೆಗಳನ್ನು ಗುರುತಿಸಿದೆ. ಅವುಗಳಲ್ಲಿ ಕನ್ನಡದಂತೆ ಹಿಂದಿಯೂ ಒಂದು ಅಷ್ಟೆ. ನಮಗೆ ಯಾವುದೇ ರಾಷ್ಟ್ರಭಾಷೆ ಇಲ್ಲ. ಹಾಗೆ ಒಂದು ಭಾಷೆಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿದರೆ, ಇನ್ನುಳಿದ ಭಾಷೆಗಳ ಮೇಲೆ ಆ ಭಾ‍ಷೆಯ ಯಜಮಾನಿಕೆ ಶುರುವಾಗಬಹುದು ಎಂಬ ಆತಂಕದಿಂದಲೇ ನಮ್ಮ ಸಂವಿಧಾನ ನಿರ್ಮಾತೃಗಳು ಅಂತಹ ಪ್ರಮಾದ ಮಾಡಲಿಲ್ಲ. ಆದರೂ, ಹಿಂದಿಯನ್ನು ರಾಷ್ಟ್ರಭಾಷೆ ಎಂಬ ಸುಳ್ಳು ಹೇಳಿ ನಮ್ಮನ್ನು ವಂಚಿಸುತ್ತಲೇ ಬರಲಾಯ್ತು.

ವೈವಿಧ್ಯಮಯ ಭಾರತದಲ್ಲಿ ಭಾಷಾ ಐಕ್ಯತೆಯನ್ನು ಸಾಧಿಸಬೇಕು ಎನ್ನುವ ಆಶಯದಿಂದ ತ್ರಿಭಾಷಾ ನೀತಿಯನ್ನು ಜಾರಿಗೆ ತರಲಾಯ್ತು. ಆದರೆ ಆ ತ್ರಿಭಾಷಾ ನೀತಿಯನ್ನು ಹಿಂದಿ ಭಾಷಿಕರು ಗೌರವಿಸಿ ದ್ರಾವಿಡ ಭಾಷೆಗಳನ್ನು ಕಲಿಯದಿದ್ದ ಮೇಲೆ, ನಾವೇಕೆ ಕಟ್ಟುನಿಟ್ಟಾಗಿ ಆ ನೀತಿ ಪಾಲಿಸಿ, ನಮ್ಮ ಮಕ್ಕಳಿಗೆ ಹಿಂದಿ ಕಲಿಸಿ, ನಮ್ಮ ಕನ್ನಡವನ್ನು ಹಿಂದಿಯ ಅಡಿಯಾಳಾಗಿಸಬೇಕು? ಹೀಗೆ ಮಾಡಿದ್ದರಿಂದ ಆದ ಅನಾಹುತವೇನು? ನಮ್ಮ ರಾಜ್ಯದ ರೈಲ್ವೆ, ಅಂಚೆ, ಬ್ಯಾಂಕ್‌ ನೇಮಕಾತಿಗಳಲ್ಲಿ ಹಿಂದಿ ಭಾಷಿಕರನ್ನೇ ತಂದು ತುಂಬಲಾಯ್ತು. ನಾವು ನಮ್ಮದೇ ರಾಜ್ಯದಲ್ಲಿ, ನಮ್ಮ ಭಾಷೆಯಲ್ಲಿ ಮಾತನಾಡುವ ಹಕ್ಕನ್ನು ಕಳೆದುಕೊಂಡು, ಆ ಹಿಂದಿವಾಲಾ ಉದ್ಯೋಗಿಗಳ ಮುಂದೆ ಕೀಳರಿಮೆಗೆ ತುತ್ತಾಗುತ್ತಾ ಬಂದೆವು. ಎಷ್ಟೋ ಸಲ, ಬ್ಯಾಂಕ್‌ ವ್ಯವಹಾರಗಳಲ್ಲಿ ಹಿಂದಿ ಸಿಬ್ಬಂದಿಗಳ ಧಿಮಾಕಿನಿಂದ ಇದು ಸಂಘರ್ಷಕ್ಕೆ ಎಡೆಮಾಡಿ ಕೊಟ್ಟ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ.

ಇದು ಕೇವಲ ಭಾಷಾಭಿಮಾನದ ಪ್ರಶ್ನೆ ಮಾತ್ರ ಅಲ್ಲ. ಶೈಕ್ಷಣಿಕ ಕಲಿಕಾ ಹೊರೆಯ ಆಯಾಮವೂ ಇದೆ. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  1.48 ಲಕ್ಷ ಮಕ್ಕಳು, 2024-25ನೇ ಸಾಲಿನಲ್ಲಿ 1.42 ಲಕ್ಷ ಕನ್ನಡದ ಮಕ್ಕಳು ಹಿಂದಿ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಅಂದರೆ ಬೇರೆ ವಿಷಯಗಳಲ್ಲಿ ಅವರು ತೇರ್ಗಡೆಯಾಗಿದ್ದರೂ, ಹಿಂದಿಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ಅವರು ವ್ಯಾಸಂಗ ಹಿನ್ನಡೆ, ಶೈಕ್ಷಣಿಕ ಅವಮಾನ ಅನುಭವಿಸಬೇಕಾಯ್ತು. ‘ಕಹಾಂ ಜಾನಾ ಹೈ ಸರ್‍‌?’ ‘ಕೌನ್ಸಿ ಸಬ್ಜಿಯಾ ಚಾಹಿಯೇ ಮೇಡಂ?’ ಎಂದು ಕೇಳುವುದಕ್ಕೋಸ್ಕರ ನಮ್ಮ ಮಕ್ಕಳು ಈ ಶಿಕ್ಷೆ ಅನುಭವಿಸುತ್ತಾ ಬಂದರು. ಆದರೆ ತಮಿಳುನಾಡು ಈ ವಿಚಾರದಲ್ಲಿ ಆರಂಭದಿಂದಲೇ ಎಚ್ಚರ ವಹಿಸಿತು. 1968ರಲ್ಲೆ ನಾವು ತ್ರಿಭಾಷಾ ನೀತಿ ಅನುಸರಿಸುವುದಿಲ್ಲ ಎಂದು ಧಿಕ್ಕರಿಸಿದರು. ಅಲ್ಲಿ ತಮಿಳು, ಇಂಗ್ಲಿಷ್‌ ಮತ್ತು ಮೂರು ವಿಷಯಗಳು (ಗಣಿತ, ಸಮಾಜ, ವಿಜ್ಞಾನ) ಸೇರಿದಂತೆ ಐದು ಸಬ್ಜೆಕ್ಟ್‌ಗಳನ್ನು ಮಾತ್ರ ಮಕ್ಕಳು ಓದುತ್ತಾರೆ. ಆದರೆ ಕರ್ನಾಟಕದ ಮಕ್ಕಳು ಇಷ್ಟು ದಿನ ಆರು ಸಬ್ಜೆಕ್ಟ್‌ಗಳ ಕಲಿಕೆಯ ಅಡಕತ್ತರಿಗೆ ಸಿಲುಕಿದ್ದರು. ಇದರಿಂದ ಇತರೆ ವಿಷಯಗಳ ಕಲಿಕೆಗೆ ಅವರು ಹೆಚ್ಚು ಸಮಯ ಕೊಡಲು ಆಗದೆ, ಅವರ ಶೈಕ್ಷಣಿಕ ಮಟ್ಟವೂ ಕುಸಿಯುತ್ತಿತ್ತು.

ಇಷ್ಟುದಿನ ಕನ್ನಡಿಗರ ಪ್ರಶ್ನೆ ಸರಳವಿತ್ತು, ಹಿಂದಿ ಮಕ್ಕಳಿಗಿಲ್ಲದ ತ್ರಿಭಾಷಾ ಬದ್ಧತೆ, ತಮಿಳು ಮಕ್ಕಳಿಗೆ ಇಲ್ಲದ ಕಲಿಕಾ ಒತ್ತಡ ಕನ್ನಡದ ಮಕ್ಕಳಿಗೆ ಏಕೆ?

ಈಗ ಕರ್ನಾಟಕ ಸರ್ಕಾರ ಕೊನೆಗೂ ಸ್ಪಂದಿಸಿದೆ. ಹಿಂದಿ ಕಲಿಕೆಯನ್ನು ನಿರಾಕರಿಸಿಲ್ಲವಾದರೂ, ಅದರಲ್ಲಿ ಉತ್ತೀರ್ಣರಾಗಲೇಬೇಕು ಎಂಬ ಒತ್ತಡದ ಹೊರೆಯಿಂದ ಮಕ್ಕಳಿಗೆ ವಿನಾಯ್ತಿ ಕೊಟ್ಟಿದೆ. ಇದರಿಂದಾಗಿ ಮಕ್ಕಳು ಇತರೆ ವಿಷಯಗಳ ಕಲಿಕೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗಲಿದ್ದು, ಅವರ ಶೈಕ್ಷಣಿಕ ಸುಧಾರಣೆಗೆ ನೆರವಾಗಲಿದೆ.

ಇದರಲ್ಲಿ ಕನ್ನಡದ ಹಿತಾಸಕ್ತಿಗೆ ಧಕ್ಕೆ ಬರುವಂತದ್ದು ಏನೂ ಇಲ್ಲ. ಇದನ್ನು ಕನ್ನಡಿಗರೆಲ್ಲರು ಒಮ್ಮತದಿಂದ ಸ್ವಾಗತಿಸಬೇಕಿತ್ತು. ಆದರೆ ಬಿಜೆಪಿಯವರು ತಮ್ಮ ಹಿಂದಿ ಗುಲಾಮಗಿರಿ ಮನೋಭಾವವನ್ನು ತೋರಲು ಮುಂದಾಗಿರುವುದು ವಿಪರ್ಯಾಸ. ದಿಲ್ಲಿಯ ನಾಯಕರು, ಆರೆಸ್ಸೆಸ್‌ ಮುಖಂಡರನ್ನು ಮೆಚ್ಚಿಸುವ ಸಲುವಾಗಿ ಕನ್ನಡದ ಈ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಅವರಿಗೆ ಕನ್ನಡದ ಮೇಲಿನ ಅಭಿಮಾನಕ್ಕಿಂತ ಹಿಂದಿ ಭಾಷಿಕರ ಚಾಕರಿ ಮುಖ್ಯವಾಗಿದೆ. ಇಡೀ ನಾಡೇ ಸ್ವಾಗತಿಸುತ್ತಿರುವ ಇಂತದ್ದೊಂದು ಕ್ರಮವನ್ನು ವಿರೋಧಿಸಿದರೆ, ಕನ್ನಡಿಗರ ದೃಷ್ಟಿಯಲ್ಲಿ ನಾವು ನಾಡದ್ರೋಹಿಗಳಾಗುತ್ತೇವೆ ಎಂಬ ಅಳುಕೂ ಇಲ್ಲದೆ ಇಲ್ಲಿನ ಬಿಜೆಪಿ ನಾಯಕರು ಕನ್ನಡವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಅಂದರೆ, ಉತ್ತರ ಭಾರತದ ಹಿಂದಿ ಭಾಷಿಕರು ತಮ್ಮ ಹೊಟ್ಟೆಪಾಡಿಗಾಗಿ ಅಲ್ಲಿಂದ ಇಲ್ಲಿಗೆ ಬರುವುದಲ್ಲದೆ, ಅವರು ನಮ್ಮ ಮೇಲೆ ಹಿಂದಿಯನ್ನೂ ಹೇರಬೇಕು, ನಾವು ನಮ್ಮದೇ ಕನ್ನಡವನ್ನು ಬಲಿಕೊಟ್ಟು ಅವರ ಹಿಂದಿ ಭಾಷೆಯನ್ನು ಕಲಿತು ವ್ಯವಹರಿಸಬೇಕು ಎಂಬ ಸ್ಪಷ್ಟ ನಾಡದ್ರೋಹಿ ನಿಲುವು ಬಿಜೆಪಿ ನಾಯಕರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ರಾಜಕಾರಣದ ಒಲವು-ನಿಲುವುಗಳನ್ನು ಬದಿಗಿರಿಸಿ, ಕನ್ನಡಿಗರೆಲ್ಲರೂ ಕನ್ನಡದ ಅಳಿವು-ಉಳಿವಿನ ದೃಷ್ಟಿಯಿಂದ ಯೋಚಿಸಬೇಕಾದ ಸಂಗತಿ. ನಮಗೆ ಈ ವಿಚಾರದಲ್ಲಿ ಮರಾಠಿಗರ ದಿಟ್ಟತೆ ಮಾದರಿಯಾಗಬೇಕಿದೆ. ಇದೇ ಬಿಜೆಪಿ ಸರ್ಕಾರ 2025ರಲ್ಲಿ ಅಲ್ಲಿ, ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯಗೊಳಿಸಲು ಮುಂದಾಯ್ತು. ಆಗ ಮರಾಠಿಗರು ಬಿಜೆಪಿಯ ಹಿಂದಿ ಹೇರಿಕೆ ವಿರುದ್ಧ ತಿರುಗಿಬಿದ್ದರು. ಪ್ರತಿಭಟನೆ ವಿಕೋಪಕ್ಕೆ ತಲುಪಿತು. ಜನರ ವಿರೋಧದಿಂದ ಎಚ್ಚೆತ್ತ ಬಿಜೆಪಿ ಸರ್ಕಾರ ತನ್ನ ಹಿಂದಿ ಹೇರಿಕೆ ಆದೇಶವನ್ನು ವಾಪಾಸು ಪಡೆಯಿತು. ಹಿಂದಿ ಹೇರಲು ಮುಂದಾಗಿ, ಮರಾಠಿಗರಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡರೂ ಬಿಜೆಪಿಗೆ ಬುದ್ಧಿ ಬಂದಂತಿಲ್ಲ. ಹಾಗಾಗಿ ಕರ್ನಾಟಕ ಬಿಜೆಪಿ ನಾಯಕರು ಹಿಂದಿ ಗುಲಾಮಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕರ್ನಾಟಕದಲ್ಲೆ ರಾಜಕಾರಣ ಮಾಡಿಕೊಂಡು, ಕನ್ನಡಿಗರ ಮತಗಳನ್ನೇ ಅವಲಂಬಿಸಿರುವ ರಾಜ್ಯ ಬಿಜೆಪಿ ನಾಯಕರಿಗೆ ಕನ್ನಡದ್ರೋಹಿ ಹೇಳಿಕೆಗಳನ್ನು ನೀಡಲು ಇಷ್ಟೊಂದು ಮೊಂಡುತನ ಎಲ್ಲಿಂದ ಬಂತು? ನಮ್ಮ ಭಾಷಾ ನಿರಭಿಮಾನದಿಂದ (ತಮಿಳರಿಗೆ ಹೋಲಿಸಿದರೆ); ಸುಲಭದಲ್ಲಿ ಜಾತಿ-ಧರ್ಮಗಳ ವಿಭಜನೆಗೆ ತುತ್ತಾಗುವ ನಮ್ಮ ರಾಜಕೀಯ ಅಜ್ಞಾನದಿಂದ!!

ಆದರೆ ಈಗ ಹಿಂದಿ ಹೇರಿಕೆಯನ್ನು ಧಿಕ್ಕರಿಸುವ ನಮ್ಮ ಧ್ವನಿಯನ್ನು ದಾಖಲಿಸುವ ಅವಕಾಶವನ್ನು ಈ ಉಪಚುನಾವಣೆಗಳು ಒದಗಿಸಿಕೊಟ್ಟಿವೆ. ಈಗಾಗಲೇ ಹೇಳಿದಂತೆ, ರಾಜಕೀಯ ಪರಿಣಾಮಗಳಿಂದ ಅಷ್ಟೇನು ವಿಶೇಷತೆ ಇರದ ಈ ಉಪಚುನಾವಣೆಗಳಲ್ಲಿ, ದಾವಣಗೆರೆ ಮತ್ತು ಬಾಗಲಕೋಟೆಯ ಜನ ಹಿಂದಿ ಗುಲಾಮರಿಗೆ ಒಂದು ಎಚ್ಚರಿಕೆಯನ್ನು ರವಾನಿಸಬಹುದು. ಸದ್ಯದಲ್ಲೆ, ಕನ್ನಡಿಗರೇ ಮತ ಹಾಕುವ ಉಪಚುನಾವಣೆಗಳಿವೆ, ನಮ್ಮ ಇಂತಹ ಮಾತುಗಳಿಂದ ಹಿನ್ನಡೆಯಾಗಬಹುದು ಎಂಬ ಅಂಜಿಕೆಯೂ ಇಲ್ಲದೆ ಬಿಜೆಪಿ ನಾಯಕರು ಇಷ್ಟು ನಿರ್ಲಜ್ಜೆಯಿಂದ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಕಸ್ಮಾತ್‌ ಬಿಜೆಪಿಗೇನಾದರು ಗೆಲುವು ಲಭಿಸಿದರೆ, ಕನ್ನಡದ ಮೇಲಿನ-ಕನ್ನಡಿಗರ ಮೇಲಿನ ಅವರ ತಾತ್ಸಾರ ಇನ್ನಷ್ಟು ಪೆಡುಸಾಗಲಿದೆ; ಹಿಂದಿಯನ್ನು ಮತ್ತಷ್ಟು ಹೊತ್ತು ಮೆರೆಸಲಿದ್ದಾರೆ.

ಹೀಗಾಗಬಾರದು ಎಂದರೆ, ಕನ್ನಡಿಗರ ಧ್ವನಿಯನ್ನು ಪ್ರತಿನಿಧಿಸುವ ಹೊಣೆ ಈಗ ದಾವಣಗೆರೆ ಮತ್ತು ಬಾಗಲಕೋಟೆ ಜನರ ಮೇಲಿದೆ. ಈ ಜೋಡಿ ಕ್ಷೇತ್ರಗಳ ಮತದಾರ ಸೋದರರೆ, ನೀವು ಯಾರನ್ನು ಗೆಲ್ಲಿಸಿಕೊಳ್ಳುತ್ತೀರೋ ಅದು ನಿಮಗೆ ಬಿಟ್ಟದ್ದು; ಆದರೆ ನೀವು ಯಾರನ್ನು ಸೋಲಿಸುತ್ತೀರೋ ಅದು ಕನ್ನಡಿಗರ ಒಗ್ಗಟ್ಟನ್ನು ಪ್ರತಿನಿಧಿಸಲಿದೆ. ಸಮಸ್ತ ಕನ್ನಡಿಗರಿಗಾಗಿ ಇದನ್ನು ಅವರು ಮಾಡಿ ತೋರಿಸಲಿದ್ದಾರೆ ಎಂಬ ನಿರೀಕ್ಷೆಯೂ ಇದೆ.

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು.

ಇದನ್ನೂ ಓದಿ- ವಿಶ್ವಗುರುವಿನ ರಾಸಲೀಲಾ ವಿನೋದ

More articles

Latest article

Most read